ಭಗವದ್ಗೀತೆ: ಯಾರಿಗೆ ಇಂದ್ರಿಯಸುಖದ ಬಯಕೆ ಇರುವುದಿಲ್ಲ; ಗೀತೆಯ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಯಾರಿಗೆ ಇಂದ್ರಿಯಸುಖದ ಬಯಕೆ ಇರುವುದಿಲ್ಲ ಎಂಬುದರ ಅರ್ಥ ಇಲ್ಲಿದೆ.
ಕರ್ಮಣೋ ಹ್ಯಪಿ ಬೋದ್ಧವ್ಯಂ ಬೋದ್ಧವ್ಯಂ ಚ ವಿಕರ್ಮಣಃ |
ಅಕರ್ಮಣಶ್ಚ ಬೋದ್ಧವ್ಯಂ ಗಹನಾ ಕರ್ಮಣೋ ಗತಿಃ ||17||
ಕರ್ಮದ ಜಟಿಲತೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ. ಆದುದರಿಂದ ಅನುಷ್ಯನು ಕರ್ಮವು ಯಾವುದು, ವಿಕರ್ಮವು (ನಿಷಿದ್ಧ ಕರ್ಮ) ಯಾವುದು, ಅಕರ್ಮವು ಯಾವುದು ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕು.
ಭೌತಿಕ ಬಂಧನದಿಂದ ಬಿಡುಗಡೆ ಪಡೆಯಬೇಕೆಂದು ಮನುಷ್ಯನಿಗೆ ನಿಜವಾಗಿ ಎನ್ನಿಸಿದ್ದರೆ ಆತನು ಕರ್ಮ, ಅಕರ್ಮ ಮತ್ತು ವಿಕರ್ಮಗಳಲ್ಲಿನ ವ್ಯತ್ಯಾಸಗಳನ್ನು ತಿಳಿದುಕೊಳ್ಳಬೇಕು. ಕ್ರಿಯೆ, ಪ್ರತಿಕ್ರಿಯೆ ಮತ್ತು ವಿಕೃತಕ್ರಿಯೆಯನ್ನು ವಿಶ್ಲೇಷಿಸಲು ಗಮನಕೊಡಬೇಕು. ಇದು ಬಹಳ ಕ್ಲಿಷ್ಟವಾದ ವಿಷಯ. ಕೃಷ್ಣಪ್ರಜ್ಞೆಯನ್ನು ಮತ್ತು ಅದಕ್ಕನುಗುಣವಾಗಿ ಹೇಗೆ ಕಾರ್ಯಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಮನುಷ್ಯನು ಪರಮ ಪುರುಷನೊಂದಿಗೆ ತನ್ನ ಸಂಬಂಧವನ್ನು ತಿಳಿದುಕೊಳ್ಳಬೇಕು.
ಪರಿಪೂರ್ಣನಾದ ಜ್ಞಾನವಿರುವವನಿಗೆ ಪ್ರತಿಯೊಂದು ಜೀವಿಯೂ ಭಗವಂತನ ನಿತ್ಯಸೇವಕ. ಆದುದರಿಂದ ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ಕಾರ್ಯಮಾಡಬೇಕು ಎಂದು ತಿಳಿದರುತ್ತದೆ. ಇಡೀ ಭಗವದ್ಗೀತೆಯು ಈ ನಿರ್ಣಯದತ್ತ ಸಾಗುತ್ತದೆ. ಈ ಪ್ರಜ್ಞೆಗೆ ಮತ್ತು ಅದಕ್ಕೆ ಸಂಬಂಧಿಸಿದ ಕರ್ಮಗಳಿಗೆ ವಿರುದ್ಧವಾದ ಯಾವುದೇ ನಿರ್ಣಯವು ವಿಕರ್ಮ ಎಂದರೆ ನಿಷೇಧಿಸಿದ ಕರ್ಮ. ಇದನ್ನೆಲ್ಲ ಅರ್ಥಮಾಡಿಕೊಳ್ಳಲು ಮನುಷ್ಯನು ಕೃಷ್ಣಪ್ರಜ್ಞೆಯಲ್ಲಿ ಅಧಿಕಾರ ಪಡೆದವರ ಸಹವಾಸ ಮಾಡಬೇಕು ಮತ್ತು ಅವರಿಂದ ರಹಸ್ಯವನ್ನು ತಿಳಿದುಕೊಳ್ಳಬೇಕು. ಇದು ಭಗವಂತನಿಂದ ನೇರವಾಗಿ ಕಲಿತುಕೊಳ್ಳವುದಕ್ಕೆ ಸಮಾನ. ಇಲ್ಲವಾದರೆ ಅತ್ಯಂತ ಬುದ್ಧಿವಂತರಿಗೂ ದಿಗ್ಭ್ರಮೆಯಾಗುತ್ತದೆ.
ಕರ್ಮಣ್ಯಕರ್ಮ ಯಃ ಪಶ್ಯೇದಕರ್ಮಣಿ ಚ ಕರ್ಮ ಯಃ |
ಸ ಬುದ್ಧಿಮಾನ್ಮನುಷ್ಯೇಷು ಸ ಯುಕ್ತಃ ಕೃತ್ಸ್ನಕರ್ಮಕೃತ್ ||18||
ಕರ್ಮದಲ್ಲಿ ಅಕರ್ಮವನ್ನು, ಅಕರ್ಮದಲ್ಲಿ ಕರ್ಮವನ್ನು ಕಾಣುವವನು ಮನುಷ್ಯರಲ್ಲಿ ಬುದ್ಧಿವಂತನು. ಅವನು ಎಲ್ಲ ಬಗೆಯ ಕರ್ಮಗಳಲ್ಲಿ ತೊಡಗಿದ್ದರೂ ಆಧ್ಯಾತ್ಮಿಕ ಸ್ಥಿತಿಯಲ್ಲಿರುವವನು.
ಕೃಷ್ಣಪ್ರಜ್ಞೆಯಲ್ಲಿ ಕರ್ಮ ಮಾಡುವವನು ಸಹಜವಾಗಿ ಕರ್ಮಬಂಧನದಿಂದ ಮುಕ್ತನಾದವನು. ಅವನು ಮಾಡುವುದೆಲ್ಲ ಕೃಷ್ಣನಿಗಾಗಿಯೇ. ಆದುದರಿಂದ ಅವನಿಗೆ ಕರ್ಮದ ಯಾವವದೇ ಪರಿಣಾಮದ ಸಂತೋಷವೂ ಇಲ್ಲ, ಕಷ್ಟವೂ ಇಲ್ಲ. ಹೀಗಾಗಿ ಅವನು ಕೃಷ್ಣನಿಗಾಗಿ ಎಲ್ಲ ಬಗೆಯ ಕರ್ಮದಲ್ಲಿ ತೊಡಗಿದ್ದರೂ ಮನುಷ್ಯ ಸಮಾಜದಲ್ಲಿ ಬುದ್ಧಿವಂತನು. ಅಕರ್ಮ ಎಂದರೆ ಕೆಲಸಕ್ಕೆ ಪ್ರತಿಕ್ರಿಯೆಯಿಲ್ಲದೆ ಎಂದರ್ಥ. ನಿರಾಕಾರವಾದಿಯು ಭಯದಿಂದ ಫಲಾಪೇಕ್ಷೆಯ ಕರ್ಮವನ್ನು ಬಿಡುತ್ತಾನೆ.
ಕರ್ಮಫಲವು ಆತ್ಮಸಾಕ್ಷಾತ್ಕಾರದ ಮಾರ್ಗದಲ್ಲಿ ಅಡ್ಡಿಯಾಗದಿರಲಿ ಎಂದು ಅವನ ಯೋಜನೆ. ಆದರೆ ಸಾಕಾರವಾದಿಗೆ ತನ್ನ ಸ್ಥಾನವು ದೇವೋತ್ತಮ ಪರಮ ಪುರುಷನ ನಿತ್ಯ ಸೇವಕನದು ಎನ್ನುವ ಸರಿಯಾದ ತಿಳುವಳಿಕೆ ಇರುತ್ತದೆ. ಆದುದರಿಂದ ಅವನು ಕೃಷ್ಣಪ್ರಜ್ಞೆಯ ಕಾರ್ಯಗಳಲ್ಲಿ ತೊಡಗುತ್ತಾನೆ. ಎಲ್ಲವನ್ನೂ ಕೃಷ್ಣನಿಗಾಗಿ ಮಾಡುವುದರಿಂದ ಈ ಸೇವಾಕಾರ್ಯದಲ್ಲಿ ಅವನಿಗೆ ಕೇವಲ ಅಲೌಕಿಕ ಸುಖದ ಅನುಭವವಾಗುತ್ತದೆ. ಈ ಪ್ರಕ್ರಿಯೆಯಲ್ಲಿ ತೊಡಗಿದವರಿಗೆ ಸ್ವಂತ ಇಂದ್ರಿಯಸುಖದ ಬಯಕೆ ಇಲ್ಲ ಎಂದು ತಿಳಿಯಲಾಗಿದೆ. ಕೃಷ್ಣನ ನಿತ್ಯಸೇವೆಯ ಭಾವವು ಮನುಷ್ಯನನ್ನು ಕ್ರಮದ ಎಲ್ಲ ಪ್ರತಿಕ್ರಿಯೆಗಳಿಂದ ತೊಂದರೆಯಾಗದಂತೆ ರಕ್ಷಿಸುತ್ತದೆ.