Bhagavad Gita:ಭಗವಂತನದಲ್ಲಿ ಸಂಪೂರ್ಣ ಆಶ್ರಯ ಪಡೆಯುವವರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ; ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh lord krishna no loss for who take shelter in god bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita:ಭಗವಂತನದಲ್ಲಿ ಸಂಪೂರ್ಣ ಆಶ್ರಯ ಪಡೆಯುವವರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita:ಭಗವಂತನದಲ್ಲಿ ಸಂಪೂರ್ಣ ಆಶ್ರಯ ಪಡೆಯುವವರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಭಗವಂತನದಲ್ಲಿ ಸಂಪೂರ್ಣ ಆಶ್ರಯ ಪಡೆಯುವವರಿಗೆ ಯಾವುದೇ ರೀತಿಯಲ್ಲಿ ನಷ್ಟವಾಗಲೀ, ದುರ್ಗತಿಯಾಗಲೀ ಇರುವುದಿಲ್ಲ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. 6ನೇ ಅಧ್ಯಾಯದ 40ನೇ ಶ್ಲೋಕ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 6-ಧ್ಯಾನಯೋಗ: ಶ್ಲೋಕ - 40

ಶ್ರೀ ಭಗವಾನುವಾಚ

ಪಾರ್ಥ ನೈವೇಹ ನಾಮುತ್ರ ವಿನಾಶಸ್ತಸ್ಯ ವಿದ್ಯತೇ |

ನ ಹಿ ಕಲ್ಯಾಣಕೃತ್ಕಶ್ಚಿದ್ ದುರ್ಗತಿಂ ತಾತ ಗಚ್ಛತಿ ||40||

ಅನುವಾದ: ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು - ಪಾರ್ಥ, ಕಲ್ಯಾಣಕಾರ್ಯಗಳನ್ನು ಮಾಡುವ ಅಧ್ಯಾತ್ಮವಾದಿಗೆ ಈ ಲೋಕದಲ್ಲಾಗಲೀ ಅಧ್ಯಾತ್ಮಿಕ ಲೋಕದಲ್ಲಾಗಲೀ ನಾಶೆವೆಂಬದಿಲ್ಲ. ಗೆಳೆಯ, ಕಲ್ಯಾಣಕಾರ್ಯಗಳನ್ನು ಮಾಡುವವನನ್ನು ದುಷ್ಟತನವು ಗೆಲ್ಲಲಾರದು.

ಭಾವಾರ್ಥ: ಶ್ರೀಮದ್ಭಾಗವತದಲ್ಲಿ (1.5.17) ಶ್ರೀ ನಾರದ ಮುನಿಗಳು ವ್ಯಾಸದೇವರಿಗೆ ಹೀಗೆ ಉಪದೇಶ ಮಾಡುತ್ತಾರೆ -

ತ್ಯಕ್ತ್ವಾ ಸ್ವಧರ್ಮಂ ಚರಣಾಮ್ಬುಜಂ ಹರೇರ್

ಭಜನ್ನಪಕ್ವೋಥ ಪತೇತ್ ತತೋ ಯದಿ |

ಯತ್ರ ಕ್ವ ವಾಭದ್ರಮಭೂದ್ ಅಮುಷ್ಯ ಕಿಂ

ಕೋ ವಾರ್ಥ ಆಪ್ತೋಭಜತಾಂ ಸ್ವಧರ್ಮತಃ ||

ಯಾರಾದರೂ ಎಲ್ಲ ಐಹಿಕ ಭವಿಷ್ಯ ನಿರೀಕ್ಷೆಗಳನ್ನು ತ್ಯಜಿಸಿ ದೇವೋತ್ತಮ ಪರಮ ಪುರುಷನಲ್ಲಿ ಸಂಪೂರ್ಣ ಆಶ್ರಯವನ್ನು ಪಡೆದರೆ ಅವರಿಗೆ ಯಾವುದೇ ರೀತಿಯಲ್ಲಿ ನಷ್ಟವಾಗಲೀ ದುರ್ಗತಿಯಾಗಲೀ ಇಲ್ಲ. ಆದರೆ ಭಕ್ತನಲ್ಲದವನು ತನ್ನ ವೃತ್ತಿಯ ಕರ್ತವ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿದರೂ ಏನನ್ನೂ ಪಡೆಯದೆ ಹೋಗಬಹುದು. ಐಹಿಕ ಭವಿಷ್ಯ ನಿರೀಕ್ಷೆಗಾಗಿ ಶಾಸ್ತ್ರದ ಪ್ರಕಾರವಾಗಿಯೂ ರೂಢಿಗನುಗುಣವಾಗಿಯೂ ಹಲವಾರು ಚಟುವಟಿಕೆಗಳುಂಟು. ಅಧ್ಯಾತ್ಮಿಕವಾದಿಯು ಬದುಕಿನಲ್ಲಿ ಅಧ್ಯಾತ್ಮಿಕ ಪ್ರಗತಿಗಾಗಿ, ಕೃಷ್ಣಪ್ರಜ್ಞೆಗಾಗಿ ಎಲ್ಲ ಐಹಿಕ ಚಟುವಟಿಕೆಗಳನ್ನು ತ್ಯಜಿಸುತ್ತಾನೆ ಎಂದು ನಿರೀಕ್ಷೆಯುಂಟು.

ಕೃಷ್ಣಪ್ರಜ್ಞೆಯನ್ನು ಸಂಪೂರ್ಣಗೊಳಿಸಿದರೆ ಮನುಷ್ಯನು ಅತ್ಯುನ್ನತ ಪರಿಪೂರ್ಣತೆಯನ್ನು ಸಾಧಿಸಬಹುದು. ಆದರೆ ಇಂತಹ ಪರಿಪೂರ್ಣ ಹಂತವನ್ನು ತಲಪದೇ ಹೋದವನು ಐಹಿಕವಾಗಿಯೂ ಆಧ್ಯಾತ್ಮಿಕವಾಗಿಯೂ ನಷ್ಟಕ್ಕೆ ಒಳಗಾಗುತ್ತಾನೆ ಎಂದು ವಾದಿಸಬಹುದು. ವಿಧಿತ ಕರ್ತವ್ಯಗಳನ್ನು ನಿರ್ವಹಿಸದಿದ್ದರೆ ಅನುಷ್ಯನು ಅದರ ಪ್ರತಿಕ್ರಿಯೆಯನ್ನು ಅನುಭವಿಸಬೇಕಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಿದೆ. ಆದುದರಿಂದ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಯೋಗ್ಯರೀತಿಯಲ್ಲಿ ತೊಡಗದಿದ್ದವನು ಈ ಪ್ರತಿಕ್ರಿಯೆಗಳಿಗೆ ಒಳಗಾಗುತ್ತಾನೆ.

ಯಶಸ್ವಿಯಾಗದ ಅಧ್ಯಾತ್ಮಿಕವಾಗಿದೆ ಅವನು ಆತಂಕಪಡುವ ಕಾರಣವಿಲ್ಲ ಎಂದು ಭಾಗವತವು ಭರವಸೆ ನೀಡುತ್ತದೆ. ವಿಧಿತ ಕರ್ತವ್ಯಗಳನ್ನು ಪರಿಪೂರ್ಣವಾಗಿ ನಿರ್ವಹಿಸಲಿಲ್ಲ ಎನ್ನುವ ಕಾರಣಕ್ಕಾಗಿ ಆತನು ಪ್ರತಿಕ್ರಿಯೆಗೆ ಒಳಗಾಗಬಹುದಾದರೂ ಅವನಿಗೆ ನಷ್ಟವಿಲ್ಲ. ಏಕೆಂದರೆ ಮಂಗಳಕರವಾದ ಕೃಷ್ಣಪ್ರಜ್ಞೆಯನ್ನು ಮರೆಯುವುದು ಎನ್ನುವುದೇ ಇಲ್ಲ. ಇದರಲ್ಲಿ ತೊಡಗಿರುವವನು ಮುಂದಿನ ಜನ್ಮದಲ್ಲಿ ಕೆಳವರ್ಗದಲ್ಲಿ ಹುಟ್ಟಿದರೂ ಕೃಷ್ಣಪ್ರಜ್ಞೆಯಲ್ಲಿ ಮುಂದುವರಿಯುತ್ತಾನೆ. ಆದರೆ ವಿಧಿತ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಷ್ಟನ್ನೇ ಮಾಡುವವನಿಗೆ ಕೃಷ್ಣಪ್ರಜ್ಞೆ ಇಲ್ಲದಿದ್ದರೆ ಕಲ್ಯಾಣವೇ ಆಗುತ್ತದೆ ಎಂದು ಹೇಳುವಂತಿಲ್ಲ.

ಮಾನವನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು

ಭಾವಾರ್ಥವನ್ನು ಮುಂದೆ ಹೇಳಿದಂತೆ ಅರ್ಥ ಮಾಡಿಕೊಳ್ಳಬಹುದು. ಮಾನವಕುಲವನ್ನು ಸಂಯಮವಿರುವವರು ಮತ್ತು ಸಂಯಮರಹಿತರು ಎಂದು ಎರಡು ವರ್ಗಗಳಾಗಿ ವಿಭಾಗಿಸಬಹುದು. ತಮ್ಮ ಮುಂದಿನ ಜನ್ಮದ ಅಥವಾ ಅಧ್ಯಾತ್ಮಿಕ ಮೋಕ್ಷದ ತಿಳುವಳಿಕೆಯೇ ಇಲ್ಲದೆ ಮೃಗಗಳಂತೆ ಇಂದ್ರಿಯಭೋಗದಲ್ಲಷ್ಟೇ ತೊಡಗಿರುವವರು ಸಂಯಮರಹಿತರ ವಿಭಾಗಕ್ಕೆ ಸೇರಿದವರು. ಶಾಸ್ತ್ರಗಳು ವಿಧಿಸಿದ ಕರ್ತವ್ಯಗಳನ್ನು ಅನುಸರಿಸುವವರು ಸಂಯಮಶೀಲರ ವಿಭಾಗಕ್ಕೆ ಸೇರುತ್ತಾರೆ.

ನಾಗರಿಕರಾಗಲಿ ಅನಾಗರಿಕರಾಗಿರಲಿ, ವಿದ್ಯಾವಂತರಾಗಿರಲಿ ಅವಿದ್ಯಾವಂತರಾಗಿರಲಿ, ಬಲಶಾಲಿಗಳಾಗಿರಲಿ ದುರ್ಬಲರಾಗಿರಲಿ, ಸಂಯಮರಹಿತರು ವಿಭಾಗದವರು ಪಶುಪ್ರವೃತ್ತಿಗಳಿಂದ ತುಂಬಿಹೋಗಿರುತ್ತಾರೆ. ಅವರ ಚಟುವಟಿಕೆಗಳು ಎಂದೂ ಕಲ್ಯಾಣಕರವಾಗಿರುವುದಿಲ್ಲ. ಏಕೆಂದರೆ ತಿನ್ನುವುದು, ನಿದ್ರಿಸುವುದು, ರಕ್ಷಣೆ ಮತ್ತು ಮೈಥುನ ಈ ಪಶುಪ್ರವೃತ್ತಿಗಳನ್ನು ಸವಿಯುತ್ತಿರುವಾಗ ಅವರು ಸದಾ ಐಹಿಕ ಅಸ್ತಿತ್ವದಲ್ಲಿಯೇ ಉಳಿಯುತ್ತಾರೆ. ಈ ಅಸ್ತಿತ್ತವು ಯಾವಾಗೂ ದುಃಖಮಯವಾದ್ದು. ಇದಕ್ಕೆ ಪ್ರತಿಯಾಗಿ ಶಾಸ್ತ್ರದ ವಿಧಿಗಳಿಂದ ನಿಯಂತ್ರಿತರಾಗಿ ಕ್ರಮೇಣ ಕೃಷ್ಣಪ್ರಜ್ಞೆಗೆ ಏರುವವರು ನಿಶ್ಚಯವಾಗಿಯೂ ಬದುಕಿನಲ್ಲಿ ಪ್ರಗತಿಯನ್ನು ಹೂಂದುವವರು.

ಕಲ್ಯಾಣಕರ ಮಾರ್ಗದಲ್ಲಿ ನಡೆಯುವವರನ್ನು ಮೂರು ವರ್ಗಗಳಾಗಿ ವಿಭಾಗಿಸಬಹುದು. 1. ಶಾಸ್ತ್ರದ ನಿಯಮ ನಿಬಂಧನೆಗಳನ್ನು ಅನುಸರಿಸಿ ಐಹಿಕ ಅಭ್ಯುದಯವನ್ನು ಸವಿಯುತ್ತಿರುವವರು. 1. ಐಹಿಕ ಅಸ್ತಿತ್ವದಿಂದ ಪರಮ ಮುಕ್ತಿಯನ್ನು ಪಡೆಯಲು ಪ್ರಯತ್ನಿಸುತ್ತಿರುವವರು ಮತ್ತು 3. ಕೃಷ್ಣಪ್ರಜ್ಞೆಯಲ್ಲಿ ಭಕ್ತರಾದವರು. ಪ್ರಾಪಂಚಿಕ ಸುಖಕ್ಕಾಗಿ ಶಾಸ್ತ್ರಗಳ ನಿಯಮ, ನಿಬಂಧನೆಗಳನ್ನು ಅನುಸರಿಸುವವರನ್ನು ಇನ್ನೂ ಎರಡು ವರ್ಗಗಳಾಗಿ ವಿಭಾಗಿಸಬಹುದು - ಕರ್ಮಫಲಾಪೇಕ್ಷಿಗಳು ಮತ್ತು ಇಂದ್ರಿಯ ತೃಪ್ತಿಗಾಗಿ ಫಲವನ್ನು ಬಯಸದವರು.

ಇಂದ್ರಿಯ ತೃಪ್ತಿಗಾಗಿ ಫಲವನ್ನು ಅಪೇಕ್ಷಿಸುವವರು ಇನ್ನೂ ಉನ್ನತವಾದ ಜೀವನಮಟ್ಟಕ್ಕೆ ಏರಬಹುದು. ಉನ್ನತ ಲೋಕಗಳಿಗೂ ಏರಬಹುದು. ಆದರೂ ಅವರು ಐಹಿಕ ಅಸ್ತಿತ್ವದಿಂದ ಬಿಡುಗಡೆಯಾಗದಿರುವುದರಿಂದ ಅವರು ನಿಜವಾಗಿ ಕಲ್ಯಾಣಕರ ಮಾರ್ಗವನ್ನು ಅನುಸರಿಸುತ್ತಿಲ್ಲ. ಮುಕ್ತಿಗೊಯ್ಯುವ ಚಟುವಟಿಕೆಗಳು ಮಾತ್ರವೇ ಕಲ್ಯಾಣಕರ ಚಟುವಟಿಕೆಗಳು. ಕಟ್ಟಕಡೆಗೆ ಆತ್ಮಸಾಕ್ಷಾತ್ಕಾರ ಅಥವಾ ಬದುಕಿನ ಐಹಿಕ ಶಾರೀರಕ ಪರಿಕಲ್ಪನೆಯಿಂದ ಬಿಡುಗಡೆ ಪಡೆಯುವುದೇ ಗುರಿಯಾಗಿಲ್ಲದ ಯಾವುದೇ ಚಟುವಟಿಕೆಯು ಮಂಗಳಕರವಲ್ಲ.

ಕೃಷ್ಣಪ್ರಜ್ಞೆಯಿಂದ ಮಾಡುವ ಕೆಲಸವಷ್ಟೇ ಮಂಗಳಕರ ಕೆಲಸ. ಕೃಷ್ಟಪ್ರಜ್ಞೆಯ ಮಾರ್ಗದಲ್ಲಿ ಮುಂದುವರಿಯುವುದಕ್ಕಾಗಿ ದೈಹಿಕ ಬಾಧೆಗಳನ್ನು ಸ್ವಇಚ್ಛೆಯಿಂದ ಸ್ವೀಕರಿಸುವವನನ್ನು ಕಠಿಣ ವೈರಾಗ್ಯದ ಪರಿಪೂರ್ಣ ಯೋಗಿ ಎಂದು ಕರೆಯಬಹುದು. ಅಷ್ಟಾಂಗಯೋಗ ಪದ್ಧತಿಯ ಗುರಿ ಕೃಷ್ಣಪ್ರಜ್ಞೆಯ ಅಂತಿಮ ಸಾಕ್ಷಾತ್ಕಾರ. ಇಂತಹ ಅಭ್ಯಾಸವೂ ಸಹ ಮಂಗಳಕರವಾದ್ದು ಮತ್ತು ಈ ವಿಷಯದಲ್ಲಿ ತನ್ನಿಂದಾದಷ್ಟು ಪ್ರಯತ್ನಿಸುವವನು ತನಗೆ ದುರ್ಗತಿಯಾಗುವುದೆಂದು ಹೆದರಬೇಕಾಗಿಲ್ಲ.

(This copy first appeared in Hindustan Times Kannada website. To read more like this please logon to kannada.hindustantimes.com )

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.