ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Peace Of Mind In Life Bhagavad Gita Quotes In Kannada Rmy

Bhagavad Gita: ಭಗವಂತನನ್ನು ನಿತ್ಯ ಜಪಿಸಿದರೆ ಕಷ್ಟಗಳು ದೂರವಾಗಿ ಜೀವನದಲ್ಲಿ ನೆಮ್ಮದಿ ಸಿಗುತ್ತೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಭಗವಂತನನ್ನು ನಿತ್ಯ ಜಪಿಸಿದರೆ ಕಷ್ಟಗಳು ದೂರವಾಗಿ ಜೀವನದಲ್ಲಿ ನೆಮ್ಮದಿ ಸಿಗುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ. 6ನೇ ಅಧ್ಯಾಯದ 43 ಮತ್ತು 44 ನೇ ಶ್ಲೋಕವನ್ನು ಓದಿ.

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ.

ಅಧ್ಯಾಯ 6 -ಧ್ಯಾನ ಯೋಗ: ಶ್ಲೋಕ - 43

ತತ್ರ ತಂ ಬುದ್ಧಿಸಂಯೋಗಂ ಲಭತೇ ಪೌರ್ವದೇಹಿಕಮ್ |

ಯತತೇ ಚ ತತೋ ಭೂಯಃ ಸಂಸಿದ್ದೌ ಕುರುನನ್ದನ ||43||

ಅನುವಾದ: Bhagavad Gita Updesh in Kannada: ಕುರುನಂದನನೆ, ಇಂತಹ ಜನ್ಮವನ್ನು ತಳೆದ ಮೇಲೆ ಆತನು ತನ್ನ ಪೂರ್ವಜನ್ಮದ ದೈವೀಪ್ರಜ್ಞೆಯನ್ನು ಮತ್ತೆ ಎಚ್ಚರಿಸಿಕೊಳ್ಳುತ್ತಾನೆ ಮತ್ತು ಸಂಪೂರ್ಣ ಯಶಸ್ಸನ್ನು ಗಳಿಸುವುದಕ್ಕಾಗಿ ಇನ್ನೂ ಪ್ರಗತಿಯನ್ನು ಸಾಧಿಸಲು ಪ್ರಯತ್ನಿಸುತ್ತಾನೆ.

ಭಾವಾರ್ಥ: ಒಬ್ಬ ಸದ್ಭ್ರಾಹ್ಮಣನ ಸಂಸಾರದಲ್ಲಿ ಅರಸ ಭರತನು ತನ್ನ ಮೂರನೆಯ ಜನ್ಮವನ್ನು ತಾಳಿದ. ಹಿಂದಿನ ದಿವ್ಯಪ್ರಜ್ಞೆಯನ್ನು ಪನಶ್ಚೇತನಗೊಳಿಸಲು ಉತ್ತಮ ಜನ್ಮತಾಳುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆ. ರಾಜ ಭರತನು ಜಗತ್ತಿನ ಚಕ್ರವರ್ತಿ. ಅವನ ಕಾಲದಿಂದ ದೇವತೆಗಳು ಈ ಲೋಕವನ್ನು ಭರತವರ್ಷ ಎಂದು ಕರೆಯಲು ಪ್ರಾರಂಭಿಸಿದರು. ಅದಕ್ಕೆ ಮೊದಲು ಈ ಲೋಕಕ್ಕೆ ಇಳಾವೃತ ವರ್ಷ ಎಂದು ಹೆಸರಿತ್ತು. ಚಕ್ರವರ್ತಿಯು ಚಿಕ್ಕ ವಯಸ್ಸಿನಲ್ಲೇ ಅಧ್ಯಾತ್ಮಿಕ ಪರಿಪೂರ್ಣತೆಗಾಗಿ ಪ್ರಾಪಂಚಿಕ ವ್ಯವಹಾರದಿಂದ ದೂರವಾದನು. ಆದರೆ ಯಶಸ್ವಿಯಾಗಲಿಲ್ಲ.

ಮುಂದಿನ ಜನ್ಮದಲ್ಲಿ ಆತನು ಒಬ್ಬ ಒಳ್ಳೆಯ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ. ಅವನು ಯಾವಾಗಲೂ ಒಬ್ಬನೇ ಇದ್ದು ಯಾರೊಡನೆಯೂ ಮಾತನಾಡುತ್ತಿರಲಿಲ್ಲ. ಆದುದರಿಂದ ಅವನಿಗೆ ಜಡ ಭರತ ಎಂದು ಹೆಸರು ಬಂದಿತು. ಮುಂದೆ ಅರಸ ರಹೂಗಣನು ಅವನನ್ನು ಅತಿಶ್ರೇಷ್ಠ ಯೋಗಿಯೆಂದು ಕಂಡನು. ಅವನ ಜೀವನದಿಂದ, ಅಧ್ಯಾತ್ಮಿಕ ಪ್ರಯತ್ನಗಳು ಅಥವಾ ಯೋಗಾಭ್ಯಾಸವು ವ್ಯರ್ಥವಾಗುವುದೇ ಇಲ್ಲ ಎಂದು ತಿಳಿಯುತ್ತದೆ. ಭಗವಂತನ ಕೃಪೆಯಿಂದ ಯೋಗಿಗೆ ಕೃಷ್ಣಪ್ರಜ್ಞೆಯಲ್ಲಿ ಪರಿಪೂರ್ಣತೆಯನ್ನು ಪಡೆದುಕೊಳ್ಳಲು ಮತ್ತೆ ಮತ್ತೆ ಅವಕಾಶಗಳು ಲಭ್ಯವಾಗುತ್ತವೆ.

ಅಧ್ಯಾಯ 6 -ಧ್ಯಾನ ಯೋಗ: ಶ್ಲೋಕ - 44

ಪೂರ್ವಾಭ್ಯಾಸೇನ ತೇನೈವ ಹ್ರಿಯತೇ ಹ್ಯವಶೋಪಿ ಸಃ |

ಜಿಜ್ಞಾಸುರಪಿ ಯೋಗಸ್ಯ ಶಬ್ದಬ್ರಹ್ಮಾತಿವರ್ತತೇ ||44||

ಅನುವಾದ: ತನ್ನ ಹಿಂದಿನ ಜನ್ಮದ ದೈವೀ ಪ್ರಜ್ಞೆಯ ಪ್ರಭಾವದಿಂದ ಆತನು ಯೋಗದ ತತ್ವಗಳನ್ನು ಅರಸದಿದ್ದರೂ ತಂತಾನೇ ಅವುಗಳಿಂದ ಆಕರ್ಷಿತನಾಗುತ್ತಾನೆ. ಇಂತಹ ಜಿಜ್ಞಾಸುವಾದ ಅಧ್ಯಾತ್ಮಿಕವಾದಿಯು ಯಾವಾಗಲೂ ಶಾಸ್ತ್ರಗ್ರಂಥಗಳ ವಿಧಿಗಳ ತತ್ವಗಳನ್ನು ಮೀರಿರುತ್ತಾನೆ.

ಭಾವಾರ್ಥ: ಪ್ರಬುದ್ಧ ಯೋಗಿಗಳಿಗೆ ಶಾಸ್ತ್ರಗ್ರಂಥಗಳ ವಿಧಿಗಳ ಆಕರ್ಷಣೆ ಹೆಚ್ಚಿರುವುದಿಲ್ಲ. ಆದರೆ ಅವರನ್ನು ಯೋಗತತ್ವಗಳು ಆಕರ್ಷಿಸುತ್ತವೆ. ಈ ತತ್ವಗಳು ಅವರನ್ನು ಯೋಗದ ಅತ್ಯುನ್ನತ ಪರಿಪೂರ್ಣತೆಯಾದ ಪೂರ್ಣ ಕೃಷ್ಣಪ್ರಜ್ಞೆಗೆ ಏರಿಸಬಲ್ಲವು. ಶ್ರೀಮದ್ಭಾಗವದಲ್ಲಿ (3.33.7) ಪ್ರಬುದ್ಧ ಅಧ್ಯಾತ್ಮಿಕವಾದಿಗಳು ವೈದಿಕ ವಿಧಿಗಳನ್ನು ಕಡೆಗಣಿಸುವುದನ್ನು ಹೀಗೆ ವಿವರಿಸಿದೆ -

ಅಹೋ ಬತ ಶ್ವಪಚೋತೋ ಗರೀಯಾನ್

ಯಜ್ಜಿಹ್ವಾಗ್ರೇ ವರ್ತತೇ ನಾಮ ತ್ಯುಭ್ಯಮ್ |

ತೇಪುಸ್ತಪಸ್ತೇ ಪಜುಹುವುಃ ಸಸ್ನುರಾರ್ಯಾ

ಬ್ರಹ್ಮಾನೂಚುರ್ನಾಮ ಗೃಣನ್ತಿ ಯೇ ತೇ ||

ಇದನ್ನೂ ಓದಿ: ಭಗವಂತನದಲ್ಲಿ ಸಂಪೂರ್ಣ ಆಶ್ರಯ ಪಡೆಯುವವರಿಗೆ ಯಾವುದೇ ರೀತಿಯ ನಷ್ಟವಾಗುವುದಿಲ್ಲ; ಗೀತೆಯ ಸಾರಾಂಶ ಹೀಗಿದೆ

ಪ್ರಭವೇ, ನಿನ್ನ ಪಾವನನಾಮಗಳನ್ನು ಸಂಕೀತನೆ ಮಾಡುವವರು ನಾಯಿಯನ್ನು ತಿನ್ನುವ ಕುಟುಂಬದಲ್ಲೇ ಹುಟ್ಟಿರಬಹುದು. ಆದರೂ ಅಧ್ಯಾತ್ಮಿಕ ಜೀವನದಲ್ಲಿ ಅವರು ತುಂಬ ಮುಂದುವರಿದವರು. ಹೀಗೆ ಸಂಕೀರ್ತನೆ ಮಾಡುವವರು ನಿಶ್ಚಯವಾಗಿಯೂ ಎಲ್ಲ ಬಗೆಯ ವ್ರತಗಳನ್ನೂ ಮತ್ತು ಯಜ್ಞಗಳನ್ನೂ ನಡೆಸುವವರು, ಎಲ್ಲ ಪವಿತ್ರಸ್ಥಳಗಳಲ್ಲಿ ಸ್ನಾನ ಮಾಡಿರುವವರು ಮತ್ತು ಎಲ್ಲ ಶಾಸ್ತ್ರಧ್ಯಯನವನ್ನು ಮುಗಿಸಿರುವವರು.

ಇದರ ಪ್ರಸಿದ್ಧ ನಿದರ್ಶನವನ್ನು ಚೈನತ್ಯ ಮಹಾಪ್ರಭುಗಳು ತೋರಿಸಿ ಕೊಟ್ಟರು. ಅವರು ಠಾಕೂರ ಹರಿದಾಸರನ್ನು ತಮ್ಮ ಅತ್ಯಂತ ಪ್ರಮುಖ ಶಿಷ್ಯರಲ್ಲಿ ಒಬ್ಬರನ್ನಾಗಿ ಸ್ವೀಕರಿಸಿದರು. ಠಾಕೂರ ಹರಿದಾಸರು ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದರೂ ಅವರು ಭಗವಂತನ ಪವಿತ್ರವಾದ ಹೆಸರುಗಳನ್ನು ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ / ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಎಂದು ಪ್ರತಿನಿತ್ಯ ಮೂರು ಲಕ್ಷಬಾರಿ ಜಪಮಾಡುವವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದರು.

ಈ ಕಾರಣಕ್ಕಾಗಿ ಚೈನತ್ಯ ಮಹಾಪ್ರಭುಗಳು ಅವರನ್ನು ನಾಮಾಚಾರ್ಯರ ಸ್ಥಾನಕ್ಕೆ ಏರಿಸಿದರು. ಅವರು ಸದಾ ಭಗವಂತನ ಪವಿತ್ರನಾಮವನ್ನು ಸಂಕೀರ್ತನ ಮಾಡುತ್ತಿದ್ದದರಿಂದ ಅವರು ಶಬ್ದಬ್ರಹ್ಮ ಎಂದು ಹೆಸರಾದ ವೈದಿಕ ವಿಧ್ಯುಕ್ತ ವಿಧಾನಗಳನ್ನೆಲ್ಲ ಹಿಂದಿನ ಜನ್ಮದಲ್ಲಿ ಮಾಡಿ ಮುಗಿಸಿರಬೇಕೆಂದು ತಿಳಿಯಲಾಗಿತ್ತು. ಪರಿಶುದ್ಧನಾಗದೆ ಯಾವ ಮನುಷ್ಯನೂ ಕೃಷ್ಣಪ್ರಜ್ಞೆಯ ತತ್ವಗಳನ್ನು ಇಷ್ಟಪಡಲಾರ ಅಥವಾ ಭಗವಂತನ ಪುಣ್ಯನಾಮವಾದ ಹರೇ ಕೃಷ್ಣ ಮಂತ್ರದ ಸಂಕೀರ್ತನೆಯಲ್ಲಿ ತೊಡಗಲಾರ. ಭಗವಂತನನ್ನು ನಿತ್ಯ ಜಪಿಸಿದರೆ ಕಷ್ಟಗಳು ದೂರವಾಗಿ ನೆಮ್ಮದಿಯಿಂದ ಜೀವನ್ನು ನಡೆಸಬಹುದಾಗಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )