Bhagavad Gita: ಪರಿಪೂರ್ಣ ಸತ್ಯವು ಇಂದ್ರಿಯಗಳಿಗೆ ಎಟುಕುವುದಿಲ್ಲ, ಅದು ಅವ್ಯಕ್ತ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಪರಿಪೂರ್ಣ ಸತ್ಯವು ಇಂದ್ರಿಯಗಳಿಗೆ ಎಟುಕುವುದಿಲ್ಲ, ಅದು ಅವ್ಯಕ್ತ ಎಂಬುದರ ಅರ್ಥವನ್ನು ಭಗವದ್ಗೀತೆಯ 12 ನೇ ಅಧ್ಯಾಯದ 1ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ
ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 1
ಏವಂ ಸತತಯುಕ್ತಾ ಯೇ ಭಕ್ತಾಸ್ತ್ವಾಂ ಪರ್ಯುಪಾಸತೇ |
ಯೇ ಚಾಪ್ಯಕ್ಷರಮವ್ಯಕ್ತಂ ತೇಷಾಂ ಕೇ ಯೋಗವಿತ್ತಮಾಃ ||1||
ಅನುವಾದ: ಅರ್ಜುನನು ಪ್ರಶ್ನಿಸಿದನು-ಸದಾ ನಿನ್ನ ಭಕ್ತಿಸೇವೆಯಲ್ಲಿ ಉಚಿತವಾದ ರೀತಿಯಲ್ಲಿ ನಿರತರಾದವರು, ಅವ್ಯಕ್ತವಾದ ನಿರಾಕಾರ ಬ್ರಹ್ಮನನ್ನು ಪೂಜಿಸುವವರು - ಇವರಿಬ್ಬರಲ್ಲಿ ಯಾರು ಹೆಚ್ಚು ಪರಿಪೂರ್ಣರೆಂದು ಭಾವಿಸಬೇಕು?
ಭವದ್ಗೀತೆಯ 12ನೇ ಅಧ್ಯಾಯ ಭಕ್ತಿ ಸೇವೆ 1ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಕೃಷ್ಣನ ಸಾಕಾರ ರೂಪದಲ್ಲಿ ಅನುರಕ್ತರಾಗಿಲ್ಲದವರು ಇದ್ದಾರೆ. ಅವರು ಎಷ್ಟರಮಟ್ಟಿಗೆ ಬೇರೆಯಾಗಿದ್ದಾರೆಂದರೆ ಭಗವದ್ಗೀತೆಯ ವ್ಯಾಖ್ಯಾನಗಳನ್ನು ಸಿದ್ಧಗೊಳಿಸುವಾಗ ಸಹ ಅವರು ಜನರ ಮನಸ್ಸನ್ನು ಕೃಷ್ಣನಿಂದ ಬೇರೆಡೆಗೆ ತಿರುಗಿಸಿ ಭಕ್ತಿಯನ್ನೆಲ್ಲ ನಿರಾಕಾರ ಬ್ರಹ್ಮಜ್ಯೋತಿಗೆ ಬದಲಾಯಿಸಲು ಅಪೇಕ್ಷಿಸುತ್ತಾರೆ. ಪರಿಪೂರ್ಣ ಸತ್ಯವು ಇಂದ್ರಿಯಗಳಿಗೆ ಎಟುಕುವುದಿಲ್ಲ, ಅದು ಅವ್ಯಕ್ತ. ಆದ್ದರಿಂದ ಇವರು ಪರಿಪೂರ್ಣ ಸತ್ಯದ ನಿರಾಕಾರ ರೂಪವನ್ನೇ ಧ್ಯಾನಿಸಲು ಬಯಸುತ್ತಾರೆ (Bhagavad Gita Updesh in Kannada).
ಯೋಗಿಗಳಲ್ಲಿ ಎರಡು ವರ್ಗಗಳು. ಯಾವ ಪ್ರಕ್ರಿಯೆಯು ಹೆಚ್ಚು ಸುಲಭವಾದದ್ದು ಮತ್ತು ಎರಡು ವರ್ಗಗಳಲ್ಲಿ ಯಾವುದು ಅತ್ಯಂತ ಪರಿಪೂರ್ಣವಾದದ್ದು ಎನ್ನುವ ಪ್ರಶ್ನೆಯನ್ನು ತೀರ್ಮಾನಿಸಲು ಅರ್ಜುನನು ಪ್ರಯತ್ನಿಸುತ್ತಿದ್ದಾನೆ. ಎಂದರೆ, ಆತನು ಕೃಷ್ಣನ ಸಾಕಾರರೂಪದಲ್ಲಿ ಪ್ರೀತಿಯಿರುವವನಾದ್ದರಿಂದ ತನ್ನ ನಿಲುವನ್ನು ಸ್ಪಷ್ಟಪಡಿಸುತ್ತಿದ್ದಾನೆ. ಆತನಿಗೆ ನಿರಾಕಾರ ಬ್ರಹ್ಮನಲ್ಲಿ ತನ್ನ ಸ್ಥಿತಿಯು ಭದ್ರವಾದುದೇ ಎಂದು ತಿಳಿದುಕೊಳ್ಳಲು ಅವನು ಬಯಸುತ್ತಾನೆ. ಈ ಐಹಿಕ ಜಗತ್ತಿನಲ್ಲಾಗಲೀ ಪರಮ ಪ್ರಭುವಿನ ಅಲೌಕಿಕ ಜಗತ್ತಿನಲ್ಲಾಗಲೀ ನಿರಾಕಾರ ಅಭಿವ್ಯಕ್ತಿಯು ಚಿಂತನೆಗೆ ಒಂದು ಸಮಸ್ಯೆ.
ವಾಸ್ತವವಾಗಿ ಪರಿಪೂರ್ಣ ಸತ್ಯದ ನಿರಾಕಾರ ರೂಪವನ್ನು ಪರಿಪೂರ್ಣಲವಾಗಿ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಅರ್ಜುನನು, ಹೀಗೆ ಕಾಲವನ್ನು ವ್ಯರ್ಥಮಾಡಿ ಏನು ಪ್ರಯೋಜನ? ಎಂದು ಕೇಳಲು ಬಯಸುತ್ತಾನೆ. ಕೃಷ್ಣನ ಸಾಕಾರ ರೂಪವನ್ನು ಪ್ರೀತಿಸುವುದರಿಂದ ಇತರ ರೂಪಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿತ್ತು ಮತ್ತು ಅವನ ಮನಸ್ಸಿಗೆ ಯಾವ ಬಗೆಯ ಪ್ರಕ್ಷುಬ್ಧತೆಯೂ ಇರುತ್ತಿರಲಿಲ್ಲ. ಆದುದರಿಂದ ಕೃಷ್ಣನ ಸಾಕಾರ ರೂಪವನ್ನು ಪ್ರೀತಿಸುವುದೇ ಅತ್ಯುತ್ತಮ ಎಂದು ಹನ್ನೊಂದನೆಯ ಅಧ್ಯಾಯದಲ್ಲಿ ಆತನು ಅನುಭವಿಸಿ ಕಂಡನು. ಅರ್ಜುನನು ಕೃಷ್ಣನಿಗೆ ಕೇಳುವ ಈ ಮುಖ್ಯವಾದ ಪ್ರಶ್ನೆಯಿಂದ ಪರಿಪೂರ್ಣ ಸತ್ಯದ ನಿರಾಕಾರ ಮತ್ತು ಸಾಕಾರ ಪರಿಕಲ್ಪನೆಗಳ ನಡುವಣ ವ್ಯತ್ಯಾಸವು ಸ್ಪಷ್ಟವಾಗುವುದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)