Bhagavad Gita: ಮನುಷ್ಯರಲ್ಲಿ ತತ್ವಜ್ಞಾನಿ ಎನಿಸಿಕೊಂಡವರೂ ಭಗವಂತನಿಗೆ ಸಮಾನವಾಗಲಾರರು; ಗೀತೆಯ ಅರ್ಥ ತಿಳಿಯಿರಿ
Bhagavad Gita: ಮನುಷ್ಯರಲ್ಲಿ ತತ್ವಜ್ಞಾನಿ ಎನಿಸಿಕೊಂಡವರೂ ಭಗವಂತನಿಗೆ ಸಮಾನವಾಗಲಾರರು ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ಈ ಕೆಳಗಿನಂತೆ ಹೇಳಲಾಗಿದೆ. 6ನೇ ಅಧ್ಯಾಯದಲ್ಲಿರುವ 38, 39ನೇ ಶ್ಲೋಕವನ್ನು ಓದಿ.
ಅಧ್ಯಾಯ-6 ಧ್ಯಾನಯೋಗ: ಶ್ಲೋಕ - 38
ಕಚ್ಚಿನ್ನೋಭಯವಿಭ್ರಷ್ಟಶ್ ಛಿನ್ನಾಭ್ರಮಿವ ನಶ್ಯತಿ |
ಅಪ್ರತಿಷ್ಠೋ ಮಹಾಬಾಹೋ ವಿಮೂಢೋ ಬ್ರಹ್ಮಣಃ ಪಥಿ ||38||
ಅನುವಾದ: ಮಹಾಬಾಹುವಾದ ಕೃಷ್ಣನೇ ಆಧ್ಯಾತ್ಮಿಕ ಪಥದಿಂದ ದಿಗ್ಬ್ರಮೆಗೊಂಡು ದೂರನಾದವನು ಆಧ್ಯಾತ್ಮಿಕ ಯಶಸ್ಸು ಮತ್ತು ಐಹಿಕ ಯಶಸ್ಸು ಎರಡರಿಂದಲೂ ಭ್ರಷ್ಟನಾಗಿ, ಯಾವ ಲೋಕದಲ್ಲಿಯೂ ಸ್ಥಳವಿಲ್ಲದೆ, ತುಂಡಾದ ಮೋಡದಂತೆ ನಾಶವಾಗುವುದಿಲ್ಲವೇ?
ಭಾವಾರ್ಥ: ಪ್ರಗತಿಗೆ ಎರಡು ಮಾರ್ಗಗಳುಂಟು. ಪ್ರಾಪಂಚಿಕವಾದಿಗಳಿಗೆ ಅಧ್ಯಾತ್ಮಿಕದಲ್ಲಿ ಆಸಕ್ತಿಯಿಲ್ಲ. ಆರ್ಥಿಕ ಬೆಳವಣಿಗೆಯ ಮೂಲಕ ಪ್ರಾಪಂಚಿಕ ಪ್ರಗತಿ ಅಥವಾ ಸೂಕ್ತವಾದ ಕೆಲಸದಿಂದ ಉನ್ನತ ಗ್ರಹಗಳಿಗೆ ಏರುವುದು - ಇವುಗಳಲ್ಲಿ ಅವರಿಗೆ ಆಸಕ್ತಿ. ಆದರೆ ಯೋಗಮಾರ್ಗವನ್ನು ಒಪ್ಪಿಕೊಂಡವನು ಎಲ್ಲ ಐಹಿಕ ಚಟುವಟಿಕೆಗಳನ್ನು ನಿಲ್ಲಿಸಬೇಕು ಮತ್ತು ಸುಖ ಎಂದು ಕರೆಯಲ್ಪಡುವ ಸುಖದ ಎಲ್ಲ ರೂಪಗಳನ್ನು ತ್ಯಾಗಮಾಡಬೇಕು.
ಉತ್ಕಾಂಕ್ಷೆಯಿರುವ ಆಧ್ಯಾತ್ಮಿಕವಾದಿಯು ವಿಫಲನಾದರೆ ಎರಡು ರೀತಿಗಳಲ್ಲೂ ಸೋಲುತ್ತಾನೆ ಎನ್ನುವುದು ಸ್ಪಷ್ಟ. ಇದನ್ನೇ ಬೇರೆ ರೀತಿಯಲ್ಲಿ ಹೇಳವುದಾದರೆ ಆತನಿಗೆ ಐಹಿಕ ಸುಖದ ಸವಿಯೂ ಇಲ್ಲ, ಅಧ್ಯಾತ್ಮಿಕ ಯಶಸ್ಸಿನ ಸವಿಯೂ ಇಲ್ಲ. ಆತನಿಗೆ ಒಂದು ಸ್ಥಾನವೇ ಇಲ್ಲ. ಆತನು ತುಂಡಾದ ಮೋಡದಂತೆ. ಒಮ್ಮೊಮ್ಮೆ ಆಕಾಶದಲ್ಲಿ ಒಂದು ಮೋಡವು ಒಂದು ಸಣ್ಣ ಮೋಡವನ್ನು ಬಿಟ್ಟು ದೊಡ್ಡ ಮೋಡವನ್ನು ಸೇರಿಕೊಳ್ಳುತ್ತದೆ. ಆದರೆ ಅದು ದೊಡ್ಡ ಮೋಡವನ್ನು ಸೇರಲಾರದೆ ಹೋದರೆ ಗಾಳಿಯು ಅದನ್ನು ಹೊಡೆದುಕೊಂಡು ಹೋಗುತ್ತದೆ ಮತ್ತು ಅದು ವಿಶಾಲವಾದ ಆಕಾಶದಲ್ಲಿ ಅಸ್ತಿತ್ವವೇ ಇಲ್ಲದಂತೆ ಆಗುತ್ತದೆ. ಬ್ರಹ್ಮಣಃ ಪಥಿ ಎನ್ನುವುದರ ಅರ್ಥ ಇದು. ಭಗವಂತನು ಬ್ರಹ್ಮನಾಗಿ, ಪರಮಾತ್ಮನಾಗಿ ಮತ್ತು ಭಗವಾನ್ ಆಗಿ ಪ್ರಕಟವಾಗುತ್ತಾನೆ.
ಮನುಷ್ಯನು ತನ್ನದು ಆಧ್ಯಾತ್ಮಿಕ ಸತ್ವ, ತಾನು ಭಗವಂತನ ವಿಭಿನ್ನಾಂಶ ಎಂಬ ದಿವ್ಯಜ್ಞಾನವನ್ನು ತಂದುಕೊಳ್ಳಬೇಕು. ಶ್ರೀಕೃಷ್ಣನು ಅತ್ಯುನ್ನತ ಪರಮಸತ್ಯದ ಸಂಪೂರ್ಣ ಅಭಿವ್ಯಕ್ತಿ. ಆದುದರಿಂದ ಪರಮ ಪುರುಷನಿಗೆ ಶರಣಾಗತನಾದವನು ಯಶಸ್ವಿಯಾದ ಯೋಗಿ. ಬ್ರಹ್ಮನ್ ಮತ್ತು ಪರಮಾತ್ಮನ ಸಾಕ್ಷಾತ್ಕಾರದಿಂದ ಬದುಕಿನ ಈ ಗುರಿಯನ್ನು ತಲಪಲು ಅಧಿಕ ಸಂಖ್ಯೆಯ ಜನ್ಮಗಳನ್ನು ಎತ್ತಬೇಕಾಗುತ್ತದೆ. (ಬಹೂನಾಂ ಜನ್ಮನಾಂ ಅಂತೆ). ಆದುದರಿಂದ ಅಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಅತ್ಯುನ್ನತ ಮಾರ್ಗವೆಂದರೆ ನೇರಮಾರ್ಗವಾದ ಭಕ್ತಿಯೋಗ ಅಥವಾ ಕೃಷ್ಣಪ್ರಜ್ಞೆ.
ಅಧ್ಯಾಯ-6 ಧ್ಯಾನಯೋಗ: ಶ್ಲೋಕ - 39
ಏತನ್ಮೇ ಸಂಶಯಂ ಕೃಷ್ಣ ಛೇತ್ತುಮರ್ಹಸ್ಯಶೇಷತಃ |
ತ್ವದನ್ಯಃ ಸಂಶಯಸ್ಯಾಸ್ಯ ಛೇತ್ತಾ ನ ಹ್ಯುಪಪದ್ಯತೇ ||39||
ಅನುವಾದ: ಕೃಷ್ಣನೆ, ಇದು ನನ್ನ ಸಂದೇಹ. ಅದನ್ನು ಸಂಪೂರ್ಣವಾಗಿ ಹೋಗಲಾಡಿಸಬೇಕೆಂದು ನಿನ್ನನ್ನು ಬೇಡುತ್ತೇನೆ. ನಿನ್ನನ್ನು ಬಿಟ್ಟರೆ ಈ ಸಂದೇಹವನ್ನು ಹೋಗಲಾಡಿಸಬಲ್ಲವರು ಯಾರೂ ಇಲ್ಲ.
ಭಾವಾರ್ಥ: ಭೂತ, ವರ್ತಮಾನ ಮತ್ತು ಭವಿಷ್ಯತ್‌ಗಳ ಪರಿಪೂರ್ಣ ಜ್ಞಾನವಿರುವವನು ಕೃಷ್ಣ. ಭಗವದ್ಗೀತೆಯ ಪ್ರಾರಂಭದಲ್ಲಿ ಭಗವಂತನು ಒಂದು ಮಾತನ್ನು ಹೇಳಿದ. ಎಲ್ಲ ಜೀವಿಗಳೂ ಪ್ರತ್ಯೇಕ ಪ್ರತ್ಯೇಕವಾಗಿ ಹಿಂದೆ ಇದ್ದರು, ಈಗ ಇದ್ದಾರೆ ಮತ್ತು ಐಹಿಕ ಸಿಕ್ಕಿನಿಂದ ಬಿಡುಗಡೆಯಾದ ಮೇಲೂ ಭವಿಷ್ಯದಲ್ಲಿಯೂ ಅವರಿಗೆ ಪ್ರತ್ಯೇಕ ವ್ಯಕ್ತಿತ್ವವಿರುತ್ತದೆ. ಪ್ರತ್ಯೇಕ ಜೀವಿಯ ಭವಿಷ್ಯದ ಪ್ರಶ್ನೆಗೆ ಕೃಷ್ಣನು ಆಗಲೇ ಸ್ಪಷ್ಟವಾದ ಉತ್ತರ ಕೊಟ್ಟಿದ್ದಾನೆ. ಈಗ ಅರ್ಜುನನು ವಿಫಲವಾದ ಯೋಗಿಯ ಭವಿಷ್ಯವನ್ನು ತಿಳಿಯಲು ಬಯಸುತ್ತಾನೆ.
ಯಾರೂ ಕೃಷ್ಣನಿಗೆ ಸಮಾನರಲ್ಲ ಮತ್ತು ಅವನನ್ನು ಮೀರಿದವರಲ್ಲ. ಐಹಿಕ ಪ್ರಕೃತಿಗೆ ಸಂಪೂರ್ಣವಾಗಿ ವಿಧೇಯರಾಗಿರುವ ಮಹಾಋಷಿಗಳು ಮತ್ತು ತತ್ವಜ್ಞಾನಿಗಳು ಎನ್ನಿಸಿಕೊಂಡವರು ಕೃಷ್ಣನಿಗೆ ಸಮಾನವಾಗಲಾರರು. ಕೃಷ್ಣನಿಗೆ ಭೂತ, ವರ್ತಮಾನ ಮತ್ತು ಭವಿಷ್ಯತ್ತುಗಳು ಪರಿಪೂರ್ಣವಾಗಿ ತಿಳಿದಿವೆ. ಆದರೆ ಅವನನ್ನು ಯಾರೂ ತಿಳಿಯಲಾರರು. ಆದುದರಿಂದ ಎಲ್ಲ ಸಂದೇಹಗಳಿಗೆ ಕೃಷ್ಣನ ತೀರ್ಮಾನವೇ ಕಟ್ಟಕಡೆಯ ಮತ್ತು ಸಂಪೂರ್ಣವಾದ ಉತ್ತರ. ಕೃಷ್ಣ ಮತ್ತು ಕೃಷ್ಣಪ್ರಜ್ಞೆಯ ಭಕ್ತರು ಮಾತ್ರ ಯಾವುದು ಏನು ಎಂದು ತಿಳಿಯಬಲ್ಲರು.