Bhagavad Gita: ಶ್ರೀಕೃಷ್ಣನನ್ನು ಯೋಗಮಾಯೆಯ ಶಕ್ತಿಯು ಆವರಿಸಿರುತ್ತೆ; ಗೀತೆಯ ಅರ್ಥ ತಿಳಿಯಿರಿ
Bhagavad Gita Updesh: ಶ್ರೀಕೃಷ್ಣನನ್ನು ಯೋಗಮಾಯೆಯ ಶಕ್ತಿಯು ಆವರಿಸಿರುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 52ನೇ ಶ್ಲೋಕದ ಮುಂದವರಿದ ಭಾಗ ಹಾಗೂ 53ನೇ ಶ್ಲೋಕದಲ್ಲಿ ಓದಿ.

ಭಗವದ್ಗೀತೆಯ 11ನೇ ಅಧ್ಯಾಯದ 52ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ಜ್ಞಾನವನ್ನು ಅರಸುವವರು ಸಹ ಕೃಷ್ಣನ ವಿಷಯದಲ್ಲಿ ಊಹಾತ್ಮಕ ಚಿಂತನೆ ಮಾಡುತ್ತಾರೆ ಮತ್ತು ಆತನು ಪರಮನ ವಿಶ್ವರೂಪದಷ್ಟು ಮುಖ್ಯನಲ್ಲ ಎಂದು ಭಾವಿಸುತ್ತಾರೆ. ಹೀಗೆ ಕೆಲವರು ಕೃಷ್ಣನು ಅರ್ಜುನನಿಗೆ ತೋರಿಸಿದ ವಿಶ್ವರೂಪವು ಅವನ ವೈಯಕ್ತಿಕ ರೂಪಕ್ಕಿಂತ ಮುಖ್ಯ ಎಂದು ಯೋಚಿಸುತ್ತಾರೆ. ಅವರ ಅಭಿಪ್ರಾಯದಲ್ಲಿ ಪರಮನ ವೈಯಕ್ತಿಕ ರೂಪವು ಕಾಲ್ಪನಿಕವಾದದ್ದು. ಕಟ್ಟಕಡೆಯದಾಗಿ ಹೇಳವುದಾದರೆ ಪರಿಪೂರ್ಣ ಸತ್ಯವು ವ್ಯಕ್ತಿಯಲ್ಲ ಎಂದು ಅವರು ನಂಬುತ್ತಾರೆ. ಆದರೆ ಭಗವದ್ಗೀತೆಯ ನಾಲ್ಕನೆಯ ಅಧ್ಯಾಯದಲ್ಲಿ ಅಧ್ಯಾತ್ಮಿಕ ಪ್ರಕ್ರಿಯೆಯನ್ನು ವರ್ಣಿಸಿದೆ (Bhagavad Gita Updesh in Kannada).
ಅಚಾರ್ಯರಿಂದ ಕೃಷ್ಣನ ವಿಷಯ ಕೇಳುವುದೇ ಈ ಪ್ರಕ್ರಿಯೆ. ಅದು ವಾಸ್ತವಿಕ ವೈದಿಕ ಪ್ರಕ್ರಿಯೆ. ವಾಸ್ತವಿಕವಾಗಿ ವೈದಿಕ ಪರಂಪರೆಯಲ್ಲಿರುವವರು ಅಧಿಕಾರಯುತನಾಗಿ ಹೇಳಬಲ್ಲವರಿಂದ ಕೃಷ್ಣನ ವಿಷಯ ಕೇಳುತ್ತಾರೆ. ಅವನ ವಿಷಯವನ್ನು ಮತ್ತೆ ಮತ್ತೆ ಕೇಳುವುದರಿಂದ ಕೃಷ್ಣನು ಪ್ರಿಯನಾಗುತ್ತಾನೆ. ನಾವು ಅನೇಕ ಬಾರಿ ಚರ್ಚಿಸಿರುವಂತೆ ಕೃಷ್ಣನನ್ನು ಅವನ ಯೋಗಮಾಯೆಯ ಶಕ್ತಿಯು ಆವರಿಸಿರುತ್ತದೆ. ಆತನು ಯಾರು ಯಾರಿಗೋ ಕಾಣಿಸುವವನು ಅಥವಾ ಪ್ರಕರಣವಾಗುವವನು ಅಲ್ಲ. ಆತನು ಯಾರಿಗೆ ತನ್ನ ದರ್ಶನವನ್ನು ಕೊಡುತ್ತಾನೋ ಅವರು ಮಾತ್ರ ಅವನನ್ನು ಕಾಣಲು ಸಾಧ್ಯ. ಇದನ್ನು ವೈದಿಕ ಸಾಹಿತ್ಯವು ದೃಢಪಡಿಸುತ್ತದೆ.
ಶರಣಾಗತವಾದ ಆತ್ಮವು ವಾಸ್ತವವಾಗಿ ಕೃಷ್ಣನನ್ನು ಅರ್ಥಮಾಡಿಕೊಳ್ಳಬಲ್ಲದು. ನಿರಂತರವಾದ ಕೃಷ್ಣಪ್ರಜ್ಞೆಯಿಂದ ಮತ್ತು ಕೃಷ್ಣನಿಗೆ ಭಕ್ತಿಸೇವೆಯನ್ನು ಸಲ್ಲಿಸುವುದರಿಂದ ಅಧ್ಯಾತ್ಮಯವಾದಿಯು ತನ್ನ ದಿವ್ಯ ಕಣ್ಣುಗಳನ್ನು ತೆರೆಯುವಂತೆ ಮಾಡಬಲ್ಲ ಮತ್ತು ಆ ದೃಷ್ಟಿಯಿಂದ ಕೃಷ್ಣನನ್ನು ಕಾಣಬಹುದು. ದೇವತೆಗಳಿಗೂ ಇಂತಹ ದರ್ಶನವು ಸಾಧ್ಯವಾಗುವುದಿಲ್ಲ. ಆದುದರಿಂದ ದೇವತೆಗಳಿಗೂ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಮತ್ತು ಮೇಲ್ಮಟ್ಟದ ದೇವತೆಗಳು ಯಾವಾಗಲೂ ಕೃಷ್ಣನ ಎರಡೂ ಕೈಗಳ ರೂಪವನ್ನು ಕಾಣುವ ಭರವಸೆಯಲ್ಲಿರುತ್ತಾರೆ. ಇದರ ನಿರ್ಣಯವೆಂದರೆ ಕೃಷ್ಣನ ವಿಶ್ವರೂಪ ದರ್ಶನವನ್ನು ಪಡೆಯುವುದು ಬಹಳ ಕಷ್ಟ ಮತ್ತು ಅದು ಎಲ್ಲರಿಗೂ ಅಸಾಧ್ಯ. ಆದರೆ ಶ್ಯಾಮಸುಂದರನಾಗಿ ಅವನ ವೈಯಕ್ತಿಕ ರೂಪವನ್ನು ಅರ್ಥಮಾಡಿಕೊಳ್ಳುವುದು ಇನ್ನೂ ಕಷ್ಟ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 53
ನಾಹಂ ವೇದೈರ್ನ ತಪಸಾ ನ ದಾನೇನ ನ ಚೇಜ್ಯಯಾ |
ಶಕ್ಯ ಏವಂವಿಧೋ ದ್ರಷ್ಟುಂ ದೃಷ್ಟವಾನಸಿ ಮಾಂ ಯಥಾ ||53||
ಅನುವಾದ: ವೇದಾಧ್ಯಯನ ಮಾತ್ರದಿಂದ ಅಥವಾ ಕಠಿಣ ತಪಸ್ಸಿನಿಂದ ಅಥವಾ ದಾನದಿಂದ ಅಥವಾ ಪೂಜೆಯಿಂದ ನೀನು ನಿನ್ನ ದಿವ್ಯನೇತ್ರಗಳಿಂದ ಕಾಣುತ್ತಿರುವ ನನ್ನ ರೂಪವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇವುಗಳಿಂದ ನಾನಿರುವಂತೆ ನನ್ನನ್ನು ಕಾಣಲು ಸಾಧ್ಯವಿಲ್ಲ.
ಭಾವಾರ್ಥ: ಕೃಷ್ಣನು ತನ್ನ ತಾಯಿತಂದೆಯರಾದ ದೇವಕಿ ಮತ್ತು ವಸುದೇವರಿಗೆ ಮೊದಲ ಬಾರಿ ಚತುರ್ಭುಜ ರೂಪದಲ್ಲಿ ಕಾಣಿಸಿಕೊಂಡ. ಅನಂತರ ಎರಡು ಕೈಗಳ ರೂಪವನ್ನು ಧರಿಸಿದ. ನಾಸ್ಕಿಕರಾದವರಿಗೆ ಅಥವಾ ಭಕ್ತಿಸೇವೆ ಮಾಡದವರಿಗೆ ಈ ರಹಸ್ಯ ರೂಪವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ. ವ್ಯಾಕರಣ ಜ್ಞಾನದಿಂದಷ್ಟೇ ವೈದಿಕ ಸಾಹಿತ್ಯವನ್ನು ಅಭ್ಯಾಸಮಾಡಿದ ಅಥವಾ ವಿದ್ವತ್ತಿನ ಅರ್ಹತೆಗಳನ್ನು ಮಾತ್ರ ಪಡೆದ ವಿದ್ವಾಂಸರು ಕೃಷ್ಣನನ್ನು ಅರ್ಥಮಾಡಿಕೊಳ್ಳಲಾರರು.
ಪೂಜೆ ಸಲ್ಲಿಸುವುದಕ್ಕಾಗಿ ಅಧಿಕೃತ ರೀತಿಯಲ್ಲಿ ದೇವಸ್ಥಾನಗಳಿಗೆ ಹೋಗುವವರು ಅವನನ್ನು ಅರ್ಥಮಾಡಿಕೊಳ್ಳಲಾರರು. ಅವರು ದೇವಸ್ಥಾನಕ್ಕೆ ಭೇಟಿಕೊಡಬಹುದೇ ಹೊರತು ಕೃಷ್ಣನನ್ನು ಅವನು ಇರುವಂತೆ ಅರ್ಥಮಾಡಿಕೊಳ್ಳಲಾರರು. ಸ್ವತಃ ಕೃಷ್ಣನೇ ಮುಂದಿನ ಶ್ಲೋಕದಲ್ಲಿ ವಿವರಿಸುವಂತೆ ಭಕ್ತಿಸೇವೆಯಿಂದ ಮಾತ್ರ ಅವನನ್ನು ಅರ್ಥಮಾಡಿಕೂಳ್ಳಲು ಸಾಧ್ಯ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
