ಕನ್ನಡ ಸುದ್ದಿ  /  Astrology  /  Spiritual News Bhagavad Gita Updesh Lord Krishna Purity Of Human Bhagavad Gita Quotes In Kannada Rmy

Bhagavad Gita: ಭಗವಂತನಲ್ಲಿ ಜೀವಿಸುವ ವ್ಯಕ್ತಿ ಕಲ್ಮಷಗಳನ್ನು ತೊಡೆದುಹಾಕಿ ಪರಿಶುದ್ಧನಾಗುತ್ತಾನೆ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಭಗವಂತನಲ್ಲಿ ಜೀವಿಸುವ ವ್ಯಕ್ತಿ ಕಲ್ಮಷಗಳನ್ನು ತೊಡೆದುಹಾಕಿ ಪರಿಶುದ್ಧನಾಗುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 6ನೇ ಅಧ್ಯಾಯದ 45 ಮತ್ತು 46ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ-6: ಧ್ಯಾನ ಯೋಗ: ಶ್ಲೋಕ - 45

ಪ್ರಯತ್ನಾದ್ ಯತಮಾನಸ್ತು ಯೋಗೀ ಸಂಶುದ್ಧ ಕಿಲ್ಭಿಷಃ |

ಅನೇಕಜನ್ಮಸಂಸಿದ್ಧಸ್ತತೋ ಯಾತಿ ಪರಾಂ ಗತಿಮ್ ||45||

ಅನುವಾದ: ಯೋಗಿಯು ಎಲ್ಲ ಕಲ್ಮಷಗಳನ್ನು ತೊಳೆದುಕೊಂಡು ಶುದ್ಧನಾಗಿ ಇನ್ನಷ್ಟು ಪ್ರಗತಿಯನ್ನು ಸಾಧಿಸಲು ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡುತ್ತಾನೆ. ಹೀಗೆ ಅನೇಕಾನೇಕ ಜನ್ಮಗಳಲ್ಲಿ ಅಭ್ಯಾಸಮಾಡಿದನಂತರ ಪರಿಪೂರ್ಣತೆಯನ್ನು ಪಡೆದು ಪರಮಗುರಿಯನ್ನು ಸಾಧಿಸುತ್ತಾನೆ.

ಭಾವಾರ್ಥ: ವಿಶೇಷವಾಗಿ ಧಾರ್ಮಿಕವಾದ ಅಥವಾ ಶ್ರೀಮಂತವಾದ ಅಥವಾ ಪವಿತ್ರವಾದ ಸಂಸಾರದಲ್ಲಿ ಹುಟ್ಟಿದವನಿಗೆ ಯೋಗಾಭ್ಯಾಸಕ್ಕೆ ಅನುಕೂಲವಾದ ವಾತಾವರಣವಿದೆ ಎಂಬುದರ ಅರಿವಾಗುತ್ತದೆ. ಆದುದರಿಂದ ಆತನು ಅಪೂರ್ಣವಾದ ತನ್ನ ಕಾರ್ಯವನ್ನು ದೃಢಸಂಕಲ್ಪದಿಂದ ಮುಂದುವರಿಸುತ್ತಾನೆ. ಹೀಗೆ ಆತನು ಐಹಿಕ ಕಲ್ಮಷಗಳನ್ನು ತೊಡೆದುಹಾಕಿ ಪರಿಶುದ್ಧನಾಗುತ್ತಾನೆ. ಅವನು ಕಡೆಗೆ ಎಲ್ಲ ಕಲ್ಮಷಗಳಿಂದ ಬಿಡುಗಡೆಯಾಗಿ ಅತ್ಯುನ್ನತ ಪರಿಪೂರ್ಣತೆಯಾದ ಕೃಷ್ಣಪ್ರಜ್ಞೆಯನ್ನು ಸಾಧಿಸುತ್ತಾನೆ. ಎಲ್ಲ ಕಲ್ಮಷಗಳಿಂದ ಮುಕ್ತನಾದ ಪರಿಪೂರ್ಣ ಹಂತ ಕೃಷ್ಣಪ್ರಜ್ಞೆ. ಇದನ್ನು ಭಗವದ್ಗೀತೆಯು (7.28) ದೃಢಪಡಿಸುತ್ತದೆ-

ಯೇಷಾಂ ತ್ವನ್ತಗತಂ ಪಾಪಂ ಜನಾನಾಂ ಪುಣ್ಯಕರ್ಮಣಾಮ್ |

ತೇ ದ್ವನ್ದ್ವಮೋಹನಿರ್ಮುಕ್ತಾ ಭಜನ್ತೇ ಮಾಂ ದೃಢವ್ರತಾಃ ||

ಹಲವಾರರು ಜನ್ಮಗಳಲ್ಲಿ ಪುಣ್ಯಕಾರ್ಯಗಳನ್ನು ಮಾಡಿ ಎಲ್ಲ ಕಲ್ಮಷಗಳಿಂದ ಮತ್ತು ಎಲ್ಲ ಮಾಯಾ ದ್ವಂದ್ವಗಳಿಂದ ಸಂಪೂರ್ಣವಾಗಿ ಬಿಡುಗಡೆಯನ್ನು ಪಡೆದ ನಂತರ ಮನುಷ್ಯನು ಭಗವಂತನ ದಿವ್ಯ ಪ್ರೇಮ ಪೂರ್ವಕ ಸೇವೆಯಲ್ಲಿ ತೊಡಗುತ್ತಾನೆ.

ಅಧ್ಯಾಯ-6: ಧ್ಯಾನ ಯೋಗ: ಶ್ಲೋಕ- 46

ತಪಸ್ವಿಭ್ಯೋಧಿಕೋ ಯೋಗೀ ಜ್ಞಾನಿಭ್ಯೋಪಿ ಮತೋಧಿಕಃ |

ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ ||46||

ಅನುವಾದ: ಯೋಗಿಯು ತಪಸ್ವಿಗಳಿಗಿಂತಲೂ, ಜ್ಞಾನಿಗಳಿಗಿಂತಲೂ ಮತ್ತು ಫಲಾಪೇಕ್ಷಿತ ಕರ್ಮದಲ್ಲಿ ತೊಡಗುವವರಿಗಿಂತಲೂ ಶ್ರೇಷ್ಠನಾದವನು. ಆದುದರಿಂದ ಅರ್ಜುನ, ಎಲ್ಲ ಸನ್ನಿವೇಶಗಳಲ್ಲಿಯೂ ಯೋಗಿಯಾಗು.

ಭಾವಾರ್ಥ: ಯೋಗದ ವಿಷಯ ಮಾತನಾಡುವಾಗ ನಮ್ಮ ಪ್ರಜ್ಞೆಗೆ ಪರಮ ಪರಿಪೂರ್ಣ ಸತ್ಯದೊಂದಿಗೆ ಸಂಪರ್ಕವನ್ನು ಕಲ್ಪಿಸುವ ವಿಷಯವನ್ನು ಕುರಿತು ಮಾತನಾಡುತ್ತೇವೆ. ಅನುಸರಿಸುವ ವಿಶಿಷ್ಟ ವಿಧಾನಕ್ಕೆ ಅನುಗುಣವಾಗಿ ಈ ಪ್ರಕ್ರಿಯೆಗೆ ಬೇರೆ ಬೇರೆ ಸಾಧಕರು ಬೇರೆಬೇರೆ ಹೆಸರುಗಳನ್ನು ಕೊಡುತ್ತಾರೆ. ಸಂಪರ್ಕ ಸಾಧಿಸುವ ಪ್ರಕ್ರಿಯೆಯು ಪ್ರಧಾನವಾಗಿ ಕಾಮ್ಯಕರ್ಮಾಚರಣೆಯಾಗಿದ್ದರೆ ಅದನ್ನು ಕರ್ಮಯೋವೆಂದೂ, ಅದು ಪ್ರಧಾನವಾಗಿ ಅನುಭವಗಮ್ಯವಾಗಿದ್ದರೆ ಜ್ಞಾನಯೋಗವೆಂದೂ, ಪ್ರಧಾನವಾಗಿ ಭಗವಂತನೊಡನೆ ಭಕ್ತಿಯ ಬಾಂಧವ್ಯವನ್ನು ಸಾಧಿಸುವುದಾದರೆ ಭಕ್ತಿಯೋಗವೆಂದೂ ಅದಕ್ಕೆ ಹೆಸರು.

ಮುಂದಿನ ಶ್ಲೋಕದಲ್ಲಿ ವಿವರಿಸುವಂತೆ ಭಕ್ತಿಯೋಗ ಅಥವಾ ಕೃಷ್ಣಪ್ರಜ್ಞೆಯು ಎಲ್ಲ ಯೋಗಗಳ ಅಂತಿಮ ಪರಿಪೂರ್ಣ ಸ್ವರೂಪ. ಭಗವಂತನು ಇಲ್ಲಿ ಯೋಗದ ಉತ್ಕೃಷ್ಟತೆಯನ್ನು ದೃಢಪಡಿಸಿದ್ದಾನೆ. ಆದರೆ ಅದು ಭಕ್ತಿಯೋಗಕ್ಕಿಂತ ಉತ್ತಮ ಎಂದು ಹೇಳಿಲ್ಲ. ಭಕ್ತಿಯೋಗವು ಪೂರ್ಣ ಅಧ್ಯಾತ್ಮಿಕಜ್ಞಾನ. ಆದುದರಿಂದ ಯಾವುದೂ ಅದನ್ನು ಮೀರಿಸಲಾರದು. ಆತ್ಮಜ್ಞಾನವಿಲ್ಲದ ತಪ್ಪಸ್ಸು ಅಪರಿಪೂರ್ಣ. ಪರಮ ಪ್ರಭುವಿಗೆ ಶರಣಾಗತವಾಗದ ಅನುಭವಗಮ್ಯ ಜ್ಞಾನವು ಅಪರಿಪೂರ್ಣ. ಕೃಷ್ಣಪ್ರಜ್ಞೆಯಿಲ್ಲದ ಕಾಮ್ಯಕರ್ಮದಿಂದಲೂ ಕಾಲಹರಣವಾಗುತ್ತದೆ. ಆದುದರಿಂದ ಇಲ್ಲಿ ಹೇಳಿರುವಂತೆ ಯೋಗಾಭ್ಯಾಸದ ಅತ್ಯಂತ ಪ್ರಶಂಸನೀಯ ರೂಪವು ಭಕ್ತಿಯೋಗವೇ. ಇದನ್ನು ಮುಂದಿನ ಶ್ಲೋಕದಲ್ಲಿ ಇನ್ನೂ ಸ್ಪಷ್ಟವಾಗಿ ವಿವರಿಸಿದೆ.

ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ. ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.

(This copy first appeared in Hindustan Times Kannada website. To read more like this please logon to kannada.hindustantimes.com )