Bhagavad Gita: ಭಗವಂತನ ಸರಿಗಳ ವಿಸ್ತಾರವು ಜೀವಿಗಳಿಗೆ ಅರ್ಥವಾಗುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ
Bhagavad Gita Updesh: ಭಗವಂತನ ಸರಿಗಳ ವಿಸ್ತಾರವು ಜೀವಿಗಳಿಗೆ ಅರ್ಥವಾಗುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 19ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 19
ಹನ್ತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ |
ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯನ್ತೋ ವಿಸ್ತರಸ್ಯ ಮೇ ||19||
ಅನುವಾದ: ದೇವೋತ್ತಮ ಪರಮ ಪುರುಷನು ಹೀಗೆಂದನು - ಆಗಲಿ, ಅರ್ಜುನ, ನನ್ನ ದಿವ್ಯ ವಿಭೂತಿಗಳನ್ನು ಕುರಿತು ಹೇಳುತ್ತೇನೆ. ನನ್ನ ವಿಭೂತಿಗಳಿಗೆ ಮಿತಿ ಇಲ್ಲ. ಆದುದರಿಂದ ಪ್ರಧಾನವಾದುವನ್ನು ಮಾತ್ರ ಹೇಳುತ್ತೇನೆ.
ಭಾವಾರ್ಥ: ಕೃಷ್ಣನ ಮತ್ತು ಅವನ ಸಿರಿಗಳ ಹಿರಿಮೆಯನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ. ವ್ಯಕ್ತಿಗತ ಆತ್ಮದ ಇಂದ್ರಿಯಗಳು ಮಿತಿಗೊಳಗಾದಂತಹವು. ಕೃಷ್ಣನ ವ್ಯಾಪಾರವನ್ನು ಸಮಗ್ರವಾಗಿ ಗ್ರಹಿಸಲು ಅವು ಅವಕಾಶವನ್ನು ಕೊಡುವುದಿಲ್ಲ. ಆದರೂ ಭಕ್ತರು ಕೃಷ್ಣನನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಯಾವುದೇ ನಿರ್ದಿಷ್ಟ ಸಮಯದಲ್ಲಿ ಅಥವಾ ಬದುಕಿನ ಯಾವುದೇ ಸ್ಥಿತಿಯಲ್ಲಿ ಕೃಷ್ಣನನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನುವ ತತ್ವದ ಮೇಲಲ್ಲ.
ಕೃಷ್ಣನಿಗೆ ಸಂಬಂಧಿಸಿದ ವಿಷಯಗಳೇ ಎಷ್ಟು ಸವಿ ಎಂದರೆ ಭಕ್ತರಿಗೆ ಅವು ಅಮೃತವೆಂದು ಕಾಣುತ್ತವೆ. ಭಕ್ತರು ಅವನ್ನು ಸವಿಯುತ್ತಾರೆ. ಕೃಷ್ಣನ ಸಿರಿಗಳನ್ನೂ ಅವನ ವಿವಿಧ ಶಕ್ತಿಗಳನ್ನೂ ಚರ್ಚಿಸುವುದರಲ್ಲಿ ಪರಿಶುದ್ಧ ಭಕ್ತರು ದಿವ್ಯಾನಂದವನ್ನು ಪಡೆಯುತ್ತಾರೆ (Bhagavad Gita Updesh in Kannada).
ಆದುದರಿಂದ ಅವರು ಅವುಗಳನ್ನು ಕೇಳಬೇಕು ಮತ್ತು ಚರ್ಚಿಸಬೇಕು ಎಂದು ಬಯಸುತ್ತಾರೆ. ತನ್ನ ಸರಿಗಳ ವಿಸ್ತಾರವು ಜೀವಿಗಳಿಗೆ ಅರ್ಥವಾಗುವುದಿಲ್ಲ ಎಂದು ಕೃಷ್ಣನಿಗೆ ತಿಳಿದಿದೆ. ಆದುದರಿಂದ ಅವನು ತನ್ನ ವಿವಿಧ ಶಕ್ತಿಗಳ ಮುಖ್ಯ ಅಭಿವ್ಯಕ್ತಿಗಳನ್ನು ಮಾತ್ರ ಹೇಳಲು ಒಪ್ಪುತ್ತಾನೆ. ಪ್ರಾಧಾನ್ಯತಃ ಎನ್ನುವ ಶಬ್ದವನ್ನು ಅಸಾಧಾರಣ ಸಿರಿ ಎಂದು ವಿವರಿಸಿದೆ.
ನಿರಾಕಾರವಾದಿಯಾಗಲಿ ಬಹು ದೇವತಾವಾದಿಯಾಗಲಿ ಪರಮ ಪ್ರಭುವಿನ ಅಸಾಧಾರಣ ಶಕ್ತಿಗಳನ್ನೂ ಅವರ ಹಲವು ಶಕ್ತಿಗಳ ಅಭಿವ್ಯಕ್ತಿಯನ್ನೂ ಅರ್ಥಮಾಡಿಕೊಳ್ಳಲಾರ. ಐಹಿಕ ಜಗತ್ತಿನಲ್ಲೂ ಅಧ್ಯಾತ್ಮಿಕ ಜಗತ್ತಿನಲ್ಲೂ ಅವನ ಶಕ್ತಿಗಳು ಅಭಿವ್ಯಕ್ತಿಯ ಪ್ರತಿಯೊಂದು ಪ್ರಭೇದದಲ್ಲಿಯೂ ಹಂಚಿಹೋಗಿವೆ. ಸಾಮಾನ್ಯ ಮನುಷ್ಯನು ನೇರವಾಗಿ ಏನನ್ನು ಕಾಣಬಹುದೋ ಅದನ್ನು ಕೃಷ್ಣನು ಈಗ ವರ್ಣಿಸುತ್ತಿದ್ದಾನೆ. ಅವನ ವೈವಿಧ್ಯಮಯ ಶಕ್ತಿಯ ಭಾಗವನ್ನು ಈ ರೀತಿಯಲ್ಲಿ ವರ್ಣಿಸಿದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)