Bhagavad Gita: ಮನುಷ್ಯನ ಪ್ರತಿಯೊಂದು ಕಾರ್ಯವನ್ನ ಭಗವಂತ ನೋಡುತ್ತಿರುತ್ತಾನೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಮನುಷ್ಯನ ಪ್ರತಿಯೊಂದು ಕಾರ್ಯವನ್ನ ಭಗವಂತ ನೋಡುತ್ತಿರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ ಶ್ಲೋಕ 4 ಮತ್ತು 5 ರಲ್ಲಿ ಓದಿ.
ಭಗವದ್ಗೀತೆಯ 8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 4
ಅಧಿಭೂತಂ ಕ್ಷರೋ ಭಾವಃ ಪುರುಷಶ್ಚಾಧಿದೈವತಮ್ |
ಅಧಿಯಜ್ಞೋಹಮೇವಾತ್ರ ದೇಹೇ ದೇಹಭೃತಾಂ ವರ ||4||
ಅನುವಾದ: ಶರೀರಧಾರಿಗಳಲ್ಲಿ ಅತ್ಯಂತ ಶ್ರೇಷ್ಠನಾದ ಅರ್ಜನನೆ, ಸದಾ ಬದಲಾಗುತ್ತಿರುವ ಭೌತಿಕ ಪ್ರಕೃತಿಗೆ ಅಧಿಭೂತ ಎಂದು ಹೆಸರು. ಸೂರ್ಯ ಚಂದ್ರರಂತಹ ದೇವತೆಗಳನ್ನು ಒಳಗೊಳ್ಳುವ ಭಗವಂತನ ವಿರಾಟ್‌ರೂಪಕ್ಕೆ ಅಧಿವೈವ ಎಂದ ಹೆಸರು. ಎಲ್ಲ ಶರೀರಧಾರಿಗಳ ಹೃದಯಗಳಲ್ಲಿ ಪರಮಾತ್ಮನಿಂದ ಪ್ರತಿನಿಧಿತನಾದ ನನಗೆ, ಪರಮ ಪ್ರಭುವಿಗೆ, ಅಧಿಯಜ್ಞ [ಯಜ್ಞದ ಪ್ರಭು] ಎಂದು ಹೆಸರು.
ಭಾವಾರ್ಥ: ಭೌತಿಕ ಪ್ರಕೃತಿಯ ಸದಾ ಬದಲಾಗುತ್ತಿರುತ್ತದೆ. ಭೌತಿಕ ಶರೀರಗಳು ಸಾಮಾನ್ಯವಾಗಿ ಆರು ಹಂತಗಳನ್ನು ದಾಟುತ್ತವೆ-ಅವು ಹುಟ್ಟುತ್ತವೆ, ಬೆಳೆಯುತ್ತವೆ, ಒಂದಿಷ್ಟು ಕಾಲ ಉಳಿಯುತ್ತವೆ. ಕೆಲವು ಉಪ ಉತ್ಪನ್ನಗಳನ್ನು ಸೃಷ್ಟಿಸುತ್ತವೆ. ಕ್ಷಯಿಸುತ್ತವೆ. ಅನಂತರ ಮಾಯವಾಗುತ್ತವೆ. ಈ ಭೌತಿಕ ಪ್ರಕೃತಿಗೆ ಅಧಿಭೂತ ಎಂದು ಹೆಸರು. ಅದು ಒಂದು ನಿರ್ದಿಷ್ಟ ಸಮಯದಲ್ಲಿ ಸೃಷ್ಟಿಯಾಗಿದೆ. ಒಂದು ನಿರ್ದಿಷ್ಟ ಸಮಯದಲ್ಲಿ ನಾಶವಾಗುತ್ತದೆ. ಎಲ್ಲ ದೇವತೆಗಳನ್ನೂ ಅವರ ವಿಭಿನ್ನ ಲೋಕಗಳನ್ನೂ ಒಳಗೊಳ್ಳುವ ಪರಮ ಪ್ರಭುವಿನ ಈ ವಿರಾಟ್‌ರೂಪಕ್ಕೆ ಅಧಿದೈವತ ಎಂದು ಹೆಸರು. ವ್ಯಕ್ತಿಗತ ಆತ್ಮನ ಜೊತೆಗೆ ದೇಹದಲ್ಲಿ ಪರಮಾತ್ಮನಿದ್ದಾನೆ. ಪರಮಾತ್ಮನು ಶ್ರೀಕೃಷ್ಣನ ಪರಿಪೂರ್ಣ ಆಕೃತಿ.
ಪರಮಾತ್ಮನು (Bhagavad Gita Updesh in Kannada) ಅಥವಾ ಅಧಿಯಜ್ಞನು ಹೃದಯದಲ್ಲಿ ನೆಲೆಸಿರುತ್ತಾನೆ. ಈ ಶ್ಲೋಕದ ಸಂದರ್ಭದಲ್ಲಿ ಏವ ಶಬ್ದವು ತುಂಬ ಮುಖ್ಯವಾದದ್ದು. ಏಕೆಂದರೆ ಈ ಪದವನ್ನು ಬಳಸಿ ಭಗವಂತನು ಪರಮಾತ್ಮನು ತನ್ನಿಂದ ಬೇರೆಯಲ್ಲ ಎಂದು ಒತ್ತಿಹೇಳುತ್ತಾನೆ. ವ್ಯಕ್ತಿಗತ ಆತ್ಮದ ಪಕ್ಕದಲ್ಲಿ ಕುಳಿತ ಪರಮಾತ್ಮನು, ದೇವೋತ್ತಮ ಪರಮ ಪುರುಷನು, ವ್ಯಕ್ತಿಗತ ಆತ್ಮಗಳ ಕರ್ಮದ ಸಾಕ್ಷಿ ಮತ್ತು ಆತ್ಮದ ಪ್ರಜ್ಞೆಯ ವಿವಿಧ ಬಗೆಗಳಿಗೆ ಅವನೇ ಮೂಲ. ಪರಮಾತ್ಮನು ವ್ಯಕ್ತಿಗತ ಆತ್ಮಕ್ಕೆ ಸ್ವತಂತ್ರವಾಗಿ ಕಾರ್ಯಮಾಡಲು ಅವಕಾಶ ನೀಡಿ ವ್ಯಕ್ತಿಗತ ಆತ್ಮನು ಕರ್ಮಗಳನ್ನು ನೋಡುತ್ತಿರುತ್ತಾನೆ. ಭಗವಂತನ ದಿವ್ಯಸೇವೆಯಲ್ಲಿ ನಿರತನಾದ ಕೃಷ್ಣಪ್ರಜ್ಞೆಯ ಪರಿಶುದ್ಧ ಭಕ್ತನಿಗೆ ಪರಮ ಪ್ರಭುವಿನ ಈ ವಿವಿಧ ಅಭಿವ್ಯಕ್ತಿಗಳು ತಂತಾನೇ ಸ್ಪಷ್ಟವಾಗುತ್ತವೆ. ಹೊಸದಾಗಿ ದೀಕ್ಷೆ ಸ್ವೀಕರಿಸಿದವನಿಗೆ ಪರಮ ಪ್ರಭುವಿನ ಪರಮಾತ್ಮ ಸ್ವರೂಪದ ಬಳಿ ಸಾರಲು ಸಾಧ್ಯವಿಲ್ಲ. ಆತನು ಪ್ರಭುವಿನ ಬೃಹತ್ ವಿರಾಟ್‌ಸ್ವರೂಪವನ್ನು ಧ್ಯಾನಿಸುತ್ತಾನೆ. ವಿರಾಟ್‌ಪುರುಷನ ಕಾಲುಗಳು ಅಧೋಲೋಕಗಳು. ಸೂರ್ಯಚಂದ್ರರು ಅವನ ಕಣ್ಣುಗಳು, ಊರ್ಧ್ವಲೋಕ ವ್ಯೂಹವು ಆತನ ಶಿರಸ್ಸು. ಈ ವಿರಾಟ್‌ಪುರುಷನನ್ನು ಧ್ಯಾನಿಸುವಂತೆ ನವದೀಕ್ಷಿತನಿಗೆ ಬೋಧಿಸಲಾಗುತ್ತದೆ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 5
ಅಂತಕಾಲೇ ಚ ಮಾವೇವ ಸ್ಮರುನ್ಮುಕ್ತ್ವಾ ಕಲೇವರಮ್ |
ಯಃ ಪ್ರಯಾತಿ ಸ ಮದ್ಭಾವಂ ಯಾತಿ ನಾಸ್ತ್ಯತ್ರ ಸಂಶಯಃ ||5||
ಅನುವಾದ: ಅಂತ್ಯಕಾಲದಲ್ಲಿ ನನ್ನನ್ನು ಸ್ಮರಿಸುತ್ತ ಯಾವನು ದೇಹವನ್ನು ಬಿಡುವನೋ ಅವನು ಕೂಡಲೇ ನನ್ನ ಸ್ವಭಾವವನ್ನು ಹೊಂದುತ್ತಾನೆ. ಇದರಲ್ಲಿ ಸಂಶಯವೇ ಇಲ್ಲ.
ಭಾವಾರ್ಥ: ಈ ಶ್ಲೋಕದಲ್ಲಿ ಕೃಷ್ಣಪ್ರಜ್ಞೆಯ ಮಹತ್ವವನ್ನು ಒತ್ತಿಹೇಳಿದೆ. ಕೃಷ್ಣಪ್ರಜ್ಞೆಯಲ್ಲಿ ಯಾವಾತನು ದೇಹವನ್ನು ಬಿಡುತ್ತಾನೋ ಆತನನ್ನು ಕೂಡಲೇ ಪರಮ ಪ್ರಭುವಿನ ದಿವ್ಯಭಾವಕ್ಕೆ ಕೊಂಡೊಯ್ಯಲಾಗುತ್ತದೆ. ಪರಮ ಪ್ರಭುವು ಪರಿಶುದ್ಧರಲ್ಲಿ ಪರಿಶುದ್ಧನು. ಆದುದರಿಂದ ಸದಾ ಕೃಷ್ಣಪ್ರಜ್ಞೆಯಿರುವವನೂ ಸಹ ಪರಿಶುದ್ಧರಲ್ಲಿ ಪರಿಶುದ್ಧನು. ಸ್ಮರನ್ ಎನ್ನುವ ಶಬ್ದ ಮುಖ್ಯವಾದದ್ದು. ಭಕ್ತಿಪೂರ್ವಕ ಸೇವೆಯಲ್ಲಿ ಕೃಷ್ಣಪ್ರಜ್ಞೆಯ ಸಾಧನೆಯನ್ನು ಮಾಡದಿರುವ ಅಪರಿಶುದ್ಧ ಆತ್ಮಕ್ಕೆ ಕೃಷ್ಣಸ್ಮರಣೆಯು ಸಾಧ್ಯವಿಲ್ಲ. ಆದುದರಿಂದ ಮನುಷ್ಯನಾದವನು ಬದುಕಿನ ಪ್ರಾರಂಭದಿಂದಲೇ ಕೃಷ್ಣಪ್ರಜ್ಞೆಯ ಸಾಧನೆಯನ್ನು ಮಾಡಬೇಕು. ತನ್ನ ಬದುಕಿನ ಅಂತ್ಯದಲ್ಲಿ ಜಯವನ್ನು ಸಾಧಿಸಬಯಸುವವನಿಗೆ ಕೃಷ್ಣಸ್ಮರಣೆಯ ಪ್ರಕ್ರಿಯೆಯು ಅತ್ಯಗತ್ಯ. ಆದುದರಿಂದ ಅನುಷ್ಯನಾದವರು ಸದಾ ಒಂದೇ ಸಮನೆ ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ ಎಂಬ ಮಹಾಮಂತ್ರವನ್ನು ಜಪಿಸಬೇಕು.
ಮನುಷ್ಯನಿಗೆ ಮರದಷ್ಟು ಸಹನೆಯಿರಬೇಕು (ತರೋರ್ ಇವ ಸಹಿಷ್ಣುನಾ) ಎಂದು ಚೈತನ್ಯ ಮಹಾಪ್ರಭುಗಳು ಬೋಧಿಸಿದ್ದಾರೆ. ಹರೇ ಕೃಷ್ಣ ಸಂಕೀರ್ತನೆಯನ್ನು ಮಾಡುವವನಿಗೆ ಅನೇಕ ಅಡ್ಡಿಗಳು ಎದುರಾಗಬಹುದು. ಆದರೂ ಎಲ್ಲ ಅಡ್ಡಿಗಳನ್ನೂ ಸಹಿಸಿಕೊಂಡು ಆತನು ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ ಎಂದು ಸಂಕೀರ್ತನೆ ಮಾಡುತ್ತಲೇ ಇರಬೇಕು. ಆಗ ತನ್ನ ಜೀವನದ ಅಂತ್ಯದಲ್ಲಿ ಮನುಷ್ಯನಿಗೆ ಕೃಷ್ಣಪ್ರಜ್ಞೆಯ ಸಂಪೂರ್ಣ ಫಲವು ದೊರಯುವುದು.