Bhagavad Gita: ಮನಸ್ಸನ್ನ ಪರಮಾತ್ಮನಲ್ಲಿ ನಿಲ್ಲಿಸಿದರೆ ಇಂದ್ರಿಯಗಳನ್ನ ನಿಯಂತ್ರಿಸಬಹುದು; ಗೀತೆಯ ಅರ್ಥ ಹೀಗಿದೆ
Bhagavad Gita Updesh: ಮನಸ್ಸನ್ನ ಪರಮಾತ್ಮನಲ್ಲಿ ನಿಲ್ಲಿಸಿದರೆ ಇಂದ್ರಿಯಗಳನ್ನ ನಿಯಂತ್ರಿಸಬಹುದು ಎಂಬುದರ ಬಗ್ಗೆ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಅದರ ಅರ್ಥವನ್ನು ತಿಳಿಯಿರಿ.
ಅಧ್ಯಾಯ 6 - ಧ್ಯಾನ ಯೋಗ ಶ್ಲೋಕ 35
ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ |
ಅಭ್ಯಾಸೇನ ತು ಕೌನ್ತೇಯ ವೈರಾಗ್ಯೇಣ ಚ ಗೃಹ್ಯತೇ ||35||
ಅನುವಾದ: Bhagavad Gita Updesh in Kannada: ಶ್ರೀಕೃಷ್ಣನು ಹೀಗೆ ಹೇಳಿದನು - ಮಹಾಬಾಹುವೂ ಕುಂತಿಯ ಮಗನೂ ಆದ ಅರ್ಜುನನೇ, ಚಂಚಲವಾದ ಮನಸ್ಸನ್ನು ನಿಗ್ರಹಿಸುವುದು ಬಹುಕಷ್ಟ. ಆದರೂ ಯೋಗ್ಯವಾದ ವೈರಾಗ್ಯದಿಂದ ಮತ್ತು ಅಭ್ಯಾಸದಿಂದ ಅದನ್ನು ನಿಗ್ರಹಿಸಬಹುದು.
ಭಾವಾರ್ಥ: ಹಠಮಾರಿಯಾದ ಮನಸ್ಸನ್ನು ಗೆಲ್ಲುವುದು ಕಷ್ಟ ಎನ್ನುವುದನ್ನು ಅರ್ಜುನನು ಹೇಳಿದ್ದನ್ನು ದೇವೋತ್ತಮ ಪುರುಷನು ಒಪ್ಪಿಕೊಳ್ಳುತ್ತಾನೆ. ಆದರೆ ಅಭ್ಯಾಸ ಮತ್ತು ವೈರಾಗ್ಯಗಳಿಂದ ಇದನ್ನು ಸಾಧಿಸಬಹುದು ಎಂದು ಹೇಳುತ್ತಾನೆ. ಈ ಅಭ್ಯಾಸವು ಯಾವುದು? ಒಂದು ಪವಿತ್ರವಾದ ಸ್ಥಳದಲ್ಲಿ ನೆಲೆಸುವುದು. ಮನಸ್ಸನ್ನು ಪರಮಾತ್ಮನಲ್ಲಿ ನಿಲ್ಲಿಸುವುದು, ಇಂದ್ರಿಯಗಳನ್ನೂ ಮನಸ್ಸನ್ನೂ ನಿಯಂತ್ರಿಸುವುದುದು. ಬ್ರಹ್ಮಚರ್ಯ, ಏಕಾಂತಜೀವನ ಮೊದಲಾದವುಗಳ ನಿಯಮ ನಿರ್ಬಂಧನೆಗಳನ್ನು ಈ ಯುಗದಲ್ಲಿ ಯಾರೂ ಅನುಸರಿಸಲಾರರು. ಆದರೆ ಕೃಷ್ಣಪ್ರಜ್ಞೆಯ ಅನುಷ್ಠಾನದಿಂದ ಮನುಷ್ಯನು ಒಂಬ್ಬತ್ತು ರೀತಿಗಳಲ್ಲಿ ಭಗವಂತನ ಭಕ್ತಿಪೂರ್ವಕ ಸೇವೆಯನ್ನು ಮಾಡುತ್ತಾನೆ. ಇಂತಹ ಭಕ್ತಪೂರ್ವಕ ಕಾರ್ಯಗಳಲ್ಲಿ ಮೊದಲನೆಯದು ಮತ್ತು ಬಹುಮುಖ್ಯವಾದದ್ದು ಕೃಷ್ಣನ ವಿಷಯವನ್ನು ಕೇಳುವುದು. ಮನಸ್ಸಿನಿಂದ ಎಲ್ಲ ಆತಂಕಗಳನ್ನು ಕಳೆಯುವುದಕ್ಕೆ ಇದು ಬಹುಶಕ್ತಿಶಾಲಿಯಾದ ಅಧ್ಯಾತ್ಮಿಕ ಮಾರ್ಗ.
ಕೃಷ್ಣನ ವಿಷಯವನ್ನು ಕೇಳಿದ್ದಷ್ಟೂ ವ್ಯಕ್ತಿಯು ಜ್ಞಾನೋದಯ ಹೊಂದುತ್ತಾನೆ. ಮನಸ್ಸಿಗೆ ಬೆಳಕಾಗುತ್ತದೆ. ಕೃಷ್ಣನಿಂದ ಮನಸ್ಸನ್ನು ಸೆಳೆಯುವ ಎಲ್ಲ ವಿಷಯಗಳಿಂದಲ್ಲೂ ಮನಸ್ಸು ದೂರವಾಗುತ್ತದೆ. ಭಗವಂತನಿಗೆ ಸಮರ್ಪಣೆಯಾಗದ ಚಟುವಟಿಕೆಗಳಿಂದ ದೂರವಾಗಿದ್ದರೆ ವೈರಾಗ್ಯವನ್ನು ಕಲಿಯುವುದು ಬಹುಸುಲಭ. ವೈರಾಗ್ಯವೆಂದರೆ ಜಡವಸ್ತುವಿನಿಂದ ದೂರವಾಗುವುದು ಮತ್ತು ಮನಸ್ಸನ್ನು ಆತ್ಮದಲ್ಲಿ ನೆಲೆಗೊಳಿಸುವುದು. ನಿರಾಕಾರಿ ಅಧ್ಯಾತ್ಮಿಕ ವೈರಾಗ್ಯವು ಮನಸ್ಸನ್ನು ಕೃಷ್ಣನ ಚಟುವಟಿಕೆಗಳಿಗೆ ಜೋಡಿಸುವುದಕ್ಕಿಂತ ಕಷ್ಟ. ಕೃಷ್ಣನಲ್ಲಿ ಮನಸ್ಸನ್ನು ನೆಡುವುದು ಕಾರ್ಯಸಾಧ್ಯ. ಏಕೆಂದರೆ ಕೃಷ್ಣನ ವಿಷಯ ಕೇಳುವುದರಿಂದ ಮನುಷ್ಯನು ತಾನಾಗಿಯೇ ಭಗವಂತನಲ್ಲಿ ಆಸಕ್ತಿ ಹೊಂದುತ್ತಾನೆ. ಈ ಆಸಕ್ತಿಗೆ ಪರೇಶಾನುಭವ, ಅಧ್ಯಾತ್ಮಿಕ ತೃಪ್ತಿ ಎಂದು ಹೆಸರು. ಇದು ಹಸಿದ ಮನುಷ್ಯನು ಪ್ರತಿಯೊಂದು ತುತ್ತನ್ನು ತಿನ್ನುವಾಗಲೂ ಅನುಭವಿಸುವ ತೃಪ್ತಿಯ ಭಾವಂತಹುದು.
ಮನುಷ್ಯನಿಗೆ ಹಸಿವಾಗಿದ್ದಾಗ ಎಷ್ಟು ತಿಂದರೆ ಅಷ್ಟು ತೃಪ್ತಿ ಮತ್ತು ಶಕ್ತಿಗಳ ಭಾವನೆ ಬರುತ್ತದೆ. ಹಾಗೆಯೇ ಭಕ್ತಿಪೂರ್ವಕ ಸೇವೆಯನ್ನು ಮಾಡುವುದರಿಂದ ಮನಸ್ಸು ಐಹಿಕ ಗುರಿಗಳಿಂದ ದೂರವಾದಂತೆ ಮನುಷ್ಯನಿಗೆ ದಿವ್ಯತೃಪ್ತಿಯಾಗುತ್ತದೆ. ಇದು ತಜ್ಞ ಚಿಕಿತ್ಸೆಯಿಂದ ಮತ್ತು ಸೂಕ್ತ ಆಹಾರದಿಂದ ಕಾಯಿಲೆಯನ್ನು ವಾಸಿಮಾಡುವಂತೆ - ಶ್ರೀಕೃಷ್ಣನ ದಿವ್ಯ ಲೀಲೆಗಳನ್ನು ಕೇಳುವುದು ಹುಟ್ಟು ಮನಸ್ಸಿಗೆ ತಜ್ಞ ಚಿಕಿತ್ಸೆ ಮಾಡಿದಂತೆ ಮತ್ತು ಕೃಷ್ಣ ಪ್ರಸಾದವನ್ನು ಸ್ವೀಕರಿಸುವುದು, ಕಾಯಿಲೆಯಿಂದ ನರಳುತ್ತಿರುವ ರೋಗಿಗೆ ಸೂಕ್ತವಾದ ಆಹಾರವನ್ನು ಕೊಟ್ಟಂತೆ. ಕೃಷ್ಣಪ್ರಜ್ಞೆಯ ಪ್ರಕ್ರಿಯೇ ಚಿಕಿತ್ಸೆ.
ಮಹಾಭಾರತದ ಯುದ್ಧ ಆರಂಭಕ್ಕೂ ಮುನ್ನವೇ ಎದುರಾಳಿ ಬಣದಲ್ಲಿ ಇದ್ದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸುತ್ತಾನೆ. ಆಗ ಶ್ರೀಕೃಷ್ಣನು ಪಾಂಡವರಲ್ಲಿ ಒಬ್ಬರಾದ ಅರ್ಜುನನಿಗೆ ಉಪದೇಶ ನೀಡುತ್ತಾನೆ. ಅರ್ಜುನನ ಮುಂದೆ ಬೃಹತ್ ಸೈನ್ಯ ನಿಂತಿರುತ್ತದೆ. ಆ ಸೈನ್ಯದಲ್ಲಿರುವ ಸಾರಥಿಗಳಲ್ಲಿ ಈತನ ಚಿಕ್ಕಪ್ಪ, ತಾಯಿಯ ಅಣ್ಣ, ತಾತ ಹಾಗೂ ಸಹೋದರರು ಇರುತ್ತಾರೆ. ಈ ವೇಳೆ ಅರ್ಜುನ, ನಾನು ನನ್ನ ಸ್ವಂತ ಜನರನ್ನು ಹೇಗೆ ಕೊಲ್ಲುವುದು ಎಂದು ಮನಸ್ಸಿನಲ್ಲೇ ಯೋಚನೆ ಮಾಡಿ ಯುದ್ಧಭೂಮಿಯಲ್ಲಿ ತನ್ನ ಬಿಲ್ಲನ್ನು ಕೆಳಗೆ ಇಳಿಸುತ್ತಾನೆ. ಆಗ ಅರ್ಜುನನಿಗೆ ಶ್ರೀಕೃಷ್ಣ ಮೇಲಿನಂತೆ ಉಪದೇಶ ನೀಡುತ್ತಾನೆ. ಇತರರನ್ನು ಮೋಸ ಮಾಡುವವನು ತಾನೂ ಸ್ವತಃ ಮೋಸ ಹೋಡುತ್ತಾನೆ ಎನ್ನುವುದು ಶ್ರೀಕೃಷ್ಣನ ಮಾತು.
(This copy first appeared in Hindustan Times Kannada website. To read more like this please logon to kannada.hindustantimes.com )