ಭಗವದ್ಗೀತೆ: ಸಾಮಾಜಿಕ ಆಡಳಿತದ 4 ವರ್ಗಗಳಲ್ಲಿ ಇವರಿಗೆ ಹೆಚ್ಚು ಸವಾಲುಗಳು; ಗೀತೆಯಲ್ಲಿನ ಸಾರವನ್ನು ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸಾಮಾಜಿಕ ಆಡಳಿತದ 4 ವರ್ಗಗಳಲ್ಲಿ ಕ್ಷತ್ರಿಯರಿಗೆ ಹೆಚ್ಚು ಸವಾಲು ಎಂಬ ಗೀತೆಯಲ್ಲಿ ಅರ್ಥ ತಿಳಿಯಿರಿ.
ಸ್ವಧರ್ಮಮಪಿ ಚಾವೇಕ್ಷ್ಯ ನ ವಿಕಮ್ಪತುಮಹರ್ಸಿ |
ಧರ್ಮ್ಯಾದ್ಧಿ ಯುದ್ಧಾಚ್ಛ್ರೇಯೋನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ||31||
ನೀನು ಕ್ಷತ್ರಿಯನಾಗಿ ಸ್ವರ್ಧಮವನ್ನು ಪರಿಗಣಿಸಿದಾಗ ಧರ್ಮಕ್ಕಾಗಿ ಹೋರಾಡುವುದಕ್ಕಿಂತ ಶ್ರೇಯಸ್ಕರವಾದ ಕಾರ್ಯವಿನ್ನೊಂದಿಲ್ಲ ಎನ್ನುವುದನ್ನು ನೀನು ತಿಳಿದುಕೊಳ್ಳಬೇಕು. ಆದುದರಿಂದ ಹಿಂಜರಿಕೆಗೆ ಅವಕಾಶವೇ ಇಲ್ಲ.
ಸಾಮಾಜಿಕ ಆಡಳಿತದ ನಾಲ್ಕು ವರ್ಗಗಳಲ್ಲಿ ಒಳ್ಳೆಯ ಆಡಳಿತಕ್ಕೆ ಅಗತ್ಯವಾದ ಎರಡನೆಯ ವರ್ಗವನ್ನು ಕ್ಷತ್ರಿಯ ಎಂದು ಕರೆಯುತ್ತಾರೆ. ಕ್ಷತ್ ಎಂದರೆ ತೊಂದರೆ, ತ್ರಾಯತೆ ಎಂದರೆ ರಕ್ಷಿಸುವುದು. ಆದುದರಿಂದ ತೊಂದರೆಯಿಂದ ರಕ್ಷಿಸುವವನು ಕ್ಷತ್ರಿಯ. ಕ್ಷತ್ರಿಯರಿಗೆ ಕಾಡಿನಲ್ಲಿ ಕೊಲ್ಲಲು ಶಿಕ್ಷಣ ಕೊಟ್ಟಿರುತ್ತಿದ್ದರು. ಕ್ಷತ್ರಿಯನು ಕಾಡಿಗೆ ಹೋಗಿ ಹುಲಿಗೆ ಎದುರೆದುರಿಗೆ ಸವಾಲು ಹಾಕಿ ಕತ್ತಿ ಹಿಡಿದು ಹೋರಾಡುತ್ತಿದ್ದ.
ಹುಲಿಯು ಸತ್ತಾಗ ಅದಕ್ಕೆ ರಾಜಯೋಗ್ಯ ಅಂತ್ಯಸಂಸ್ಕಾರವನ್ನು ಮಾಡುತ್ತಿದ್ದರು. ಈ ಪದ್ಧತಿಯನ್ನು ಜಯಪುರದ ರಾಜರು ಇಂದಿಗೂ ಅನುಸರಿಸುತ್ತಾರೆ. ಕ್ಷತ್ರಿಯರಿಗೆ ಸವಾಲೊಡ್ಡಿ ಕೊಲ್ಲುವುದರಲ್ಲಿ ಶಿಕ್ಷಣ ಕೊಡಲಾಗುತ್ತದೆ. ಏಕೆಂದರೆ ಧಾರ್ಮಿಕ ಹಿಂಸೆಯು ಹಲವೊಮ್ಮೆ ಅಗತ್ಯವಾಗುತ್ತದೆ. ಆದುದರಿಂದ ಕ್ಷತ್ರಿಯರು ನೇರವಾಗಿ ಸನ್ಯಾಸಾಶ್ರಮವನ್ನು ಸ್ವೀಕರಿಸುವಂತಿಲ್ಲ. ರಾಜಕೀಯದಲ್ಲಿ ಅಹಿಂಸೆಯು ವ್ಯವಹಾರಜಾಣ್ಮೆ ಎನ್ನಿಸಿಕೊಳ್ಳಬಹುದು. ಆದರೆ ಅದು ಎಂದೂ ಒಂದು ಮುಖ್ಯ ಅಂಶವಲ್ಲ, ತತ್ವವಲ್ಲ. ಧರ್ಮಶಾಸ್ತ್ರಗಳಲ್ಲಿ ಹೀಗೆ ಹೇಳಿದೆ -
ಆಹವೇಷು ಮಿಥೋನ್ಯೋನ್ಯಂ ಜಿಘಾಂಸನ್ತೋ ಮಹೀಕ್ಷಿತಃ |
ಯುದ್ಧಮಾನಾಃ ಪರಂ ಶಕ್ತ್ಯಾ ಸ್ವರ್ಗಂ ಯಾನ್ತಿ ಅಪರಾಙ್ಮಖಾಃ ||
ಯಜ್ಞೇಷು ಪಶವೋ ಬ್ರಹ್ಮನ್ ಹನ್ಯನ್ತೇ ಸತತಂ ದ್ವಿಜೈಃ |
ಸಂಸ್ಕೃತಾಃ ಕಿಲ ಮನ್ತ್ರೈಶ್ಚ ತೇಪಿ ಸ್ವರ್ಗಮ್ ಅವಾಪ್ನುವನ್ ||
ಯಜ್ಞಕುಂಡದಲ್ಲಿ ಪ್ರಾಣಿಗಳನ್ನು ಬಲಿಯಾಗಿ ಕೊಟ್ಟು ಬ್ರಾಹ್ಮಣರು ಸ್ವರ್ಗಲೋಕಕ್ಕೆ ಹೋಗುತ್ತಾರೆ. ಇದೇ ರೀತಿಯಲ್ಲಿ ತನ್ನಲ್ಲಿ ಮಾತ್ಸರ್ಯವಿರುವ ಮತ್ತೊಬ್ಬ ಕ್ಷತ್ರಿಯನೊಡನೆ ರಣರಂಗದಲ್ಲಿ ಹೋರಾಡುವ ಕ್ಷತ್ರಿಯನು ಮರಣಾನಂತರ ಕೊಲ್ಲುವುದನ್ನಾಗಲೀ, ಯಜ್ಞಕುಂಡದಲ್ಲಿ ಪ್ರಾಣಿಗಳನ್ನು ಕೊಲ್ಲುವುದನ್ನಾಗಲೀ ಹಿಂಸೆಯ ಕಾರ್ಯಗಳೆಂದು ಪರಿಗಣಿಸುವುದಿಲ್ಲ.
ಏಕೆಂದರೆ ಇವುಗಳಲ್ಲಿ ಅಡಕವಾಗಿರುವ ಧಾರ್ಮಿಕ ತತ್ವಗಳಿಂದ ಎಲ್ಲರಿಗೂ ಉಪಕಾರವಾಗುತ್ತದೆ. ಯಜ್ಞದಲ್ಲಿ ಬಲಿಯಾದ ಪ್ರಾಣಿಯ ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಕ್ರಮವಾಗಿ ಸಾಗುವ ವಿಕಸನ ಪ್ರಕ್ರಿಯೆಗೆ ಒಳಗಾಗದೆ ನೇರವಾಗಿ ಮನುಷ್ಯಜನ್ಮವನ್ನು ಪಡೆಯುತ್ತದೆ. ಯುದ್ಧಭೂಮಿಯಲ್ಲಿ ಸತ್ತ ಕ್ಷತ್ರಿಯರು, ಯಜ್ಞದಲ್ಲಿ ಬಲಿಯನ್ನು ಅರ್ಪಿಸಿದ ಬ್ರಾಹ್ಮಣರು, ಸ್ವರ್ಗಲೋಕಕ್ಕೆ ಹೋಗುತ್ತಾರೆ.
ಸ್ವರ್ಧಮದಲ್ಲಿ ಎರಡು ವಿಧ. ಮನುಷ್ಯನಾದವನು ಮುಕ್ತಿಯನ್ನು ಪಡೆಯುವುದಕ್ಕಾಗಿ ತನ್ನ ವಿಶಿಷ್ಟ ದೇಹದ ಕರ್ತವ್ಯವನ್ನು ಧಾರ್ಮಿಕ ತತ್ವಗಳಿಗೆ ಅನುಗುಣವಾಗಿ ಮುಕ್ತಿಯು ದೊರಕುವವರೆಗೆ ಪಾಲಿಸಬೇಕು. ಮುಕ್ತಿಯು ದೊರಕಿದ ಅನಂತರ ಮನುಷ್ಯನ ಸ್ವಧರ್ಮವು ಆಧ್ಯಾತ್ಮಿಕವಾಗುತ್ತದೆ. ಅದು ಐಹಿಕ ಶರೀರದ ಪರಿಕಲ್ಪನೆಗೆ ಒಳಪಡುವುದಿಲ್ಲ. ಬದುಕಿನ ದೈಹಿಕ ಗ್ರಹಿಕೆಯಲ್ಲಿ ಬ್ರಾಹ್ಮಣರಿಗೂ ಕ್ಷತ್ರಿಯರಿಗೂ ಅವರವರಿಗೆ ನಿಯೋಜಿಸಿದ ಸ್ವಧರ್ಮಗಳಿವೆ.
ಈ ಸ್ವಧರ್ಮಗಳ ಅನಿವಾರ್ಯವಾದವು. ಸ್ವಧರ್ಮವನ್ನು ಭಗವಂತನೇ ವಿಧಿಸುತ್ತಾನೆ. ಇದನ್ನು ನಾಲ್ಕನೆಯ ಅಧ್ಯಾಯದಲ್ಲಿ ಸ್ಪಷ್ಟಮಾಡಲಾಗುವುದು. ದೇಹದ ನೆಲೆಯಲ್ಲಿ ಸ್ವಧರ್ಮಕ್ಕೆ ವರ್ಣಾಶ್ರಮಧರ್ಮ ಎಂದು ಹೆಸರು. ಇದು ಮಾನವನ ಆಧ್ಯಾತ್ಮಿಕ ಅರಿವಿಗೆ ಸೋಪಾನ. ವರ್ಣಾಶ್ರಮಧರ್ಮ ಎಂದರೆ ದೇಹವು ಯಾವ ಪ್ರಕೃತಿಗುಣಗಳ ಪ್ರಭಾವದಲ್ಲಿದೆೋ ಅವುಗಳಿಗೆ ಅನುಗುಣವಾದ ಕರ್ತವ್ಯ. ಯಾವುದೇ ಕರ್ಮಕ್ಷೇತ್ರದಲ್ಲಿ ಮೇಲಿನ ಅಧಿಕಾರಿಗಳ ಅನುಜ್ಞೆಯ ಪ್ರಕಾರ ಕರ್ತವ್ಯಪಾಲನೆ ಮಾಡುವುದು ಮನುಷ್ಯನನ್ನು ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ಏರಿಸುತ್ತದೆ.