ಭಗವದ್ಗೀತೆ: ಕೃಷ್ಣನ ಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಖಚಿತ; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಕೃಷ್ಣನ ಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಖಚಿತ; ಗೀತೆಯ ಅರ್ಥ ತಿಳಿಯಿರಿ

ಭಗವದ್ಗೀತೆ: ಕೃಷ್ಣನ ಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ಮಾಡುವ ಪ್ರತಿ ಕೆಲಸದಲ್ಲೂ ಯಶಸ್ಸು ಖಚಿತ; ಗೀತೆಯ ಅರ್ಥ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಇನ್ದ್ರಿಯಸ್ಯೇನ್ದ್ರಿಯಸ್ಯಾರ್ಥೇ ರಾಗದ್ವೇಷೌ ವ್ಯವಸ್ಥಿತೌ |

ತಯೋರ್ನ ವಶಮಾಗಚ್ಚೇತ್ ತೌ ಹ್ಯಸ್ಯ ಪರಿಪನ್ಥಿನೌ ||34||

ಇಂದ್ರಿಯಗಳು ಮತ್ತು ಅವುಗಳ ವಿಷಯಗಳಿಗೆ ಸಂಬಂಧಿಸಿದಂತೆ ರಾಗದ್ವೇಷಗಳನ್ನು ನಿಯಂತ್ರಿಸುವ ತತ್ವಗಳಿವೆ. ಮನುಷ್ಯನು ಇಂತಹ ರಾಗದ್ವೇಷಗಳ ವಶನಾಗಬಾರದು. ಏಕೆಂದರೆ ಆತ್ಮಕ್ಷಾತ್ಕಾರದ ಮಾರ್ಗದಲ್ಲಿ ಅವು ಅಡ್ಡಿಗಳು.

ಕೃಷ್ಣಪ್ರಜ್ಞೆಯಲ್ಲಿರುವವರು ಸಹಜವಾಗಿಯೇ ಐಹಿಕ ಇಂದ್ರಿಯ ತೃಪ್ತಿಯಲ್ಲಿ ತೊಡಗಲು ಇಷ್ಟಪಡುವುದಿಲ್ಲ. ಆದರೆ ಇಂತಹ ಪ್ರಜ್ಞೆಯಲ್ಲಿ ಇಲ್ಲದವರು ಅಪೌರುಷೇಯ ಧರ್ಮಗ್ರಂಥಗಳ ವಿಧಿ-ನಿಯಮಗಳನ್ನು ಅನುಸರಿಸಬೇಕು. ಐಹಿಕ ಸೆರೆಗೆ ಮಿತಿ ಇಲ್ಲದ ಇಂದ್ರಿಯಭೋಗವೇ ಕಾರಣ. ಆದರೆ ಅಪೌರುಷೇಯ ಶಾಸ್ತ್ರಗಳ ವಿಧಿ-ನಿಯಮಗಳನ್ನು ಅನುಸರಿಸುವವನು ಇಂದ್ರಿಯ ವಸ್ತುಗಳ ಗೋಜಿಗೆ ಸಿಕ್ಕಿಬೀಳವುದಿಲ್ಲ.

ಉದಾಹರಣೆಗೆ, ಬದ್ಧ ಆತ್ಮಕ್ಕೆ ಕಾಮತೃಪ್ತಿಯು ಅಗತ್ಯ. ವಿವಾಹಬಂಧನದ ಸ್ವಾತಂತ್ರ್ಯದ ಮಿತಿಯಲ್ಲಿ ಕಾಮತೃಪ್ತಿಗೆ ಅವಕಾಶವುಂಟು. ಶಾಸ್ತ್ರಗಳ ಆದೇಶದಂತೆ, ತನ್ನ ಪತ್ನಿಯ ಹೊರತಾಗಿ ಬೇರೆ ಯಾವ ಹೆಂಗಸಿನೊಡನೆಯೂ ಕಾಮಭೋಗ ಪಡುವಂತಿಲ್ಲ. ಉಳಿದೆಲ್ಲ ಸ್ತ್ರೀಯರನ್ನೂ ತನ್ನ ತಾಯಿಯಂತೆ ಕಾಣತಕ್ಕದ್ದು. ಇಂತಹ ಆದೇಶಗಳಿದ್ದರೂ ಮನುಷ್ಯನು ಇತರ ಸ್ತ್ರೀಯರೊಡನೆ ಕಾಮಭೋಗಪಡಲು ಬಯಸುತ್ತಾನೆ. ಇಂತಹ ಪ್ರವೃತ್ತಿಗಳಿಗೆ ಕಡಿವಾಣವನ್ನು ಹಾಕಬೇಕು. ಇಲ್ಲವಾದರೆ ಅವು ಆತ್ಮಸಾಕ್ಷಾತ್ಕಾರದ ಮಾರ್ಗದಲ್ಲಿ ಅಡ್ಡಿಗಳಾಗುತ್ತವೆ.

ಭೌತಿಕ ದೇಹವಿರುವಷ್ಟು ಕಾಲವೂ ಭೌತಿಕ ದೇಹದ ಅಗತ್ಯಗಳಿಗೆ ಅವಕಾಶ ಉಂಟು. ಆದರೆ ವಿಧಿ-ನಿಯಮಗಳಿಗೆ ಅನುಗುಣವಾಗಿ ಮಾತ್ರ. ಆದರೂ ನಾವು ಇಂತಹ ಅವಕಾಶಗಳ ಹತೋಟಿಯನ್ನು ಅವಲಂಬಿಸಬಾರದು. ಆ ನಿಯಮ ನಿಬಂಧನೆಗಳಿಗೆ ಅಂಟಿಕೊಳ್ಳದೆ ಅವನ್ನು ಅನುಸರಿಸಬೇಕು. ಏಕೆಂದರೆ ನಿಯಮಗಳಿಗೆ ವಿಧೇಯವಾಗಿ ಇಂದ್ರಿಯ ತೃಪ್ತಿಪಟ್ಟುಕೊಳ್ಳುವ ರೂಢಿಯೂ ಮನುಷ್ಯನಿಗೆ ದಾರಿತಪ್ಪಿಸಬಹುದು. ರಾಜಮಾರ್ಗಗಳಲ್ಲಿಯೂ ಅಪಘಾತಗಳ ಸಾಧ್ಯತೆಯು ಇರುವ ಹಾಗೆ. ರಸ್ತೆಗಳನ್ನು ಬಹು ಎಚ್ಚರಿಕೆಯಿಂದ ಒಳ್ಳೆಯ ಸ್ಥಿತಿಯಲ್ಲಿ ಉಳಿಸಿಕೊಂಡು ಬಂದಿರಬಹುದು. ಆದರೂ ಅತ್ಯಂತ ಸುರಕ್ಷಿತ ರಸ್ತೆಯಲ್ಲಿ ಸಹ ಅಪಘಾತ ಆಗುವುದೇ ಇಲ್ಲ ಎಂದು ಯಾರೂ ಖಂಡಿತವಾಗಿ ಭರವಸೆ ನೀಡಲು ಸಾಧ್ಯವಿಲ್ಲ.

ಐಹಿಕ ಸಹವಾಸ ಇರುವುದರಿಂದ ಇಂದ್ರಿಯಭೋಗದ ಮನೋಧರ್ಮ ಬಹು ದೀರ್ಘಕಾಲದಿಂದ ಉಳಿದುಕೊಂಡು ಬಂದಿದೆ. ಆದುದರಿಂದ ಇಂದ್ರಿಯ ತೃಪ್ತಿಯು ನಿಯಂತ್ರಣಕ್ಕೆ ಒಳಗಾಗಿದ್ದರೂ, ಪತನದ ಸಾಧ್ಯತೆ ಇದ್ದೇ ಇದೆ. ಆದುದರಿಂದ ಇಂದ್ರಿಯ ತೃಪ್ತಿಯನ್ನೂ ಸಹ ನಿಶ್ಚಯವಾಗಿಯೂ ತಪ್ಪಿಸಬೇಕು. ಆದರೆ ಕೃಷ್ಣಪ್ರಜ್ಞೆಯಲ್ಲಿ, ಎಂದರೆ ಸದಾ ಕೃಷ್ಣನ ಪ್ರೇಮಪೂರ್ವಕ ಸೇವೆಯಲ್ಲಿ, ಆಸಕ್ತಿಯನ್ನು ಬೆಳೆಸಿಕೊಂಡರೆ ಅದು ಎಲ್ಲ ಇಂದ್ರಿಯ ಕರ್ಮಗಳಿಂದ ಮನುಷ್ಯನನ್ನು ಕಾಪಾಡುತ್ತದೆ. ಆದುದರಿಂದ, ಬದುಕಿನ ಯಾವುದೇ ಘಟ್ಟದಲ್ಲಿಯೂ ಕೃಷ್ಣಪ್ರಜ್ಞೆಯಲ್ಲಿ ಅನಾಸಕ್ತರಾಗಲು ಪ್ರಯತ್ನಿಸಬಾರದು. ಎಲ್ಲ ರೀತಿಯ ಇಂದ್ರಿಯಾಸಕ್ತಿಯಿಂದ ದೂರವಾಗುವ ಉದ್ದೇಶವು ಅಂತಿಮವಾಗಿ ಕೃಷ್ಣಪ್ರಜ್ಞೆಯ ವೇದಿಕೆಯಲ್ಲಿ ನೆಲೆಯನ್ನು ಕಂಡುಕೊಳ್ಳುವುದೇ ಆಗಿದೆ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.