ಭಗವದ್ಗೀತೆ: ಪ್ರತಿಯೊಬ್ಬ ಮನುಷ್ಯ ಅನುಸರಿಸಬೇಕಾದ ಸಾಂಪ್ರದಾಯಿಕ, ಕೌಟುಂಬಿಕ ಪದ್ಧತಿಗಳು ಯಾವುವು? ಗೀತೆಯ ಸಾರಾಂಶ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಪ್ರತಿ ಮನುಷ್ಯನೂ ಅನುಸರಿಸಬೇಕಾದ ಸಾಂಪ್ರದಾಯಿಕ, ಕೌಟುಂಬಿಕ ಪದ್ಧತಿಗಳು ಯಾವುವು ಅನ್ನೋದನ್ನ ಗೀತೆಯಲ್ಲಿ ತಿಳಿಯಿರಿ.
ಯದಿ ಹ್ಯಹಂ ನ ವರ್ತೇಯಂ ಜಾತು ಕರ್ಮಣ್ಯತನ್ದ್ರಿತಃ |
ಮಮ ವರ್ತ್ಮಾನುವರ್ತನ್ತೇ ಮನುಷ್ಯಾಃ ಪಾರ್ಥ ಸರ್ವಶಃ ||23||
ಪಾರ್ಥ, ನಾನು ಯಾವಾಗಲೇ ಆಗಲಿ ನಿಮಯಿತ ಕರ್ಮಗಳಲ್ಲಿ ನಿರತನಾಗದೆ ಹೋದರೆ ಎಲ್ಲ ಮನುಷ್ಯರೂ ನನ್ನ ಮಾರ್ಗವನ್ನು ಅನುಸರಿಸುವರು.
ಆಧ್ಯಾತ್ಮಿಕ ಬದುಕಿನ ಮುನ್ನಡೆಗಾಗಿ ಸಾಮಾಜಿಕ ಶಾಂತಿಯ ಸಮತೋಲವನ್ನು ಉಳಿಸಿಕೊಳ್ಳಲು, ಪ್ರತಿಯೊಬ್ಬ ನಾಗರಿಕ ಮನುಷ್ಯನೂ ಅನುಸರಿಸಬೇಕಾದ ಸಾಂಪ್ರದಾಯಿಕವಾದ ಕೌಟುಂಬಿಕ ಪದ್ಧತಿಗಳಿವೆ. ಇಂತಹ ನಿಮಯಗಳು ಬದ್ಧಜೀವಿಗಳಿಗೆ ಮಾತ್ರ, ಶ್ರೀಕೃಷ್ಣನಿಗಲ್ಲ. ಆದರೂ ಆತನು ಧಾರ್ಮಿಕ ತತ್ವಗಳನ್ನು ನೆಲೆಗೊಳಿಸಲು ಅವತರಿಸಿದುದರಿಂದ ವಿಧಿಸಿದ ನಿಮಯಗಳನ್ನು ಅನುಸರಿಸುತ್ತಾನೆ. ಇಲ್ಲವಾದರೆ, ಅವನೇ ಅತ್ಯುನ್ನತ ಅಧಿಕಾರಿಯಾದುದರಿಂದ ಜನಸಾಮಾನ್ಯರು ಆತನ ಹೆಜ್ಜೆಯಲ್ಲಿಯೇ ನಡೆಯುತ್ತಾರೆ. ಮನೆಯೊಳಗೆ, ಮನೆಯ ಹೊರಗೆ ಗೃಹಸ್ಥನಿಗೆ ವಿಧಿಸಿರುವ ಎಲ್ಲ ಧಾರ್ಮಿಕ ಕರ್ತವ್ಯಗಳನ್ನೂ ಶ್ರೀಕೃಷ್ಣನು ಪಾಲಿಸುತ್ತಿದ್ದನೆಂದು ಶ್ರೀಮದ್ಭಾಗವತದಿಂದ ತಿಳಿದುಬರುತ್ತದೆ.
ಉತ್ಸೀದೇಯುರಿಮೇ ಲೋಕಾ ನ ಕುರ್ಯಾಂ ಕರ್ಮ ಚೇದಹಮ್ |
ಸಂಕರಸ್ಯ ಚ ಕರ್ತಾ ಸ್ಯಾಮುಪಹನ್ಯಾಮಿಮಾಃ ಪ್ರಜಾಃ ||24||
ನಾನು ನಿಯಮಿತ ಕರ್ತವ್ಯವನ್ನು ಮಾಡದಿದ್ದರೆ ಈ ಲೋಕಗಳೆಲ್ಲ ನಾಶವಾಗುವುವು. ನಾನೇ ವರ್ಣಸಂಕರಕ್ಕೆ ಕಾರಣನಾಗುತ್ತೇನೆ. ಅದರಿಂದಾಗಿ ನಾನೇ ಎಲ್ಲ ಜೀವಿಗಳ ಶಾಂತಿಯನ್ನು ನಾಶಮಾಡುತ್ತೇನೆ.
ವರ್ಣಸಂಕರ ಎಂದರೆ ಸಮಾಜದ ಶಾಂತಿಯನ್ನು ಕಲುಕುವ ಅನಪೇಕ್ಷಿತ ಜನಸಂಖ್ಯೆ. ಈ ಸಾಮಾಜಿಕ ಕ್ಷೋಭೆಯನ್ನು ತಡೆಯಲು ವಿಹಿತ ನಿಯಮಗಳಿವೆ. ಇವುಗಳಿಂದ ಜನತೆಯು ತಾನಾಗಿಯೇ ಶಾಂತಿಯುತವಾಗಿ, ಬದುಕಿನಲ್ಲಿ ಆಧ್ಯಾತ್ಮಿಕ ಪ್ರಗತಿಗೆ ವ್ಯವಸ್ಥೆಗೊಳ್ಳುತ್ತದೆ. ಶ್ರೀಕೃಷ್ಣನು ಅವತಾರಮಾಡಿದಾಗ ಆತನು ಸಹಜವಾಗಿ ಇಂತಹ ನಿಮಯ ನಿಬಂಧನೆಗಳೊಡನೆ ವ್ಯವಹರಿಸುತ್ತಾನೆ. ಇಂತಹ ಮುಖ್ಯವಾದ ಆಚರಣೆಗಳ ಘನತೆಯನ್ನೂ ಅಗತ್ಯವನ್ನೂ ಕಾಪಾಡಲು ಹೀಗೆ ಮಾಡಬೇಕಾಗುತ್ತದೆ. ಭಗವಂತನು ಎಲ್ಲ ಜೀವಿಗಳ ತಂದೆ. ಜೀವಿಗಳಿಗೆ ತಪ್ಪು ಮಾರ್ಗದರ್ಶನ ದೊರೆತರೆ ಪರೋಕ್ಷವಾಗಿ ಅದರ ಹೊಣೆ ಭಗವಂತನದು.
ಆದುದರಿಂದ ನಿಯಂತ್ರಕ ತತ್ವಗಳನ್ನು ಸಾಮಾನ್ಯವಾಗಿ ಅಸಡ್ಡೆ ಮಾಡಿದಾಗಲೆಲ್ಲ ಭಗವಂತನೇ ಭೂಮಿಗಿಳಿದು ಬಂದು ಸಮಾಜವನ್ನು ತಿದ್ದುತ್ತಾನೆ. ಆದರೂ ನಾವು ಈ ಸಂಗತಿಯನ್ನು ಎಚ್ಚರದಿಂದ ಗಮನಸಿಬೇಕು. ನಾವು ಭಗವಂತನ ಹೆಜ್ಜೆಯಲ್ಲೇ ನಡೆಯಬೇಕು. ಆದರೆ ನಾವು ಅವನನ್ನು ಅನುಕರಿಸಲಾರೆವು ಎನ್ನುವುದನ್ನು ನೆನಪಿಡಬೇಕು. ಅನುಸರಿಸುವುದು ಮತ್ತು ಅನುಕರಿಸುವುದು ಒಂದೇ ಮಟ್ಟದಲ್ಲಿ ಇರುವುದಿಲ್ಲ. ಭಗವಂತನು ತನ್ನ ಬಾಲ್ಯದಲ್ಲಿ ಗೋವರ್ಧನಗಿರಿಯನ್ನು ಎತ್ತಿದನು. ನಾವು ಅವನನ್ನು ಅನುಕರಿಸಲಾರೆವು. ಇದನ್ನು ಯಾವ ಮನುಷ್ಯನೂ ಮಾಡಲು ಸಾಧ್ಯವಿಲ್ಲ. ನಾವು ಆತನ ಉಪದೇಶಗಳನ್ನು ಅನುಸರಿಸಬೇಕು. ಆದರೆ ನಾವು ಯಾವಾಗಲೂ ಅವನನ್ನು ಅನುಕರಿಸಬಾರದು. ಶ್ರೀಮದ್ಭಾಗವತವು (10.33.30-31) ಹೀಗೆ ಹೇಳುತ್ತದೆ.
ನೈತತ್ ಸಮಾಚರೇಜ್ಜಾತು ಮನಸಾಪಿ ಹ್ಯನೀಶ್ವರಃ |
ವಿನಶ್ಯತ್ಯಾಚರನ್ಮೌಢ್ಯಾದ್ ಯಥಾರುದ್ರೋಬ್ಧಿ ವಿಷಮ್ ||
ಈಶ್ವರಾಣಾ ವಚಃ ಸತ್ಯಂ ತಥೈವಾಚರಿತಂ ಕ್ವಚಿತ್ |
ತೇಷಾಂ ಯಶ್ಸ್ವವಚೋಯುಕ್ತಂ ಬುದ್ಧಿಮಾಂಸ್ತತ್ಸಮಾಚರೇತ್ ||
ಮನುಷ್ಯನು ಭಗವಂತನ ಮತ್ತು ಅವನಿಂದ ಅಧಿಕಾರ ಪಡೆದ ಸೇವಕರ ಉಪದೇಶಗಳನ್ನು ಅನುಸರಿಸಬೇಕು. ಅಷ್ಟೇ. ಅವರ ಉಪದೇಶಗಳು ನಮಗೆ ಕಲ್ಯಾಣಕರ. ಬುದ್ಧಿವಂತನಾದ ಮನುಷ್ಯನು ಅವರು ಉಪದೇಶಿಸಿದಂತೆ ಆಚರಿಸುತ್ತಾನೆ. ಆದರೆ ಅವರ ಕಾರ್ಯಗಳನ್ನು ಅನುಕರಿಸದಂತೆ ಎಚ್ಚರಿಕೆ ವಹಿಸಬೇಕು. ಶಿವನನ್ನು ಅನುಕರಿಸಿ ವಿಷದ ಸಮುದ್ರವನ್ನು ಕುಡಿಯಲು ಪ್ರಯತ್ನಿಸಬಾರದು.
ಈಶ್ವರರ, ಎಂದರೆ ವಾಸ್ತವಾಗಿ ಸೂರ್ಯಚಂದ್ರರ ಚಲನೆಗಳನ್ನು ನಿಯಂತ್ರಿಸಬಲ್ಲವರ ಸ್ಥಾನವನ್ನು ಉಚ್ಚ ಎಂದು ನಾವು ಯಾವಾಗಲೂ ಭಾವಿಸಬೇಕು. ಇಂತಹ ಶಕ್ತಿಇಲ್ಲದೆ, ಅತ್ಯಂತ ಶಕ್ತರಾದ ಈಶ್ವರರನ್ನು ಅನುಕರಿಸಲು ಸಾಧ್ಯವಿಲ್ಲ. ಶಿವನು ವಿಷದ ಸಾಗರವನ್ನು ಕುಡಿದ. ಆದರೆ ಸಾಮಾನ್ಯ ಮನುಷ್ಯನು ಅಂತಹ ವಿಷಯದ ಹನಿಯನ್ನು ಕುಡಿಯಲು ಪ್ರಯತ್ನಿಸಿದರೂ ಸತ್ತುಹೋಗುತ್ತಾನೆ. ಗಾಂಜಾ ಮತ್ತು ಅಂತಹ ಮಾದಕ ವಸ್ತುಗಳನ್ನು ಸೇವಿಸಲು ಬಯಸುವ ಹುಸಿ ಶಿವಭಕ್ತರು ಅನೇಕರಿದ್ದಾರೆ. ಶಿವನ ಕಾರ್ಯಗಳನ್ನು ಹೀಗೆ ಅನುಕರಿಸಿ ತಾವು ಸಾವನ್ನು ಹತ್ತಿರಕ್ಕೆ ಕರೆಯುತ್ತಿದ್ದೇವೆ. ಎನ್ನುವುದನ್ನು ಅವರು ಮರೆಯುತ್ತಾರೆ.
ಇದೇ ರೀತಿ, ಭಗವಂತನ ರಾಸಲೀಲೆಯನ್ನು ಅನುಕರಿಸಬಯಸುವ ಶ್ರೀಕೃಷ್ಣನ ಹುಸಿ ಭಕ್ತರಿದ್ದಾರೆ. ಅವರು ತಾವು ಗೋವರ್ಧನಗಿರಿಯನ್ನು ಎತ್ತಲಾರೆವು ಎನ್ನುವುದನ್ನು ಮರೆಯುತ್ತಾರೆ. ಆದುದರಿಂದ ಉತ್ತಮ ಮಾರ್ಗವೆಂದರೆ ಬಲಶಾಲಿಗಳನ್ನು ಅನುಕರಿಸಲು ಹೋಗದೆ ಅವರ ಉಪದೇಶವನ್ನಷ್ಟೇ ಅನುಸರಿಸುವುದು. ಅವರ ಅರ್ಹತೆಯಿಲ್ಲದೆ ಅವರ ಸ್ಥಾನಗಳನ್ನು ಆಕ್ರಮಿಸಲೂ ಪ್ರಯತ್ನಿಸಬಾರದು. ಪರಮ ಪ್ರಭುವಿನ ಶಕ್ತಿ ಇಲ್ಲದ ದೇವರ ಅವತಾರಗಳು ಎಷ್ಟೋ ಇವೆ.