ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಕಲ್ಪನಾತೀತ ಶಕ್ತಿಯಿಂದ ಎಲ್ಲವೂ ಸಾಧ್ಯವಾಗುತ್ತೆ; ಸಾರಾಂಶ ಹೀಗಿದೆ

Bhagavad Gita: ಭಗವಂತನ ಕಲ್ಪನಾತೀತ ಶಕ್ತಿಯಿಂದ ಎಲ್ಲವೂ ಸಾಧ್ಯವಾಗುತ್ತೆ; ಸಾರಾಂಶ ಹೀಗಿದೆ

Bhagavad Gita Updesh: ಭಗವಂತನ ಕಲ್ಪನಾತೀತ ಶಕ್ತಿಯಿಂದ ಎಲ್ಲವೂ ಸಾಧ್ಯವಾಗುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 10 ರಿಂದ 13ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 10, 11

ಅನೇಕವಕ್ತ್ರನಯನಮನೇಕಾದ್‌ಬುತದರ್ಶನಮ್|

ಅನೇಕದಿವ್ಯಾಭರಣಂ ದಿವ್ಯಾನೇಕೋದ್ಯತಾಯುಧಮ್ ||10||

ದಿವ್ಯಮಾಲ್ಯಾಮ್ಬರಧರಂ ದಿವ್ಯಗಂಧಾನುಲೇಪನಮ್ |

ಸರ್ವಾಶ್ಚರ್ಯಮಯಂ ದೇವಮನನ್ತಂ ವಿಶ್ವತೋಮುಖಮ್ ||11||

ಅನುವಾದ: ಅರ್ಜುನನು ಆ ವಿಶ್ವರೂಪದಲ್ಲಿ ಅಸಂಖ್ಯಾತವಾದ ಬಾಯಿಗಳನ್ನೂ, ಅಸಂಖ್ಯಾತವಾದ ಕಣ್ಣುಗಳನ್ನೂ, ಅಸಂಖ್ಯಾತವಾದ ಅದ್ಭುತ ದರ್ಶನಗಳನ್ನೂ ಕಂಡನು. ಆತನು ದಿವ್ಯಮಾಲೆಗಳನ್ನೂ ವಸ್ತ್ರಗಳನ್ನೂ ಧರಿಸಿದ್ದನು. ಹಲವು ದಿವ್ಯ ಗಂಧಗಳನ್ನೂ ಲೇಪಿಸಿಕೊಂಡಿದ್ದನು. ಎಲ್ಲವೂ ಆಶ್ಚರ್ಯಮಯವಾಗಿದ್ದಿತು, ಉಜ್ವಲವಾಗಿದ್ದಿತು. ಅನಂತವಾಗಿತ್ತು, ವಿಶ್ವತೋ ಮುಖವಾಗಿತ್ತು.

ಭಾವಾರ್ಥ: ಈ ಎರಡು ಶ್ಲೋಕಗಳಲ್ಲಿ ಅನೇಕ ಎನ್ನುವ ಪದವನ್ನು ಮತ್ತೆಮತ್ತೆ ಬಳಸಿರುವುದು ಅರ್ಜುನನು ನೋಡುತ್ತಿದ್ದ ಕೈಗಳು, ಬಾಯಿಗಳು, ಕಾಲುಗಳು ಮತ್ತು ಇತರ ಅಭಿವ್ಯಕ್ತಿಗಳ ಸಂಖ್ಯೆಗೆ ಮಿತಿಯೇ ಇರಲಿಲ್ಲ ಎನ್ನುವುದನ್ನು ತೋರಿಸುತ್ತದೆ. ಒಂದು ಸ್ಥಳದಲ್ಲಿ ಕುಳಿತು ಅವೆಲ್ಲವನ್ನೂ ನೋಡಲು ಅರ್ಜುನನಿಗೆ ಸಾಧ್ಯವಾಯಿತು. ಇದು ಕೃಷ್ಣನ ಕಲ್ಪನಾತೀತ ಶಕ್ತಿಯಿಂದ ಸಾಧ್ಯವಾಯಿತು (Bhagavad Gita Updesh in Kannada).

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 12

ದಿವಿ ಸೂರ್ಯಸಹಸ್ರಸ್ಯ ಭವೇದ್ಯುಗಪದುತ್ಥಿತಾ |

ಯದಿ ಭಾಃ ಸದೃಶೀ ಸಾ ಸ್ಯಾದ್ ಭಾಸಸ್ತಸ್ಯ ಮಹಾತ್ಮನಃ ||12||

ಅನುವಾದ: ಲಕ್ಷಾಂತರ ಸೂರ್ಯರು ಒಟ್ಟಿಗೆ ಆಕಾಶದಲ್ಲಿ ಉದಿಸಿದ್ದರೆ ಅವರ ಪ್ರಭೆಯು ಆ ವಿಶ್ವರೂಪದಲ್ಲಿದ್ದ ಪರಮ ಪುರುಷನ ತೇಜಸ್ಸನ್ನು ಹೋಲಬಹುದಾಗಿತ್ತು.

ಭಾವಾರ್ಥ: ಅರ್ಜುನನು ಕಂಡದ್ದು ವರ್ಣನೆಗೆ ನಿಲುಕದ್ದು. ಆದರೂ ಸಂಜಯನು ಧೃತರಾಷ್ಟ್ರನಿಗೆ ಆ ಮಹಾರೂಪದ ಒಂದು ಮಾನಸಿಕ ಚಿತ್ರವನ್ನು ಕೊಡಲು ಪ್ರಯತ್ನಿಸುತ್ತಾನೆ. ಸಂಜಯನಾಗಲೀ ಧೃತರಾಷ್ಟನಾಗಲೀ ಅಲ್ಲಿರಲಿಲ್ಲ. ಆದರೆ ವ್ಯಾಸರ ಕೃಪೆಯಿಂದ ಸಂಜಯನಿಗೆ ಅಲ್ಲಿ ನಡೆದದ್ದಲ್ಲವನ್ನೂ ಕಾಣಲು ಸಾಧ್ಯವಾಯಿತು. ಹೀಗೆ ಅವನು ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದ ಮಟ್ಟಿಗೂ ಆ ಸನ್ನಿವೇಶವನ್ನು ಕಲ್ಪಿಸಿಕೊಳ್ಳಬಹುದಾದ ಒಂದು ಘಟನೆಗೆ (ಎಂದರೆ ಸಹಸ್ರಾರು ಸೂರ್ಯರಿಗೆ) ಹೋಲಿಸುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 13

ತತ್ರೈಕಸ್ಥಂ ಜಗತ್ ಕೃತ್ಸ್ನಂ ಪ್ರವಿಭಕ್ತಮನೇಕಧಾ |

ಅಪಶ್ಯದ್ದೇವದೇವಸ್ಯ ಶರೀರೇ ಪಾಣ್ಡವಸ್ತದಾ ||13||

ಅನುವಾದ: ಪ್ರಭುವಿನ ವಿಶ್ವರೂಪದಲ್ಲಿ ಸಹಸ್ರ ಸಹಸ್ರ ಭಾಗಗಳಿದ್ದರೂ ವಿಶ್ವದ ಅಮಿತ ವಿಸ್ತರಣಗಳು ಒಂದೇ ಸ್ಥಳದಲ್ಲಿರುವುದನ್ನು ಅರ್ಜುನನು ನೋಡಿದನು.

ಭಾವಾರ್ಥ: ತತ್ರ (ಅಲ್ಲಿ) ಎನ್ನುವ ಪದವು ಬಹು ಮುಖ್ಯವಾದದ್ದು. ಅರ್ಜುನನು ವಿಶ್ವರೂಪವನ್ನು ನೋಡಿದಾಗ ಅರ್ಜುನನೂ ಕೃಷ್ಣನೂ ರಥದಲ್ಲಿ ಕುಳಿತಿದ್ದರು ಎನ್ನುವುದನ್ನು ಇದು ತೋರಿಸುತ್ತದೆ. ರಣರಂಗದಲ್ಲಿದ್ದ ಇತರರಿಗೆ ಈ ರೂಪವು ಕಾಣಿಸಲಿಲ್ಲ. ಏಕೆಂದರೆ ಕೃಷ್ಣನು ಈ ದೃಷ್ಟಿಯನ್ನು ಅರ್ಜುನನಿಗೆ ಮಾತ್ರ ಕೊಟ್ಟನು. ಅರ್ಜುನನು ಕೃಷ್ಣನ ದೇಹದಲ್ಲಿ ಸಹಸ್ರಾರು ಲೋಕಗಳನ್ನು ಕಂಡನು. ವೇದಗಳ ಪವಿತ್ರ ಗ್ರಂಥಗಳಿಂದ ನಾವು ತಿಳಿಯುವಂತೆ ಹಲವಾರು ವಿಶ್ವಗಳೂ ಹಲವಾರು ಲೋಕಗಳೂ ಇವೆ. ಅವುಗಳಲ್ಲಿ ಕೆಲವನ್ನು ಮಣ್ಣಿನಿಂದ ಮಾಡಿದೆ, ಕೆಲವನ್ನು ಚಿನ್ನದಿಂದ ಮಾಡಿದೆ. ಕೆಲವನ್ನು ಆಭರಣದಿಂದ ಮಾಡಿದೆ. ಕೆಲವು ಬಹು ದೊಡ್ಡವು. ಕೆಲವು ಅಷ್ಟು ದೊಡ್ಡವಲ್ಲ ಇತ್ಯಾದಿ. ತನ್ನ ರಥದಲ್ಲಿ ಕುಳಿತು ಅರ್ಜುನನು ಇವೆಲ್ಲವನ್ನೂ ಕಂಡನು. ಆದರೆ ಅರ್ಜುನ ಮತ್ತು ಕೃಷ್ಣರ ನಡುವೆ ಏನಾಗುತ್ತಿತ್ತು ಎಂದು ಯಾರಿಗೂ ತಿಳಿಯಲಿಲ್ಲ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.