Bhagavad Gita: ಇದೇ ಕಾರಣಕ್ಕೆ ಭಕ್ತನಿಗೆ ವಿಶ್ವರೂಪವನ್ನು ನೋಡುವುದರಲ್ಲಿ ಆಸಕ್ತಿಯಿಲ್ಲ; ಗೀತೆಯ ಅರ್ಥ ತಿಳಿಯಿರಿ
Bhagavad Gita: ಇದೇ ಕಾರಣಕ್ಕೆ ಭಕ್ತನಿಗೆ ವಿಶ್ವರೂಪವನ್ನು ನೋಡುವುದರಲ್ಲಿ ಆಸಕ್ತಿಯಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 49ನೇ ಶ್ಲೋಕದಲ್ಲಿ ಓದಿ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 49
ಮಾ ತೇ ವ್ಯಥಾ ಮಾ ಚ ವಿಮೂಢಭಾವೋ
ದೃಷ್ಟ್ವಾ ರೂಪಂ ಘೋರಮೀದೃಙ್ ಮಮೇದಮ್ |
ವ್ಯಪೇತಭೀತಃ ಪ್ರೀತಮನಾಃ ಪುನಸ್ತ್ವಮ್
ತದೇವ ಮೇ ರೂಪಮಿದಂ ಪ್ರಪಶ್ಯ ||49||
ಅನುವಾದ: ನನ್ನ ಈ ಘೋರ ರೂಪವನ್ನು ನೋಡಿ ನೀನು ತಳಮಳಗೊಂಡಿದ್ದೀಯೆ ಮತ್ತು ದಿಗ್ಭ್ರಾಂತನಾಗಿದ್ದೀಯೆ. ಈಗ ಇದು ಮುಕ್ತಾಯವಾಗಲಿ. ನನ್ನ ಭಕ್ತನೆ, ಮತ್ತೆ ಎಲ್ಲ ಅಶಾಂತಿಯಿಂದ ಮುಕ್ತನಾಗು. ಶಾಂತವಾದ ಮನಸ್ಸಿನಿಂದ ಈಗ ನೀನು ಅಪೇಕ್ಷಿಸಿದ ರೂಪವನ್ನು ಕಾಣಬಹುದು.
ಭಾವಾರ್ಥ: ಭಗವದ್ಗೀತೆಯ ಪ್ರಾರಂಭದಲ್ಲಿ ತನ್ನ ಪೂಜ್ಯ ತಾತ ಮತ್ತು ಗುರುಗಳು ಭೀಷ್ಮ, ದ್ರೋಣರನ್ನು ಕೊಲ್ಲುವ ವಿಷಯದಲ್ಲಿ ಅರ್ಜುನನಿಗೆ ಚಿಂತೆಯುಂಟಾಗಿತ್ತು. ಆದರೆ ಕೃಷ್ಣನು ತನ್ನ ತಾತನನ್ನು ಕೊಲ್ಲುವ ವಿಷಯದಲ್ಲಿ ಅವನು ಭಯಪಡಬೇಕಾಗಿಲ್ಲ ಎಂದನು. ಧೃತರಾಷ್ಟ್ರನ ಮಕ್ಕಳು ಕುರುಸಭೆಯಲ್ಲಿ ದ್ರೌಪದಿಯ ಸೀರೆಯನ್ನು ಸೆಳೆದಾಗ ಭೀಷ್ಮರೂ ದ್ರೋಣರೂ ಮೌನವಾಗಿದ್ದರು. ಹೀಗೆ ಕರ್ತವ್ಯವನ್ನು ಅಲಕ್ಷ್ಯಮಾಡಿದ್ದಕ್ಕಾಗಿ ಅವರನ್ನು ಕೊಲ್ಲಬೇಕು. ತಮ್ಮ ಅನ್ಯಾಯದ ಕಾರ್ಯದಿಂದ ಅವನು ಆಗಲೇ ಸತ್ತಿದ್ದಾರೆ ಎನ್ನುವುದನ್ನು ತೋರಿಸುವುದಕ್ಕಾಗಿಯೇ ಕೃಷ್ಣನು ಅರ್ಜುನನಿಗೆ ತನ್ನ ವಿಶ್ವರೂಪವನ್ನು ತೋರಿಸಿದನು.
ಭಕ್ತರು ಯಾವಾಗಲೂ ಶಾಂತರು ಮತ್ತು ಇಂತಹ ಘೋರ ಕಾರ್ಯಗಳನ್ನು ಮಾಡಲಾರರು. ಆದುದರಿಂದ ಅರ್ಜುನನಿಗೆ ಈ ದೃಶ್ಯವನ್ನು ತೋರಿಸಲಾಯಿತು. ವಿಶ್ವರೂಪದ ಪ್ರಕಟಣೆಯ ಉದ್ದೇಶವನ್ನು ತೋರಿಸಿದ್ದಾಯಿತು. ಈಗ ಅರ್ಜುನನು ಚತುರ್ಭಜ ಸ್ವರೂಪವನ್ನು ನೋಡಲು ಬಯಸಿದನು ಮತ್ತು ಕೃಷ್ಣನು ಅದನ್ನು ತೋರಿಸಿದನು. ಭಕ್ತನಿಗೆ ವಿಶ್ವರೂಪವನ್ನು ನೋಡುವುದರಲ್ಲಿ ಆಸಕ್ತಿಯಿಲ್ಲ. ಏಕೆಂದರೆ ಅದು ಪ್ರೀತಿಯ ಭಾವನೆಗಳನ್ನು ಪರಸ್ಪರ ತೋರಿಸಲು ಅವಕಾಶ ನೀಡುವುದಿಲ್ಲ. ಭಕ್ತನು ತನ್ನ ಭಕ್ತಿಭಾವಗಳನ್ನು ಅರ್ಪಿಸಲು ಬಯಸುತ್ತಾನೆ. ಇಲ್ಲವೇ ದೇವೋತ್ತಮ ಪರಮ ಪುರುಷನ ಪ್ರೇಮ ಪೂರ್ವಕ ಸೇವೆಯಲ್ಲಿ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವಂತೆ ಕೃಷ್ಣನ ಎರಡು ಕೈಗಳ ರೂಪವನ್ನು ನೋಡಲು ಬಯಸುತ್ತಾನೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
