Bhagavad Gita: ಭಗವಂತನಲ್ಲಿ ತೊಡಗಿಸಿಕೊಳ್ಳದ ಮನುಷ್ಯ ಮನಸ್ಸನ್ನ ಹತೋಟಿಯಲ್ಲಿಡಲಾರ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತನಲ್ಲಿ ತೊಡಗಿಸಿಕೊಳ್ಳದ ಮನುಷ್ಯ ಮನಸ್ಸನ್ನ ಹತೋಟಿಯಲ್ಲಿಡಲಾರ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.
ಅಧ್ಯಾಯ 6 - ಧ್ಯಾನ ಯೋಗ: ಶ್ಲೋಕ - 36
ಅಸಂಯತಾತ್ಮನಾ ಯೋಗೋ ದುಷ್ಪ್ರಪ ಇತಿ ಮೇ ಮತಿಃ |
ವಶ್ಯಾತ್ಮನಾ ತು ಯತತಾ ಶಕ್ಯೋವಾಪ್ತುಮುಪಾಯತಃ ||36||
ಅನುವಾದ: ಮನಸ್ಸಿಗೆ ಕಡಿವಾಣ ಹಾಕಲಾರದವನಿಗೆ ಆತ್ಮಸಾಕ್ಷಾತ್ಕಾರವು ಕಷ್ಟ. ಆದರೆ ಯಾರ ಮನಸ್ಸು ನಿಯಂತ್ರಣದಲ್ಲಿರುತ್ತದೋ ಮತ್ತು ಯಾರು ಯೋಗ್ಯವಾದ ರೀತಿಗಳಲ್ಲಿ ಪ್ರಯತ್ನಿಸುವರೋ ಅವರಿಗೆ ಯಶಸ್ಸು ಖಂಡಿತ. ಇದು ನನ್ನ ಅಭಿಪ್ರಾಯ.
ಭಾವಾರ್ಥ: ಯಾರು ಐಹಿಕ ಕೆಲಸಗಳಿಂದ ಮನಸ್ಸನ್ನು ದೂರ ಮಾಡಲು ಸರಿಯಾದ ರೀತಿಯನ್ನು ಅನುಸರಿಸುವುದಿಲ್ಲವೋ ಆತನು ಆತ್ಮಸಾಕ್ಷಾತ್ಕಾರದಲ್ಲಿ ಯಶಸ್ವಿಯಾಗಲಾರ ಎಂದು ದೇವೋತ್ತಮ ಪರಮ ಪುರುಷನು ಹೇಳುತ್ತಾನೆ. ಮನಸ್ಸನ್ನು ಐಹಿಕ ಸುಖದಲ್ಲಿ ತೊಡಗಿಸಿ ಯೋಗಾಭ್ಯಾಸ ಮಾಡಲು ಪ್ರಯತ್ನಿಸುವುದೆಂದರೆ ಬೆಂಕಿಯ ಮೇಲೆ ನೀರನ್ನು ಹೊಯ್ಯುತ್ತ ಅದನ್ನು ಹೊತ್ತಿಸಲು ಪ್ರಯತ್ನಿಸಿದಂತೆ. ಮನಸ್ಸಿನ ಸಂಯವಿಲ್ಲದ ಯೋಗಾಭ್ಯಾಸವೆಂದರೆ ವ್ಯರ್ಥ ಕಾಲಹರಣ.
ಯೋಗದ ಇಂತಹ ಹೊರತೋರಿಕೆಯು ಪ್ರಾಪಂಚಿಕವಾಗಿ ಲಾಭದಾಯಕವಾಗಿರಬಹುದು. ಆದರೆ ಆತ್ಮಸಾಕ್ಷಾತ್ಕಾರದ ಮಟ್ಟಿಗೆ ಅದು ನಿಷ್ಟ್ರಯೋಜಕ. ಆದುದರಿಂದ ಭಗವಂತನ ಆಧ್ಯಾತ್ಮಿಕ ಪ್ರೀತಿಪೂರ್ವಕ ಸೇವೆಯಲ್ಲಿ ಮನಸ್ಸನ್ನು ನಿರಂತರವಾಗಿ ತೊಡಗಿಸಿ ಅದನ್ನು ನಿಯಂತ್ರಿಸಬೇಕು. ಕೃಷ್ಣಪ್ರಜ್ಞೆಯಲ್ಲಿ ತೊಡಗದಿರುವ ಮನುಷ್ಯನು ಮನಸ್ಸನ್ನು ಒಂದೇ ಸಮನೆ ಹತೋಟಿಯಲ್ಲಿಡಲಾರ. ಕೃಷ್ಣಪ್ರಜ್ಞೆ ಇರುವ ಮನುಷ್ಯನು ವಿಶೇಷ ಪ್ರಯತ್ನವಿಲ್ಲದೆ ಯೋಗಾಭ್ಯಾಸದ ಪ್ರಯೋಜನವನ್ನು ಪಡೆದುಕೊಳ್ಳುತ್ತಾನೆ. ಆದರೆ ಕೃಷ್ಣಪ್ರಜ್ಞೆಯಿಲ್ಲದೆ ಯೋಗಾಭ್ಯಾಸಿಯು ಯಶಸ್ವಿಯಾಗಲಾರ.
ಅಧ್ಯಾಯ 6 - ಧ್ಯಾನ ಯೋಗ: ಶ್ಲೋಕ - 37
ಅರ್ಜುನ ಉವಾಚ
ಅಯತಿಃ ಶ್ರದ್ಧಯೋಪೇತೋ ಯೋಗಾಚ್ಚಲಿತಮಾನಸಃ |
ಅಪ್ರಾಪ್ಯ ಯೋಗಸಂಸಿದ್ಧಿಂ ಕಾಂ ಗತಿಂ ಕೃಷ್ಣ ಗಚ್ಛತಿ ||37||
ಅನುವಾದ: ಅರ್ಜುನನು ಹೀಗೆಂದನು - ಕೃಷ್ಣನೇ, ಪ್ರಾರಂಭದಲ್ಲಿ
ಅನುವಾದ: ಅರ್ಜುನನು ಹೀಗೆಂದನು - ಕೃಷ್ಣನೇ, ಪ್ರಾರಂಭದಲ್ಲಿ ಶ್ರದ್ಧೆಯಿಂದ ಆತ್ಮಸಾಕ್ಷಾತ್ಕಾರದ ಸಾಧನೆಯನ್ನು ಸ್ವೀಕರಿಸಿ ಅನಂತರ ಪ್ರಾಪಂಚಿಕ ಮಮನೋಧರ್ಮದಿಂದ ಪ್ರಯತ್ನವನ್ನು ನಿಲ್ಲಿಸಿ ಯೋಗ ಸಂಸಿದ್ಧಿಯನ್ನು ಪಡೆಯದಿರುವ ಮನುಷ್ಯನ ಗತಿಯೇನು?
ಭಾವಾರ್ಥ: ಆತ್ಮಸಾಕ್ಷಾತ್ಕಾರದ ಅಥವಾ ಯೋಗದ ಮಾರ್ಗವನ್ನು ಭಗವದ್ಗೀತೆಯಲ್ಲಿ ಹೇಳಿದೆ. ಜೀವಿಯು ಈ ಜಡದೇಹವಲ್ಲ, ಅವನು ದೇಹದಿಂದ ಬೇರೆಯಾಗಿದ್ದಾನೆ. ಶಾಶ್ವತ ಜೀವನ, ಆನಂದ ಮತ್ತು ಜ್ಞಾನದಲ್ಲಿರುವ ಅವನ ಸುಖವು ಅಲೌಕಿಕವಾದುದು. ಅದು ಶರೀರ ಮತ್ತು ಮನಸ್ಸಿಗೆ ಅತೀತವಾದುದಾಗಿದೆ. ಈ ಅರಿವೇ ಆತ್ಮಸಾಕ್ಷಾತ್ಕಾರದ ಮೂಲತತ್ವವಾಗಿದೆ. ಆತ್ಮಸಾಕ್ಷಾತ್ಕಾರವನ್ನು ಜ್ಞಾನಮಾರ್ಗದಿಂದಲೂ ಅಷ್ಟಾಂಗ ಯೋಗ ಪದ್ಧತಿಯ ಅಭ್ಯಾಸದಿಂದಲೂ ಅಥವಾ ಭಕ್ತಿಯೋಗದಿಂದಲೂ ಸಾಧಿಸಲು ಜನರು ಪ್ರಯತ್ನಿಸುತ್ತಾರೆ. ಈ ಒಂದೊಂದು ಪ್ರಕ್ರಿಯೆಯಲ್ಲಿಯೂ ಮನುಷ್ಯನು ಹಲವು ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು.
ಜೀವಿಯ ಸಹಜ ಸ್ವರೂಪ, ಭಗವಂತನೊಡನೆ ಅವನ ಸಂಬಂಧ ಮತ್ತು ಕಳೆದುಹೋದ ಕೊಂಡಿಯನ್ನು ಮತ್ತೆ ಪಡೆದುಕೊಂಡು ಕೃಷ್ಣಪ್ರಜ್ಞೆಯ ಅತ್ಯುನ್ನತ ಹಂತವನ್ನು ಸಾಧಿಸಲು ಅಗತ್ಯವಾದ ಕರ್ಮಗಳು - ಇವನ್ನು ಅರಿಯಬೇಕು. ಮೇಲೆ ಹೇಳಿದ ಮೂರು ರೀತಿಗಳಲ್ಲಿ ಯಾವುದನ್ನು ಅನುಸರಿಸಿದರೂ ಶೀಘ್ರವಾಗಿಯೋ - ತಡವಾಗಿಯೋ ಅಂತೂ ಪರಮ ಗುರಿಯನ್ನು ಮುಟ್ಟುವುದು ಖಂಡಿತ. ಇದನ್ನು ಭಗವಂತನು ಎರಡನೆಯ ಅಧ್ಯಾಯದಲ್ಲಿ ಹೇಳಿದ್ದಾನೆ. ಅಧ್ಯಾತ್ಮಿಕ ಮಾರ್ಗದಲ್ಲಿ ಸ್ವಲ್ಪ ಪ್ರಯತ್ನ ಪಟ್ಟರೂ ಬಿಡುಗಡೆಯ ಹೆಚ್ಚಿನ ಭರವಸೆಯುಂಟು. ಈ ಮೂರು ವಿಧಾನಗಳಲ್ಲಿ ಈ ಯುಗಕ್ಕೆ ಭಕ್ತಿಯೋಗವು ವಿಶೇಷವಾಗಿ ಸೂಕ್ತವಾದದ್ದು. ಏಕೆಂದರೆ ಭಗವಂತನ ಸಾಕ್ಷಾತ್ಕಾರಕ್ಕೆ ಅದು ಅತ್ಯಂತ ನೇರವಾದ ಮಾರ್ಗ. ಇದನ್ನು ಇನ್ನೂ ಖಚಿತಮಾಡಿಕೊಳ್ಳಲು ಅರ್ಜುನನು ಕೃಷ್ಣನನ್ನು ಅವನ ಹಿಂದಿನ ಮಾತನ್ನು ದೃಢಪಡಿಸುವಂತೆ ಕೇಳುತ್ತಾನೆ.
ಒಬ್ಬ ಮನುಷ್ಯ ಆತ್ಮಸಾಕ್ಷಾತ್ಕಾರದ ಮಾರ್ಗವನ್ನು ಮನಃಪೂರ್ತಿಯಾಗಿ ಒಪ್ಪಿಕೊಳ್ಳಬಹುದು. ಆದರೆ ಈಯುಗದಲ್ಲಿ ಜ್ಞಾನವನ್ನು ಬೆಳೆಸಿಕೊಳ್ಳವುದು ಮತ್ತು ಅಷ್ಟಾಂಗ ಯೋಗ ಪದ್ಧತಿಯ ಅಭ್ಯಾಸವು ಬಹು ಕಷ್ಟ. ಆದುದರಿಂದ ಸತತ ಪರಿಶ್ರಮ ಪಟ್ಟರೂ ಅನೇಕ ಕಾರಣಗಳಿಂದ ಮನುಷ್ಯನು ವಿಫಲನಾಗಬಹುದು. ಮೊಟ್ಟಮೊದಲನೆಯದಾಗಿ ಈ ಪ್ರಕ್ರಿಯೆಯನ್ನು ಅನುಸರಿಸುವುದರಲ್ಲಿ ಮನಸ್ಸು ಸಾಕಷ್ಟು ತೊಡಗದೆ ಇರಬಹುದು. ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯುವುದೆಂದರೆ ಸ್ವಲ್ಪ ಹೆಚ್ಚೂ ಕಡಿಮೆ ಮಾಯಾಶಕ್ತಿಯೊಡನೆ ಯುದ್ಧ ಪ್ರಾರಂಭಿಸಿದಂತೆ.
ಮನುಷ್ಯನು ಮಾಯೆಯ ಶಕ್ತಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗಲೆಲ್ಲ ಅವಳು ಹಲವು ಆಮಿಷಗಳನ್ನು ಒಡ್ಡಿ ಸಾಧಕನನ್ನು ಸೋಲಿಸಲು ಪ್ರಯತ್ನಿಸುತ್ತಾನೆ. ಐಹಿಕಶಕ್ತಿಯ ಗುಣಗಳಿಂದ ಬದ್ಧವಾದ ಆತ್ಮವು ಆಗಲೇ ಅಧ್ಯಾತ್ಮಿಕ ಶಿಸ್ತುಗಳನ್ನು ಆಚರಿಸುವಾಗಲೂ ಮತ್ತೆ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇದ್ದೇ ಇದೆ. ಇದನ್ನು ಯೋಗಾಚ್ಛಲಿತ ಮಾನಸಃ ಎನ್ನುತ್ತಾರೆ. ಹೀಗೆಂದರೆ ಅಧ್ಯಾತ್ಮಿಕ ಮಾರ್ಗದಿಂದ ದೂರವಾಗುವುದು. ಆತ್ಮಸಾಕ್ಷಾತ್ಕಾರದ ಮಾರ್ಗದಿಂದ ಬೇರೆಯಾದರೆ ಪರಿಣಾಮವೇನು ಎಂದು ತಿಳಿಯಲು ಅರ್ಜುನನು ಕುತೂಹಲಿಯಾಗಿದ್ದಾನೆ.