Bhagavad Gita: ಈ ಮಾರ್ಗದಲ್ಲಿ ಅತ್ಯಂತ ಬಡವನೂ ಶ್ರೀಕೃಷ್ಣನ ಸೇವೆಯಲ್ಲಿ ನಿರತನಾಗಬಹುದು; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಈ ಮಾರ್ಗದಲ್ಲಿ ಅತ್ಯಂತ ಬಡವನೂ ಶ್ರೀಕೃಷ್ಣನ ಸೇವೆಯಲ್ಲಿ ನಿರತನಾಗಬಹುದು ಎಂಬುದರ ಅರ್ಥವನ್ನು ಭಗವದ್ಗೀತೆಯ 11 ನೇ ಅಧ್ಯಾಯದ 55 ನೇ ಶ್ಲೋಕದ ಮುಂದುವರಿದ ಭಾಗದಲ್ಲಿ ತಿಳಿಯಿರಿ
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 55
ಮತ್ಕರ್ಮಕೃನ್ಮತ್ಪರಮೋ ಮದ್ಭಕ್ತಃ ಸನ್ಗವರ್ಜಿತಃ |
ನಿರ್ವೈರಃ ಸರ್ವಭೂತೇಷು ಯಃ ಸ ಮಾಮೇತಿ ಪಾಣ್ಡವ ||55||
ಮನುಷ್ಯನು ತನ್ನ ಕೆಲಸದ ಫಲದಲ್ಲಿ ಆಸಕ್ತಿಯನ್ನಿಟ್ಟುಕೊಳ್ಳಬಾರದು. ಫಲವನ್ನು ಕೃಷ್ಣನಿಗೆ ಬಿಡಬೇಕು. ಕೃಷ್ಣನಿಗೆ ಅರ್ಪಿಸಿದ್ದರಲ್ಲಿ ಉಳಿದದ್ದನ್ನು ಪ್ರಸಾದವೆಂದು ಸ್ವೀಕರಿಸಬೇಕು. ಯಾರಾದರೂ ಕೃಷ್ಣನಿಗಾಗಿ ಬಹು ದೊಡ್ಡ ಕಟ್ಟಡವನ್ನು ಕಟ್ಟಿ, ಅಲ್ಲಿ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದರೆ, ಆತನು ಅಲ್ಲಿ ವಾಸಮಾಡಬಾರದು ಎಂದು ನಿಷೇಧವಿಲ್ಲ. ಆದರೆ ಕಟ್ಟಡದ ಯಜಮಾನನು ಕೃಷ್ಣ ಎಂದು ತಿಳಿದಿರಬೇಕು. ಇದಕ್ಕೆ ಕೃಷ್ಣಪ್ರಜ್ಞೆ ಎಂದು ಹೆಸರು. ಕೃಷ್ಣನಿಗಾಗಿ ದೇವಾಲಯವನ್ನು ನಿರ್ಮಿಸಲಾರದವನು ಕೃಷ್ಣನ ದೇವಾಲಯವನ್ನು ಸ್ವಚ್ಛಗೊಳಿಸಬಹುದು. ಇದೂ ಕೃಷ್ಣಕರ್ಮ (Bhagavad Gita Updesh in Kannada).
ತೋಟವನ್ನು ಬೆಳೆಸಬಹುದು. ಭೂಮಿ ಇರುವವನು - ಭಾರತದಲ್ಲಿ ಬಡವನಿಗೂ ಒಂದಿಷ್ಟು ಭೂಮಿ ಇರುತ್ತದೆ - ಅದನ್ನು ಕೃಷ್ಣನಿಗಾಗಿ ಬಳಸಿ ಹೂವುಗಳನ್ನು ಬೆಳೆದು ಅವುಗಳನ್ನು ಕೃಷ್ಣನಿಗೆ ಅರ್ಪಿಸಬಹುದು. ತುಳಸಿ ಗಿಡಗಳನ್ನು ಬೆಳೆಸಬಹುದು, ಏಕೆಂದರೆ ತುಳಸಿ ಎಲೆಗಳು ಬಹು ಮುಖ್ಯ. ಇದನ್ನು ಕೃಷ್ಣನು ಭಗವದ್ಗೀತೆಯಲ್ಲಿ ಸಲಹೆ ಮಾಡಿದ್ದಾನೆ. ಪತ್ರಮ್ ಪುಷ್ಪಮ್ ಫಲಮ್ ತೋಯಮ್. ಕೃಷ್ಣನು ಒಂದು ಎಲೆಯನ್ನಾಗಲಿ, ಹೂವನ್ನಾಗಲಿ, ಒಂದಿಷ್ಟು ನೀರನ್ನಾಗಲಿ ತನಗೆ ಅರ್ಪಿಸಬೇಕೆಂದು ಬಯಸುತ್ತಾನೆ. ಇಂತಹ ಸಮರ್ಪಣೆಯಿಂದ ಅವನು ತೃಪ್ತನಾಗುತ್ತಾನೆ. ಈ ಎಲೆಯ ಪ್ರಸ್ತಾಪವು ವಿಶೇಷವಾಗಿ ತುಳಸಿಗೆ ಅನ್ವಯಿಸುತ್ತದೆ. ತುಳಿಸಿಯನ್ನು ಬಿತ್ತಿ ಗಿಡಕ್ಕೆ ನೀರೆರೆಯಬಹುದು. ಹೀಗೆ ಅತ್ಯಂತ ಬಡವನೂ ಕೃಷ್ಣಸೇವೆಯಲ್ಲಿ ನಿರತನಾಗಬಹುದು. ಕೃಷ್ಣನಿಗಾಗಿ ಕೆಲಸ ಮಾಡುವುದರಲ್ಲಿ ಮನುಷ್ಯನು ಹೇಗೆ ತೊಡಗಬಹುದು ಎನ್ನುವುದಕ್ಕೆ ಇವು ಕೆಲವು ನಿದರ್ಶನಗಳು.
ಮತ್-ಪರಮಃ ಎನ್ನುವ ಮಾತು ಕೃಷ್ಣನ ಪರಮನಿವಾಸದಲ್ಲಿ ಅವನ ಸಹವಾಸವೇ ಬದುಕಿನ ಪರಮ ಪರಿಪೂರ್ಣತೆ ಎಂದು ಪರಿಗಣಿಸುವ ಮನುಷ್ಯನನ್ನು ಕುರಿತದ್ದು. ಚಂದ್ರಲೋಕ ಅಥವಾ ಸೂರ್ಯಲೋಕ ಅಥವಾ ಸ್ವರ್ಗಲೋಕಗಳಿಗೆ ಅಥವಾ ಈ ವಿಶ್ವದ ಅತ್ಯುನ್ನತ ಲೋಕವಾದ ಬ್ರಹ್ಮಲೋಕಕ್ಕೆ ಏರಲು ಇಂತಹ ಮನುಷ್ಯ ಬಯಸುವುದಿಲ್ಲ. ಅದು ಅವನನ್ನು ಆಕರ್ಷಿಸುವುದಿಲ್ಲ. ಅಧ್ಯಾತ್ಮಿಕ ಗಗನದಲ್ಲಿ ಬ್ರಹ್ಮಜ್ಯೋತಿಯ ಪ್ರಭೆಯಲ್ಲಿ ಒಂದಾಗುವುದು ಸಹ ಅವನಿಗೆ ತೃಪ್ತಿಯನ್ನು ಕೊಡುವುದಿಲ್ಲ. ಏಕೆಂದರೆ ಅವನು ಅತ್ಯುನ್ನತ ದಿವ್ಯಲೋಕವಾದ ಕೃಷ್ಣಲೋಕವನ್ನು, ಗೋಲೋಕ ವೃಂದಾನವನ್ನು ಪ್ರವೇಶಿಸಲು ಬಯಸುತ್ತಾನೆ. ಅವನಿಗೆ ಆ ಲೋಕದ ವಿಷಯದಲ್ಲಿ ಸಂಪೂರ್ಣ ತಿಳುವಳಿಕೆಯಿದೆ. ಆದುದರಿಂದ ಅವನಿಗೆ ಬೇರೆ ಯಾವ ಲೋಕದಲ್ಲಿಯೂ ಆಸಕ್ತಿಯಿಲ್ಲ.
ಮದ್ ಭಕ್ತಃ ಎನ್ನುವ ಪದವು ಸೂಚಿಸುವಂತೆ ಆತನು ಭಕ್ತಿಸೇವೆಯಲ್ಲಿ ವಿಶೇಷವಾಗಿ ತೊಡಗುತ್ತಾನೆ. ಅದರಲ್ಲಿಯೂ ವಿಶೇಷವಾಗಿ ಶ್ರವಣ, ಕೀರ್ತನ, ಸ್ಮರಣ, ಅರ್ಚನ, ಭಗವಂತನ ಪಾದಪದ್ಮಗಳ ಸೇವೆ, ಪ್ರಾರ್ಥನೆ, ಪ್ರಭುವಿನ ಅಪ್ಪಣೆಯನ್ನು ನಡೆಸುವುದು, ಆತನೊಡನೆ ಸಖ್ಯ ಬೆಳೆಸುವುದು ಮತ್ತು ಎಲ್ಲವನ್ನೂ ಆತನಿಗೆ ಸಮರ್ಪಿಸುವುದು - ಭಕ್ತಿಕಾರ್ಯದ ಈ ಒಂಬತ್ತು ಪ್ರಕ್ರಿಯೆಗಳಲ್ಲಿ ವಿಶೇಷವಾಗಿ ನಿರತನಾಗುತ್ತಾನೆ. ಮನುಷ್ಯನು ಈ ಎಲ್ಲ ಒಂಬತ್ತು ಪ್ರಕ್ರಿಯೆಗಳಲ್ಲಿ ತೊಡಬಹುದು ಅಥವಾ ಎಂಟರಲ್ಲಿ ಅಥವಾ ಏಳರಲ್ಲಿ ಅಥವಾ ಕೊನೆಯ ಪಕ್ಷ ಒಂದರಲ್ಲಿ ನಿರತನಾಗಬಹುದು. ನಿಶ್ಚಯವಾಗಿಯೂ ಅದು ಅವನನ್ನು ಪರಿಪೂರ್ಣನನ್ನಾಗಿ ಮಾಡುತ್ತದೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)