Bhagavad Gita: ಕೆಲವೊಮ್ಮೆ ನಾವು ಬಯಸಿದಂತೆ ಏನು ಮಾಡಲು ಸಾಧ್ಯವಾಗುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಕೆಲವೊಮ್ಮೆ ನಾವು ಬಯಸಿದಂತೆ ಏನು ಮಾಡಲು ಸಾಧ್ಯವಾಗುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita: ಕೆಲವೊಮ್ಮೆ ನಾವು ಬಯಸಿದಂತೆ ಏನು ಮಾಡಲು ಸಾಧ್ಯವಾಗುವುದಿಲ್ಲ; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ಕೆಲವೊಮ್ಮೆ ನಾವು ಬಯಸಿದಂತೆ ಏನು ಮಾಡಲು ಸಾಧ್ಯವಾಗುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ 5ನೇ ಶ್ಲೋಕದಲ್ಲಿ ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

9ನೇ ಅಧ್ಯಾಯ ರಹಸ್ಯತಮ ಜ್ಞಾನ - ಶ್ಲೋಕ - 5

ನ ಚ ಮತ್‌ಸ್ಥಾನಿ ಭೂತಾನಿ ಪಶ್ಯ ಮೇ ಯೋಗಮೈಶ್ವರಮ್ |

ಭೂತಭೃನ್ನ ಚ ಭೂತಸ್ಥೋ ಮಮಾತ್ಮಾ ಭೂತಭಾವನಃ ||5||

ಅನುವಾದ: ಆದರೂ ಸೃಷ್ಟಿಯಾದದ್ದೆಲ್ಲ ನನ್ನನ್ನೇ ಆಧರಿಸಿದ್ದಲ್ಲ. ನನ್ನ ಯೋಗ ಸಮೃದ್ಧಿಯನ್ನು ನೋಡು. ಎಲ್ಲ ಜೀವಿಗಳ ಪಾಲಕನು ನಾನಾದರೂ ಮತ್ತು ನಾನು ಎಲ್ಲ ಕಡೆ ಇರುವೆನಾದರೂ ನಾನು ಈ ವಿಶ್ವದ ಅಭಿವ್ಯಕ್ತಿಯ ಭಾಗವಲ್ಲ. ಏಕೆಂದರೆ ನಾನೇ ಸೃಷ್ಟಿಯ ಮೂಲ.

ಭಾವಾರ್ಥ: ಎಲ್ಲಕ್ಕೂ ತಾನೇ ಆಧಾರ ( ಮತ್‌ಸ್ಥಾನಿ ಸರ್ವಭೂತಾನಿ) ಎಂದು ಪ್ರಭುವು ಹೇಳುತ್ತಾನೆ. ಇದನ್ನು ತಪ್ಪಾಗಿ ಅರ್ಥಮಾಡಿಕೊಳ್ಳಬಾರದು. ಭೌತಿಕ ಅಭಿವ್ಯಕ್ತಿಯ ನಿರ್ವಹಣೆ ಮತ್ತು ಪಾಲನೆಯ ವಿಷಯದಲ್ಲಿ ಪ್ರಭುವಿಗೆ ನೇರ ಕಾಳಜಿ ಇಲ್ಲ. ಅಟ್ಲಾಸ್ ಎಂಬಾತನು ಭೂಗೋಳವನ್ನು ತನ್ನ ಭುಜಗಳ ಮೇಲೆ ಹೊತ್ತು ನಿಂತಿರುವ ಚಿತ್ರವನ್ನು ನಾವು ನೋಡಿದ್ದೇವೆ. ಈ ಬೃಹತ್ತಾದ ಭೂಗ್ರಹವನ್ನು ಹೊತ್ತುಕೊಂಡ ಅವನು ಬಹು ಆಯಾಸಗೊಂಡಂತೆ ಕಾಣುತ್ತಾನೆ. ಕೃಷ್ಣನು ಸೃಷ್ಟಿಯಾದ ವಿಶ್ವವನ್ನು ಎತ್ತಿ ಹಿಡಿಯುತ್ತಾನೆಂದರೆ ಇಂತಹ ಚಿತ್ರಕ್ಕೆ ಮನಸ್ಸಿನಲ್ಲಿ ಅವಕಾಶ ಕೊಡಬಾರದು. ಎಲ್ಲವೂ ತನ್ನನ್ನು ಆಧರಿಸಿದ್ದರೂ ತಾನು ದೂರವಾಗಿದ್ದೇನೆ ಎಂದು ಅವನು ಹೇಳುತ್ತಾನೆ. ಲೋಕವ್ಯೂಹಗಳು ಆಕಾಶದಲ್ಲಿ ತೇಲುತ್ತಿವೆ. ಈ ಆಕಾಶವು ಪರಮ ಪ್ರಭುವಿನ ಶಕ್ತಿ. ಆದರೆ ಆತನು ಆಕಾಶದಿಂದ ಬೇರೆ. ಆತನ ಸನ್ನಿವೇಶವೇ ಬೇರೆ. ಆದುದರಿಂದ ಪ್ರಭುವು ಅವಕ್ಕೆ ನನ್ನ ಕಲ್ಪನಾತೀತ ಶಕ್ತಿಯು ಆಧಾರವಾಗಿದ್ದರೂ ದೇವೋತ್ತಮ ಪರಮ ಪುರುಷನಾಗಿ ನಾನು ಅವರಿಂದ ದೂರವಾಗಿದ್ದೇನೆ ಎಂದಿದ್ದಾನೆ. ಇದು ಪ್ರಭುವಿನ ಕಲ್ಪನಾತೀತಾ ಐಶ್ವರ್ಯ.

ನಿರುತ್ತಿ ಎಂಬ ವೈದಿಕ ನಿಘಂಟಿನಲ್ಲಿ ಯುಜ್ಯತೇನೇನ ದುರ್ಘಟೇಷು ಕಾರ್ಯೇಷು - ಪರಮ ಪ್ರಭುವು ತನ್ನ ಶಕ್ತಿಯಲ್ಲಿ ಮೆರೆಯುತ್ತ, ಕಲ್ಪನೆಗೆ ನಿಲುಕದ ಅದ್ಭುತ ಲೀಲೆಗಳಲ್ಲಿ ತೊಡಗಿದ್ದಾನೆ ಎಂದು ಹೇಳಿದೆ. ಆತನ ವ್ಯಕ್ತಿತ್ವದಲ್ಲಿ ಬೇರೆ ಬೇರೆ ಪ್ರಬಲ ಶಕ್ತಿಗಳುತುಂಬಿ ತುಳುಕಾಡುತ್ತಿವೆ. ಆತನ ಸಂಕಲ್ಪವೇ ನಿಜವಾಗಿ ವಾಸ್ತವಾಂಶ. ದೇವೋತ್ತಮ ಪರಮ ಪುರುಷನನ್ನು ಈ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು. ನಾವು ಏನನ್ನಾದರೂ ಮಾಡಲು ಯೋಜಿಸಬಹುದು. ಆದರೆ ಹಲವಾರು ಅಡ್ಡಿಗಳು ಎದುರಾಗುತ್ತವೆ.

ಕೆಲವೊಮ್ಮೆ ನಾವು ಬಯಸಿದಂತೆ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಕೃಷ್ಣನು ಏನನ್ನಾದರೂ ಮಾಡಲು ಬಯಸಿದಾಗ, ಅವನ ಸಂಕಲ್ಪದಿಂದಲೇ ಎಲ್ಲವೂ ಎಷ್ಟು ಪರಿಪೂರ್ಣವಾಗಿ ಆಗಿಬಿಡುತ್ತದೆ ಎಂದರೆ ಅದು ಹೇಗಾಯಿತು ಎಂದು ಕಲ್ಪಿಸಿಕೊಳ್ಳವುದಕ್ಕೇ ಸಾಧ್ಯವಿಲ್ಲ. ಪ್ರಭುವು ಈ ವಾಸ್ತವಾಂಶವನ್ನು ವಿವರಿಸುತ್ತಾನೆ. ಇಡೀ ಭೌತಿಕ ಅಭಿವ್ಯಕ್ತಿಯನ್ನು ಕಾಪಾಡಿ ಪಾಲಿಸುವವನು ತಾನೇ ಆದರೂ ಆತನು ಈ ಭೌತಿಕ ಅಬಿವ್ಯಕ್ತಿಯನ್ನು ಮುಟ್ಟುವುದಿಲ್ಲ. ಅವನ ಪರಮಸಂಕಲ್ಪ ಮಾತ್ರದಿಂದಲೇ ಎಲ್ಲವೂ ಸೃಷ್ಟಿಯಾಗುತ್ತದೆ, ಎಲ್ಲವೂ ಪಾಲನೆಯಾಗುತ್ತದೆ.

ಎಲ್ಲವೂ ನಾಶವಾಗುತ್ತದೆ (ನಮಗೂ ನಮ್ಮ ಈಗಿನ ಐಹಿಕ ಮನಸ್ಸಿಗೂ ವ್ಯತ್ಯಾಸವಿರುವಂತೆ) ಆತನ ಮನಸ್ಸಿಗೂ ಅವನಿಗೂ ವ್ಯತ್ಯಾಸವೇ ಇಲ್ಲ. ಏಕೆಂದರೆ ಆತನು ಪರಿಪೂರ್ಣ ಚೇತನ. ಏಕಕಾಲದಲ್ಲಿ ಪ್ರಭುವು ಎಲ್ಲರಲ್ಲಿಯೂ ಇರುತ್ತಾನೆ. ಆದರೆ ಆತನು ವೈಯಕ್ತಿಕವಾಗಿ ಸಹ ಹೇಗೆ ಇರುತ್ತಾನೆ ಎನ್ನುವುದನ್ನು ಸಾಮಾನ್ಯ ಮನುಷ್ಯನು ಅರ್ಥ ಮಾಡಿಕೊಳ್ಳಲಾರ. ಆತನು ಈ ಐಹಿಕ ಅಭಿವ್ಯಕ್ತಿಯಿಂದ ಬೇರೆಯಾಗಿದ್ದಾನೆ. ಆದರೆ ಎಲ್ಲಕ್ಕೂ ಆತನೇ ಆಧಾರ. ಇದನ್ನು ಇಲ್ಲಿ ಯೋಗಮ್ ಐಶ್ವರ್ಯಮ್, ದೇವೋತ್ತಮ ಪರಮ ಪುರುಷನ ರಹಸ್ಯಶಕ್ತಿ ಎಂದು ವರ್ಣಿಸಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.