Bhagavad Gita: ಮನುಷ್ಯನಿಗೆ ತಾನು ದೇಹವಲ್ಲ ಆತ್ಮ ಎಂದು ಅರ್ಥವಾದಾಗ ನಿಜವಾದ ಅಹಂ ಬರುತ್ತೆ; ಭಗವದ್ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಮನುಷ್ಯನಿಗೆ ತಾನು ದೇಹವಲ್ಲ ಆತ್ಮ ಎಂದು ಅರ್ಥವಾದಾಗ ನಿಜವಾದ ಅಹಂ ಬರುತ್ತೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13ನೇ ಅಧ್ಯಾಯದ 8 ರಿಂದ 12 ವರೆಗಿನ ಶ್ಲೋಕದಲ್ಲಿನ ಮುಂದುವರಿದ ಭಾಗದಲ್ಲಿ ತಿಳಿಯಿರಿ.
ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 8-12
ಅಮಾನಿತ್ವಮದಮ್ಭಿತ್ವಮಹಿಂಸಾ ಕ್ಷಾನ್ತಿರಾರ್ಜಮಮ್ |
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ||8|
ಇನ್ದ್ರಿಯಾರ್ಥೇಷು ವೈರಾಗ್ಯಮನಹನ್ಕಾರ ಏವ ಚ |
ಜನ್ಮಮೃತ್ಯಜರಾವ್ಯಾಧಿದುಃಖದೋಷಾನುದರ್ಶನಮ್ ||9||
ಅಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು ||10||
ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |ವಿವಕ್ತದೇಶಸೇವಿತ್ವಮರತಿರ್ಜನಸಂಸದಿ ||11||
ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವ ಜ್ಞಾನಾರ್ಥದರ್ಶನಮ್ |
ಏತಜ್‌ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋನ್ಯಥಾ ||12||
ಅನುವಾದ: ನಮ್ರತೆ, ಜಂಬವಿಲ್ಲದಿರುವುದು, ಅಹಿಂಸೆ, ತಾಳ್ಮೆ, ಸರಳತೆ, ನಿಜವಾದ ಗುರುವಿನ ಬಳಿಗೆ ಹೋಗುವುದು, ಶೌಚ, ಸ್ಥೈರ್ಯ, ಆತ್ಮಸಂಯಮ, ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು, ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು, ಅನಾಸಕ್ತಿ, ಮಕ್ಕಳು ಹೆಂಡತಿ, ಮನ ಮತ್ತಿತರ ವಿಷಯಗಳಲ್ಲಿ ಸಿಕ್ಕಿಕೊಳ್ಳದೆ ಮುಕ್ತವಾಗಿರುವುದು, ಇಷ್ಟಾನಿಷ್ಟಗಳ ಮಧ್ಯೆ ಸಮಚಿತ್ತತೆ, ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ, ಏಕಾಂತಪ್ಪರದೇಶದಲ್ಲಿ ವಾಸಮಾಡುವ ಅಭಿಲಾಷೆ, ಜನಸಮೂಹದಲ್ಲಿ ಆಸಕ್ತಿಯಿಲ್ಲದಿರುವುದು, ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು, ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥ ಅನ್ವೇಷಣೆ - ಇವೆಲ್ಲ ಜ್ಞಾನ ಎಂದು ನಾನು ಘೋಷಿಸುತ್ತೇನೆ. ಇದಲ್ಲದೆ ಇರುವುದೆಲ್ಲ ಅಜ್ಞಾನ.
ಮಿಥ್ಯಾಹಂಕಾರ ಎಂದರೆ ಈ ದೇಹವೇ ತಾನು ಎಂದು ಒಪ್ಪಿಕೊಳ್ಳುವುದು. ಮನುಷ್ಯನಿಗೆ ತಾನು ದೇಹವಲ್ಲ ಆತ್ಮ ಎಂದು ಅರ್ಥವಾದಾಗ ನಿಜವಾದ ಅಹಂಭಾವಕ್ಕೆ ಬರುತ್ತಾನೆ. ಅಹಮ್ ಎನ್ನುವುದು ಇದೆ. ಮಿಥ್ಯವಾದ ಅಹಂಭಾವವನ್ನು ಖಂಡಿಸಿದೆ. ನಿಜವಾದ ಅಹಂಭಾವವನ್ನಲ್ಲ. ವೇದಸಾಹಿತ್ಯದಲ್ಲಿ (ಬೃಹದಾರಣ್ಯಕ ಉಪನಿಷತ್ತು 1.4.10) ಅಹಂ ಬ್ರಹ್ಮಾಸ್ಮಿ - ನಾನು ಬ್ರಹ್ಮನ್, ನಾನು ಆತ್ಮ ಎಂದು ಹೇಳಿದೆ. ಈ ನಾನು ಇದ್ದೇನೆ. ಅದು ಆತ್ಮದ ಅರಿವು ಎನ್ನುವುದು ಆತ್ಮಸಾಕ್ಷಾತ್ಕಾರದ ಮುಕ್ತಹಂತದಲ್ಲಿಯೂ ಇರುತ್ತದೆ.
ನಾನು ಇದ್ದೇನೆ ಎನ್ನುವ ಅರಿವು ಅಹಮ್. ಆದರೆ ನಾನು ಇದ್ದೇನೆ ಎನ್ನುವ ಅರಿವನ್ನು ಈ ಹುಸಿದೇಹಕ್ಕೆ ಅನ್ವಯಿಸಿದಾಗ ಅದು ಹುಸಿ ಅಹಂಭಾವ. ಆತ್ಮದ ಅರಿವನ್ನು ವಾಸ್ತವತೆಗೆ ಅನ್ವಯಿಸಿದಾಗ ಅದು ನಿಜವಾದ ಅಹಮ್. ನಾವು ನಮ್ಮ ಅಹಂಭಾವವನ್ನು ಬಿಟ್ಟುಬಿಡಬೇಕು ಎಂದು ಕೆಲವು ತತ್ವಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ನಾವು ಅಹಮ್ ಅನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ. ಏಕೆಂದರೆ ಅಹಮ್ ಎನ್ನುವುದು ಪ್ರತ್ಯೇಕ ವ್ಯಕ್ತಿತ್ವ. ದೇಹದೊಡನೆ ಹುಸಿಯಾಗಿ ಗುರುತಿಸಿಕೊಳ್ಳುವುದನ್ನು ಬಿಡಬೇಕು.
ಜನನ, ಮರಣ, ಮುಪ್ಪು ಮತ್ತು ರೋಗಗಳನ್ನು ಒಪ್ಪಿಕೊಳ್ಳುವುದರಿಂದ ಆಗುವ ಯಾತನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ವಿವಿಧ ವೇದ ಸಾಹಿತ್ಯದಲ್ಲಿ ಜನನದ ವರ್ಣನೆಗಳಿವೆ. ಇನ್ನೂ ಹುಟ್ಟದಿರುವ ಮಗುವಿನ ಜಗತ್ತು. ತಾಯಿಯ ಗರ್ಭದಲ್ಲಿ ಮಗುವಿನ ವಾಸ, ಅದರ ನೋವು ಎಲ್ಲವನ್ನೂ ಶ್ರೀಮದ್ಭಾಗವತದಲ್ಲಿ ಬಹು ವಿವರವಾಗಿ ವರ್ಣಿಸಿದೆ. ಜನ್ಮವು ಕ್ಲೇಶಕರವೆಂದು ಚೆನ್ನಾಗಿ ಅರಿತುಕೊಳ್ಳಬೇಕು. ನಾವು ತಾಯಿಯ ಗರ್ಭದಲ್ಲಿ ಎಷ್ಟೊಂದು ಸಂಕಟಪಟ್ಟಿದ್ದೇವೆ ಎನ್ನುವುದನ್ನು ಮರೆತುಬಿಡುತ್ತೇವೆ. ಇದರಿಂದ ಹುಟ್ಟು ಸಾವುಗಳ ಪುನರಾವರ್ತನೆಗೆ ಯಾವ ಪರಿಹಾರವನ್ನೂ ಕಂಡುಕೊಳ್ಳುವುದಿಲ್ಲ.
ಹೀಗೆಯೇ ಸಾವಿನ ಸಮಯದಲ್ಲಿ ಎಲ್ಲ ಬಗೆಯ ಯಾತನೆಗಳುಂಟು. ಇವನ್ನು ಪ್ರಮಾಣಗ್ರಂಥಗಳಲ್ಲಿ ಪ್ರಸ್ತಾಪಿಸಿದೆ. ಇವುಗಳನ್ನು ಚರ್ಚಿಸಬೇಕು. ರೋಗ ಮತ್ತು ಮುಪ್ಪುಗಳು ಯಾರಿಗೂ ಬೇಕಿಲ್ಲ. ಆದರೆ ಇವುಗಳಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. ಜನನ, ಮರಣ, ಮುಪ್ಪು ಮತ್ತು ಕಾಯಿಲೆ ಇವುಗಳ ವಿಷಯ ಯೋಚಿಸಿ ಐಹಿಕ ಬದುಕಿನ ವಿಷಯದಲ್ಲಿ ನಿರಾಶಾ ಭಾವನೆಯನ್ನು ತಾಳದಿದ್ದರೆ ಅಧ್ಯಾತ್ಮಿಕ ಬದುಕಿನಲ್ಲಿ ಪ್ರಗತಿಯನ್ನು ಸಾಧಿಸಲು ಯಾವುದೇ ಸ್ಪೂರ್ತಿಯಿರುವುದಿಲ್ಲ.