Bhagavad Gita: ಊಹಾತ್ಮಕ ಚಿಂತನೆಯನ್ನ ನೆಚ್ಚಿಕೊಂಡವರಿಗೆ ಭಗವಂತನನ್ನ ನೋಡಲು ಸಾಧ್ಯವಾಗುವುದಿಲ್ಲ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಊಹಾತ್ಮಕ ಚಿಂತನೆಯನ್ನ ನೆಚ್ಚಿಕೊಂಡವರಿಗೆ ಭಗವಂತನನ್ನ ನೋಡಲು ಸಾಧ್ಯವಾಗುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 4 ಮತ್ತು 5ನೇ ಶ್ಲೋಕದಲ್ಲಿ ತಿಳಿಯಿರಿ
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 4
ಮನ್ಯಸೇ ಯದಿ ತಚ್ಛಕ್ಯಂ ಮಯಾ ದ್ರಷ್ಟುಮಿತಿ ಪ್ರಭೋ |
ಯೋಗೇಶ್ವರ ತತೋ ಮೇ ತ್ವಂ ದರ್ಶಯಾತ್ಮಾನಮವ್ಯಯಮ್ ||4||
ಅನುವಾದ: ಓ ಪ್ರಭುವೆ, ಯೋಗೀಶ್ವರನೆ, ನಿನ್ನ ವಿಶ್ವರೂಪವನ್ನು ನಾನು ನೋಡಬಲ್ಲೆ ಎಂದು ನೀನು ಭಾವಿಸುವೆಯಾದರೆ ಆ ನಿನ್ನ ಅಪರಿಮಿತ ವಿಶ್ವರೂಪವನ್ನು ತೋರಿಸು.
ಭಾವಾರ್ಥ: ಪರಮಪ್ರಭುವಾದ ಕೃಷ್ಣನನ್ನು ಐಹಿಕ ಇಂದ್ರಿಯಗಳಿಂದ ನೋಡಲು, ಕಾಣಲು, ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಆದರೆ ಯಾರು ಪ್ರಾರಂಭದಿಂದಲೂ ಕೃಷ್ಣನ ಪ್ರೇಮಪೂರ್ವಕ ದಿವ್ಯ ಸೇವೆಯಲ್ಲಿ ನಿರತರಾಗಿರುತ್ತಾರೋ ಅವರಿಗೆ ಕೃಷ್ಣನು ತನ್ನನ್ನು ತೋರಿಸಿಕೊಳ್ಳುತ್ತಾನೆ. ಪ್ರತಿಯೊಂದು ಜೀವಿಯೂ ಒಂದು ಅಧ್ಯಾತ್ಮಿಕ ಕಿಡಿ ಮಾತ್ರ. ಆದುದರಿಂದ ಪರಮ ಪ್ರಭುವನ್ನು ನೋಡುವುದಾಗಲೀ, ಅರ್ಥ ಮಾಡಿಕೊಳ್ಳುವುದಾಗಲೀ ಸಾಧ್ಯವಿಲ್ಲ. ಭಕ್ತನಾದ ಅರ್ಜುನನು ತನ್ನ ಮಿತಿಗಳನ್ನು ಒಪ್ಪಿಕೊಳ್ಳುತ್ತಾನೆ (Bhagavad Gita Updesh in Kannada).
ಕೃಷ್ಣನ ಸ್ಥಾನವು ಅಳತೆಗೆ ಮೀರಿದ್ದು. ಇದನ್ನು ಅರ್ಜುನನು ಒಪ್ಪಿಕೊಳ್ಳುತ್ತಾನೆ. ಜೀವಿಗೆ ಅನಂತವನ್ನು ತನ್ನನ್ನು ತೋರಿಸಿಕೊಂಡರೆ ಆಗ ಅನಂತನ ಕೃಪೆಯಿಂದ ಅನಂತನ ಸ್ವರೂಪವನ್ನು ಅರ್ಥಮಾಡಿಕೊಳ್ಳುವುದು ಸಾಧ್ಯ. ಇಲ್ಲಿ ಯೋಗೇಶ್ವರ ಎನ್ನುವ ಶಬ್ದವು ಬಹಳ ಮಹತ್ವದ್ದು. ಏಕೆಂದರೆ ಪ್ರಭುವಿನ ಶಕ್ತಿಯು ಕಲ್ಪನಾತೀತ. ಆದುದರಿಂದ ಅರ್ಜುನನು ಕೃಷ್ಣನ ಕಲ್ಪನಾತೀತ ಕೃಪೆಗಾಗಿ ಬೇಡುತ್ತಾನೆ. ಅವನು ಕೃಷ್ಣನಿಗೆ ಅಪ್ಪಣೆಮಾಡುವುದಿಲ್ಲ. ಕೃಷ್ಣಪ್ರಜ್ಞೆಯಲ್ಲಿ ಮನುಷ್ಯನು ತನ್ನನ್ನು ಪೂರ್ಣವಾಗಿ ಅರ್ಪಿಸಿಕೊಳ್ಳುದಿದ್ದರೆ ಮತ್ತು ಭಕ್ತಿಸೇವೆಯಲ್ಲಿ ನಿರತನಾಗದಿದ್ದರೆ ಕೃಷ್ಣನು ತನ್ನನ್ನು ತೋರಿಸಿಕೊಳ್ಳಬೇಕಾಗಿಲ್ಲ. ಕೇವಲ ತಮ್ಮ ಊಹಾತ್ಮಕ ಚಿಂತನೆಯ ಶಕ್ತಿಯನ್ನು ನೆಚ್ಚಿದವರಿಗೆ ಕೃಷ್ಣನನ್ನು ನೋಡಲು ಸಾಧ್ಯವಾಗುವುದಿಲ್ಲ.
ಅಧ್ಯಾಯ 11 - ವಿಶ್ವರೂಪ -ಶ್ಲೋಕ - 5
ಪಶ್ಯ ಮೇ ಪಾರ್ಥ ರೂಪಾಣಿ ಶತಶೋಥ ಸಹಸ್ರಶಃ |
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ||5||
ಅನುವಾದ: ದೇವೋತ್ತಮ ಪರಮ ಪುರುಷನು ಹೇಳಿದನು - ಪೃಥೆಯ ಮಗನಾದ ನನ್ನ ಪ್ರೀತಿಯ ಅರ್ಜುನ, ನನ್ನ ಸಿರಿಗಳನ್ನು, ನಾನಾ ವಿಧವಾದ ದಿವ್ಯ ವರ್ಣಗಳ ನನ್ನ ಕೋಟ್ಯಂತರ ರೂಪಗಳನ್ನು ನೋಡು.
ಭಾವಾರ್ಥ: ಕೃಷ್ಣನ ವಿಶ್ವರೂಪವು ಒಂದು ಅಲೌಕಿಕ ರೂಪ. ಆದರೂ ಅದು ವಿಶ್ವದ ಅಭಿವ್ಯಕ್ತಿಗಾಗಿಯೇ ಪ್ರಕಟವಾಗಿದೆ. ಆದುದರಿಂದ ಅದು ಈ ಭೌತಿಕ ಪ್ರಕೃತಿಯ ಅನಿತ್ಯ ಕಾಲಕ್ಕೆ ಒಳಪಟ್ಟಿದೆ. ಅರ್ಜುನನು ಈ ವಿಶ್ವರೂಪವನ್ನು ನೋಡಲು ಬಯಸುತ್ತಾನೆ. ಭೌತಿಕ ಪ್ರಕೃತಿಯು ಪ್ರಕಟಿತವೂ ಮತ್ತು ಅಪ್ರಕಟಿತವೂ ಆಗಿರುವಂತೆ ಕೃಷ್ಣನ ಈ ವಿಶ್ವರೂಪವು ಪ್ರಕಟಿತ ಮತ್ತು ಅಪ್ರಕಟಿತ. ಅದು ಕೃಷ್ಣನ ಇತರ ಸ್ವರೂಪಗಳಂತೆ ಅಧ್ಯಾತ್ಮಿಕ ಗಗನದಲ್ಲಿ ಶಾಶ್ವತವಾಗಿ ನೆಲೆಸಿರುವುದಿಲ್ಲ. ಭಕ್ತನ ಮಟ್ಟಿಗೆ ಹೇಳುವುದಾದರೆ ಅವನು ವಿಶ್ವರೂಪವನ್ನು ನೋಡಲು ಕಾತಾರನಾಗಿರುವುದಿಲ್ಲ. ಆದರೆ ಅರ್ಜುನನು ಕೃಷ್ಣನನ್ನು ಈ ರೀತಿಯಲ್ಲಿ ಕಾಣಲು ಬಯಸಿದುದರಿಂದ ಕೃಷ್ಣನು ಈ ರೂಪವನ್ನು ತೋರುತ್ತಾನೆ. ಸಾಮಾನ್ಯ ಮನುಷ್ಯನು ಈ ವಿಶ್ವರೂಪವನ್ನು ನೋಡಲಾರ. ನೋಡುವ ಶಕ್ತಿಯನ್ನು ಕೃಷ್ಣನೇ ಕೊಡಬೇಕು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)