ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ನಾಸ್ತಿಕ ಮನೋಧರ್ಮದವರು ಭಗವಂತನನ್ನು ಅರ್ಥಮಾಡಿಕೊಳ್ಳಲಾರರು; ಗೀತೆಯ ಅರ್ಥ ತಿಳಿಯಿರಿ

Bhagavad Gita: ನಾಸ್ತಿಕ ಮನೋಧರ್ಮದವರು ಭಗವಂತನನ್ನು ಅರ್ಥಮಾಡಿಕೊಳ್ಳಲಾರರು; ಗೀತೆಯ ಅರ್ಥ ತಿಳಿಯಿರಿ

Bhagavad Gita Updesh: ನಾಸ್ತಿಕ ಮನೋಧರ್ಮದವರು ಭಗವಂತನನ್ನು ಅರ್ಥಮಾಡಿಕೊಳ್ಳಲಾರರು ಎಂಬುದರ ಅರ್ಥವನ್ನು ಭಗವದ್ಗೀತೆಯ 10ನೇ ಅಧ್ಯಾಯದ 15ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 15

ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ |

ಭೂತಭಾವನ ಭೂತೇಶ ದೇವದೇವ ಜಗತ್ಪತೇ ||15||

ಅನುವಾದ: ಓ ಪುರುಷೋತ್ತಮನೇ, ಎಲ್ಲದರ ಮೂಲನೆ, ಎಲ್ಲದರ ಪ್ರಭುವೆ, ದೇವದೇವನೆ, ಜಗತ್ಪತಿಯೆ! ವಾಸ್ತವವಾಗಿ ನಿನ್ನ ಅಂತರಂಗ ಶಕ್ತಿಯಿಂದ ನೀನೊಬ್ಬನೇ ನಿನ್ನನ್ನು ಅರ್ಥಮಾಡಿಕೊಳ್ಳಬಲ್ಲೆ.

ಭಾವಾರ್ಥ: ಅರ್ಜುನ ಮತ್ತು ಅವನ ಅನುಯಾಯಿಗಳಂತೆ ಭಕ್ತಿಸೇವೆಯನ್ನು ಸಲ್ಲಿಸಿ ಕೃಷ್ಣನೊಡನೆ ಸಂಬಂಧವನ್ನು ಪಡೆದುಕೊಂಡವರು ಮಾತ್ರ ಪರಮ ಪ್ರಭು ಕೃಷ್ಣನನ್ನು ಅರ್ಥಮಾಡಿಕೊಳ್ಳಬಲ್ಲರು. ರಾಕ್ಷಸೀ ಅಥವಾ ನಾಸ್ತಿಕ ಮನೋಧರ್ಮದವರು ಕೃಷ್ಣನನ್ನು ಅರ್ಥಮಾಡಿಕೊಳ್ಳಲಾರರು. ಮನುಷ್ಯನನ್ನು ಪರಮ ಪ್ರಭುವಿನಿಂದ ಬೇರೆಡೆ ಒಯ್ಯುವ ಮಾನಸಿಕ ಊಹಾಪೋಹವು ಪರಮಪಾಪ. ಕೃಷ್ಣನನ್ನು ತಿಳಿಯದವರು ಭಗವದ್ಗೀತೆಯ ಬಗ್ಗೆ ಮಾತನಾಡಲು ಹೋಗಬಾರದು. ಭಗವದ್ಗೀತೆಯು ಕೃಷ್ಣನು ಹೇಳಿದ್ದು. ಅದು ಕೃಷ್ಣವಿಜ್ಞಾನವಾದದ್ದರಿಂದ ಅರ್ಜುನನು ಅರ್ಥಮಾಡಿಕೊಂಡಂತೆ ಅದನ್ನು ಕೃಷ್ಣನಿಂದಲೇ ತಿಳಿದುಕೊಳ್ಳಬೇಕು. ಅದನ್ನು ನಾಸ್ತಿಕರಿಂದ ಸ್ವೀಕರಿಸಬಾರದು (Bhagavad Gita Updesh in Kannada).

ಶ್ರೀಮದ್ಭಾಗವತದಲ್ಲಿ (1.2.11) ಹೇಳಿರುವಂತೆ -

ವದನ್ತಿ ತತ್ ತತ್ತ್ವವಿದಸ್ ತತ್ತ್ವಂ ಯಜ್‌ಜ್ಞಾನಮ್ ಅದ್ವಯಮ್ |

ಬ್ರಹ್ಮೇತಿ ಪರಮಾತ್ಮೇತಿ ಭಗವಾನ್ ಇತಿ ಶಬದ್ದ್ಯತೇ ||

ಪರಮಸತ್ಯವನ್ನು ಮೂರು ಮುಖಗಳನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾರೆ - ನಿರಾಕಾರ ಬ್ರಹ್ಮನಾಗಿ, ಅಂತರ್ಯಾಮಿ ಪರಮಾತ್ಮನಾಗಿ, ಮತ್ತು ಕಟ್ಟಕಡೆಗೆ ದೇವೋತ್ತಮ ಪರಮ ಪುರುಷನಾಗಿ. ಆದುದರಿಂದ ಪರಿಪೂರ್ಣ ಸತ್ಯವನ್ನು ಅರ್ಥಮಾಡಿಕೊಳ್ಳುವ ಕಡೆಯ ಹಂತದಲ್ಲಿ ಮನುಷ್ಯನು ದೇವೋತ್ತಮ ಪರಮ ಪುರುಷನ ನೆಲೆಗೆ ಬರುತ್ತಾನೆ. ಒಬ್ಬ ಸಾಮಾನ್ಯ ಮನುಷ್ಯನಾಗಲಿ ನಿರಾಕಾರ ಬ್ರಹ್ಮನ್‌ನನ್ನೋ ಅಂತರ್ಯಾಮಿ ಪರಮಾತ್ಮನನೋ ಅರ್ಥಮಾಡಿಕೊಂಡ ಒಬ್ಬ ಮುಕ್ತ ಮನುಷ್ಯನಾಗಲಿ ಭಗವಂತನ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳದೆ ಹೋಗಬಹುದು. ಅಂತಹ ಮನುಷ್ಯನು ಸ್ವತಃ ಕೃಷ್ಣನು ಹೇಳುತ್ತಿರುವ ಭಗವದ್ಗೀತೆಯ ಶ್ಲೋಕಗಳಿಂದ ಪರಮ ಪುರುಷನನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬಹುದು.

ಕೆಲವೊಮ್ಮೆ ನಿರಾಕಾವಾದಿಗಳು ಕೃಷ್ಣನನ್ನು ಭಗವಾನ್ ಎಂದು ಒಪ್ಪಿಕೊಳ್ಳುತ್ತಾರೆ ಅಥವಾ ಆತನ ಅಧಿಕಾರವನ್ನು ಒಪ್ಪಿಕೊಳ್ಳುತ್ತಾರೆ. ಆದರೂ ಮುಕ್ತರಾದವರು ಹಲವರು ಕೃಷ್ಣನನ್ನು ಪುರುಷೋತ್ತಮ ಎಂದು ಒಪ್ಪಿಕೊಳ್ಳಲಾರರು. ಆದುದರಿಂದ ಅರ್ಜುನನು ಅವನನ್ನು ಪುರುಷೋತ್ತಮ ಎಂದು ಸಂಬೋಧಿಸುತ್ತಾನೆ. ಕೃಷ್ಣನು ಎಲ್ಲ ಜೀವಿಗಳ ತಂದೆ ಎನ್ನುವುದನ್ನು ಮನುಷ್ಯನು ಅರ್ಥಮಾಡಿಕೊಳ್ಳದೆ ಹೋಗಬಹುದು. ಆದುದರಿಂದ ಅರ್ಜುನನು ಅವನನ್ನು ಭೂತಭಾವನ ಎಂದು ಸಂಬೋಧಿಸುತ್ತಾನೆ. ಕೃಷ್ಣನನ್ನು ಎಲ್ಲ ಜೀವಿಗಳ ತಂದೆಯೆಂದು ಅರಿತವನೂ ಸಹ ಅವನನ್ನು ಪರಮ ನಿಯಂತ್ರಕ ಎಂದು ಅರಿಯದೆ ಹೋಗಬಹುದು. ಆದುದರಿಂದ ಅವನ್ನು ಇಲ್ಲಿ ಭೂತೇಶ, ಎಲ್ಲ ಜೀವಿಗಳ ಪರಮ ನಿಯಂತ್ರಕ ಎಂದು ಸಂಬೋಧಿಸಿದೆ.

ಅವನು ಎಲ್ಲ ಜೀವಿಗಳ ಪರಮ ನಿಯಂತ್ರಕ ಎಂದು ಅರ್ಥಮಾಡಿಕೊಂಡವನೂ ಅವನನ್ನು ಎಲ್ಲ ದೇವತೆಗಳ ಮೂಲ ಎಂದು ತಿಳಿಯದೆ ಹೋಗಬಹುದು. ಆದುದರಿಂದ ಇಲ್ಲಿ ಅವನನ್ನು ದೇವದೇವ ಎಂದು ಸಂಬೋಧಿಸಿದೆ. ಅವನನ್ನು ದೇವದೇವನೆಂದು ತಿಳಿದುಕೊಂಡವರೂ ಅವನು ಎಲ್ಲ ವಸ್ತುಗಳ ಪರಮಸ್ವಾಮಿ ಎಂದು ಅರಿಯದಿರಬಹುದು. ಆದುದರಿಂದ ಅವನನ್ನು ಜಗತ್ಪತಿ ಎಂದು ಸಂಬೋದಿಸಲಾಗಿದೆ. ಹೀಗೆ ಅರ್ಜನನ ಸಾಕ್ಷಾತ್ಕಾರದಿಂದ ಕೃಷ್ಣನ ವಿಷಯದ ಸತ್ಯವನ್ನು ಇಲ್ಲಿ ಸ್ಥಾಪಿಸಲಾಗಿದೆ. ಕೃಷ್ಣನು ಇರುವಂತೆ ಅವನನ್ನು ಅರ್ಥಮಾಡಿಕೊಳ್ಳಲು ನಾನು ಅರ್ಜನನ ಹೆಜ್ಜೆಗಳಲ್ಲಿ ಹೆಜ್ಜೆಯಿಡಬೇಕು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)