ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಜೀವನದಲ್ಲಿ ಎದುರಾಗುವ ಆಗುಹೋಗುಗಳನ್ನು ಸಹಿಸಿಕೊಳ್ಳುವ ವ್ಯಕ್ತಿ ಸುಖವಾಗಿರುತ್ತಾನೆ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಭಗವದ್ಗೀತೆ: ಜೀವನದಲ್ಲಿ ಎದುರಾಗುವ ಆಗುಹೋಗುಗಳನ್ನು ಸಹಿಸಿಕೊಳ್ಳುವ ವ್ಯಕ್ತಿ ಸುಖವಾಗಿರುತ್ತಾನೆ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಜೀವನದಲ್ಲಿ ಎದುರಾಗುವ ಆಗುಹೋಗುಗಳನ್ನು ಸಹಿಸಿಕೊಳ್ಳುವ ವ್ಯಕ್ತಿ ಸುಖವಾಗಿರುತ್ತಾನೆ ಎಂಬ ಗೀತೆಯಲ್ಲಿನ ಅರ್ಥವನ್ನು ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಮಾತ್ರಾಸ್ಪರ್ಶಾಸ್ತು ಕೌನ್ತೇಯ ಶೀತೋಷ್ಣಸುಖದುಃಖದಾಃ |

ಆಗಮಾಪಾಯಿನೋನಿತ್ಯಾಸ್ತಾಂಸ್ತಿತಿಕ್ಷಸ್ವ ಭಾರತ ||14||

ಹೇ ಕೌಂತೇಯ, ಸುಖದುಃಖಗಳು ಸ್ವಲ್ಪಕಾಲ ಕಾಣಿಸಿಕೊಳ್ಳುವುವು, ಕ್ರಮೇಣ ಮಾಯಾಗುವುವು, ಚಳಿಗಾಲ ಮತ್ತು ಬೇಸಿಗೆಗಳು ಕಾಣಿಸಿಕೊಂಡು ಮಾಯವಾಗುವಂತೆ. ಭರತವಂಶಜನೆ, ಅವು ಇಂದ್ರಿಯಗಳ ಗ್ರಹಣಶಕ್ತಿಯಿಂದ ಉದ್ಭವವಾಗುತ್ತವೆ. ಅವುಗಳಿಂದ ಕ್ಷೋಭೆಗೊಳಗಾಗದೆ ಸಹಿಸುವುದನ್ನು ಕಲಿಯಬೇಕು.

ಕರ್ತವ್ಯ ನಿರ್ವಹಣೆಯಲ್ಲಿ, ಅಶಾಶ್ವತವಾದ ಸುಖ ದುಃಖಗಳ ಆಗುಹೋಗುಗಳನ್ನು ಸಹಿಸಿಕೊಳ್ಳಲು ಕಲಿಯಬೇಕು. ವೇದದ ಆದೇಶದ ಪ್ರಕಾರ ಮಾಘಮಾಸದಲ್ಲಿ ಸಹ (ಜನವರಿ-ಫೆಬ್ರವರಿ) ಬೆಳಗಿನ ಜಾವದಲ್ಲೇ ಸ್ನಾನಮಾಡಬೇಕು. ಆ ಕಾಲದಲ್ಲಿ ವಿಪರೀತ ಚಳಿಯಿರುತ್ತದೆ. ಆದರೂ ಆಚಾರನಿಷ್ಠನಾದವನು ಸ್ನಾನಮಾಡಲು ಹಿಂಜರಿಯುವುದಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ ನಡುಬೇಸಗೆ. ಆದರೂ ಹೆಂಗಸರು ಅಡಿಗೆಮನೆಯಲ್ಲಿ ಅಡಿಗೆಮಾಡಲು ಹಿಂಜರಿಯುವುದಿಲ್ಲ.

ಲಕ್ಷ್ಯಮಾಡದೆ ಮನುಷ್ಯ ತನ್ನ ಕರ್ತವ್ಯವನ್ನ ಮಾಡಬೇಕು

ಹವೆಯ ಅನನುಕೂಲಗಳನ್ನು ಲಕ್ಷ್ಯಮಾಡದೆ ಮನುಷ್ಯನು ತನ್ನ ಕರ್ತವ್ಯವನ್ನು ಮಾಡಬೇಕು. ಹಾಗೆಯೇ ಯುದ್ಧ ಮಾಡುವುದು ಕ್ಷತ್ರಿಯನ ಧರ್ಮ. ಬುಂಧುವಿನೊಡನೆ ಅಥವಾ ಮಿತ್ರನೊಡನೆ ಯುದ್ಧಮಾಡಬೇಕಾಗಿ ಬಂದರೂ ಕ್ಷತ್ರಿಯನು ತನ್ನ ನಿಯತ ಧರ್ಮದಿಂದ ದೂರವಾಗಬಾರದು. ವಿದ್ಯೆಯ ಪೀಠಕ್ಕೆ ಏರಲು ಧರ್ಮದ ನಿಯಮಗಳನ್ನು ಪಾಲಿಸಬೇಕು. ಏಕೆಂದರೆ ವಿದ್ಯೆ ಮತ್ತು ಭಕ್ತಿಗಳಿಂದ ಮಾತ್ರ ಮನುಷ್ಯನು ಮಾಯೆಯ ಮುಷ್ಟಿಯಿಂದ ಪಾರಾಗಬಲ್ಲ.

ಅರ್ಜುನನನ್ನು (Arjuna) ಸಂಬೋಧಿಸಿರುವ ಎರಡು ರೀತಿಗಳೂ ಅರ್ಥವತ್ತಾದವು. ಕೌಂತೇಯ ಎನ್ನುವುದು ತಾಯಿಯ ಕಡೆಯಿಂದ ಆತನು ಬಹು ದೊಡ್ಡ ವಂಶಕ್ಕೆ ಸೇರಿದವನು ಎಂಬುದನ್ನು ಸೂಚಿಸುತ್ತದೆ. ಭಾರತ ಎನ್ನುವುದು ತಂದೆಯ ವಂಶದ ಹಿರಿಮೆಯನ್ನು ಸೂಚಿಸುತ್ತದೆ. ಎರಡು ಕಡೆಗಳಿಂದಲೂ ಅವನು ಬಹು ದೊಡ್ಡ ಪರಂಪರೆಗೆ ಸೇರಿದವನು. ಮಹತ್ವದ ಪರಂಪರೆಯು ಕರ್ತವ್ಯನಿರ್ವಹಣೆಯಲ್ಲಿ ಹೆಚ್ಚಿನ ಹೊಣೆಯನ್ನು ತರುತ್ತದೆ. ಆದುದರಿಂದ ಅವನು ಯುದ್ಧಮಾಡುವುದರಿಂದ ತಪ್ಪಿಸಿಕೊಳ್ಳುವಂತಿಲ್ಲ.

ಯಂ ಹಿ ನ ವ್ಯಥಯನ್ತ್ಯೇತೇ ಪುರುಷಂ ಪುರುಷರ್ಷಭ |

ಸಮಯದುಃಖಸುಖಂ ಧೀರಂ ಸೋಮೃತತ್ವಾಯ ಕಲ್ಪತೇ ||15||

ಪುರುಷಶ್ರೇಷ್ಠನೇ, (ಅರ್ಜುನನೇ) ಸುಖದುಃಖಗಳಿಂದ ವಿಚಲಿತನಾಗದೆ ಉಭಯ ಸ್ಥಿತಿಗಳಲ್ಲಿಯೂ ದೃಢನಾಗಿರುವ ಮನುಷ್ಯನು ಮೋಕ್ಷಕ್ಕೆ ಅರ್ಹನಾದವನು.

ಆಧ್ಯಾತ್ಮಿಕ ಸಾಕ್ಷಾತ್ಕಾರದ ಮೇಲಿನ ಹಂತವನ್ನು ಮುಟ್ಟಲು ದೃಢಸಂಕಲ್ಪ ಮಾಡಿ ಸುಖ ದುಃಖಗಳ ಆಕ್ರಣವನ್ನು ಸಮಚಿತ್ತದಿಂದ ಸಹಿಸಬಲ್ಲವನು ಮುಕ್ತಿಗೆ ಅರ್ಹನಾದವನು. ವರ್ಣಾಶ್ರಮಧರ್ಮದಲ್ಲಿ ನಾಲ್ಕನೆಯ ಆಶ್ರಮವಾದ ಸನ್ಯಾಸವು ಶ್ರಮದಾಯಕವಾದದ್ದು. ಆದರೆ ತನ್ನ ಬದುಕನ್ನು ಪರಿಪೂರ್ಣಮಾಡಲು ಬಯಸುವವನು ನಿಶ್ಚಯವಾಗಿಯೂ ಎಷ್ಟೇ ಕಷ್ಟಗಳಿದ್ದರೂ ಸನ್ಯಾಸಾಶ್ರಮವನ್ನು ಸ್ವೀಕರಿಸುವವನು. ಸಾಮಾನ್ಯವಾಗಿ ಕಷ್ಟಗಳು ಉದ್ಭವವಾಗುವುದು ಸಾಂಸಾರಿಕ ಬಾಂಧವ್ಯಗಳನ್ನು ಕಡಿದುಕೊಂಡು ಹೆಂಡತಿ ಮಕ್ಕಳ ಕುಟುಂಬ ಸಂಬಂಧವನ್ನು ತ್ಯಜಿಸಬೇಕಾಗುತ್ತದೆ.

ಆಧ್ಯಾತ್ಮಿಕ ಸಾಕ್ಷಾತ್ಕಾರದ ಮಾರ್ಗ ಪೂರ್ಣವಾಗುವುದು ಹೇಗೆ?

ಯಾರೇ ಆದರೂ ಇಂತಹ ಕಷ್ಟಗಳನ್ನು ಸಹಿಸಿಕೊಳ್ಳಲು ಸಮರ್ಥರಾದರೆ ನಿಶ್ಚಯವಾಗಿಯೂ ಅವನ ಆಧ್ಯಾತ್ಮಿಕ ಸಾಕ್ಷಾತ್ಕಾರದ ಮಾರ್ಗವು ಪೂರ್ಣವಾಗುವುದು. ಹೀಗೆಯೇ, ತನ್ನ ಕುಟುಂಬದವರೊಡನೆ ಅಥವಾ ಇತರ ಆಪ್ತೇಷ್ಟರೊಡನೆ ಯುದ್ಧಮಾಡುವುದು ಕಷ್ಟವಾದರೂ ಅರ್ಜುನನು ಕ್ಷತ್ರಿಯನಾಗಿ ತನ್ನ ಕರ್ತವ್ಯದಲ್ಲೇ ಮುಂದುವರಿಯಬೇಕೆಂಬ ಉಪದೇಶವು ಇಲ್ಲಿದೆ.

ಚೈತನ್ಯ ಮಹಾಪ್ರಭುಗಳು ಇಪ್ಪತ್ತನಾಲ್ಕನೆಯ ವರ್ಷದಲ್ಲಿ ಸನ್ಯಾಸವನ್ನು ಸ್ವೀಕರಿಸಿದರೂ ಅವರ ತರುಣ ಪತ್ನಿ ಮತ್ತು ವೃದ್ಧ ತಾಯಿ ಅವರನ್ನೇ ಅವಲಂಬಿಸಿದ್ದರು. ಅವರನ್ನು ನೋಡಿಕೊಳ್ಳಲು ಬೇರೆ ಯಾರೂ ಇರಲಿಲ್ಲ. ಆದರೂ ಚೈತನ್ಯ ಮಹಾಪ್ರಭುಗಳು ಒಂದು ಮಹದುದ್ದೇಶಕ್ಕಾಗಿ ಸನ್ಯಾಸಿಗಳಾದರೂ ಮತ್ತು ತಮ್ಮ ಉನ್ನತ ಕರ್ತವ್ಯಗಳ ಪಾಲನೆಯಲ್ಲಿ ದೃಢವಾಗಿದ್ದರು. ಐಹಿಕ ಬಂಧನದಿಂದ ಮುಕ್ತಿ ಪಡೆಯುವ ಮಾರ್ಗ ಇದೇ ಆಗಿದೆ.

ವಿಭಾಗ