ಭಗವದ್ಗೀತೆ: ಈ 6 ಬಗೆಯ ಸಂಪತ್ತು ಸಂಪೂರ್ಣವಾಗಿ ಹೊಂದಿರುವವನೇ ಭಗವಂತ; ಗೀತೆಯಲ್ಲಿನ ಸಾರಾಂಶ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.
ಶ್ರೀಭಗವಾನುವಾಚ ।
ಕುತಸ್ತ್ವಾ ಕಶ್ಮಲಮಿದಂ ವಿಷಮೇ ಸಮುಪಸ್ಥಿತಮ್ ।
ಅನಾರ್ಯಜುಷ್ಟಮಸ್ವರ್ಗ್ಯಮಕೀರ್ತಿಕರಮರ್ಜುನ ॥2.2॥
ಪ್ರಿಯ ಅರ್ಜುನ, ಈ ಕಶ್ಮಲವು ನಿನಗೆ ಹೇಗೆ ಬಂದಿತು? ಬದುಕಿನ ಮಹತ್ವವನ್ನು ತಿಳಿದ ಮನುಷ್ಯನಿಗೆ ಈ ಕಶ್ಮಲವು ಭೂಷಣವಲ್ಲ. ಇಂತಹ ಕಶ್ಮಲವು ಅಪಕೀರ್ತಿಗೆ ಕಾರಣವಾಗುತ್ತದೆ.
ಅರ್ಜುನನು ತನ್ನ ಕರ್ತವ್ಯದ ಬಗ್ಗೆ ಗೊಂದಲದಲ್ಲಿ ಇದ್ದರೂ ಸಹ ಶ್ರೀಕೃಷ್ಣನು ನಸುನಗುತ್ತಲೆ ಇದ್ದನು. ಏಕೆಂದರೆ ಶ್ರೀಕೃಷ್ಣನಿಗೆ ಸಮಸ್ಯೆಯ ಪರಿಹಾರ ಏನೆಂಬುದು ತಿಳಿದಿದೆ. ಶ್ರೀ ಕೃಷ್ಣನಂತಹ ಗುರುವನ್ನು ಪಡೆದ ಅರ್ಜುನನು ಭಾಗ್ಯಶಾಲಿ. ಅರ್ಜುನನು ಶ್ರೀಕೃಷ್ಣನ ಮುಂದೆ ಎಷ್ಟೇ ದುಃಖವನ್ನು ವ್ಯಕ್ತಪಡಿಸಿದರೂ ಕೃಷ್ಣನು ಶಾಂತನಾಗಿ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದನು.
ಭಗವಾನ್ ಎಂಬ ಪದವು ಇಲ್ಲಿ ಬಹಳ ಮುಖ್ಯವಾದದ್ದು. ಭಗ ಎಂದರೆ ಸಂಪತ್ತು. ಆರು ಬಗೆಯ ಸಂಪತ್ತುಗಳನ್ನು ಸಂಪೂರ್ಣವಾಗಿ ಯಾರು ಹೊಂದಿದ್ದಾರೋ ಅವರನ್ನು ಭಗವಾನ್ ಎಂದು ಕರೆಯುತ್ತಾರೆ. ಐಶ್ವರ್ಯ, ಬಲ, ಯಶಸ್ಸು, ಸೌಂದರ್ಯ, ಜ್ಞಾನ ಮತ್ತು ವೈರಾಗ್ಯ. ಇವೇ ಆ ಆರು ಸಂಪತ್ತುಗಳು. ಈ ಸಂಪತ್ತುಗಳನ್ನು ಒಬ್ಬ ವ್ಯಕ್ತಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಹೊಂದಿರುತ್ತಾನೆ. ಆದರೆ ಭಗವಂತನು ಇದನ್ನು ಪೂರ್ಣ ಪ್ರಮಾಣದಲ್ಲಿ ಹೊಂದಿದ್ದಾನೆ. ವೇದವ್ಯಾಸರು ಇಲ್ಲಿ ಶ್ರೀಕೃಷ್ಣ ಎಂದು ಕರೆಯದೆ ಭಗವಾನ್ ಎಂದು ಕರೆದಿದ್ದಾರೆ. ಏಕೆಂದರೆ ಶ್ರೀಕೃಷ್ಣನೇ ದೇವೋತ್ತಮ ಪರಮ ಪುರುಷನಾಗಿದ್ದಾನೆ.
ಅರ್ಜುನನು ತನ್ನ ಎಲ್ಲಾ ವಾದಗಳನ್ನು ಭಗವಂತನ ಮುಂದೆ ಇಟ್ಟು ಕೊನೆಗೆ ಭಗವಂತನಿಗೆ ಸಂಪೂರ್ಣವಾಗಿ ಶರಣಾಗತನಾಗುತ್ತಾನೆ. ಭಗವಂತನ ಜೊತೆಗೆ ತಾನು ಮೈತ್ರಿ ಭಾವವನ್ನು ಹೊಂದಿದ್ದರೂ, ಈಗ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸು ಎಂದು ಬೇಡಿಕೊಳ್ಳುತ್ತಿದ್ದಾನೆ. ಏಕೆಂದರೆ ಒಬ್ಬ ಶಿಷ್ಯನಾದವನು ಮಾತ್ರ ಉಪದೇಶವನ್ನು ಸ್ವೀಕರಿಸಲು ಸಾಧ್ಯ. ಅರ್ಜುನನು ತನ್ನನ್ನು ಆವರಿಸಿದ್ದಂತಹ ಮೋಹವನ್ನು ಕಳೆದುಕೊಳ್ಳುವ ಉದ್ದೇಶದಿಂದ ಭಗವಂತನಿಗೆ ಶರಣಾದನು.
ಕಾರ್ಪಣ್ಯದೋ ಷೋ ಪಹತಸ್ವಭಾವಃ
ಪೃಚ್ಛಾಮಿ ತ್ವಾ ಧರ್ಮಸಂಮೂಢಚೇತಾಃ ।
ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ
ಶಿಷ್ಯಸ್ತೇಹಂ ಶಾಧಿ ಮಾಂ ತ್ವಾಂ ಪ್ರಪನ್ನಮ್ ॥2.7॥
ಕಾರ್ಪಣ್ಯದ ದೌರ್ಬಲ್ಯದಿಂದ ನಾನೀಗ ನನ್ನ ಕರ್ತವ್ಯದ ಬಗ್ಗೆ ಗೊ ಂದಲದಲ್ಲಿದ್ದೇನೆ. ಇಂತಹ ಸ್ಥಿತಿಯಲ್ಲಿ ನನಗೆ ಯಾವುದು ಶ್ರೇಯಸ್ಕರ ಎಂದು ನಿಶ್ಚಯವಾಗಿ ಹೇಳು. ನಾನೀಗ ನಿನ್ನ ಶಿಷ್ಯ ಮತ್ತುನಿನಗೆ ಶರಣಾಗತನಾದ ಆತ್ಮ. ದಯವಿಟ್ಟು ನನಗೆ ಮಾರ್ಗದರ್ಶನ ಮಾಡು.
ಅರ್ಜುನನು ಈ ರೀತಿಯಾಗಿ ಪ್ರಾರ್ಥಿಸಿದಾಗ ಶ್ರೀಕೃಷ್ಣನು ಗುರುವಿನ ಸ್ಥಾನವನ್ನು ಒಪ್ಪಿಕೊಂಡನು. ಭಗವಾನ್ ಶ್ರೀಕೃಷ್ಣನು ಮೊದಲು ಅರ್ಜುನನಿಗೆ ಆತ್ಮಜ್ಞಾನವನ್ನು ತಿಳಿಸಿಕೊಟ್ಟನು. ವ್ಯಕ್ತಿಯು ಜೀವನದಲ್ಲಿ ಮಾಡುವ ಎಲ್ಲ ತಪ್ಪುಗಳಿಗೂ ಆತನ ಅಜ್ಞಾನವೇ ಕಾರಣ. ಯಾವಾಗ ವ್ಯಕ್ತಿಯು ತನ್ನನ್ನು ಭೌತಿಕ ಶರೀರದ ಜೊತೆಗೆ ಗುರುತಿಸಿಕೊಳ್ಳುತ್ತಾನೋ ಆಗ ಆತನು ಈ ಶರೀರವನ್ನು ಪೋಷಣೆ ಮಾಡಲು ಬೇರೆ ಬೇರೆ ರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ. ಶರೀರ ಪೋಷಣೆಯೇ ತನ್ನ ಜೀವನದ ಗುರಿ ಎಂದು ತಿಳಿದುಕೊಳ್ಳುತ್ತಾನೆ. ಈ ರೀತಿಯಲ್ಲಿಆತನು ಭವ ಬಂಧನಕ್ಕೆ ಸಿಕ್ಕಿಕೊಳ್ಳುತ್ತಾನೆ. ಆತ್ಮಜ್ಞಾನವನ್ನು ಪಡೆದಾಗ ಜೀವಿಯು ತನ್ನ ನಿಜವಾದ ಗುರುತನ್ನು ಪಡೆದುಕೊಳ್ಳುತ್ತಾನೆ.
ಪಂಚಭೂತಗಳಿಂದ ಆದಂತಹ ಶರೀರವು ನಶ್ವರ. ಸಚ್ಚಿದಾನಂದ ಸ್ವರೂಪನಾದ ಜೀವಾತ್ಮನು ಶಾಶ್ವತ. ಶರೀರಕ್ಕೂ ಜೀವಾತ್ಮನಿಗೂ ಬಹಳಷ್ಟು ವ್ಯತ್ಯಾಸವಿದೆ. ಜೀವಾತ್ಮನಿಗೆ ನಾಶವಿಲ್ಲ. ಆತನು ಹಿಂದೆಯೂ ಇದ್ದ, ಇಂದೂ ಇದ್ದಾನೆ, ಮುಂದೆಯೂ ಇರುತ್ತಾನೆ. ಜೀವಾತ್ಮನು ಶರೀರದಲ್ಲಿ ಇರುವಷ್ಟು ಕಾಲ ಈ ಶರೀರವು ಬೆಳೆಯುತ್ತದೆ. ಬಾಲ್ಯದಿಂದ ಯವ್ವನಕ್ಕೆ, ಯವ್ವನದಿಂದ ಮುಪ್ಪಿಗೆ ಶರೀರವು ಬೆಳೆಯುತ್ತದೆ. ಮುಪ್ಪಿನ ನಂತರ ಸಾವು ಕಾಣಿಸಿಕೊಂಡಾಗ ಜೀವಾತ್ಮನು ಇನ್ನೊಂದು ಶರೀರವನ್ನು ಪಡೆಯುತ್ತಾನೆ. ಸಾವು ಎಂದರೆ ಹಳೆಯ ಶರೀರವನ್ನು ಬಿಟ್ಟು ಹೊಸ ಶರೀರವನ್ನು ಪಡೆಯುವ ಪ್ರಕ್ರಿಯೆ. ಆತ್ಮಜ್ಞಾನವನ್ನು ಪಡೆದ ವ್ಯಕ್ತಿಯು ಸಾವಿನ ಭಯದಿಂದ ಪಾರಾಗುತ್ತಾನೆ.
ದ್ವಂದ್ವಮಯವಾದಂತಹ ಈ ಪ್ರಪಂಚದಲ್ಲಿ ಜೀವಾತ್ಮನು ಅನೇಕ ಬಗೆಯ ಕಷ್ಟ-ಸುಖಗಳನ್ನು ಅನುಭವಿಸಬೇಕಾಗುತ್ತದೆ. ಈ ಕಷ್ಟ ಸುಖಗಳನ್ನು ಅನುಭವಿಸಲು ಜೀವಾತ್ಮನು ಕಲಿಯಬೇಕು. ಭೌತಿಕ ಇಂದ್ರಿಯಗಳ ಮೂಲಕ ಯಾವುದೇ ವಿಷಯ ವಸ್ತುಗಳನ್ನು ಸ್ವೀಕರಿಸಿದಾಗ ಅದು ಹಿತಕರವಾದ ಅಥವಾ ಅಹಿತಕರವಾದಂತಹ ಅನುಭವವನ್ನು ನೀಡುತ್ತದೆ. ಈ ರೀತಿಯಾಗಿ ಸಹಜವಾಗಿಯೇ ಕಷ್ಟ-ಸುಖಗಳಿಗೆ ಈಡಾಗುವಂತಹ ವ್ಯಕ್ತಿಯು ಯೋಗದಲ್ಲಿಸ್ಥಿರನಾಗಿ ಇರಬೇಕೆಂದರೆ ಅವುಗಳನ್ನು ಸಹಿಸಿಕೊಳ್ಳಲು ಕಲಿಯಬೇಕು.
ಭಗವಾನ್ ಶ್ರೀಕೃಷ್ಣನು ಇದನ್ನು ಚಳಿಗಾಲ ಮತ್ತು ಬೇಸಿಗೆ ಕಾಲಕ್ಕೆ ಹೋಲಿಸಿದ್ದಾನೆ. ಹವಾಮಾನದಲ್ಲಿ ಉಂಟಾಗುವಂತಹ ಬದಲಾವಣೆಗಳಿಗೆ ಸರಿಯಾಗಿ ನಾವು ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳುತ್ತೇವೆ. ಈ ರೀತಿಯಾಗಿ ಸೆಕೆ ಮತ್ತು ಚಳಿಯನ್ನು ಸಹಿಸಿಕೊಳ್ಳಲು ನಮಗೆ ಸಾಧ್ಯವಾಗುತ್ತದೆ. ಸ್ಥಿತಪ್ರಜ್ಞನಾಗಲು ಬಯಸುವಂತಹ ವ್ಯಕ್ತಿಯು ತನ್ನ ಯೋಗಭ್ಯಾಸದಲ್ಲಿ ಎದುರಾಗುವಂತಹ ಅಡೆತಡೆಗಳನ್ನು ಅನುಭವಿಸಲು ಕಲಿಯಬೇಕು.
ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತುಆಚಾರ್ಯರು
ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು ( ಇವರು ಡಾ.ಸುಜೇಶ್ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)