ಭಗವದ್ಗೀತೆ: ಶ್ರೀಕೃಷ್ಣನ ಭಕ್ತನಾದರೆ ಲೌಕಿಕ ಅರ್ಹತೆಗಳ ಜೊತೆಗೆ ದಿವ್ಯ ಗುಣಗಳನ್ನ ನಿಮ್ಮದಾಗಿಸಿಕೊಳ್ಳಬಹುದು; ಗೀತೆಯಲ್ಲಿನ ಅರ್ಥ ಹೀಗಿದೆ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ. ಶ್ರೀಕೃಷ್ಣನ ಭಕ್ತನಾದರೆ ಲೌಕಿಕ ಅರ್ಹತೆಗಳ ಜೊತೆಗೆ ದಿವ್ಯ ಗುಣಗಳನ್ನ ನಿಮ್ಮದಾಗಿಸಿಕೊಳ್ಳಬಹುದು ಎಂಬುದರ ಅರ್ಥ ತಿಳಿಯಿರಿ
ಶ್ರೀಮದ್ ಭಗವದ್ಗೀತೆಯ ಮೊದಲನೆಯ ಅಧ್ಯಾಯದಲ್ಲಿ ನಾವು ಎರಡು ಪ್ರಮುಖ ವಿಚಾರಗಳನ್ನು ಗಮನಿಸಬಹುದು. ಸೇನಾ ಅವಲೋ ಕನ ಮತ್ತು ಅರ್ಜುನನ ವಿಷಾದ. ಇಲ್ಲಿ ಅರ್ಜುನ ಮತ್ತು ದುರ್ಯೋಧನ ಇಬ್ಬರೂ ಸೇನಾ ಅವಲೋ ಕನವನ್ನು ಮಾಡುತ್ತಾರೆ. ದುರ್ಯೋಧನನು ಪಾಂಡವರ ಸೇನೆಯನ್ನು ಕಂಡು ದಿಗ್ಭ್ರಮೆಗೆ ಒಳಗಾಗುತ್ತಾನೆ. ಇದರಿಂದ ಹೊರಗೆ ಬರಲು ಆತನು ತನ್ನ ಗುರುಗಳಾದಂತಹ ದ್ರೋಣಾಚಾರ್ಯರನ್ನು ದೂಷಿಸುತ್ತಾನೆ. ಅರ್ಜುನನೂ ಸೇನಾವಲೋಕನವನ್ನು ಮಾಡುತ್ತಾನೆ.
ಆದರೆ ಅರ್ಜುನನ ಪ್ರತಿಕ್ರಿಯೆಯು ದುರ್ಯೋಧನನ ಪ್ರತಿಕ್ರಿಯೆಗಿಂತ ಬಹಳಷ್ಟು ವಿಭಿನ್ನವಾದದ್ದು. ಅರ್ಜುನನು ಕೌರವರ ಸೇನೆಯನ್ನು ಯಾವ ರೀತಿಯಾಗಿ ನಾಶ ಮಾಡಬೇಕು ಎನ್ನುವುದನ್ನು ಯೋಚಿಸುವುದಿಲ್ಲ. ಅದಕ್ಕೆ ಬದಲಾಗಿ ಎಷ್ಟು ದೊಡ್ಡಸೇನೆಯು ನಾಶವಾದರೆ ಪ್ರಪಂಚಕ್ಕೆ ಉಂಟಾಗುವಂತಹ ನಷ್ಟವೇನು ಎಂಬುದನ್ನು ಆತನು ವಿಚಾರ ಮಾಡುತ್ತಿದ್ದಾನೆ. ರಥದ ಸಾರಥ್ಯವನ್ನು ವಹಿಸಿದಂತಹ ಶ್ರೀಕೃಷ್ಣನು ಎರಡು ಸೇನೆಗಳ ಮಧ್ಯೆ ರಥವನ್ನು ನಿಲ್ಲಿಸಿದಾಗ ಅರ್ಜುನನು ಅಲ್ಲಿಯಾವುದೇ ಶತ್ರುಗಳನ್ನು ಕಾಣಲಿಲ್ಲ.
ಅಲ್ಲಿ ಅವನಿಗೆ ಕೇವಲ ಬಂಧು ಬಾಂಧವರು ಮಾತ್ರ ಕಂಡರು. ಇದೇ ಅರ್ಜುನನಿಗೂ ದುರ್ಯೋಧನನಿಗೂ ಇರುವಂತಹ ವ್ಯತ್ಯಾಸ. ಈ ಕಾರಣಕ್ಕಾಗಿ ಅರ್ಜುನನು ಭಗವದ್ಗೀತೆಯನ್ನು ಸ್ವೀಕರಿಸಲು ಸೂಕ್ತವಾಗಿರುವಂತಹ ವ್ಯಕ್ತಿ ಎಂದು ನಾವು ಅರ್ಥಮಾಡಿಕೊಳ್ಳಬಹುದು.
ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಲು ಬಯಸುವಂತಹ ವ್ಯಕ್ತಿ ಭಗವಾನ್ ಶ್ರೀಕೃಷ್ಣನನ್ನು ದೇವೋತ್ತಮ ಪರಮಪುರುಷ ಎಂದು ಒಪ್ಪಿಕೊಳ್ಳಬೇಕು. ಶ್ರೀಕೃಷ್ಣನನ್ನು ಒಬ್ಬ ಸಾಮಾನ್ಯ ವ್ಯಕ್ತಿ ಎಂದು ತಿಳಿದು ನಾವು ಭಗವದ್ಗೀತೆಯನ್ನು ಅರಿಯಲು ಪ್ರಯತ್ನಿಸಿದರೆ, ನಾವು ಭಗವದ್ಗೀತೆಯ ನಿಜವಾದ ಪ್ರಯೋಜನವನ್ನು ಪಡೆಯಲು ಸಾಧ್ಯವಿಲ್ಲ. ಅರ್ಜುನನು ರಣರಂಗದಲ್ಲಿ ತನ್ನ ನೆಂಟರಿಷ್ಟರನ್ನು ಕಂಡಾಗ ತುಂಬಾ ಭಾವಪರಶನಾಗುತ್ತಾನೆ.
ದೃಷ್ಟ್ವೇಮಂ ಸ್ವಜನಂ ಕೃಷ್ಣಯುಯುತ್ಸುಂ ಸಮುಪಸ್ಥಿತಮ್ |
ಸೀದಂತಿ ಮಮ ಗಾತ್ರಾಣಿ ಮುಖಂ ಚ ಪರಿಶುಷ್ಯತಿ ||1.28||
ವೇಪಥುಶ್ಚ ಶರೀರೇ ಮೇ ರೋ ಮಹರ್ಷಶ್ಚ ಜಾಯತೇ |
ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ ಚೈವ ಪರಿದಹ್ಯತೇ ||1.29||
ಯುದ್ಧಾಭಿಲಾಷೆಯಿಂದ ಇಲ್ಲಿ ಸಮಾವೇಶಗೊಂಡಿರುವ ನನ್ನ ನೆಂಟರಿಷ್ಟರನ್ನು ನೋಡಿ ನನ್ನ ಅವಯವಗಳು ಕಂಪಿಸುತ್ತಿವೆ ಮತ್ತು ಬಾಯಿಯು ಒಣಗುತ್ತಿದೆ. ನನ್ನ ಶರೀರವು ಕಂಪಿಸುತ್ತದೆ. ಕೂದಲು ನಿಮಿರುತ್ತಿದೆ. ಗಾಂಡೀವ ಧನಸ್ಸು ಕೈಯಿಂದ ಜಾರುತ್ತಿದೆ ಮತ್ತುನನ್ನ ಚರ್ಮವು ಉರಿಯುತ್ತಿದೆ.
ಭಗವಂತನ ಭಕ್ತರಲ್ಲಿ ಎಲ್ಲಾ ದಿವ್ಯ ಸದ್ಗುಣಗಳು ಇರುತ್ತವೆ. ಸಕಲ ದಿವ್ಯ ಸದ್ಗುಣ ಸಂಪನ್ನನಾದಂತಹ ಭಗವಂತನ ಸ್ತುತಿಯನ್ನು ಮಾಡುವುದರ ಮೂಲಕ ಆ ಗುಣಗಳನ್ನು ನಾವು ನಮ್ಮಲ್ಲಿಯೂ ಬೆಳೆಸಿಕೊಳ್ಳಬಹುದು. ಆದರೆ ಭಕ್ತನಲ್ಲದವನು ವಿದ್ಯೆ ಮತ್ತು ಸಂಸ್ಕೃತಿಗಳಿಂದ ಲೌಕಿಕವಾಗಿ ಎಷ್ಟೇ ಅರ್ಹತೆಗಳನ್ನು ಗಳಿಸಿದರೂ ಅವನಲ್ಲಿ ದಿವ್ಯ ಗುಣಗಳು ಇರುವುದಿಲ್ಲ. ಅರ್ಜುನನು ಭಗವಂತನ ಶುದ್ಧಭಕ್ತ. ಆದ್ದರಿಂದಲೇ ರಣರಂಗದಲ್ಲಿ ತನ್ನ ನೆಂಟರು ಮತ್ತು ಸ್ನೇಹಿತರನ್ನು ಕಾಣುತ್ತಲೇ ತಮ್ಮ ತಮ್ಮಲ್ಲೇ ಹೋರಾಡಲು ನಿರ್ಧರಿಸಿದ್ದ ಅವರ ವಿಷಯದಲ್ಲಿ ಅರ್ಜುನನಿಗೆ ತಡೆಯಲಾರದಷ್ಟು ಕರುಣೆ ಉಂಟಾಯಿತು.
ಅರ್ಜುನನಲ್ಲಿ ಕಾಣಿಸಿಕೊಂಡಂತಹ ಲಕ್ಷಣಗಳು ಇವೇ
ಯುದ್ಧದ ಪರಿಣಾಮವನ್ನು ಕುರಿತು ಯೋಚಿಸುತ್ತಲೇ ಅವನ ದೇಹದ ಅವಯವಗಳು ನಡುಗಲಾರಂಭಿಸಿದವು. ಅರ್ಜುನನ ರಕ್ತ ಸಂಬಂಧಿಗಳೇ ಆಗಿದ್ದ ಒಂದು ಇಡೀ ಸಮುದಾಯವು ಅವನೊಡನೆ ಹೋರಾಡಲು ಬಂದಿತ್ತು. ಅರ್ಜುನನಲ್ಲಿ ಕಾಣಿಸಿಕೊಂಡಂತಹ ಈ ಲಕ್ಷಣಗಳು ದೌರ್ಬಲ್ಯದಿಂದ ಮೂಡಿದವಲ್ಲ. ಶ್ರೀಮದ್ಭಾಗವತದಲ್ಲಿ ತಿಳಿಸಿರುವಂತೆ, ದೇವೋತ್ತಮ ಪರಮ ಪುರುಷನಲ್ಲಿ ಶುದ್ಧ ಭಕ್ತಿಯನ್ನು ಹೊಂದಿರುವ ವ್ಯಕ್ತಿಯಲ್ಲಿ ಸಕಲ ದೈವಿ ಸದ್ಗುಣಗಳು ಇರುತ್ತವೆ.
ಆದರೆ ಭಕ್ತರಲ್ಲದವರಿಗೆ ಇಂತಹ ಸದ್ಗುಣಗಳು ಇರುವುದಿಲ್ಲ. ಶರೀರದ ಕಂಪನ ಮತ್ತು ರೋಮಾಂಚನಗಳಲ್ಲಿ ಎರಡು ವಿಧ. ವಿಶೇಷ ಆಧ್ಯಾತ್ಮಿಕ ಹರ್ಷೋನ್ಮಾದ ಅಥವಾ ಲೌಕಿಕವಾದ ಭಯ. ಆಧ್ಯಾತ್ಮಿಕ ಹರ್ಷೋನ್ಮಾದದಲ್ಲಿ ಭಯವು ಇರುವುದಿಲ್ಲ. ಆದ್ದರಿಂದ ಇಲ್ಲಿ ಅರ್ಜುನನ ರೋಮಾಂಚನಕ್ಕೆ ಕಾರಣ ಪ್ರಾಣ ನಷ್ಟದ ಭಯ. ಅರ್ಜುನನು ಎಷ್ಟೊಂದು ತಾಳ್ಮೆ ಗೆಟ್ಟಿದ್ದಾನೆಂದರೆ ಅವನ ಗಾಂಡೀವ ಧನಸ್ಸುಛ ಕೈಯಿಂದ ಜಾರುತ್ತಿತ್ತು. ಬದುಕಿನ ಕುರಿತ ಲೌಕಿಕ ಕಲ್ಪನೆಯಿಂದ ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಅರ್ಜುನನಿಗೆ ಸರಿಯಾಗಿ ನಿಂತುಕೊಳ್ಳಲು ಸಾಧ್ಯವಾಗುತ್ತಿಲ್ಲ. ಆತನು ತನ್ನನ್ನೇ ತಾನು ಮರೆಯುತ್ತಿದ್ದಾನೆ. ಎಲ್ಲಾ ಕಡೆ ಅಶುಭ ಸೂಚಕ ಶಕುನಗಳೇ ಕಾಣುತ್ತಿವೆ. ವ್ಯಕ್ತಿಯು ಲೌಕಿಕ ವಿಷಯಗಳಲ್ಲಿ ಅತಿಯಾದ ಮೋಹವನ್ನು ಹೊಂದಿದ್ದರೆ, ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಭಗವಾನ್ ಶ್ರೀಕೃಷ್ಣನ ಸಂಕಲ್ಪದಂತೆ ಅರ್ಜುನನು ಲೌಕಿಕ ವ್ಯಾಮೋಹಕ್ಕೆ ಒಳಪಟ್ಟಿದ್ದಾನೆ. ಯುದ್ಧದಲ್ಲಿ ವಿಜಯವಾದರೆ ಅದು ತನ್ನ ದುಃಖಕ್ಕೆ ಕಾರಣವಾಗುತ್ತದೆ ಎಂದು ಅರ್ಜುನನು ಭಾವಿಸಿದ.
ಆಧಾರ: ಭಗವದ್ಗೀತಾ ಯಥಾರೂಪ, ಶ್ರೀ ಶ್ರೀಮದ್ ಎ. ಸಿ. ಭಕ್ತಿವೇದಾಂತ ಸ್ವಾಮಿ ಪ್ರಭುಪಾದ, ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದ ಸಂಸ್ಥಾಪಕರು ಮತ್ತು ಆಚಾರ್ಯರ
ಭಗವದ್ಗೀತಾ ಯಥಾರೂಪದ ನಿರೂಪಕರು - ಭಕ್ತಿ ಶಾಸ್ತ್ರೀ ಸುಬುದ್ಧಿ ದಾಮೋದರ ದಾಸ್, ಇಸ್ಕಾನ್ ಮಂಗಳೂರು (ಇವರು ಡಾ.ಸುಜೇಶ್ ಕುಮಾರ್. ಮೂಡಬಿದ್ರಿಯ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಇಂಜಿನಿಯರಿಂಗ್‌ನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ)