ಭಗವದ್ಗೀತೆ: ಜಗತ್ತಿನ ಯಾವ ಅಸ್ತ್ರಶಸ್ತ್ರಗಳೂ ಆತ್ಮವನ್ನು ಕೊಲ್ಲಲಾರವು; ಗೀತೆಯಲ್ಲಿನ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಜಗತ್ತಿನ ಯಾವ ಅಸ್ತ್ರಶಸ್ತ್ರಗಳೂ ಆತ್ಮವನ್ನು ಕೊಲ್ಲಲಾರವು; ಗೀತೆಯಲ್ಲಿನ ಅರ್ಥ ಹೀಗಿದೆ

ಭಗವದ್ಗೀತೆ: ಜಗತ್ತಿನ ಯಾವ ಅಸ್ತ್ರಶಸ್ತ್ರಗಳೂ ಆತ್ಮವನ್ನು ಕೊಲ್ಲಲಾರವು; ಗೀತೆಯಲ್ಲಿನ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಸಮಾನೇ ವೃಕ್ಷೇ ಪುರುಷೋ ನಿಮಗೋ

ನೀಶಯಾ ಶೋಚತಿ ಮುಹ್ಯಮಾನಃ |

ಜುಷ್ಟಂ ಯದಾ ಪಶ್ಯತ್ಯನ್ಯಮೀಶಮ್

ಅಸ್ಯ ಮಹಿಮಾನಮ್ ಇತಿ ವೀತಶೋಕಃ ||

ಎರಡು ಪಕ್ಷಿಗಳೂ ಒಂದೇ ಮರದ ಮೇಲಿದ್ದರೂ ಭಕ್ಷಿಸುತ್ತಿರುವ ಪಕ್ಷಿಯು ಮರದ ಫಲಗಳನ್ನು ಅನುಭವಿಸುವುದರಿಂದ ಆತಂಕ ಮತ್ತು ವಿಷಾದಗಳಿಂದ ತುಂಬಿದೆ. ಆದರೆ ಹೇಗಾದರೂ ಅದು ಭಗವಂತನಾದ ತನ್ನ ಮಿತ್ರನತ್ತ ಮುಖ ಮಾಡಿದರೆ, ಭಗವಂತನ ಮಹಿಮೆಯನ್ನು ತಿಳಿದುಕೊಂಡರೆ, ಕೂಡಲೇ ಕಷ್ಟಪಡುತ್ತಿರುವ ಪಕ್ಷಿಯು ಎಲ್ಲ ದುಃಖಗಳಿಂದ ಪಾರಾಗುತ್ತದೆ. ಅರ್ಜುನನು ಈಗ ತನ್ನ ನಿರಂತರ ಮಿತ್ರನಾದ ಕೃಷ್ಣನ ಕಡೆಗೆ ಮುಖಮಾಡಿದ್ದಾನೆ; ಅವನಿಂದ ಭಗವದ್ಗೀತೆಯನ್ನು ತಿಳಿದುಕೊಳ್ಳುತ್ತಿದ್ದಾನೆ. ಹೀಗೆ ಕೃಷ್ಣನಿಂದ ಕೇಳಿ ತಿಳಿದುಕೊಂಡು ಅವನು ಭಗವಂತನ ಮಹಾಮಹಿಮೆಯನ್ನು ಅರ್ಥ ಮಾಡಿಕೊಳ್ಳಬಲ್ಲ; ಶೋಕದಿಂದ ಮುಕ್ತನಾಗಬಲ್ಲ.

ವೃದ್ಧರಾದ ತನ್ನ ತಾತ ಮತ್ತು ತನ್ನ ಗುರುಗಳ ಶರೀರಗಳಲ್ಲಿ ಆಗುವ ಬದಲಾವಣೆಗಾಗಿ ಶೋಕಿಸಬಾರದೆಂದು ಭಗವಂತನು ಅರ್ಜುನನಿಗೆ ಬೋಧಿಸುತ್ತಾನೆ. ವಿಧವಿಧವಾದ ದೈಹಿಕ ಕ್ರಿಯೆಗಳ ಎಲ್ಲ ಪ್ರತಿಫಲಗಳಿಂದ ಒಮ್ಮೆಗೇ ಅವರು ಪರಿಶುದ್ಧರಾಗುವುದು ಸಾಧ್ಯವಾಗುವಂತೆ ಧಾರ್ಮಿಕ ಯುದ್ಧದಲ್ಲಿ ಅವರನ್ನು ಕೊಲ್ಲಲು ಅವನು ಸಂತಸಪಡಬೇಕು. ಯಜ್ಞವೇದಿಕೆಯಲ್ಲಿ ಅಥವಾ ಯೋಗ್ಯವಾದ ಯುದ್ಧದಲ್ಲಿ ಪ್ರಾಣವನ್ನು ಒಪ್ಪಿಸುವವನು ಕೂಡಲೇ ದೈಹಿಕ ಕರ್ಮಫಲಗಳಿಂದ ಪರಿಶುದ್ಧನಾಗಿ ಉತ್ತಮ ಸ್ಥಾನಕ್ಕೆ ಏರುತ್ತಾನೆ. ಆದುದರಿಂದ ಅರ್ಜುನನ ಶೋಕಕ್ಕೆ ಕಾರಣವೇ ಇಲ್ಲ

ನೈನಂ ಛಿನ್ದನ್ತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |

ನ ಚೈನಂ ಕ್ಲೇದಯನ್ತ್ಯಾಪೋ ನ ಶೋಷಯತಿ ಮಾರುತಃ ||23||

ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು, ಅಗ್ನಿಯು ಸುಡಲಾರದು, ನೀರು ನೆನೆಯಿಸಲಾರದು ಮತ್ತು ಗಾಳಿಯು ಒಣಗಿಸಲಾರದು.

ಕತ್ತಿಗಳು, ಆಗ್ನೇಯಾಸ್ತ್ರಗಳು, ವಾರುಣಾಸ್ತ್ರಗಳು, ವಾಯವ್ಯಾಸ್ತ್ರಗಳು ಯಾವ ಅಸ್ತ್ರಶಸ್ತ್ರಗಳೂ ಆತ್ಮವನ್ನು ಕೊಲ್ಲಲಾರವು. ಆಧುನಿಕ ಕಾಲದ ಬೆಂಕಿ ಉಗುಳುವ ಅಸ್ತ್ರಗಳಲ್ಲದೆ ಮಣ್ಣು, ನೀರು, ವಾಯು, ಆಕಾಶ ಮೊದಲಾದವುಗಳಿಂದ ಮಾಡಿದ ಅಸ್ತ್ರಗಳು ಇದ್ದುವೆಂದು ಕಾಣುತ್ತದೆ. ಆಧುನಿಕ ಕಾಲದ ಅಣ್ವಸ್ತ್ರಗಳನ್ನು ಆಗ್ನೇಯಾಸ್ತ್ರಗಳೆಂದೇ ವರ್ಗೀಕರಿಸಲಾಗುತ್ತದೆ.

ಬೇರೆಬೇರೆ ಬಗೆಗಳ ಭೌತಿಕ ಅಂಶಗಳಿಂದ ತಯಾರಾದ ಇತರ ಅಸ್ತ್ರಗಳು ಹಿಂದಿನ ಕಾಲದಲ್ಲಿ ಇದ್ದವು. ಆಗ್ನೇಯಾಸ್ತ್ರಗಳಿಗೆ ಪ್ರತಿಯಾಗಿ ವಾರುಣಾಸ್ತ್ರಗಳನ್ನು ಪ್ರಯೋಗಿಸಲಾಗುತ್ತಿತ್ತು. ಆಧುನಿಕ ವಿಜ್ಞಾನಕ್ಕೆ ಇಂತಹ ಅಸ್ತ್ರಗಳ ಪರಿಚಯವೇ ಇಲ್ಲ, ಆಧುನಿಕ ವಿಜ್ಞಾನಿಗಳಿಗೆ ವಾಯವ್ಯಾಸ್ತ್ರಗಳ ವಿಷಯವೂ ತಿಳಿದಿಲ್ಲ. ವೈಜ್ಞಾನಿಕ ಉಪಾಯಗಳೇನೇ ಇರಲಿ ಎಷ್ಟೇ ಅಸ್ತ್ರಗಳನ್ನು ಬಳಸಿದರೂ ಆತ್ಮವನ್ನು ತುಂಡು ಮಾಡಲು ಸಾಧ್ಯವಿಲ್ಲ, ನಾಶಮಾಡಲು ಸಾಧ್ಯವಿಲ್ಲ.

ಅವನ ಮಾತ್ರದಿಂದಲೇ ಜೀವಾತ್ಮನು ಅಸ್ತಿತ್ವಕ್ಕೆ ಬಂದದ್ದು ಹೇಗೆ, ಆನಂತರ ಮಾಯಾಶಕ್ತಿಯಿಂದ ಆವೃತನಾದದ್ದು ಹೇಗೆ ಎನ್ನುವುದನ್ನು ಮಾಯಾವಾದಿಯು ವಿವರಿಸಲಾರ. ಪರಮಾತ್ಮ ನಿಂದ ಜೀವಾತ್ಮಗಳನ್ನು ಭಾಗ ಮಾಡಲು ಸಾಧ್ಯವಿಲ್ಲ. ಜೀವಾತ್ಮಗಳು ಪರಮಾತ್ಮನಿಂದ ನಿರಂತರವಾಗಿ ಬೇರ್ಪಟ್ಟ ಭಾಗಾಂಶಗಳು. ಈ ಅಂಶಗಳು ಸನಾತನವಾಗಿ ಜೀವಾತ್ಮಗಳಾದ್ದರಿಂದ ಅವು ಮಾಯಾಶಕ್ತಿಯಿಂದ ಆವೃತವಾಗುತ್ತವೆ.

ಬೆಂಕಿಯ ಕಿಡಿಗಳು ಗುಣದಲ್ಲಿ ಬೆಂಕಿಯೊಡನೆ ಒಂದೇ ಆದರೂ ಬೆಂಕಿಯಿಂದ ಹೊರಬಿದ್ದಾಗ ಆರಿಹೋಗುತ್ತವೆ. ಹಾಗೆಯೇ ಜೀವಾತ್ಮಗಳು ಭಗವಂತನ ಸಂಗದಿಂದ ಬೇರೆಯಾಗುತ್ತವೆ. ವರಾಹ ಪುರಾಣದಲ್ಲಿ ಜೀವಿಗಳನ್ನು ಪರಮೋನ್ನತನ ವಿಭಿನ್ನಾಂಶಗಳು ಎಂದು ವರ್ಣಿಸಿದೆ. ಭಗವದ್ಗೀತೆಯ ಪ್ರಕಾರವೂ ಅವು ನಿರಂತರವಾಗಿ ಬೇರೆ ಆಗಿಯೇ ಉಳಿಯುತ್ತವೆ. ಆದುದರಿಂದ ಭಗವಂತನು ಅರ್ಜುನನಿಗೆ ಮಾಡುವ ಉಪದೇಶದಿಂದ ಸ್ಪಷ್ಟವಾಗುವಂತೆ ಮಾಯೆಯಿಂದ ಮುಕ್ತವಾದ ಮೇಲೂ ಜೀವವು ಪ್ರತ್ಯೇಕ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ಕೃಷ್ಣನಿಂದ ಪಡೆದ ತಿಳಿವಳಿಕೆಯಿಂದ ಅರ್ಜುನನು ಮುಕ್ತನಾದ. ಆದರೆ ಅವನು ಎಂದಿಗೂ ಕೃಷ್ಣನೊಡನೆ ಒಂದಾಗಲಿಲ್ಲ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.