ಭಗವದ್ಗೀತೆ: ಕೃಷ್ಣಪ್ರಜ್ಞೆಯಲ್ಲಿರುವ ವ್ಯಕ್ತಿ ಗೆಲುವು ಸೋಲುಗಳೆರಡನ್ನೂ ಸಮಾನವಾಗಿ ಸ್ವೀಕರಿಸುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಕೃಷ್ಣಪ್ರಜ್ಞೆಯಲ್ಲಿರುವ ವ್ಯಕ್ತಿ ಗೆಲುವು ಸೋಲುಗಳೆರಡನ್ನೂ ಸಮಾನವಾಗಿ ಸ್ವೀಕರಿಸುತ್ತಾನೆ ಎಂಬುದರ ಅರ್ಥ ತಿಳಿಯಿರಿ.
ನಿರಾಶೀರ್ಯತಚಿತ್ತಾತ್ಮಾ ತ್ಯಕ್ತಸರ್ವಪರಿಗ್ರಹಃ |
ಶಾರೀರಂ ಕೇವಲಂ ಕರ್ಮ ಕುರ್ವನ್ನಾಪ್ನೋತಿ ಕಲ್ಬಿಷಮ್ ||21||
ಹೀಗೆ ತಿಳುವಳಿಕೆಯುಳ್ಳ ಮನುಷ್ಯನು ಮನಸ್ಸು ಮತ್ತು ಬುದ್ಧಿಯನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಂಡು ಕರ್ಮ ಮಾಡುತ್ತಾನೆ. ತನಗೆ ಸೇರಿದ ಸ್ವತ್ತಿನ ವಿಷಯದಲ್ಲಿ ತಾನೇ ಒಡೆಯನೆಂಬ ಭಾವವನ್ನು ಸಂಪೂರ್ಣವಾಗಿ ಬಿಟ್ಟುಬಿಡುತ್ತಾನೆ, ಮತ್ತು ಶರೀರ ರಕ್ಷಣೆಗೆ ಬೇಕಾದಷ್ಟು ಕರ್ಮವನ್ನು ಮಾತ್ರ ಮಾಡುತ್ತಾನೆ. ಹೀಗೆ ಕೆಲಸ ಮಾಡುವವನ ಮೇಲೆ ಪಾಪಪೂರಿತ ಪ್ರತಿಕ್ರಿಯೆಗಳು ಯಾವುದೇ ಪರಿಣಾಮವನ್ನು ಮಾಡುವುದಿಲ್ಲ.
ಕೃಷ್ಣಪ್ರಜ್ಞೆಯುಳ್ಳ ಮನುಷ್ಯನು ತನ್ನ ಕಾರ್ಯಗಳಿಂದ ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳನ್ನು ನಿರೀಕ್ಷಿಸುವುದಿಲ್ಲ. ಅವನ ಮನಸ್ಸು ಮತ್ತು ಬುದ್ಧಿ ಸಂಪೂರ್ಣವಾಗಿ ಹಿಡಿತದಲ್ಲಿರುತ್ತವೆ. ತಾನು ಪರಮ ಪ್ರಭುವಿನ ವಿಭಿನ್ನಾಂಶನಾದ್ದರಿಂದ ವಿಭಿನ್ನಾಂಶವಾಗಿ ತಾನು ವಹಿಸುವ ಪಾತ್ರ ತನ್ನ ಕಾರ್ಯವಲ್ಲ ಎಂದು ಅವನಿಗೆ ತಿಳಿದಿರುತ್ತದೆ. ಈ ಕಾರ್ಯವನ್ನು ಪರಮ ಪ್ರಭುವು ತನ್ನ ಮೂಲಕ ಮಾಡುತ್ತಾನೆ ಎಂದು ಅವನಿಗೆ ತಿಳಿದಿರುತ್ತದೆ. ಕೈ ಚಲಿಸಿದಾಗ ಅದು ತಾನಾಗಿಯೇ ಚಲಿಸುವುದಿಲ್ಲ. ಇಡೀ ದೇಹದ ಪ್ರಯತ್ನದಿಂದ ಚಲಿಸುತ್ತದೆ.
ಕೃಷ್ಣಪ್ರಜ್ಞೆಯಿರುವ ಮನುಷ್ಯನು ಪರಮ ಪ್ರಭವಿನ ಇಚ್ಛೆಯೊಡನೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾನೆ. ಏಕೆಂದರೆ ಸ್ವಂತ ಇಂದ್ರಿಯತೃಪ್ತಿಯ ಬಯಕೆ ಅವನಿಗಿಲ್ಲ. ಆತನು ಯಂತ್ರದ ಒಂದು ಭಾಗದಂತೆಯೇ ಚಲಿಸುತ್ತಾನೆ. ಯಂತ್ರದ ಭಾಗವು ಒಳ್ಳೆಯ ಸ್ಥಿತಿಯಲ್ಲಿರಲು ಎಣ್ಣೆ ಹಾಕುವುದು ಮತ್ತು ಸ್ವಚ್ಛಗೊಳಿಸುವುದು ಅಗತ್ಯ. ಹಾಗೆಯೇ ಕೃಷ್ಣಪ್ರಜ್ಞೆಯುಳ್ಳ ಮನುಷ್ಯನು ತನ್ನ ಕಾರ್ಯದ ಮೂಲಕ ಸುಸ್ಥಿತಿಯಲ್ಲಿ ಉಳಿಯುತ್ತಾನೆ. ಇದು ಭಗವಂತನ ಆಧ್ಯಾತ್ಮಿಕ ಪ್ರೇಮಪೂರ್ವಕ ಸೇವೆಯಲ್ಲಿ ಕೆಲಸ ಮಾಡುವುದಕ್ಕೆ ಆತನು ಯೋಗ್ಯಸ್ಥಿತಿಯಲ್ಲಿರುವುದಕ್ಕಾಗಿ ಮಾತ್ರ. ಆದುದರಿಂದ ಆತನ ಕೆಲಸಗಳ ಪ್ರತಿಕ್ರಿಯೆಗಳು ಅವನನ್ನು ಬಾಧಿಸಲಾರವು.
ಪ್ರಾಣಿಯಂತೆ ಆತನಿಗೆ ತನ್ನ ದೇಹದ ಮೇಲೆ ಸಹ ಒಡೆತನವಿಲ್ಲ. ಕ್ರೂರಿಯಾದ ಯಜಮಾನನು ಕೆಲವು ಸಲ ತನ್ನ ವಶದಲ್ಲಿರುವ ಪ್ರಾಣಿಯನ್ನು ಕೊಂದೇ ಬಿಡುತ್ತಾನೆ. ಆದರೂ ಪ್ರಾಣಿಯು ಪ್ರತಿಭಟಿಸುವುದಿಲ್ಲ. ಅದಕ್ಕೆ ನಿಜವಾದ ಸ್ವಾತಂತ್ರ್ಯವೂ ಇಲ್ಲ. ಆತ್ಮ ಸಾಕ್ಷಾತ್ಕಾರದಲ್ಲಿ ಸಂಪೂರ್ಣವಾಗಿ ಮಗ್ನನಾಗಿರುವ ಕೃಷ್ಣಪ್ರಜ್ಞೆಯ ಮನುಷ್ಯನಿಗೆ ಯಾವುದೇ ಐಹಿಕವಸ್ತುವಿನ ಮೇಲಿನ ಹುಸಿ ಒಡೆತನಕ್ಕೆ ಸಮಯವೇ ಇಲ್ಲ. ದೇಹವನ್ನೂ ಆತ್ಮವನ್ನೂ ರಕ್ಷಿಸಿಕೂಳ್ಳಲು ಅವನು ಹಣವನ್ನು ಅನ್ಯಾಯವಾಗಿ ಸಂಗ್ರಹಿಸಬೇಕಾಗಿಲ್ಲ. ಆದುದರಿಂದ ಆತನಿಗೆ ಇಂತಹ ಐಹಿಕ ಪಾಪಗಳ ಲೇಪವಿಲ್ಲ. ಅವನು ತನ್ನ ಕ್ರರ್ಮಗಳ ಎಲ್ಲ ಪ್ರತಿಕ್ರಿಯೆಗಳಿಂದ ಬಿಡುಗಡೆ ಹೊಂದಿದವನು.
ಯದೃಚ್ಛಾಲಾಭಸನ್ತುಷ್ಟೋ ದ್ವನ್ದ್ವಾತೀತೋ ವಿಮತ್ಸರಃ |
ಸಮಃ ಸಿದ್ಧಾವಸಿದ್ಧೌ ಚ ಕೃತ್ವಾಪಿ ನ ನಿಬಧ್ಯತೇ ||22||
ತಾನಾಗಿ ಬಂದುದರಲ್ಲಿ ತೃಪ್ತಿಯಿರುವವನೂ, ದ್ವಂದ್ವಾತೀತನೂ, ಅಸೂಯೆ ಇಲ್ಲದವನೂ, ಗೆಲುವು ಸೋಲುಗಳಲ್ಲಿ ಒಂದೇ ರೀತಿ ಇರುವವನೂ ಆದ ಮನುಷ್ಯನು ಕೆಲಸ ಮಾಡಿದರೂ ಬಂಧನಕ್ಕೆ ಸಿಲುಕುವುದಿಲ್ಲ.
ಕೃಷ್ಣಪ್ರಜ್ಞೆ ಇರುವ ಮನುಷ್ಯನು ತನ್ನ ದೇಹ ರಕ್ಷಣೆಗೂ ಹೆಚ್ಚು ಪ್ರಯತ್ನವನ್ನು ಮಾಡುವುದಿಲ್ಲ, ತಾನಾಗಿ ಬಂದದ್ದರಲ್ಲಿ ತೃಪ್ತಿಪಟ್ಟುಕೊಳ್ಳುತ್ತಾನೆ. ಆತನು ಬೇಡುವುದಿಲ್ಲ. ಸಾವನ್ನೂ ಮಾಡುವುದಿಲ್ಲ. ತನ್ನಿಂದಾದಷ್ಟು ಶ್ರಮಪಟ್ಟು ಕೆಲಸಮಾಡುತ್ತಾನೆ. ತನ್ನ ಪ್ರಾಮಾಣಿಕಶ್ರಮದಿಂದ ಎಷ್ಟು ಬಂದರೆ ಅಷ್ಟರಲ್ಲೇ ತೃಪ್ತಿ. ಆದುದರಿಂದ ತನ್ನ ಜೀವನ ನಿರ್ವಹಣೆಯಲ್ಲಿ ಆತನು ಸ್ವತಂತ್ರನು. ಕೃಷ್ಣಪ್ರಜ್ಞೆಯಲ್ಲಿನ ತನ್ನ ಸ್ವಂತ ಸೇವೆಗೆ ಬೇರೆ ಯಾರ ಸೇವೆಯೂ ಅಡ್ಡಬರಲು ಆತನು ಅವಕಾಶ ಕೊಡುವುದಿಲ್ಲ. ಆದರೆ ಭಗವಂತನ ಸೇವೆಗಾಗಿ ಆತನು ಐಹಿಕ ಜಗತ್ತಿನ ದ್ವಂದ್ವದಿಂದ ವಿಚಲಿತನಾಗದೆ ಯಾವ ಬಗೆಯ ಕರ್ಮದಲ್ಲಿಯಾದರೂ ಭಾಗವಹಿಸಬಲ್ಲ.
ಐಹಿಕ ಜಗತ್ತಿನ ದ್ವಂದ್ವವು ಶಾಕ ಮತ್ತು ತಂಪು, ದುಃಖ ಮತ್ತು ಸುಖ ಹೀಗೆ ಅನುಭವವಾಗುತ್ತದೆ. ಕೃಷ್ಣಪ್ರಜ್ಞೆಯಿರುವ ಮನುಷ್ಯನು ದ್ವಂದ್ವವನ್ನು ಮೀರುತ್ತಾನೆ. ಏಕೆಂದರೆ ಕೃಷ್ಣನ ತೃಪ್ತಿಗಾಗಿ ಹೇಗೆ ಕೆಲಸ ಮಾಡಲೂ ಆತನು ಹಿಂಜರಿಯುವುದಿಲ್ಲ. ಆತನು ಗೆಲುವು ಸೋಲುಗಳೆರಡರಲ್ಲೂ ಸಮಚಿತ್ತನಾಗಿರುತ್ತಾನೆ. ಮನುಷ್ಯನು ಆಧ್ಯಾತ್ಮಿಕ ಜ್ಞಾನವನ್ನು ಸಂಪೂರ್ಣವಾಗಿ ಪಡೆದಾಗ ಈ ಲಕ್ಷಣಗಳು ಕಾಣುತ್ತವೆ.