ಭಗವದ್ಗೀತೆ: ಮನುಷ್ಯ ಭಗವಂತನದಲ್ಲಿದ್ದಾಗ ಆತನ ದೇಹ ಪಾಪಫಲಗಳಿಂದ ಕಲುಷಿತವಾಗುವುದಿಲ್ಲ; ಗೀತೆಯ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಮನುಷ್ಯ ಭಗವಂತನದಲ್ಲಿದ್ದಾಗ ಆತನ ದೇಹ ಪಾಪಫಲಗಳಿಂದ ಕಲುಷಿತವಾಗುವುದಿಲ್ಲ; ಗೀತೆಯ ಅರ್ಥ ಹೀಗಿದೆ

ಭಗವದ್ಗೀತೆ: ಮನುಷ್ಯ ಭಗವಂತನದಲ್ಲಿದ್ದಾಗ ಆತನ ದೇಹ ಪಾಪಫಲಗಳಿಂದ ಕಲುಷಿತವಾಗುವುದಿಲ್ಲ; ಗೀತೆಯ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಬ್ರಹ್ಮಣ್ಯಾಧಾಯ ಕರ್ಮಾಣಿ ಸಂಗಂ ತ್ಯಕ್ತ್ವಾ ಕರೋತಿ ಯಃ |

ಲಿಪ್ಯತೇ ನ ಸ ಪಾಪೇನ ಪದ್ಮಪತ್ರಮಿವಾಮ್ಭಸಾ ||10||

ಫಲಗಳನ್ನು ಭಗವಂತನಿಗೆ ಅರ್ಪಿಸಿ ಯಾರು ನಿರ್ಲಿಪ್ತನಾಗಿ ಕರ್ತವ್ಯಗಳನ್ನು ಮಾಡುವನೋ ಆತನಿಗೆ, ತಾವರೆಯ ಎಲೆಗೆ ಹೇಗೆ ನೀರಿನ ಲೇಪವಿಲ್ಲವೋ ಹಾಗೆ, ಪಾಪದ ಲೇಪವಿಲ್ಲ.

ಇಲ್ಲಿ ಬ್ರಹ್ಮಣಿ ಎಂದರೆ ಕೃಷ್ಣಪ್ರಜ್ಞೆಯಲ್ಲಿ ಎಂದರ್ಥ. ಭೌತಿಕ ಜಗತ್ತು, ಪಾರಿಭಾಷಿಕವಾಗಿ ಪ್ರಧಾನ ಎಂದು ಕರೆಯುವ ಐಹಿಕ ಪ್ರಕೃತಿಯ ಮೂರುಗುಣಗಳ ಅಭಿವ್ಯಕ್ತಿಯ ಮೊತ್ತ. ಸರ್ವಮ್ ಹ್ಯೇತದ್ ಬ್ರಹ್ಮ (ಮಾಂಡೂಕ್ಯ ಉಪನಿಷತ್ತು 2) ತಸ್ಮಾದ್ ಏತದ್ ಬ್ರಹ್ಮ ನಾಸರೂಪಮ್ ಅನ್ನಂ ಚ ಜಾಯತೇ (ಮುಂಡಕ ಉಪನಿಷತ್ತು 1.2.10) ಈ ವೇದ ಸ್ತೋತ್ರಗಳು ಮತ್ತು ಭಗವದ್ಗೀತೆಯಲ್ಲಿನ (14.3) ಮಮ ಯೋನಿರ್ ಮಹದ್ ಬ್ರಹ್ಮ ಎನ್ನುವ ಮಾತುಗಳು ಭೌತಿಕ ಜಗತ್ತಿನಲ್ಲಿ ಇರುವುದೆಲ್ಲ ಬ್ರಹ್ಮನ್‌ನ ಅಭಿವ್ಯಕ್ತಿ ಎಂದು ಸೂಚಿಸುತ್ತವೆ. ಕಾರ್ಯಗಳು ಭಿನ್ನಭಿನ್ನವಾಗಿ ತೋರಿಬಂದರೂ ಕಾರಣದಿಂದ ಅವು ಬೇರೆಯಲ್ಲ. ಈಶೋಪನಿತ್ತಿನಲ್ಲಿ ಎಲ್ಲವೂ ಪರಬ್ರಹ್ಮನಿಗೆ ಅಥವಾ ಕೃಷ್ಣನಿಗೆ ಸಂಬಂಧಿಸಿದ್ದು, ಎಲ್ಲವೂ ಅವನಿಗೇ ಸೇರಿದ್ದು ಎಂದು ಹೇಳಿದೆ.

ಎಲ್ಲವೂ ಕೃಷ್ಣನಿಗೆ ಸೇರಿದ್ದು, ಎಲ್ಲಕ್ಕೂ ಅವನೇ ಒಡೆಯ, ಆದ್ದರಿಂದ ಎಲ್ಲವನ್ನೂ ಭಗವಂತನ ಸೇವೆಯಲ್ಲಿ ನಿಯೋಜಿಸಬೇಕು ಎಂದು ಚೆನ್ನಾಗಿ ತಿಳಿದವನ ಕಾರ್ಯಗಳ ಫಲಗಳು ಪುಣ್ಯಕರವಾಗಲಿ, ಪಾಕರವಾಗಲಿ, ಅವುಗಳೊಡನೆ ಅವನಿಗೆ ಸಂಬಂಧವೇ ಇಲ್ಲ. ಜಡದೇಹವು ಒಂದು ಬಗೆಯ ಕೆಲಸವನ್ನು ನಿರ್ವಹಿಸಲು ಭಗವಂತನು ಕೊಟ್ಟ ವರವಾಗಿದೆ. ಅದನ್ನೂ ಸಹ ಕೃಷ್ಣಪ್ರಜ್ಞೆಯಲ್ಲಿ ತೊಡಗಿಸಬಹುದು. ಆಗ ಹೇಗೆ ತಾವರೆ ಎಲೆಯು ನೀರಿನಲ್ಲಿಯೇ ಇದ್ದರೂ ಒದ್ದೆಯಾಗುವುದಿಲ್ಲವೋ ಹಾಗೆ ದೇಹವು ಪಾಪಫಲಗಳಿಂದ ಕಲುಷಿತವಾಗುವುದಿಲ್ಲ.

ಭಗವಂತನು ಗೀತೆಯಲ್ಲಿ (3.30) ಮಯಿ ಸರ್ವಾಣಿ ಕರ್ಮಾಣಿ ಸಂನ್ಯಸ್ಯ, ಎಲ್ಲ ಕರ್ಮಗಳನ್ನೂ ನನಗೆ (ಕೃಷ್ಣನಿಗೆ) ಒಪ್ಪಿಸು ಎಂದು ಹೇಳುತ್ತಾನೆ. ಇದರಿಂದ ನಿರ್ಣಿಯಿಸಬಹುದಾದುದೇನೆಂದರೆ ಕೃಷ್ಣಪ್ರಜ್ಞೆ ಇಲ್ಲದಿರುವ ಮನುಷ್ಯನು ಐಹಿಕ ಶರೀರ ಮತ್ತು ಇಂದ್ರಿಯಗಳ ಕಲ್ಪನೆಗೆ ಅನುಗುಣವಾಗಿ ಕರ್ಮಮಾಡುತ್ತಾನೆ. ಆದರೆ ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನ ದೇಹವು ಕೃಷ್ಣನ ಸ್ವತ್ತು ಮತ್ತು ಅದು ಕೃಷ್ಣನ ಸೇವೆಯಲ್ಲಿ ನಿರತವಾಗಿರಬೇಕು ಎನ್ನುವ ತಿಳುವಳಿಕೆಯಿಂದ ಕರ್ಮಮಾಡುತ್ತಾನೆ.

ಕಾಯೇನ ಮನಸಾ ಬುದ್ಧ್ಯಾ ಕೇವಲೈರಿನ್ದ್ರಿಯೈರಪಿ |

ಯೋಗಿನಃ ಕರ್ಮ ಕುರ್ವನ್ತಿ ಸಂಗಂ ತ್ಯಕ್ತ್ವಾತ್ಮಶುದ್ಧಯೇ ||11||

ಯೋಗಿಗಳು ಮೋಹವನ್ನು ಬಿಟ್ಟು ಕೇವಲ ಶುದ್ಧಿಗಾಗಿ ದೇಹ, ಮನಸ್ಸು, ಬುದ್ಧಿ ಮತ್ತು ಇಂದ್ರಿಯಗಳಿಂದ ಸಹ ಕರ್ಮವನ್ನು ಮಾಡುತ್ತಾರೆ.

ಕೃಷ್ಣನ ಇಂದ್ರಿಯಗಳ ತೃಪ್ತಿಗಾಗಿಯೇ ಕೃಷ್ಣಪ್ರಜ್ಞೆಯಲ್ಲಿ ಮನುಷ್ಯನು ಕೆಲಸ ಮಾಡಿದಾಗ ದೇಹ, ಮನಸ್ಸು, ಬುದ್ಧಿ ಅಥವಾ ಇಂದ್ರಿಯಗಳಿಂದ ಮಾಡಿದ ಯಾವುದೇ ಕೆಲಸವಾಗಲಿ ಅದು ಐಹಿಕ ಕಶ್ಮಲವಿಲ್ಲದೆ ಪರಿಶುದ್ಧವಾಗುತ್ತದೆ. ಕೃಷ್ಣಪ್ರಜ್ಞೆಯುಳ್ಳ ಮನುಷ್ಯನು ಮಾಡುವ ಕಾರ್ಯಗಳು ಪ್ರತಿಕ್ರಿಯೆಗಳನ್ನು ಉಂಟುಮಾಡುವುದಿಲ್ಲ. ಆದುದರಿಂದ ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡುದರ ಮೂಲಕ ಸದಾಚಾರ ಎಂದು ಕರೆಯುವ ಪರಿಶುದ್ಧ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು. ಶ್ರೀಲ ರೂಪ ಗೋಸ್ವಾಮಿಯವರು ತಮ್ಮ ಭಕ್ತಿರಸಾಮೃತಸಿಂಧು (1.2.187) ವಿನಲ್ಲಿ ಇದುನ್ನ ಹೀಗೆ ವರ್ಣಿಸುತ್ತಾರೆ.

ಈಹಾ ಯಸ್ಯ ಹರೇರ್ದಾಸ್ಯೇ ಕರ್ಮಣಾ ಮನಸಾ ಗಿರಾ |

ನಿಖಿಲಾಸ್ವಪ್ಯವಸ್ಥಾಸು ಜೀವನ್ಮುಕ್ತಃ ಸ ಉಚ್ಯತೇ ||

ಕೃಷ್ಣಪ್ರಜ್ಞೆಯಲ್ಲಿ (ಅಥವಾ ಬೇರೆ ಮಾತುಗಳಲ್ಲಿ ಹೇಳುವುದಾದರೆ ಕೃಷ್ಣಸೇವೆಯಲ್ಲಿ) ತನ್ನ ದೇಹ, ಮನಸ್ಸು, ಬುದ್ಧಿ ಮತ್ತು ಮಾತುಗಳಿಂದ ಕೆಲಸ ಮಾಡುವವನು ಲೌಕಿಕ ಚಟುವಟಿಕೆಗಳು ಎನ್ನಿಸಿಕೊಳ್ಳುವ ಕಾರ್ಯಗಳಲ್ಲಿ ತೊಡಗಿದ್ದರೂ ಐಹಿಕ ಜಗತ್ತಿನಲ್ಲಿ ಇರುವಂತೆಯೇ ಮುಕ್ತನಾದವನು. ಅವನಿಗೆ ಅಹಂಕಾರವಿಲ್ಲ. ಏಕೆಂದರೆ ಅವನು ಈ ಐಹಿಕ ಶರೀರವೇ ತಾನು ಎಂದಾಗಲೀ, ಶರೀರವು ತನ್ನದು ಎಂದಾಗಲೀ ನಂಬುವುದಿಲ್ಲ. ಈ ದೇಹವು ತಾನಲ್ಲ ಮತ್ತು ಈ ದೇಹವು ತನ್ನದಲ್ಲ ಎಂದು ಅವನಿಗೆ ಗೊತ್ತು. ಅವನು ಕೃಷ್ಣನಿಗೆ ಸೇರಿದವನು ಮತ್ತು ದೇಹವೂ ಕೃಷ್ಣನಿಗೆ ಸೇರಿದ್ದು. ತನಗೆ ಸೇರಿರಬಹುದಾದ ಸ್ವತ್ತೆಲ್ಲವನ್ನೂ, ದೇಹ, ಮನಸ್ಸು, ಬುದ್ಧಿ, ಮಾತು, ಪ್ರಾಣ, ಐಶ್ವರ್ಯ ಇವುಗಳಿಂದ ಉತ್ಪಾದಿಸಿದ ಎಲ್ಲವನ್ನೂ ಕೃಷ್ಣನ ಸೇವೆಯಲ್ಲಿ ಬಳಸಿದರೆ ಅವನು ಕೂಡಲೇ ಕೃಷ್ಣನೊಂದಿಗೆ ಹೊಂದಿಕೊಂಡು ಬಿಡುತ್ತಾನೆ. ಅವನು ಕೃಷ್ಣನೊಂದಿಗೆ ಒಂದಾಗಿದ್ದಾನೆ. ತಾನು ದೇಹ ಇತ್ಯಾದಿಯಾಗಿ ನಂಬುವಂತೆ ಮಾಡುವ ಅಹಂಕಾರ ಅವನಿಗಿಲ್ಲ. ಇದು ಕೃಷ್ಣಪ್ರಜ್ಞೆಯ ಪರಿಪೂರ್ಣ ಹಂತ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.