ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ಪ್ರಭಾವದ ಶಕ್ತಿ ಆವರಿಸದಿರುವ ವಸ್ತುವೇ ಇಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನ ಪ್ರಭಾವದ ಶಕ್ತಿ ಆವರಿಸದಿರುವ ವಸ್ತುವೇ ಇಲ್ಲ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಭಗವಂತನ ಪ್ರಭಾವದ ಶಕ್ತಿ ಆವರಿಸದಿರುವ ವಸ್ತುವೇ ಇಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 11ನೇ ಅಧ್ಯಾಯದ 37ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ 11 - ವಿಶ್ವರೂಪ -ಶ್ಲೋಕ - 37

ಕಸ್ಮಾಚ್ಚತೇ ನ ನಮೇರನ್ಮಹಾತ್ಮನ್

ಗರೀಯಸೇ ಬ್ರಹ್ಮಣೋಪ್ಯಾದಿಕರ್ತ್ರೇ |

ಅನನ್ತ ದೇವೇಶ ಜಗನ್ನಿವಾಸ

ತ್ವಮಕ್ಷರಂ ಸದಸತ್ತತ್ಪರಂ ಯನ್ ||37||

ಅನುವಾದ: ಬ್ರಹ್ಮನಿಗೂ ಶ್ರೇಷ್ಠನಾದ ಮಹಾತ್ಮನೇ, ನೀನು ಆದಿ ಸೃಷ್ಟಿಕರ್ತನು. ಆದುದರಿಂದ ಅವರು ನಿನಗೆ ಭಕ್ತಿಪೂರ್ವಕ ಪ್ರಣಾಮಗಳನ್ನು ಏಕೆ ಅರ್ಪಿಸಬಾರದು? ನೀನು ಅನಂತನು, ದೇವತೆಗಳ ದೇವ, ಜಗನ್ನಿವಾಸನು. ನೀನು ಅಜೇಯನಾದ ಮೂಲನು. ಎಲ್ಲ ಕಾರಣಗಳ ಕಾರಣನು. ಈ ಐಹಿಕ ಅಭಿವ್ಯಕ್ತಿಗೆ ಅತೀತನಾದವನು.

ಭಾವಾರ್ಥ: ಅರ್ಜುನನು ಕೃಷ್ಣನಿಗೆ ಹೀಗೆ ಪ್ರಣಾಮ ಮಾಡಿ ಅವನು ಎಲ್ಲರ ಪೂಜೆಗೆ ಅರ್ಹನು ಎಂದು ಸೂಚಿಸುತ್ತಾನೆ. ಅವನು ಸರ್ವವ್ಯಾಪಿ, ಎಲ್ಲ ಆತ್ಮಗಳ ಆತ್ಮ. ಅರ್ಜುನನು ಕೃಷ್ಣನನ್ನು ಮಹಾತ್ಮ ಎಂದು ಸಂಬೋಧಿಸುತ್ತಾನೆ. ಮಹಾತ್ಮ ಎಂದರೆ ಕೃಷ್ಣನು ಅತ್ಯಂತ ಉದಾರಿ ಮತ್ತು ಅನಂತನು ಎಂದು ಅರ್ಥ. ಅನಂತ ಎನ್ನುವ ಶಬ್ದವು ಪರಮ ಪ್ರಭುವಿನ ಪ್ರಭಾವವೂ ಶಕ್ತಿಯೂ ಆವರಿಸದಿರುವ ವಸ್ತುವೇ ಇಲ್ಲ ಎನ್ನುವುದನ್ನು ತೋರಿಸುತ್ತದೆ.

ದೇವೇಶ ಎಂದರೆ ಆತನು ಎಲ್ಲ ದೇವತೆಗಳನ್ನು ನಿಯಂತ್ರಿಸುತ್ತಾನೆ. ಅವನು ಅವರೆಲ್ಲರಿಗಿಂತ ಉನ್ನತವಾದವನು ಎಂದು ಅರ್ಥ. ಅವನು ಇಡೀ ವಿಶ್ವಕ್ಕೆ ಆಶ್ರಯದಾತ. ಅವನಿಗಿಂತ ಶ್ರೇಷ್ಠರಾದವರು ಯಾರೂ ಇಲ್ಲ. ಆದುದರಿಂದ ಎಲ್ಲ ಪರಿಪೂರ್ಣ ಜೀವಿಗಳೂ ಶಕ್ತಿವಂತರಾದ ದೇವತೆಗಳೂ ಅವನಿಗೆ ಗೌರವ ಪೂರ್ವಕ ಪ್ರಣಾಮಗಳನ್ನು ಅರ್ಪಿಸುವುದು ಯೋಗ್ಯ ಎಂದೂ ಅರ್ಜುನನು ಭಾವಿಸಿದನು. ಕೃಷ್ಣನು ಬ್ರಹ್ಮನಿಗಿಂತ ಶ್ರೇಷ್ಠನು ಎಂದು ಅರ್ಜುನನು ವಿಶೇಷವಾಗಿ ಪ್ರಸ್ತಾಪಿಸುತ್ತಾನೆ. ಏಕೆಂದರೆ ಕೃಷ್ಣನು ಬ್ರಹ್ಮನನ್ನು ಸೃಷ್ಟಿಸಿದ.

ಗರ್ಭೋದಕಶಾಯಿ ವಿಷ್ಣುವಿನ ನಾಭಿಯಿಂದ ಬೆಳೆದ ಕಮಲದ ಕಾಂಡದಿಂದ ಹುಟ್ಟಿದವನು ಬ್ರಹ್ಮ. ವಿಷ್ಣುವು ಕೃಷ್ಣನ ಸ್ವಾಂಶ ವಿಸ್ತರಣೆ. ಆದುದರಿಂದ ಬ್ರಹ್ಮನೂ ಮತ್ತು ಅವನಿಂದ ಹುಟ್ಟಿದ ಶಿವನೂ ಇತರ ಎಲ್ಲ ದೇವತೆಗಳೂ ತಮ್ಮ ಗೌರವ ಪೂರ್ವಕ ಪ್ರಣಾಮಗಳನ್ನು ಸಲ್ಲಿಸಬೇಕು. ಶ್ರೀಮದ್ಭಾಗವತದಲ್ಲಿ ಶಿವನೂ ಬ್ರಹ್ಮನೂ ಅವರಂತಹ ಇತರ ದೇವತೆಗಳೂ ಭಗವಂತನನ್ನು ಗೌರವಿಸುತ್ತಾರೆ ಎಂದು ಹೇಳಿದೆ. ಅಕ್ಷರಮ್ ಎನ್ನುವ ಪದವು ಬಹಳ ಮಹತ್ವದ್ದು. ಈ ಭೌತಿಕ ಸೃಷ್ಟಿಯು ನಾಶವಾಗತಕ್ಕದ್ದು. ಆದರೆ ಪ್ರಭುವು ಈ ಭೌತಿಕ ಸೃಷ್ಟಿಯನ್ನು ಮೀರಿದವನು. ಅವನು ಎಲ್ಲ ಕಾರಣಗಳ ಕಾರಣನು. ಹೀಗಿರುವುದರಿಂದ ಈ ಭೌತಿಕ ಪ್ರಕೃತಿಯಲ್ಲಿರುವ ಬದ್ಧ ಆತ್ಮರಿಗಿಂತಲೂ, ಭೌತಿಕ ವಿಶ್ವದ ಅಭಿವ್ಯಕ್ತಿಗಿಂತಲೂ ಶ್ರೇಷ್ಠನು. ಆದುದರಿಂದ ಅವನು ಸರ್ವಶ್ರೇಷ್ಠ ಪರಮ ಪ್ರಭು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.