ಭಗವದ್ಗೀತೆ: ಭಗವಂತನ ಸೇವೆ ಮಾಡುವ ವ್ಯಕ್ತಿ ಶಾಂತಿಗಾಗಿ ಬೇರೆಲ್ಲೂ ಹುಡುಕಬೇಕಿಲ್ಲ; ಗೀತೆಯ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಭಗವಂತನ ಸೇವೆ ಮಾಡುವ ವ್ಯಕ್ತಿ ಶಾಂತಿಗಾಗಿ ಬೇರೆಲ್ಲೂ ಹುಡುಕಬೇಕಿಲ್ಲ ಎಂಬುದರ ಅರ್ಥ ಹೀಗಿದೆ.
ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ |
ತತ್ ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ ||38||
ಈ ಜಗತ್ತಿನಲ್ಲಿ ಆಧ್ಯಾತ್ಮಿಕ ಜ್ಞಾನದಷ್ಟು ಭವ್ಯವಾದದ್ದು ಮತ್ತು ಪರಿಶುದ್ಧವಾದದ್ದು ಬೇರೆ ಯಾವುದೂ ಇಲ್ಲ. ಇಂತಹ ಜ್ಞಾನವು ಎಲ್ಲ ಅನುಭಾವದ ಪರಿಪಕ್ವ ಫಲ. ಭಕ್ತಿಪೂರ್ವಕ ಸೇವೆಯ ಆಚರಣೆಯಲ್ಲಿ ನಿಪುಣನಾದವನು ಕಾಲಕ್ರಮದಲ್ಲಿ ತನ್ನಲ್ಲಿಯೇ ಈ ಜ್ಞಾನವನ್ನು ಸವಿಯುವನು.
ನಾನು ದಿವ್ಯಜ್ಞಾನವನ್ನು ಕುರಿತು ಮಾತನಾಡಿದಾಗ ಆಧ್ಯಾತ್ಮಿಕ ಅರಿವಿಗೆ ಸಂಬಂಧಿಸಿದಂತೆ ಮಾತನಾಡುತ್ತೇವೆ. ಆದುದರಿಂದ ದಿವ್ಯಜ್ಞಾನದಷ್ಟು ಭವ್ಯವಾದದ್ದು ಮತ್ತು ಪರಿಶುದ್ಧವಾದದ್ದು ಬೇರೇನೂ ಇಲ್ಲ. ಅಜ್ಞಾನವೇ ನಮ್ಮ ಬಂಧನದ ಕಾರಣ. ಜ್ಞಾನವೇ ನಮ್ಮ ಮುಕ್ತಿಯ ಕಾರಣ. ಈ ಅರಿವು ಭಕ್ತಿಪೂರ್ವಕ ಸೇವೆಯ ಪರಿಪಕ್ವ ಫಲ. ದಿವ್ಯಜ್ಞಾನದಲ್ಲಿ ನೆಲೆಯನ್ನು ಪಡೆದವನು ಶಾಂತಿಗಾಗಿ ಬೇರೆಲ್ಲೂ ಹುಡುಕಬೇಕಾಗಿಲ್ಲ. ಏಕೆಂದರೆ ಅವನು ತನ್ನಲ್ಲಿಯೇ ಶಾಂತಿನ್ನೂ ಸವಿಯುತ್ತಾನೆ. ಇದನ್ನೇ ಬೇರೆ ಮಾತುಗಳಲ್ಲಿ ಹೇಳುವುದಾದರೆ ಈ ಅರಿವೂ ಶಾಂತಿಯೂ ಕೃಷ್ಣಪ್ರಜ್ಞೆಯಲ್ಲಿ ತುತ್ತತುದಿಗೇರುತ್ತವೆ. ಭಗವದ್ಗೀತೆಯಲ್ಲಿ ಇದೇ ಕಡೆಯ ಮಾತು.
ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರಃ ಸಂಯತೇಂದ್ರಿಯಃ |
ಜ್ಞಾನಂ ಲಬ್ಧ್ವಾ ಪರಾಂ ಶಾನ್ತಿಮಚಿರೇಣಾಧಿಗಚ್ಛತಿ ||39||
ದಿವ್ಯಜ್ಞಾನಕ್ಕೆ ಮುಡಿಪಾದ ಮತ್ತು ಇಂದ್ರಿಯ ನಿಗ್ರಹ ಮಾಡಿದ ಶ್ರದ್ಧಾವಂತನಿಗೆ ಇಂತಹ ಜ್ಞಾಹವನ್ನು ಪಡೆಯುವ ಅರ್ಹತೆಯಿರುತ್ತದೆ. ಅದನ್ನು ಪಡೆದ ಅವರು ಶೀಘ್ರವಾಗಿ ಪರಮ ಆಧ್ಯಾತ್ಮಿಕ ಶಾಂತಿಯನ್ನು ಪಡೆಯುವನು.
ಕೃಷ್ಣಪ್ರಜ್ಞೆಯಲ್ಲಿ ಇಂತಹ ಜ್ಞಾನವನ್ನು, ಕೃಷ್ಣನಲ್ಲಿ ದೃಢನಂಬಿಕೆಯಿಂದ ಶ್ರದ್ಧಾವಂತನು ಪಡೆದುಕೊಳ್ಳಬಲ್ಲ. ಕೃಷ್ಣಪ್ರಜ್ಞೆಯಲ್ಲಿ ಕರ್ಮ ಮಾಡಿದರೆ ಸಾಕು. ತಾನು ಉನ್ನತೋನ್ನತ ಪರಿಪೂರ್ಣತೆಯನ್ನು ಪಡೆಯಬಲ್ಲೆ ಎಂದು ಯೋಚಿಸುವವನೇ ಶ್ರದ್ಧಾವಂತ. ಈ ಶ್ರದ್ಧೆಯನ್ನು ಪಡೆದುಕೊಳ್ಳುವ ಮಾರ್ಗ ಭಕ್ತಿಪೂರ್ವಕ ಸೇವೆಯನ್ನು ಮಾಡುವುದು ಮತ್ತು ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ಎಂದು ನಾಮ ಸಂಕೀರ್ತನೆ ಮಾಡುವುದು. ಇದು ಹೃದಯದಲ್ಲಿನ ಐಹಿಕ ಕೊಳೆಯನ್ನೆಲ್ಲ ತೊಳೆದುಹಾಕುವುದು. ಇದಕ್ಕಿಂತ ಮುಖ್ಯವಾಗಿ ಮನುಷ್ಯನು ಇಂದ್ರಿಯಗಳನ್ನು ನಿಯಂತ್ರಿಸಬೇಕು. ಕೃಷ್ಣನಲ್ಲಿ ನಿಷ್ಠೆಯನ್ನಿಟ್ಟುಕೊಂಡು ಇಂದ್ರಿಯಗಳನ್ನು ನಿಯಂತ್ರಣ ಮಾಡಿದವನು ಸುಲಭವಾಗಿ ಮತ್ತು ವಿಳಂಬವಿಲ್ಲದೆ ಕೃಷ್ಣಪ್ರಜ್ಞೆಯ ಅರಿವಿನಲ್ಲಿ ಪರಿಪೂರ್ಣನಾಗುವನು.