ಭಗವದ್ಗೀತೆ: ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಈ ಪ್ರವೃತ್ತಿ ಸ್ವಲ್ಪವೂ ಇರುವುದಿಲ್ಲ; ಗೀತೆಯ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಈ ಪ್ರವೃತ್ತಿ ಸ್ವಲ್ಪವೂ ಇರುವುದಿಲ್ಲ; ಗೀತೆಯ ಅರ್ಥ ಹೀಗಿದೆ

ಭಗವದ್ಗೀತೆ: ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಈ ಪ್ರವೃತ್ತಿ ಸ್ವಲ್ಪವೂ ಇರುವುದಿಲ್ಲ; ಗೀತೆಯ ಅರ್ಥ ಹೀಗಿದೆ

ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಈವೊಂದು ಪ್ರವೃತ್ತಿ ಸ್ವಲ್ಪವೂ ಇರುವುದಿಲ್ಲ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಯಸ್ಯ ಸರ್ವೇ ಸಮಾರಮ್ಭಾಃ ಕಾಮಸನ್ಕಲ್ಪವರ್ಜಿತಾಃ |

ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಣ್ಡಿತಂ ಬುಧಾಃ ||19||

ಯಾವ ವ್ಯಕ್ತಿಯ ಪ್ರತಿಯೊಂದು ಕರ್ಮವೂ ಇಂದ್ರಿಯ ತೃಪ್ತಿಯ ಬಯಕೆಯಿಂದ ಮುಕ್ತವಾಗಿರುತ್ತದೆಯೋ ಅಂತಹವನು ಪೂರ್ಣ ಜ್ಞಾನದಲ್ಲಿ ಇರುವನು. ಋಷಿಗಳ ಪ್ರಕಾರ ಅಂತಹವನ ಕರ್ಮದ ಪ್ರತಿಕ್ರಿಯೆಗಳನ್ನು ಪೂರ್ಣಜ್ಞಾನದ ಅಗ್ನಿಯು ಸುಟ್ಟುಹಾಕುತ್ತದೆ.

ಪೂರ್ಣಜ್ಞಾನದಲ್ಲಿರುವವನು ಮಾತ್ರವೇ ಕೃಷ್ಣಪ್ರಜ್ಞೆಯಲ್ಲಿರುವವನ ಕಾರ್ಯಗಳನ್ನು ಅರ್ಥಮಾಡಿಕೊಳ್ಳಬಲ್ಲ. ಕೃಷ್ಣಪ್ರಜ್ಞೆಯಲ್ಲಿರುವ ಮನುಷ್ಯನಿಗೆ ಇಂದ್ರಿಯಭೋಗದ ಪ್ರವೃತ್ತಿಯು ಸ್ವಲ್ಪವೂ ಇರುವುದಿಲ್ಲ. ಆತನು ದೇವೋತ್ತಮ ಪರಮ ಪುರುಷನ ನಿತ್ಯಸೇವಕನಾಗಿ ತನ್ನ ಸ್ವರೂಪಸ್ಥಿತಿಯ ಪರಿಪೂರ್ಣಜ್ಞಾನವನ್ನು ಪಡೆದಿರುತ್ತಾನೆ. ಇದರಿಂದ ಅವನು ತನ್ನ ಕೆಲಸದ ಪ್ರತಿಕ್ರಿಯೆಯನ್ನು ಸುಟ್ಟುಹಾಕಿದ್ದಾನೆ ಎಂದು ಅರ್ಥಮಾಡಿಕೊಳ್ಳಬೇಕು. ಇಂತಹ ಪರಿಪೂರ್ಣ ಜ್ಞಾನವನ್ನು ಪಡೆದವನು ನಿಜವಾಗಿಯೂ ವಿದ್ವಾಂಸನು. ಭಗವಂತನ ನಿತ್ಯಸೇವಕನೆಂಬ ಈ ಜ್ಞಾನದ ಬೆಳವಣಿಗೆಯನ್ನು ಅಗ್ನಿಗೆ ಹೋಲಿಸಿದೆ. ಇಂತಹ ಅಗ್ನಿಯನ್ನು ಒಮ್ಮೆ ಹೊತ್ತಿಸಿದರೆ ಎಲ್ಲ ಬಗೆಯ ಪ್ರತಿಕ್ರಿಯೆಗಳನ್ನು ಅದು ಸುಡಬಲ್ಲದು.

ತ್ಯಕ್ತ್ವಾ ಕರ್ಮಫಲಾಸನ್ಗಂ ನಿತ್ಯತೃಪ್ತೋ ನಿರಾಶ್ರಯಃ |

ಕರ್ಮಣ್ಯಭಿಪ್ರವೃತ್ತೋಪಿ ನೈವ ಕಿಞ್ಟಿತ್ ಕರೋತಿ ಸಃ ||20||

ತನ್ನ ಕಾರ್ಯಗಳ ಫಲಗಳ ಬಗ್ಗೆ ಇಂತಹ ಮನುಷ್ಯನು ಎಲ್ಲ ಮೋಹವನ್ನೂ ತ್ಯಜಿಸಿರುತ್ತಾನೆ. ಅವನು ಸದಾ ತೃಪ್ತನು ಮತ್ತು ಸ್ವತಂತ್ರನು. ಅವನು ಎಲ್ಲ ಬಗೆಯ ಕಾರ್ಯಗಳಲ್ಲಿ ನಿರತನಾಗಿದ್ದರೂ ಫಲಾಪೇಕ್ಷೆ ಇರುವ ಕ್ರಮವನ್ನು ಮಾಡುವುದಿಲ್ಲ.

ಕೃಷ್ಣಪ್ರಜ್ಞೆಯಲ್ಲಿ ಎಲ್ಲವನ್ನೂ ಕೃಷ್ಣನಿಗಾಗಿಯೇ ಮಾಡುತ್ತಿರುವಾಗ ಮಾತ್ರ ಕರ್ಮಬಂಧನದಿಂದ ಬಿಡುಗಡೆ ಸಾಧ್ಯ. ಕೃಷ್ಣಪ್ರಜ್ಞೆ ಇರುವ ಮನುಷ್ಯನಿಗೆ ದೇವೋತ್ತಮ ಪರಮ ಪುರುಷನಲ್ಲಿ ಶುದ್ಧಪ್ರೇಮವಿರುವುದರಿಂದ ಅವನು ಕರ್ಮ ಮಾಡುತ್ತಾನೆ. ಆದುದರಿಂದ ಕರ್ಮಫಲದಲ್ಲಿ ಅವನಿಗೆ ಆಸಕ್ತಿ ಆಕರ್ಷಣೆಗಳೇ ಇಲ್ಲ. ತನ್ನ ಪೋಷಣೆಯ ವಿಷಯದಲ್ಲಿಯೂ ಅವನಿಗೆ ಆಸಕ್ತಿ ಇರುವುದಿಲ್ಲ. ಏಕೆಂದರೆ ಅವನು ಎಲ್ಲವನ್ನೂ ಕೃಷ್ಣನಿಗೆ ಬಿಟ್ಟಿರುತ್ತಾನೆ.

ವಸ್ತುಗಳನ್ನು ಪಡೆಯಬೇಕೆಂಬ ಕಾತಾರವಾಗಲೀ ಆಗಲೇ ತನ್ನಲ್ಲಿರುವ ವಸ್ತುಗಳನ್ನು ರಕ್ಷಿಸಬೇಕೆಂಬ ಕಾತರವಾಗಲೀ ಅವನಿಗಿಲ್ಲ. ಆದಷ್ಟು ಚೆನ್ನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಿ ಎಲ್ಲವನ್ನೂ ಅವನು ಕೃಷ್ಣನಿಗೆ ಬಿಟ್ಟುಬಿಡುತ್ತಾನೆ. ಇಂತಹ ನಿರ್ಲಿಪ್ತ ಮನುಷ್ಯನು ಒಳಿತು ಮತ್ತು ಕೆಡಕು ಕರ್ಮಗಳ ಪ್ರತಿಕ್ರಿಯೆಗಳಿಂದ ಸದಾ ಮುಕ್ತನಾಗಿರುತ್ತಾನೆ. ಅವನು ಏನನ್ನೂ ಮಾಡದೆಯೇ ಇರುವಂತೆ ಇರುತ್ತಾನೆ. ಇದು ಅಕರ್ಮದ ಎಂದರೆ ಪ್ರತಿಕ್ರಿಯೆಗಳ ಫಲಗಳಿಲ್ಲದ ಕರ್ಮದ ಸಂಕೇತ. ಆದುದರಿಂದ ಕೃಷ್ಣಪ್ರಜ್ಞೆ ಇಲ್ಲದ ಬೇರೆ ಯಾವುದೇ ಕರ್ಮವು ಮಾಡುವವನನ್ನು ಬಂಧಿಸುತ್ತದೆ. ಮೊದಲೇ ವಿವರಿಸಿದಂತೆ ಅದು ವಿಕರ್ಮದ ನಿಜವಾದ ಲಕ್ಷಣ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.