ಭಗವದ್ಗೀತೆ: ಕಷ್ಟದಲ್ಲಿರುವ ಅಸಂಖ್ಯಾತ ಮನುಷ್ಯರಿಗೆ ಪರಿಹಾರ ಬೇಕು ಎಂಬ ಗೀತೆಯ ಸಾರಾಂಶ ತಿಳಿಯಿರಿ
ವಿಶ್ವಸೃಷ್ಟಿ ಎಂದರನೇ? ಅದನ್ನು ಕಾಲವು ಹೇಗೆ ನಿಯಂತ್ರಿಸುತ್ತದೆ ಮತ್ತು ಜೀವಿಗಳ ಕರ್ಮಗಳು ಯಾವುವು ಎಂದು ಭಗವದ್ಗೀತೆಯಿಂದ ನಾವು ಕಲಿಯಬೇಕು.
ಭಗವದ್ಗೀತೆ (BhagavadGita) ಎಂದರೇನು? ಭಗವದ್ಗೀತೆಯ ಗುರಿಯು ಮಾನವ ಕುಲವನ್ನು ಐಹಿಕ ಅಸ್ತಿತ್ವದ ಅಜ್ಞಾನದಿಂದ ಉದ್ಧರಿಸುವುದು. ಕುರುಕ್ಷೇತ್ರ (Kurukshetra) ಯುದ್ಧದಲ್ಲಿ ಹೋರಾಡಬೇಕಾಗಿ ಬಂದು ಅರ್ಜುನನು (Arjuna) ಕಷ್ಟದಲ್ಲಿದ್ದಂತೆ ಪ್ರತಿಯೊಬ್ಬನೂ ಹಲವಾರು ಬಗೆಯ ಕಷ್ಟದಲ್ಲಿರುತ್ತಾನೆ. ಅರ್ಜುನನು ಕೃಷ್ಣನಿಗೆ ಶರಣಾಗತನಾದನು. ಇದರಿಂದಾಗಿ ಗೀತೆಯ ಉಪದೇಶವಾಯಿತು.
ಅರ್ಜುನನು ಮಾತ್ರವೇ ಅಲ್ಲ, ನಮ್ಮಲ್ಲಿ ಪ್ರತಿಯೊಬ್ಬನೂ ಐಹಿಕ ಅಸ್ತಿತ್ವದಿಂದಾಗಿ ಆತಂಕದಿಂದ ತುಂಬಿಹೋಗಿರುತ್ತಾನೆ. ನಮ್ಮ ಅಸ್ತಿತ್ವವು ನಿತ್ಯಾವದದು. ಆದರೆ ಹೇಗೋ ಏನೋ ನಾವು ಅಸತ್ತಿನಲ್ಲಿ ಸಿಕ್ಕಿಕೊಂಡಿದ್ದೇವೆ. ಅಸತ್ ಎಂದರೆ ಯಾವುದು ಅಸ್ತಿತ್ವದಲ್ಲಿಲ್ಲವೋ ಅದು.
ಎಲ್ಲಾ ಸಂಕಷ್ಟಗಳಿಗೆ ಪರಿಹಾರ ಬೇಕು
ಕಷ್ಟದಲ್ಲಿರುವ ಅಸಂಖ್ಯಾತ ಮನುಷ್ಯರಲ್ಲಿ ತಮ್ಮ ಸ್ಥಿತಿಯನ್ನು ಕುರಿತು ಪ್ರಶ್ನಿಸುವವರು ಕೆಲವರಿದ್ದಾರೆ; ತಾವು ಯಾರು, ತಾವು ಈ ತೊಡಕಿನ ಸ್ಥಿತಿಯಲ್ಲಿರುವುದಕ್ಕೆ ಕಾರಣವೇನು ಮುಂತಾಗಿ ಕೇಳಿಕೊಳ್ಳುತ್ತಾರೆ. ವ್ಯಕ್ತಿಯುವ ಸಂಕಟವನ್ನು ಕುರಿತು ಪ್ರಶ್ನೆ ಮಾಡುವ ಈ ಸ್ಥಿತಿಗೆ ಬರದಿದ್ದರೆ, ಸಂಕಟ ಬೇಡ, ಆದರೆ ಎಲ್ಲ ಸಂಕಟಕ್ಕೆ ಪರಿಹಾರ ಬೇಕು ಎಂಬುದನ್ನು ಅರಿತುಕೊಳ್ಳದಿದ್ದರೆ, ಅವನನ್ನು ಪರಿಪೂರ್ಣ ಮನುಷ್ಯ ಎಂದು ಪರಿಗಣಿಸಲು ಆಗುವುದಿಲ್ಲ.
ಇಂತಹ ಪ್ರಶ್ನೆಯು ಮನಸ್ಸಿನಲ್ಲಿ ಜಾಗ್ರತವಾದಾಗ ಮಾನವಕುಲ ಪ್ರಾಂಭವಾಗುತ್ತದೆ. ಬ್ರಹ್ಮಸೂತ್ರದಲ್ಲಿ ಈ ಪ್ರಶ್ನೆಯ ಪ್ರಕ್ರಿಯೆಯನ್ನು ಬ್ರಹ್ಮ ಜಿಜ್ಞಾಸಾ ಎಂದು ಕರೆದಿದ್ದಾರೆ. ಅಥಾತೋ ಬ್ರಹ್ಮ ಜಿಜ್ಞಾಸಾ. ಪರಾತ್ಪರದ ಸ್ವರೂಪವನ್ನು ಕುರಿತು ಮನುಷ್ಯನು ಪ್ರಶ್ನೆ ಮಾಡದಿದ್ದರೆ ಅವನ ಎಲ್ಲ ಬಗೆಯ ಕ್ರಿಯೆಗಳನ್ನೂ ವಿಫಲವೆಂದೇ ಭಾವಿಸಬೇಕಾಗುತ್ತದೆ. ಆದುದರಿಂದ, ತಾವು ಸಂಕಟಕ್ಕೆ ಒಳಗಾಗುವುದೇಕೆ, ತಾವು ಎಲ್ಲಿಂದ ಬಂದಿದ್ದೇವೆ, ಸತ್ತನಂತರ ತಾವು ಹೋಗುವುದೆಲ್ಲಿಗೆ ಎಂದೆಲ್ಲ ಪ್ರಶ್ನಿಸುವವರು ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಯೋಗ್ಯ ವಿದ್ಯಾರ್ಥಿಗಳು. ಪ್ರಾಮಾಣಿಕ ವಿದ್ಯಾರ್ಥಿಗೆ ದೇವೋತ್ತಮ ಪರಮ ಪುರುಷನಲ್ಲಿ ದೃಢವಾದ ಗೌರವ ಇರಬೇಕು. ಅರ್ಜುನನು ಇಂತಹ ವಿದ್ಯಾರ್ಥಿ.
‘ವಾಸ್ತವವಾಗಿ ಅಜ್ಞಾನದ ವ್ಯಾಘ್ರಿಣಿ ನಮ್ಮನ್ನೆಲ್ಲ ನುಂಗಿಹಾಕಿದ್ದಾಳೆ’
ಮನುಷ್ಯನ ಬದುಕಿನ ನಿಜವಾದ ಉದ್ದೇಶವನ್ನು ಮರೆತಾಗ ಅದನ್ನು ಮತ್ತೆ ಸ್ಥಾಪಿಸುವ ಸ್ಪಷ್ಟ ಕಾರಣಕ್ಕಾಗಿಯೇ ಕೃಷ್ಣನು ಇಳಿದುಬರುತ್ತಾನೆ. ಆಗಲೂ ಸಹ ಜಾಗೃತರಾಗುವ ಅಸಂಖ್ಯಾತ ಮನುಷ್ಯರಲ್ಲಿ ತನ್ನ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮನೋಧರ್ಮದವನು ಒಬ್ಬನಿರಬಹುದು. ಭಗವದ್ಗೀತೆಯನ್ನು ಹೇಳಿರುವುದು ಅವನಿಗಾಗಿ. ವಾಸ್ತವವಾಗಿ ಅಜ್ಞಾನದ ವ್ಯಾಘ್ರಿಣಿ ನಮ್ಮನ್ನೆಲ್ಲ ನುಂಗಿಹಾಕಿದ್ದಾಳೆ. ಆದರೆ ಭಗವಂತನಿಗೆ ಜೀವಿಗಳಲ್ಲಿ, ಅದರಲ್ಲೂ ಮನುಷ್ಯರಲ್ಲಿ ಅಪಾರಕರುಣೆ. ಈ ಉದ್ದೇಶದಿಂದಲೇ ಭಗವಂತನ ಗೆಳೆಯನಾದ ಅರ್ಜುನನನ್ನು ತನ್ನ ಶಿಷ್ಯನನ್ನಾಗಿ ಮಾಡಿಕೊಂಡ ಭಗವದ್ಗೀತೆಯನ್ನು ಬೋಧಿಸಿದ.
ಶ್ರೀಕೃಷ್ಣನ ಸಂಗಾತಿಯಾಗಿ ಅರ್ಜುನನ್ನು ಎಲ್ಲ ಅಜ್ಞಾನವನ್ನೂ ಮೀರಿದ್ದವನು. ಆದರೆ ಕುರುಕ್ಷೇತ್ರದ ರಣಭೂಮಿಯಲ್ಲಿ ಆತನಿಗೆ ಅಜ್ಞಾನ ಕವಿಯಿತು. ಮುಂದಿನ ಪೀಳಿಗೆಗಳ ಮನುಷ್ಯರ ಒಳಿಗಿಗಾಗಿ ಮತ್ತು ಅವರು ಬುದುಕಿನ ಯೋಜನೆಯನ್ನು ರೂಪಿಸಿಕೊಳ್ಳಲಿಕ್ಕಾಗಿ ಶ್ರೀಕೃಷ್ಣನು ಬದುಕಿನ ಸಮಸ್ಯೆಗಳನ್ನು ಕುರಿತು ವಿವರಿಸಲೆಂದು ಅರ್ಜುನನು ಅವನನ್ನು ಪ್ರಶ್ನಿಸುವುದೇ ಇದರ ಉದ್ದೇಶವಾಗಿತ್ತು. ಆಗ ಜನರು ಅದರಂತೆಯೇ ನಡೆದು ಮಾನವ ಜೀವನದ ಧ್ಯೇಯವನ್ನು ಪರಿಪೂರ್ಣಗೊಳಿಸಬಹುದು.
ಭಗವದ್ಗೀತೆಯ ವಸ್ತುವು ಐದು ಮೂಲ ಸತ್ಯಗಳ ಅರಿವನ್ನು ಒಳಗೊಳ್ಳುತ್ತದೆ. ಮೊದಲನೆಯದಾಗಿ ಭಗವದ್ ವಿಜ್ಞಾನವನ್ನು ವಿವರಿಸಿ ಅನಂತರ ಜೀವಿಗಳ ಸಹಜ ಸ್ವರೂಪವನ್ನು ವಿವರಿಸಿದೆ. ಸರ್ವನಿಯಾಮಕನಾದ ಈಶ್ವರನಿದ್ದಾನೆ; ನಿಯಮಕ್ಕೊಳಗಾಗುವ ಜೀವಿಗಳಿದ್ದಾರೆ. ತಾವು ನಿಮಯಕ್ಕೊಳಪಟ್ಟಿಲ್ಲ. ಸ್ವತಂತ್ರನು ಎಂದು ಯಾವ ಜೀವಿಯಾದರೂ ಹೇಳಿದರೆ ಅವು ಹುಚ್ಚನೇ ಸರಿ.
ದೇವರು ಎಂದರೇನು ಎಂಬುದನ್ನು ಭಗವದ್ಗೀತೆಯಿಂದ ಕಲಿಬಹುದು
ಜೀವಿಯ ಬದ್ಧಬುಕಿನಲ್ಲಂತೂ ಆತನು ಎಲ್ಲ ರೀತಿಗಳಲ್ಲೂ ನಿಯಂತ್ರಣಕ್ಕೊಳಪಟ್ಟಿರುತ್ತಾನೆ. ಭಗವದ್ಗೀತೆಯ ವಸ್ತು ಪರ ನಿಯಾಮಕನಾದ ಈಶ್ವರ ಮತ್ತು ನಿಮಯಕ್ಕೊಳಪಟ್ಟ ಜೀವಿಗಳು, ಪ್ರಕೃತಿ (ಐಹಿಕ ನಿಸರ್ಗ) ಮತ್ತು ಕಾಲ (ಇಡೀ ವಿಶ್ವದ ಅಸ್ತಿತ್ವದ ಅಥವಾ ಐಹಿಕ ನಿಸರ್ಗದ ಕಲಾವಾಧಿ) ಮತ್ತು ಕರ್ಮ ಇವುಗಳನ್ನು ಚರ್ಚಿಸಲಾಗಿದೆ. ವಿಶ್ವಸೃಷ್ಟಿಯು ವಿಧವಿಧವಾದ ಕರ್ಮಗಳಿಂದ ತುಂಬಿದೆ. ಎಲ್ಲಾ ಜೀವಿಗಳು ವಿವಿಧ ಕರ್ಮಗಳಲ್ಲಿ ತೊಡಗಿದ್ದಾರೆ. ದೇವರು ಎಂದರೇನು? ಜೀವಾತ್ಮರು ಯಾರು, ಪ್ರಕೃತಿ ಎಂದರೇನು, ವಿಶ್ವಸೃಷ್ಟಿ ಎಂದರನೇ, ಅದನ್ನು ಕಾಲವು ಹೇಗೆ ನಿಯಂತ್ರಿಸುತ್ತದೆ ಮತ್ತು ಜೀವಿಗಳ ಕರ್ಮಗಳು ಯಾವುವು ಎಂದು ಭಗವದ್ಗೀತೆಯಿಂದ ನಾವು ಕಲಿಯಬೇಕು.