ಭಗವದ್ಗೀತೆ: ಸನಾತನ ಧರ್ಮ ಯಾವುದೋ ಒಂದು ಧರ್ಮ, ಪಂಥದ ಪ್ರಕ್ರಿಯೆಯಲ್ಲ; ಗೀತೆಯ ಪ್ರಸ್ತಾವನೆಯಲ್ಲಿನ ಅರ್ಥ ತಿಳಿಯಿರಿ
ಸನಾತನ ಧರ್ಮ ಎಂದರೆ ಯಾವುದೊಂದು ಧರ್ಮದ, ಪಂಥದ ಪ್ರಕ್ರಿಯೆಯಲ್ಲ. ಅದು ಸನಾತನ ಜೀವಿಗಳು ಸನಾತನ ಭಗವಂತನೊಡನೆ ಹೊಂದಿರುವ ಸಂಬಂಧದದ ಸನಾತನ ಕರ್ತವ್ಯ. ಗೀತೆಯ ಪ್ರಸ್ತಾವನೆಯಲ್ಲಿರುವ ಈ ಸಾರಾಂಶವನ್ನು ತಿಳಿಯಿರಿ.
ಭಗವದ್ಗೀತೆಯ (Bhagavadgita) ಪ್ರಸ್ತಾವನೆಯಲ್ಲಿ ಹೀಗೆ ಹೇಳಲಾಗಿದೆ. ಭಗವಂತನೂ ಅವನ ಅಲೌಕಿಕ ನಿವಾಸವೂ ಸನಾತನ; ಜೀವಿಗಳೂ ಸನಾತನ; ಸನಾತನ ನಿವಾಸದಲ್ಲಿ ಭಗವಂತನ ಮತ್ತು ಜೀವಿಗಳ ಸಹವಾಸವೇ ಮಾನವನ ಬದುಕಿನ ಪರಿಪೂರ್ಣತೆ. ಜೀವಿಗಳು ಭಗವಂತನ ಪುತ್ರರಾದ್ದರಿಂದ ಅವನಿಗೆ ಅವರಲ್ಲಿ ಬಹು ಕೃಪೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ, ಸರ್ವಯೋನಿಷು…ಅಹಂ ಬೀಜಪ್ರದಃ ಪಿತಾ "ನಾನೇ ಎಲ್ಲರ ತಂದೆ" ಎಂದು ಘೋಷಿಸುತ್ತಾನೆ. ನಿಜ, ತಮ್ಮ ತಮ್ಮ ಕರ್ಮಗಳಿಗೆ ಅನುಗುಣವಾಗಿ ಮೂರು ಬಗೆಗಳ ಜೀವಿಗಳಿದ್ದಾರೆ. ಆದರೆ ಇಲ್ಲಿ ಭಗವಂತನು ತಾನೇ ಅವರೆಲ್ಲರ ತಂದೆ ಎಂದು ಹೇಳುತ್ತಾನೆ.
ಆದುದರಿಂದ ಭಗವಂತನು ಈ ಪತಿತ, ಬದ್ಧ ಆತ್ಮಗಳನ್ನು ಉದ್ಧಾರ ಮಾಡಲು ಅವತಾರ ಮಾಡುತ್ತಾನೆ; ಈ ಸನಾತನ ಜೀವಿಗಳು ಭಗವಂತನೊಡನೆ ನಿರಂತರ ಸಹವಾಸಕ್ಕಾಗಿ ತಮ್ಮ ಸನಾತನ ಸ್ಥಾನಗಳನ್ನು ಪಡೆದುಕೊಳ್ಳಬೇಕು. ಹೀಗೆ ಅವರನ್ನು ಸನಾತನ ಆಕಾಶಕ್ಕೆ ಹಿಂದಕ್ಕೆ ಕರೆದುಕೊಳ್ಳಲು ಭಗವಂತನು ಅತವರಿಸುತ್ತಾನೆ. ಬದ್ಧ ಆತ್ಮಗಳ ಉದ್ಧಾರಕ್ಕಾಗಿ ಭಗವಂತನೇ ಬೇರೆ ಬೇರೆ ಅವತಾರಗಳನ್ನು ಎತ್ತುತ್ತಾನೆ ಅಥವಾ ತನ್ನ ಆಪ್ತ ಸೇವಕರನ್ನು ಮಕ್ಕಳಾಗಿ ಅಥವಾ ತನ್ನ ಸಂಗಾತಿಗಳಾಗಿ ಇಲ್ಲವೇ ಆಚಾರ್ಯರಾಗಿ ಕಳುಹಿಸುತ್ತಾನೆ.
ಯಾವುದು ಸನಾತನ ಧರ್ಮ?
ಸನಾತನ ಧರ್ಮ ಎಂದರೆ ಯಾವುದೊಂದು ಧರ್ಮದ, ಪಂಥದ ಪ್ರಕ್ರಿಯೆಯಲ್ಲ. ಅದು ಸನಾತನ ಜೀವಿಗಳು ಸನಾತನ ಭಗವಂತನೊಡನೆ ಹೊಂದಿರುವ ಸಂಬಂಧದದ ಸನಾತನ ಕರ್ತವ್ಯ. ಆಗಲೇ ಹೇಳಿದಂತೆ ಸನಾತನ ಧರ್ಮ ಎನ್ನುವುದು ಜೀವಿಯ ನಿರಂತರ ಕರ್ತವ್ಯವನ್ನು ತೋರಿಸುತ್ತದೆ. ಸನಾತನ ಪದವನ್ನು ಶ್ರೀಪಾದ ರಾಮಾನುಜಾಚಾರ್ಯರು, ಆದಿಯೂ ಅಂತ್ಯವೂ ಇಲ್ಲದ್ದು ಎಂದು ವಿವರಿಸಿದ್ದಾರೆ. ಆದುದರಿಂದ ನಾವು ಸನಾತನ ಧರ್ಮವನ್ನು ಕುರಿತು ಮಾತನಾಡಿದಾಗ ಶ್ರೀಪಾದ ರಾಮಾನುಜಾಚಾರ್ಯರ ಅಧಿಕಾರ ವಾಣಿಯಂತೆ ಆದಿಯಾಗಲಿ ಅಂತ್ಯವಾಗಲಿ ಇಲ್ಲದ್ದು ಎಂದು ಭಾವಿಸಬೇಕು.
ರಿಲಿಜನ್ (Religion) ಎನ್ನುವ ಇಂಗ್ಲಿಷ್ ಪದವು ಸನಾತನ ಧರ್ಮಕ್ಕಿಂತ ಸ್ವಲ್ಪ ಭಿನ್ನವಾದದ್ದು. ರಿಲಿಜನ್ ಎನ್ನುವ ಪದವು ಶ್ರದ್ಧೆಯ ಭಾವವನ್ನು ತಿಳಿಸುತ್ತದೆ. ಶ್ರದ್ಧೆಯು ಬದಲಾಗಬಹುದು. ಒಬ್ಬ ವ್ಯಕ್ತಿಗೆ ಒಂದು ನಿರ್ದಿಷ್ಟ ಪ್ರಕ್ರಿಯೆಯಲ್ಲಿ ಶ್ರದ್ಧೆಯಿರಬಹುದು. ಆತನು ಈ ಶ್ರದ್ಧೆಯನ್ನು ಬಿಟ್ಟು ಬೇರೊಂದನ್ನು ಸ್ವೀಕರಿಸಬಹುದು. ಆದರೆ ಸನಾತನ ಧರ್ಮ ಎನ್ನುವ ಶಬ್ದವು ಬದಲಾವಣೆ ಮಾಡಲು ಸಾಧ್ಯವಿಲ್ಲದ ಕಾರ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ ನೀರಿನಿಂದ ದ್ರವತ್ವವನ್ನು ತೆಗೆದುಹಾಕಲು ಸಾಧ್ಯವಿಲ್ಲ; ಹಾಗೆಯೇ ಸನಾತನ ಜೀವಿಯ ಸನಾತನ ಕರ್ತವ್ಯವನ್ನು ಜೀವಿಯಿಂದ ತೆಗೆದುಹಾಕಲು ಸಾಧ್ಯವಿಲ್ಲ.
ಸನಾತನ ಧರ್ಮ ಒಂದು ಪಂಥಕ್ಕೆ ಸೇರಿದ್ದು ಎಂದು ತಪ್ಪಾಗಿ ಭಾವಿಸುತ್ತಾರೆ
ಸನಾತನ ಧರ್ಮವು ಜೀವಿಯೊಂದಿಗೆ ಎಂದೆಂದೂ ಅವಿಭಾಜ್ಯ. ಆದುದರಿಂದ ನಾವು ಸನಾತನ ಧರ್ಮವನ್ನು ಕುರಿತು ಮಾತನಾಡಿದಾಗ ಶ್ರೀಪಾದ ರಾಮಾನುಜಾಚಾರ್ಯರ ಅಧಿಕಾರಿವಾಣಿಯಂತೆ ಅದಕ್ಕೆ ಆದಿಯೂ ಇಲ್ಲ ಅಂತ್ಯವೂ ಇಲ್ಲ ಎಂದು ಭಾವಿಸಬೇಕು. ಆದಿಯಾಗಲಿ ಅಂತ್ಯವಾಗಲಿ ಇಲ್ಲದು ಒಂದು ಪಂಥಕ್ಕೆ ಸೇರಿರಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಯಾವುದೇ ಎಲ್ಲೆಗಳ ಮಿತಿ ಇರಲು ಸಾಧ್ಯವಿಲ್ಲ.
ಯಾವುದಾದರೊಂದು ಪಂಥದ ಶ್ರದ್ಧಗೆ ಸೇರಿದವರು ಸನಾತನ ಧರ್ಮವೂ ಒಂದು ಪಂಥಕ್ಕೆ ಸೇರಿದ್ದು ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಈ ವಿಷಯವನ್ನು ಆಳವಾಗಿ ಪರಿಶೀಲಿಸಿ ಆಧುನಿಕ ವಿಜ್ಞಾನದ ಬೆಳಕಿನಲ್ಲಿ ನೋಡಿದರೆ ಸನಾತನ ಧರ್ಮವು ಜಗತ್ತಿನ ಎಲ್ಲ ಜನರಿಗೆ, ಅಷ್ಟೇ ಅಲ್ಲ, ವಿಶ್ವದ ಎಲ್ಲ ಜೀವಿಗಳಿಗೆ ಸಂಬಂಧಿಸಿದ್ದು ಎಂದು ತಿಳಿಯುತ್ತದೆ.
ಸನಾತನ ಧರ್ಮದ ಇತಿಹಾಸಕ್ಕೆ ಪ್ರಾಂಭ ಎನ್ನುವುದು ಇಲ್ಲ
ಸನಾತನೇತರ ಧಾರ್ಮಿಕ ಶ್ರದ್ಧೆಗೆ ಮಾನವನ ಇತಿಹಾಸದಲ್ಲಿ ಎಲ್ಲಿಯೋ ಪ್ರಾರಂಭವಿರಬಹುದು. ಆದರೆ ಸನಾತನ ಧರ್ಮದ ಇತಿಹಾಸಕ್ಕೆ ಪ್ರಾಂಭ ಎನ್ನುವುದು ಇಲ್ಲ. ಏಕೆಂದರೆ ಅದು ಜೀವಿಗಳೊಂದಿಗೆ ನಿರಂತರವಾಗಿ ಉಳಿಯುತ್ತದೆ. ಜೀವಿಗಳ ಮಟ್ಟಿಗೆ ಹೇಳವುದಾದರೆ ಅಧಿಕಾರದಿಂದ ಹೇಳಬಲ್ಲ ಶಾಸ್ತ್ರಗಳು ಜೀವಿಗೆ ಹುಟ್ಟೂ ಇಲ್ಲ ಸಾವೂ ಇಲ್ಲ ಎನ್ನುತ್ತವೆ. ಜೀವಿಯು ಹುಟ್ಟುವುದೇ ಇಲ್ಲ, ಸಾಯುವುದೇ ಇಲ್ಲ ಎಂದು ಗೀತೆಯು ಹೇಳುತ್ತದೆ. ಆತನು ಸನಾತನು, ಅವಿನಾಶನು; ಅವನ ನಶ್ವರವಾದ ಐಹಿಕ ದೇಹವು ನಾಶವಾದ ಮೇಲೂ ಅವನು ಜೀವಿಸಿಯೇ ಇರುತ್ತಾನೆ.
ಸನಾತನು ಧರ್ಮದ ಪರಿಕಲ್ಪನೆಯ ವಿಷಯದಲ್ಲಿ ನಾವು ಸಂಸ್ಕೃತದಲ್ಲಿ ಆ ಪದದ ಮೂಲವನ್ನು ಗಮನಿಸಿ ಧರ್ಮದ ಕಲ್ಪನೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಯಾವುದೊಂದು ವಿಶಿಷ್ಟ ವಸ್ತುವಿನೊಂದಿಗೆ ಯಾವುದು ನಿರಂತರವಾಗಿರುತ್ತದೋ ಅದು ಧರ್ಮ. ಬೆಂಕಿಯೊಂದಿಗೆ ಶಾಖವೂ ಬೆಳಕೂ ಇರುತ್ತವೆ ಎಂದು ತಿಳಿದುಕೊಳ್ಳುತ್ತೇವೆ. ಶಾಖ ಮತ್ತು ಬೆಳಕುಗಳಿಲ್ಲದ ಬೆಂಕಿ ಎನ್ನುವ ಪದಕ್ಕೆ ಅರ್ಥವೇ ಇಲ್ಲ. ಹಾಗೆಯೇ ಜೀವನ ಸಾರಭೂತವಾದ ಭಾಗವನ್ನು, ಅವರ ನಿರಂತರ ಸಂಗಾತಿಯಾದ ಭಾಗವನ್ನು ನಾವು ಕಂಡುಕೊಳ್ಳಬೇಕು. ಈ ನಿರಂತರ ಸಂಗಾತಿಯೇ ಅವರ ಸನಾತನ ಗುಣ ಮತ್ತು ಸನಾತನ ಗುಣವೇ ಅವರ ಸನಾತನ ಧರ್ಮ.
ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ವೇಳಾಪಟ್ಟಿ
ಇದನ್ನೂ ತಿಳಿಯಿರಿ: ಏಷ್ಯಾಕಪ್ 2023 ಪಾಯಿಂಟ್ಸ್ ಟೇಬಲ್