Bhagavad Gita: ಭಗವಂತನನ್ನು ಸ್ವೀಕರಿಸುವವರು ಬುದ್ಧಿವಂತರಾಗುತ್ತಾರೆ; ಗೀತೆಯ ಸಾರಾಂಶ ಹೀಗಿದೆ
Bhagavad Gita Updesh: ಭಗವಂತನನ್ನು ಸ್ವೀಕರಿಸುವವರು ಬುದ್ಧಿವಂತರಾಗುತ್ತಾರೆ ಎಂಬುದರ ಅರ್ಥವನ್ನು ಭಗವದ್ಗೀತೆಯ 8ನೇ ಅಧ್ಯಾಯದ 19 ಮತ್ತು 20 ನೇ ಶ್ಲೋಕದಲ್ಲಿ ಓದಿ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 18
ಅವ್ಯಕ್ತಾದ್ ವ್ಯಕ್ತಯಃ ಸರ್ವಾಃ ಪ್ರಭವನ್ತ್ಯಹರಾಗಮೇ |
ರಾತ್ರ್ಯಾಗಮೇ ಪ್ರಲೀಯತನ್ನೇ ತತ್ರೈವಾವ್ಯಕ್ತಸಂಂಜ್ಞಕೇ ||18||
ಅನುವಾದ: ಬ್ರಹ್ಮನ ಹಗಲಿನ ಪ್ರಾರಂಭದಲ್ಲಿ ಎಲ್ಲ ಜೀವಿಗಳು ಅವ್ಯಕ್ತಸ್ಥಿತಿಯಿಂದ ಅಭಿವ್ಯಕ್ತಿ ಪಡೆಯುತ್ತಾರೆ. ಅನಂತರ ರಾತ್ರಿಯಾದಾಗ ಅವರು ಮತ್ತೆ ಅವ್ಯಕ್ತದಲ್ಲಿ ಲೀನವಾಗುತ್ತಾರೆ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 19
ಭೂತಗ್ರಾಮಃ ಸ ಏವಾಯಂ ಭೂತ್ವಾ ಭೂತ್ವಾ ಪ್ರಲೀಯತೇ |
ರಾತ್ರ್ಯಾಗಮೇವಶಃ ಪಾರ್ಥ ಪ್ರಭತ್ಯಹರಾಗಮೇ ||19||
ಅನುವಾದ: ಮತ್ತೆ ಮತ್ತೆ ಬ್ರಹ್ಮನಿಗೆ ಹಗಲಾದಾಗ ಈ ಎಲ್ಲ ಜೀವಿಗಳು ಮತ್ತೆ ಹುಟ್ಟುತ್ತವೆ. ಬ್ರಹ್ಮನಿಗೆ ರಾತ್ರಿಯಾದಾಗ, ಅವೆಲ್ಲ ನಿಸ್ಸಹಾಯಕವಾಗಿ ನಾಶವಾಗುತ್ತವೆ.
ಭಾವಾರ್ಥ: ಈ ಐಹಿಕ ಜಗತ್ತಿನೊಳಗೆ ಉಳಿಯಲು ಪ್ರಯತ್ನಿಸುವ ಹೆಚ್ಚು ಬುದ್ಧಿಯಿಲ್ಲದವರು ಮೇಲಿನ ಲೋಕಗಳಿಗೆ ಏರಬಹುದು. ಆದರೆ ಮತ್ತೆ ಈ ಭೂಲೋಕಕ್ಕೆ ಬರಲೇಬೇಕು. ಬ್ರಹ್ಮನ ಹಗಳಿನ ಕಾಲದಲ್ಲಿ ಈ ಐಹಿಕ ಜಗತ್ತಿನೊಳಗೆ ಮೇಲಿನ ಲೋಕಗಳಲ್ಲಿ ಮತ್ತು ಕೆಳಗಿನ ಲೋಕಗಳಲ್ಲಿ ಅವರು ತಮ್ಮ ಚಟುವಟಿಕೆಗಳನ್ನು ಪ್ರದರ್ಶಿಸಬಹುದು. ಆದರೆ ಬ್ರಹ್ಮನಿಗೆ ರಾತ್ರಿಯಾದಾಗ ಅವರು ನಾಶವಾಗುತ್ತಾರೆ. ಹಗಲಿನಲ್ಲಿ ಐಹಿಕ ಚಟುವಟಿಕೆಗಳನ್ನು ನಡೆಸಲು ಅವರಿಗೆ ಹಲವಾರು ಶರೀರಗಳು ಲಭಿಸುತ್ತವೆ. ರಾತ್ರಿಯಲ್ಲಿ ಅವರಿಗೆ ದೇಹಗಳಿರುವುದಿಲ್ಲ. ಅವರು ವಿಷ್ಣುವಿನ ದೇಹದಲ್ಲಿ ಅಡಕವಾಗಿಯೇ ಉಳಿದಿರುತ್ತಾರೆ. ಮತ್ತೆ ಬ್ರಹ್ಮನ ಹಗಲು ಬಂದಾಗ ಅವರು ಪ್ರಕಟವಾಗುತ್ತಾರೆ. ಭೂತ್ವಾ ಭೂತ್ವಾ ಪ್ರಲೀಯತೆ. ಹಗಲಿನಲ್ಲಿ ಅವರು ಕಾಣಿಸಿಕೊಂಡು ರಾತ್ರಿ ಮತ್ತೆ ನಾಶವಾಗುತ್ತಾರೆ.
ಕಟ್ಟಕಡೆಗೆ ಬ್ರಹ್ಮನ ಆಯುಸ್ಸು ಮುಗಿದಾಗ ಅವರೆಲ್ಲ ನಾಶವಾಗುತ್ತಾರೆ ಮತ್ತು ಕೋಟ್ಯಂತರ ವರ್ಷಗಳ ಕಾಲ ಕಾಣಿಸಿಕೊಳ್ಳದೆ ಇರುತ್ತಾರೆ. ಇನ್ನೊಂದು ಯುಗದಲ್ಲಿ ಬ್ರಹ್ಮನು ಮತ್ತೆ ಹುಟ್ಟಿದಾಗ ಅವರು ಮತ್ತೆ ಪ್ರಕಟವಾಗುತ್ತಾರೆ. ಹೀಗೆ ಅವರು ಐಹಿಕ ಜಗತ್ತಿನ ಮಾಂತ್ರಿಕತೆಗೆ ಸಿಕ್ಕಿ ಬೀಳುತ್ತಾರೆ. ಆದರೆ ಕೃಷ್ಣಪ್ರಜ್ಞೆಯನ್ನು ಸ್ವೀಕರಿಸುವ ಬುದ್ಧಿವಂತರು, ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ/ ಹರೇ ರಾಮ, ಹರೇ ರಾಮ, ರಾಮ ರಾಮ ಹರೇ ಹರೇ ಎಂದು ಸಂಕೀರ್ತನ ಮಾಡುತ್ತ ಮಾನವ ಜೀವನವನ್ನು ಪ್ರಭುವಿನ ಭಕ್ತಿಸೇವೆಯಲ್ಲಿ ಸಂಪೂರ್ಣವಾಗಿ ಬಳಸುತ್ತಾರೆ. ಅವರು ಈ ಜನ್ಮದಲ್ಲಿಯೇ ಕೃಷ್ಣನ ದಿವ್ಯ ಲೋಕಕ್ಕೆ ಸಾಗಿಹೋಗುತ್ತಾರೆ ಮತ್ತು ಪುನರ್ಜನ್ಮಕ್ಕೆ ಒಳಗಾಗದೆ ಅಲ್ಲಿ ನಿತ್ಯಾನಂದದಲ್ಲಿ ಇರುತ್ತಾರೆ.
8ನೇ ಅಧ್ಯಾಯ ಭಗವತ್‌ಪ್ರಾಪ್ತಿ - ಶ್ಲೋಕ - 20
ಪರಸ್ತಸ್ಮಾತ್ತು ಭಾವೋನ್ಯೋವ್ಯಕ್ತೋವ್ಯಕ್ತಾತ್ಸನಾತನಃ |
ಯಃ ಸ ಸರ್ವೇಷು ಭೂತೇಷು ನಶ್ಯತ್ಸು ನ ವಿನಶ್ಯತಿ ||20||
ಅನುವಾದ: ಆದರೆ ಇನ್ನೊಂದು ಅವ್ಯಕ್ತವಾದ ಪ್ರಕೃತಿಯಿದೆ. ಅದು ನಿತ್ಯವಾದದ್ದು ಮತ್ತು ಈ ವ್ಯಕ್ತ ಮತ್ತು ಅವ್ಯಕ್ತ ಜಡವಸ್ತುವನ್ನು ಮೀರಿದ್ದು. ಅದು ಪರಮೋನ್ನತವಾದದ್ದು ಮತ್ತು ಎಂದೂ ನಾಶವಾಗುವುದಿಲ್ಲ. ಈ ಜಗತ್ತಿನಲ್ಲಿರುವ ಎಲ್ಲವೂ ನಾಶವಾದಾಗ ಆ ಭಾಗವು ಇದ್ದಂತೆಯೇ ಇರುತ್ತದೆ.
ಭಾವಾರ್ಥ: ಕೃಷ್ಣನ ಶ್ರೇಷ್ಠ ಅಧ್ಯಾತ್ಮಿಕ ಶಕ್ತಿಯು ದಿವ್ಯವಾದದ್ದು ಮತ್ತು ಶಾಶ್ವತವಾದದ್ದು. ಐಹಿಕ ಪ್ರಕೃತಿಯು ವ್ಯಕ್ತವಾದದ್ದು ಮತ್ತು ಬ್ರಹ್ಮನ ಹಗಲುರಾತ್ರಿಗಳಲ್ಲಿ ನಾಶವಾಗತಕ್ಕದ್ದು. ಆದರೆ ಕೃಷ್ಣನ ಶ್ರೇಷ್ಠ ಶಕ್ತಿಯು ಗುಣದಲ್ಲಿ ಐಹಿಕ ಪ್ರಕೃತಿಗೆ ಸಂಪೂರ್ಣವಾಗಿ ವಿರುದ್ಧವಾದದ್ದು. ಶ್ರೇಷ್ಠ ಮತ್ತು ಕೆಳಮಟ್ಟದ ಪ್ರಕೃತಿಗಳನ್ನು ಏಳನೆಯ ಅಧ್ಯಾಯದಲ್ಲಿ ವಿವರಿಸಿದೆ.