ಭಗವದ್ಗೀತೆ: ಶ್ರೀಕೃಷ್ಣನನ್ನು ಅರಿತುಕೊಂಡ ಮನುಷ್ಯ ಹಲವು ಪ್ರಯೋಜನಗಳನ್ನು ಪಡೆಯುತ್ತಾನೆ; ಗೀತೆಯಲ್ಲಿನ ಸಾರಾಂಶ ತಿಳಿಯಿರಿ
ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಸತ್ಯದ ಮಾರ್ಗವನ್ನು ಅನುಸರಿಸುವುದು ಗೀತೆಯ ಅರ್ಥವಾಗಿದೆ.
ಯದಾ ತೇ ಮೋಹಕಲಿಲಂ ಬುದ್ಧಿರ್ವ್ಯತಿತರಿಷ್ಯತಿ |
ತದಾ ಗನ್ತಾಸಿ ನಿರ್ವೇದಂ ಶ್ರೋತವ್ಯಸ್ಯ ಶ್ರುತಸ್ಯ ಚ ||52||
ನಿನ್ನ ಬುದ್ಧಿಯು ಭ್ರಾಂತಿಯ ದಟ್ಟವಾದ ಕಾಡಿನಿಂದ ಹೊರಕ್ಕೆ ಬಂದನಂತರ ನೀನು ಹಿಂದೆ ಕೇಳಿರುವುದೆಲ್ಲಕ್ಕೆ ಮತ್ತು ಮುಂದೆ ಕೇಳುವುದೆಲ್ಲಕ್ಕೆ ನಿರ್ಲಕ್ಷ್ಯವನ್ನು ತೋರಬೇಕು.
ಕೇವಲ ಭಗವಂತನ ಭಕ್ತಿಸೇವೆಯ ಮೂಲಕ ವೇದಗಳ ಧಾರ್ಮಿಕ ವಿಧಿಗಳನ್ನು ಅಲಕ್ಷಿಸುವ ಅನೇಕ ಉತ್ತಮ ನಿದರ್ಶನಗಳು ಶ್ರೇಷ್ಠ ಭಗವದ್ಭಕ್ತರ ಬದುಕಿನಲ್ಲಿ ಇವೆ. ಮನುಷ್ಯನು ಕೃಷ್ಣನನ್ನೂ ಕೃಷ್ಣನೊಡನೆ ತನ್ನ ಸಂಬಂಧವನ್ನೂ ವಾಸ್ತವವಾಗಿ ಅರ್ಥಮಾಡಿಕೊಂಡಾಗ ಅವನು ಅನುಭವಿಯಾದ ಬ್ರಾಹ್ಮಣನೇ ಆದರೂ ಸಹಜವಾಗಿ ಫಲಾಪೇಕ್ಷೆ ಇರುವ ಕರ್ಮಗಳಲ್ಲಿ ನಿರ್ಲಕ್ಷ್ಯವನ್ನು ತೋರುತ್ತಾನೆ. ಭಕ್ತ ಶ್ರೇಷ್ಠರೂ ಭಕ್ತಪರಂಪರೆಯಲ್ಲಿ ಆಚಾರ್ಯರೂ ಆದ ಶ್ರೀಮಾಧವೇಂದ್ರ ಪುರಿ ಹೀಗೆ ಹೇಳುತ್ತಾರೆ -
ಸನ್ಧ್ಯಾವನ್ದನ ಭದ್ರಮಸ್ತು ಭವತೋ ಭೋಃ ಸ್ನಾನ ತುಭ್ಯಂ ನಮೋ
ಭೋ ದೇವಾಃ ಪಿತರಶ್ಚ ತರ್ಪಣವಿಧೌ ನಾಹಂ ಕ್ಷಮಃ ಕ್ಷಮ್ಯತಾಮ್ |
ಯತ್ರಕ್ವಾಪಿ ನಿಷದ್ಯ ಯಾದವಕುಲೋತ್ತಮಸ್ಯ ಕಂಸದ್ವಿಷಃ
ಸ್ಮಾರಂ ಸ್ಮಾರಮಘಂ ಹರಾಮಿ ತದಲಂ ಮನ್ಯೇ ಕಿಮನ್ಯೇನ ಮೇ ||
ಹೇ ಪ್ರತಿದಿನ ನಾನು ಮಾಡುವ ಸಂಧ್ಯಾವಂದನೆಗಳೇ, ನಿಮಗೆ ಜಯವಾಗಲಿ. ಸ್ನಾನವೇ ನಿನಗೆ ನ್ನ ಪ್ರಣಾಮಗಳು, ಹೇ ದೇವತಗೆಳೇ, ಹೇ ಪಿತೃಗಳೇ, ನಿಮಗೆ ತರ್ಪಣವಿಧಿ ಸಲ್ಲಿಸಲು ಅಸಮರ್ಥನಾಗಿದ್ದೇನೆ, ಕ್ಷಮಿಸಿ. ಈಗ ನಾನು ಎಲ್ಲೇ ಇರಲಿ, ಯದುಕುಲ ಶ್ರೇಷ್ಠನೂ ಕಂಸನ ಶತ್ರುವೂ ಆದವನನ್ನು (ಕೃಷ್ಣನನ್ನು) ಸ್ಮರಿಸುತ್ತೇವೆ. ಇದರಿಂದ ನಾನು ಎಲ್ಲ ಪಾಪಬಂಧನಗಳಿಂದ ಮುಕ್ತನಾಗುತ್ತೇನೆ. ನನಗೆ ಇಷ್ಟೇ ಸಾಕು ಎನ್ನಿಸುತ್ತದೆ.
ದಿನಕ್ಕೆ ಮೂರು ಬಾರಿ ಸಂಧ್ಯಾವಂದನೆಯನ್ನು ಮಾಡುವುದು, ಉಷಃಕಾಲದಲ್ಲಿ ಸ್ನಾನ ಮಾಡುವುದು, ಪಿತೃಗಳಿಗೆ ತರ್ಪಣ ನೀಡುವುದು ಮೊದಲಾದ ವೇದೋಕ್ತ ವಿಧಿಗಳನ್ನು ಹೊಸದಾಗಿ ದೀಕ್ಷೆಪಡೆದವರು ಆಚರಿಸಲೇಬೇಕು. ಆದರೆ ಯಾರೇ ಆಗಲಿ ಕೃಷ್ಣಪ್ರಜ್ಞೆಯಲ್ಲೇ ತನ್ಮಯನಾಗಿದ್ದು ಕೃಷ್ಣನ ಪ್ರೇಮಪೂರ್ವಕ ಸೇವೆಯಲ್ಲಿ ನಿರತನಾಗಿದ್ದರೆ ಅಂತಹವನು ಯಾವ ವಿಧಿಸೂತ್ರಗಳಿಗೂ ಲಕ್ಷ್ಯವನ್ನೇ ಕೊಡುವುದಿಲ್ಲ. ಏಕೆಂದರೆ ಆತನು ಆಗಲೇ ಪರಿಪೂರ್ಣತೆಯನ್ನು ಸಾಧಿಸಿಬಿಟ್ಟಿದ್ದಾನೆ.
ಪರಮ ಪ್ರಭು ಕೃಷ್ಣನ ಸೇವೆಯಿಂದ ಒಬ್ಬನು ಜ್ಞಾನವೇದಿಕೆಯನ್ನು ಮುಟ್ಟಬಲ್ಲನಾದರೆ, ಶಾಸ್ತ್ರಗಳಲ್ಲಿ ಹೇಳಿರುವ ವಿವಿಧ ತಪಸ್ಸುಗಳ ಮತ್ತು ಯಾಗಗಳ ಅಗತ್ಯವೇ ಆತನಿಗಿಲ್ಲ. ಹಾಗೆಯೇ, ವೇದಗಳ ಗುರಿಯು ಕೃಷ್ಣನನ್ನು ತಲಪುವುದು ಎನ್ನುವುದನ್ನು ಅರ್ಥಮಾಡಿಕೊಳ್ಳದೆ ವಿಧಿಗಳ ಆಚರಣೆಯಲ್ಲೇ ಮುಳುಗಿದವನು ಇಂತಹ ಆಚರೆಗಳಲ್ಲಿ ಕಾಲವನ್ನು ವ್ಯರ್ಥವಾಗಿ ಕಳೆಯುತ್ತಾನೆ. ಕೃಷ್ಣಪ್ರಜ್ಞೆಯಲ್ಲಿರುವವರು ಶಬ್ದ ಬ್ರಹ್ಮವನ್ನು ಅಥವಾ ವೇದ, ಉಪನಿಷತ್ತುಗಳ ವ್ಯಾಪ್ತಿಯನ್ನು ಮೀರಿರುತ್ತಾರೆ.
ಶ್ರುತಿವಿಪ್ರತಿಪನ್ನಾ ತೇ ಯದಾ ಸ್ಥಾಸ್ಯತಿ ನಿಶ್ಚಲಾ |
ಸಮಾಧಾವಚಲಾ ಬುದ್ಧಿಸ್ತದಾ ಯೋಗಮವಾಪ್ಸ್ಯಸಿ ||53||
ವೇದಗಳ ಆಲಂಕಾರಿತ ಭಾಷೆಯು ನಿನ್ನ ಮನಸ್ಸನ್ನು ಕಲಕದೆ ಇರುವಾಗ, ಮನಸ್ಸು ಸಮಾಧಿಯಲ್ಲಿ ನಿಶ್ಚಲವಾಗಿರುವಾಗ ನೀನು ದಿವ್ಯಪ್ರಜ್ಞೆ ಪಡೆಯುತ್ತೀಯೆ.
ಮನುಷ್ಯ ಸಮಾಧಿಯಲ್ಲಿದ್ದಾನೆ ಎಂದರೆ ಅವನು ಕೃಷ್ಣಪ್ರಜ್ಞೆಯನ್ನು ಸಂಪೂರ್ಣವಾಗಿ ಸಾಕ್ಷಾತ್ಕರಿಸಿಕೊಂಡಿದ್ದಾನೆ ಎಂದರ್ಥ. ಎಂದರೆ, ಪೂರ್ಣ ಸಮಾಧಿಯಲ್ಲಿರುವವನು ಬ್ರಹ್ಮನ್, ಪರಮಾತ್ಮ ಮತ್ತು ಭಾಗವಾನರನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದಾನೆ. ಆತ್ಮಸಾಕ್ಷಾತ್ಕಾರದ ಅತ್ಯುನ್ನತ ಪರಿಪೂರ್ಣತೆ ಎಂದರೆ ತಾನು ಎಂದೆಂದೂ ಕೃಷ್ಣನ ಸೇವೆಕ, ಕೃಷ್ಣಪ್ರಜ್ಞೆಯಲ್ಲಿ ಕರ್ತವ್ಯನಿಷ್ಠನಾಗುವುದಷ್ಟೇ ತನ್ನ ಏಕೈಕ ಕೆಲಸ ಎನ್ನುವುದನ್ನು ಅರ್ಥಮಾಡಿಕೊಳ್ಳುವುದು.
ಭಗವಂತನ ಅಚಲಭಕ್ತನಾಗಿ ಕೃಷ್ಣಪ್ರಜ್ಞೆ ಇರುವಾತನ ಮನಸ್ಸು ವೇದಗಳ ಆಲಂಕಾರಿಕ ಭಾಷೆಯಿಂದ ಕಲಕಿಹೋಗಬಾರದು. ಆತನು ಸ್ವರ್ಗವನ್ನು ಪಡೆಯುವುದಕ್ಕಾಗಿ ಫಲಾಪೇಕ್ಷೆ ಇರುವ ಕರ್ಮವನ್ನು ಮಾಡಬಾರದು. ಕೃಷ್ಣಪ್ರಜ್ಞೆಯಲ್ಲಿ ಮನುಷ್ಯನು ಕೃಷ್ಣನೊಡನೆ ನೇರವಾಗಿ ಸಂಪರ್ಕವನ್ನು ಪಡೆಯುತ್ತಾನೆ. ಆದುದರಿಂದ ಆ ಅಲೌಕಕಿ ಸ್ಥಿತಿಯಲ್ಲಿ ಕೃಷ್ಣನಿಂದ ಬರುವ ಎಲ್ಲ ಆದೇಶಗಳೂ ಅರ್ಥವಾಗುತ್ತವೆ. ಇಂತಹ ಚಟುವಟಿಕೆಗಳಿಂದ ಮನುಷ್ಯನು ನಿಶ್ಚಯವಾಗಿ ಫಲವನ್ನು ಪಡೆಯುತ್ತಾನೆ ಮತ್ತು ಪರಿಪೂರ್ಣ ಜ್ಞಾನವನ್ನೂ ಪಡೆಯುತ್ತಾನೆ. ಇದಕ್ಕೆ ಕೃಷ್ಣನ ಅಥವಾ ಅವನ ಪ್ರತಿನಿಧಿಯಾದ ಗುರುವಿನ ಅಪ್ಪಣೆಗಳನ್ನು ಪರಿಪಾಲಿಸಬೇಕು, ಅಷ್ಟೇ.