ದೇಗುಲ ದರ್ಶನ: ಇಲ್ಲಿ ಹರಕೆ ಕಟ್ಟಿದರೆ ಇಷ್ಟಾರ್ಥ ಸಿದ್ಧಿ; ದಕ್ಷಿಣ ಕನ್ನಡ ಜಿಲ್ಲೆಯ ಸದಾಶಿವ ರುದ್ರ ದೇವಸ್ಥಾನದ ಇತಿಹಾಸ ತಿಳಿಯಿರಿ-spiritual news degula darshana history of famous sadashiva rudra temple in dakshina kannada district sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದೇಗುಲ ದರ್ಶನ: ಇಲ್ಲಿ ಹರಕೆ ಕಟ್ಟಿದರೆ ಇಷ್ಟಾರ್ಥ ಸಿದ್ಧಿ; ದಕ್ಷಿಣ ಕನ್ನಡ ಜಿಲ್ಲೆಯ ಸದಾಶಿವ ರುದ್ರ ದೇವಸ್ಥಾನದ ಇತಿಹಾಸ ತಿಳಿಯಿರಿ

ದೇಗುಲ ದರ್ಶನ: ಇಲ್ಲಿ ಹರಕೆ ಕಟ್ಟಿದರೆ ಇಷ್ಟಾರ್ಥ ಸಿದ್ಧಿ; ದಕ್ಷಿಣ ಕನ್ನಡ ಜಿಲ್ಲೆಯ ಸದಾಶಿವ ರುದ್ರ ದೇವಸ್ಥಾನದ ಇತಿಹಾಸ ತಿಳಿಯಿರಿ

ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆಯ ಸಮೀಪದಲ್ಲಿರುವ ಸದಾಶಿವ ರುದ್ರ ದೇವಸ್ಥಾನಕ್ಕೆ 100 ವರ್ಷಗಳ ಇತಿಹಾಸವಿದೆ. ಇಲ್ಲಿಗೆ ಬರುವ ಭಕ್ತರು ಮಣ್ಣಿನಿಂದ ಮಾಡಿದ ವಸ್ತುಗಳನ್ನು ಮಾತ್ರ ಹರಕೆ ಕಟ್ಟುತ್ತಾರೆ. ಇಷ್ಟಾರ್ಥಗಳನ್ನು ಸಿದ್ಧಿಸುವ ಈ ದೇವಾಲಯದ ಆಸಕ್ತಿಕರ ಮಾಹಿತಿ ಇಲ್ಲಿದೆ. (ಬರಹ: ಎಚ್ ಸತೀಶ್, ಜ್ಯೋತಿಷಿ)

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 100 ವರ್ಷಗಳ ಇತಿಹಾಸದ ಸದಾಶಿವ ರುದ್ರ ದೇವಸ್ಥಾನ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ 100 ವರ್ಷಗಳ ಇತಿಹಾಸದ ಸದಾಶಿವ ರುದ್ರ ದೇವಸ್ಥಾನ

ಭಕ್ತರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಪ್ರತಿಯೊಂದು ದೇವಾಲಯವೂ ತನ್ನದೆ ಆದ ಇತಿಹಾಸವನ್ನು ಹೊಂದಿರುತ್ತದೆ. ದಕ್ಷಿಣ ಜಿಲ್ಲೆಯಲ್ಲಿರುವ ದೇವಾಲಯವೊಂದು ವಿಭಿನ್ನವಾಗಿ ಗುರುತಿಸಿಕೊಂಡಿದೆ. ಇಲ್ಲಿ ಮಣ್ಣಿನಿಂದ ಮಾಡಿದ ವಸ್ತುಗಳನ್ನು ಮಾತ್ರ ಹರಕೆ ಕಟ್ಟಲಾಗುತ್ತೆ. ಹೀಗೆ ಮಾಡಿದರೆ ಭಕ್ತರ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಇದೆ. ಈ ದೇವಾಲಯವನ್ನು ಹರಕೆಯ ದೇವಾಲಯ ಅಂತಲೂ ಕರೆಯಲಾಗುತ್ತೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಸುಂದರ ಪ್ರಕೃತಿ ನಡುವೆ ಸುರ್ಯ ಎಂಬ ಹಳ್ಳಿಯಲ್ಲಿ ಸದಾಶಿವ ರುದ್ರ ದೇವಾಲಯ ಇದೆ. ಈ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸ ಇದ್ದು, ಶ್ರೀಕ್ಷೇತ್ರ ಧರ್ಮಸ್ಥಳದ ಮೂಲಕ ಇಲ್ಲಿಗೆ ಭೇಟಿ ನೀಡಬಹುದು. ಉಜಿರೆಯಿಂದ ಕೇವಲ ನಾಲ್ಕು ಕಿಲೋಮೀಟರ್ ಆಗುತ್ತದೆ. ಪ್ರಶಾಂತ ಮತ್ತು ಶಾಂತವಾದ ವಾತಾವರಣಕ್ಕೂ ದೇವಾಲಯ ಹೆಸರುವಾಸಿಯಾಗಿದೆ.

ಸದಾಶಿವ ರುದ್ರ ದೇವಾಸ್ಥಾನದ ಕಥೆ

ಸುರ್ಯ ಎಂಬುದು ಒಂದು ಸಣ್ಣ ಹಳ್ಳಿ. ಆ ಹಳ್ಳಿಯಲ್ಲಿ ಗೃಹಿಣಿಯೊಬ್ಬಳು ವಾಸವಿರುತ್ತಾಳೆ. ಕಾಡಿಗೆ ತೆರಳಿ ಸೊಪ್ಪು ತಂದು ಜೀವನ ನಡೆಸುವುದು ಈಕೆಯ ದಿನನಿತ್ಯದ ಕೆಲಸ. ಒಮ್ಮೆ ತನ್ನ ಮಗನ ಜೊತೆಯಲ್ಲಿ ಸೊಪ್ಪನ್ನು ಕಡಿದು ತರಲು ಕಾಡಿಗೆ ತೆರಳುತ್ತಾಳೆ. ತನ್ನ ಬಳಿ ಇದ್ದ ಕುಡುಗೋಲಿನಿಂದ ಸೂಪ್ಪನ್ನು ಕಡಿಯಲು ಆರಂಭಿಸುತ್ತಾಳೆ. ಸೊಪ್ಪಿನ ಮಧ್ಯೆ ಶಿವಲಿಂಗವನ್ನು ಹೋಲುವಂತ ಶಿಲೆ ಒಂದಿರುತ್ತದೆ.

ಈಕೆಯು ತನಗೆ ತಿಳಿಯದಂತೆ ತನ್ನ ಬಳಿ ಇದ್ದ ಕುಡುಗೋಲಿನಿಂದ ಆ ಶಿಲೆಗೆ ರಭಸವಾಗಿ ಹೊಡೆಯುತ್ತಾಳೆ. ಆಕೆಯ ಏಟಿಗೆ ಲಿಂಗರೂಪಿ ಶಿಲೆಯಿಂದ ರಕ್ತವು ಬರಲಾರಂಭಿಸುತ್ತದೆ. ಅದನ್ನು ನೋಡಿದ ಆಕೆಯು ಗಾಬರಿಗೊಂಡು ಜೋರಾಗಿ ತನ್ನ ಮಗನನ್ನು ಕರೆಯುತ್ತಾಳೆ. ಈ ಕಾರಣದಿಂದಲೇ ಈ ಧಾರ್ಮಿಕ ಕ್ಷೇತ್ರಕ್ಕೆ ಸುರ್ಯ ಎಂಬ ಹೆಸರು ಬಂದಿದೆ. ಹಳ್ಳಿಯ ಜನರು ಒಂದುಗೂಡಿ ಆ ಶಿಲೆಯನ್ನು ಹಳ್ಳಿಗೆ ತಂದು ದೇವಾಲಯವನ್ನು ನಿರ್ಮಾಣ ಮಾಡುತ್ತಾರೆ.

ಋಷಿಮುನಿಗಳಿಗೆ ಸಂಬಂಧಿಸಿದ ಕತೆಯೊಂದು ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇದೆ. ದೇವಾಲಯದ ಬಳಿಯಲ್ಲಿಯೇ ಅರಣ್ಯಪ್ರದೇಶ ಒಂದಿತ್ತು. ಅರಣ್ಯವಾದರೂ ಅಲ್ಲಿ ಪ್ರಶಾಂತದ ವಾತಾವರಣ ಇತ್ತು. ಅಲ್ಲಿಯೇ ಹರಕೆ ಬನ ಇರುವುದು. ಈ ಪ್ರದೇಶದಲ್ಲಿ ದೇವರ ಅನುಗ್ರಹವನ್ನು ಪಡೆದಿದ್ದ ಭೃಗು ಮಹರ್ಷಿಗಳ ಶಿಷ್ಯವರ್ಗವು ಇಲ್ಲಿಗೆ ಬರುತ್ತದೆ. ಅವರಿಗೆ ಅಲ್ಲಿಯೇ ತಪಸ್ಸು ಮಾಡಬೇಕೆಂಬ ಮಹದಾಸೆ ಉಂಟಾಗುತ್ತದೆ. ಆಗ ಹಿರಿಯ ಶಿಷ್ಯರೊಬ್ಬರು ಶಿವ ಪಾರ್ವತಿಯರನ್ನು ಕುರಿತು ಗಾಡವಾದ ತಪಸ್ಸನ್ನು ಮಾಡುತ್ತಾರೆ. ಆಗ ಅವರ ತಪಸ್ಸಿಗೆ ಮೆಚ್ಚಿದ ಶಿವ ಪಾರ್ವತಿಯರು ಪ್ರತ್ಯಕ್ಷವಾಗುತ್ತಾರೆ. ಶಿಷ್ಯನನ್ನು ಕುರಿತ ಶಿವನು ನಿನಗೆ ಯಾವ ವರ ಬೇಕು ಕೇಳು ಎಂದು ಹೇಳುತ್ತಾನೆ. ಆಗ ಆ ಶಿಷ್ಯರು ಶಿವ ಪಾರ್ವತಿಯರನ್ನು ಕುರಿತು ದಯಮಾಡಿ ನೀವು ಇದೇ ಕ್ಷೇತ್ರದಲ್ಲಿ ಲಿಂಗ ರೂಪದಲ್ಲಿ ನೆಲೆಸಬೇಕು. ಇಲ್ಲಿ ಬಂದು ಹರಕೆ ಪೂರೈಸುವ ಭಕ್ತರ ಕಷ್ಟಗಳನ್ನು ಪರಿಹರಿಸಬೇಕೆಂದು ಬೇಡಿಕೊಳ್ಳುತ್ತಾರೆ. ಆ ದಿನದಿಂದಲೂ ಇಂದಿನವರೆಗೆ ಕೇವಲ ಹರಕೆ ತೀರಿಸುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ.

ತುಂಬಾ ಸರಳ ಹರೆಯ ದೇವರು

ಭಕ್ತರು ತಮ್ಮ ಮನೋಭಿಲಾಷೆಗಳನ್ನು ಪೂರೈಸಿಕೊಳ್ಳಲು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥಿಗಳು ಫಲಿಸಿದಾಗ ತಾವು ಮಾಡಿದ್ದ ಸಂಕಲ್ಪಕ್ಕೆ ಅನುಗುಣವಾಗಿ ಮಣ್ಣಿನ ಗೊಂಬೆಗಳನ್ನು ಹರಕೆಯ ರೂಪದಲ್ಲಿ ಶ್ರೀ ಸದಾಶಿವ ರುದ್ರ ದೇವರಿಗೆ ಅರ್ಪಿಸುವುತ್ತಾರೆ. ಭಕ್ತರು ಹರಕೆಯಾಗಿ ನೀಡಿದ ಹರಕೆಯ ಮಣ್ಣಿನ ಗೊಂಬೆಗಳನ್ನು ಲಿಂಗದ ಸುತ್ತಲೂ ಜೋಡಿಸಿರುತ್ತಾರೆ. ಕೇವಲ ಹಗಲಿನ ವೇಳೆಯಲ್ಲಿ ಮಾತ್ರ 'ಹರಕೆ ಬನ' ಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಯಾವುದೇ ಹರಕೆ ಆದರೂ ಒಂದು ಸೇರು ಅಕ್ಕಿ , ಒಂದು ತೆಂಗಿನಕಾಯಿ ಮತ್ತು ಐದುರೂಪಾಯಿಗಳನ್ನು ದೆವರಿಗೆ ಸಲ್ಲಿಸಬೇಕಾಗುತ್ತದೆ. ಒಬ್ಬರು ಒಮ್ಮೆಲೆ ಎಷ್ಟು ಹರಕೆಯನ್ನು ಸಹ ಮಾಡಿಕೊಳ್ಳಬಹುದು. ತೊಟ್ಟಿಲಿನಿಂದ ಹಿಡಿದು ಮನೆಯವರೆಗು ಎಲ್ಲಾ ರೀತಿಯ ಮಣ್ಣಿನ ಪ್ರತಿಮೆಗಳು ಹರಕೆಗೆ ಅನುಕೂಲವಾಗುವಂತೆ ದೊರೆಯುತ್ತವೆ.

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.