ದೇಗುಲ ದರ್ಶನ: ನವರಾತ್ರಿಯಲ್ಲಿ ಬೆಂಗಳೂರಿನ ಬನಶಂಕರಿ ದೇವಿಯನ್ನ ನೋಡುವುದೇ ಚೆಂದ; ದೇವಾಲಯದ ಮಹತ್ವ, ಇತಿಹಾಸ ಇಲ್ಲಿದೆ
ದೇಗುಲ ದರ್ಶನ: ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ, ಜಾತಕ ದೋಷ ಇದ್ದವರಿಗೆ ಪರಿಹಾರ ನೀಡುವ ಬೆಂಗಳೂರಿನ ಬನಶಂಕರಿ ದೇವಿಯ ಮಹಿಮೆ, ನವರಾತ್ರಿಯಲ್ಲಿ ದೇವಿಗೆ ಯಾವೆಲ್ಲಾ ಅಲಂಕಾರ, ಪೂಜೆಗಳನ್ನು ಮಾಡಲಾಗುತ್ತದೆ, ದೇವಾಲಯ ಇತಿಹಾಸ ಒಂದು ಚಿತ್ರಣ ಇಲ್ಲಿದೆ.
ದೇಗುಲ ದರ್ಶನ: ಸಿಲಿಕಾನ್ ಸಿಟಿ ಬೆಂಗಳೂರಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಬನಶಂಕರಿ ದೇವಾಲಯ ಕೂಡ ಒಂದಾಗಿದೆ. ಶತಮಾನದ ಇತಿಹಾಸವನ್ನು ಹೊಂದಿರುವ ಈ ದೇವಾಲಯಕ್ಕೆ ನಿತ್ಯ ನೂರಾರು ಭಕ್ತರು ಬಂದು ದೇವಿಯ ದರ್ಶನ ಪಡೆದು ಪುನೀತರಾಗುತ್ತಾರೆ. ವಿಶೇಷ ದಿನಗಳಲ್ಲಿ ಭಕ್ತ ಸಾಗರವೇ ಇಲ್ಲಿ ಸೇರುತ್ತೆ. ನವರಾತ್ರಿಯ ಆರಂಭವಾಗಿರುವ ಹಿನ್ನೆಲೆಯಲ್ಲಿ ದೇವಿಗೆ ಪ್ರತಿದಿನ ಪೂಜೆ ಸಲ್ಲಿಸಲಾಗುತ್ತಿದೆ. ನಿತ್ಯವೂ ವಿವಿಧ ಬಣ್ಣದ ಹೂಗಳಿಂದ ದೇವಾಲಯ ಮತ್ತು ದೇವಿಯನ್ನು ಅಲಂಕರಿಸಲಾಗುತ್ತಿದೆ. ರಾತ್ರಿಯ ವೇಳೆ ದೀಪಾಲಂಕಾರಗಳಿಂದ ದೇವಾಲಯ ಝಗಮಗಿಸುತ್ತಿದ್ದು, ನವರಾತ್ರಿಯ ಸಂಭ್ರಮ ಮನೆ ಮಾಡಿದೆ.
ನವರಾತ್ರಿಯ ಮೊದಲ ದಿನ ಬನಶಂಕರಿ ಅಮ್ಮನಿಗೆ ಅರಿಶಿನ ಕುಂಕುಮ ಅಲಂಕಾರ, ಮಹಾಗಣಪತಿ ಹೋಮ ನಡೆಸಲಾಗಿದೆ. ನವರಾತ್ರಿಯ ಮೊದಲ ದಿನ ನೂರಾರು ಭಕ್ತರು ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಎಣ್ಣೆ ದೀಪ ಹಚ್ಚಿ ದೇವಿಗೆ ನಮಸ್ಕರಿಸಿದ್ದಾರೆ. ಎಲ್ಲರಲ್ಲೂ ಅಚ್ಚರಿ ಮೂಡಿಸುವ ವಿಷಯವೆಂದರೆ ಇಲ್ಲಿ ರಾಹುಕಾಲದಲ್ಲಿ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ಸಾಮಾನ್ಯವಾಗಿ ರಾಹುಕಾಲವನ್ನು ಅಶುಭವೆಂದು ಪರಿಗಣಿಸುತ್ತೇವೆ. ಆದರೆ ಈ ಬನಂಶಕರಿ ಅಮ್ಮನಿಗೆ ರಾಹುಕಾಲದಲ್ಲಿ ಪೂಜೆ ಮಾಡುವುದು ಶ್ರೇಷ್ಠ ಎಂಬ ನಂಬಿಕೆಯಿಂದಾಗಿ ಇದೇ ಸಮಯದಲ್ಲಿ ದೇವಿಗೆ ಪೂಜೆ ನಡೆಯುತ್ತದೆ. ಬನಶಂಕರಿ ದೇವಾಲಯದಲ್ಲಿ ನವರಾತ್ರಿ ಉತ್ಸವ ಆರಂಭವಾಗಿದೆ. 9 ದಿನಗಳ ಕಾಲ ವಿಶೇಷ ಪೂಜೆಯ ಮೊದಲ ದಿನ ಪಟ್ಟದ ತಾಯಿಗೆ ಪೂಜೆ, ಹೋಮವನ್ನು ಮಾಡಲಾಗಿದೆ.
ನವರಾತ್ರಿಯಲ್ಲಿ ಪ್ರತಿ ದಿನ ಬೆಳಗ್ಗೆ 4 ಗಂಟೆಗೆ ವಿಶೇಷ ಅಲಂಕಾರಗಳೊಂದಿಗೆ ದೇವಿಗೆ ಪೂಜೆ ಮಾಡಲಾಗುತ್ತದೆ. ನವರಾತ್ರಿಯ ಮೊದಲ ದಿನ ಪೂಜೆಯಲ್ಲಿ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಆನಂತರ ಅಲಂಕಾರ ಆಗುತ್ತೆ, ಈ ಸಮಯದಲ್ಲಿ ಭಕ್ತರಿಗೆ ದರ್ಶನ ಇರುವುದಿಲ್ಲ. ಆ ನಂತರ ಅಂದರೆ ಇಡೀ ದಿನ ಭಕ್ತರಿಗೆ ದೇವಿಯ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗಿರುತ್ತದೆ.
ನವರಾತ್ರಿಯ ಮೊದಲ ದಿನ ಅರಿಶಿನ ಕುಂಕುಮ ಅಲಂಕಾರ, ಎರಡನೇ ದಿನ ಬಳೆ ಅಲಂಕಾರ, ಮೂರನೇ ದಿನ ಲಾವಂಚ ಅಲಂಕಾರ, ನಾಲ್ಕನೇ ದಿನ ಹಣ್ಣಿನ ಅಲಂಕಾರ, ಐದನೇ ದಿನ ತರಕಾರಿ ಅಲಂಕಾರ, ಆರನೇ ದಿನ ಗೋಮತಿಚಕ್ರ ಅಲಂಕಾರ, ಆನಂತರ ಸರಸ್ವತಿ ಅಲಂಕಾರ, ಇಂಚುಕವಸ್ತ್ರ ಅಲಂಕಾರ, ಮಹಿಷಾಮರ್ಧಿನಿ ಅಲಂಕಾರ ಹಾಗೂ ಕೊನೆಯ ದಿನ ವಿಶೇಷವಾದ ಹೂವಿನ ಅಲಂಕಾರ ಇರುತ್ತದೆ. ಶತಂಬರಿ ಅಮ್ಮನವರ ಉತ್ಸವ ಮೆರವಣಿಗೆ ಕೂಡ ಇರುತ್ತದೆ ಎಂದು ದೇವಾಲಯದ ಅರ್ಚಕ ರಾಜು ಅವರು ವಿವರಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ದೇವಾಲಯದ ಇತಿಹಾಸ
ಸಿಲಿಕಾನ್ ಸಿಟಿ ಬೆಂಗಳೂರಿನ ಜನಪ್ರಿಯ ದೇವಾಲಯ ಎನಿಸಿರುವ ಬನಶಂಕರಿ ಅಮ್ಮನ ದೇವಾಲಯಕ್ಕೆ ಒಂದು ಶತಮಾನದ ಇತಿಹಾಸವಿದ್ದು, ಸುಮಾರು 106 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ಸ್ಥಾಪಿಸಲಾಗಿದೆ. ದೇವಾಲಯದಲ್ಲಿ ಬನಶಂಕರಿಯೇ ಮೂಲ ದೇವತೆ. ಇಲ್ಲಿ ಆಂಜನೇಯ ಸ್ವಾಮಿಯನ್ನು ಸ್ವಯಂಭೂ ಎಂದು ಹೇಳಲಾಗುತ್ತದೆ. 2010ರಲ್ಲಿ ಈ ದೇವಾಲಯವನ್ನು ಕರ್ನಾಟಕ ಸರ್ಕಾರ ತನ್ನ ಉಸ್ತುವಾರಿಗೆ ವಹಿಸಿಕೊಂಡಿತು. ಧಾರ್ಮಿಕ ದತ್ತಿ ಇಲಾಖೆ ದೇವಾಲಯವನ್ನು ನವೀಕರಣ ಮಾಡಿದೆ.
ಬನಶಂಕರಿ ದೇವಿ ಬೆಂಗಳೂರಿನಲ್ಲಿ ನೆಲೆಸಿದ ಹಿನ್ನೆಲೆ
ದೇವಸ್ಥಾನದ ಮೂಲ ದೇವತೆ ಬಾದಾಮಿಯ ಬನಶಂಕರಿಯಾಗಿದ್ದು, ಪರೋಪಕಾರಿ ಗಾಣಿಗ ಶೆಟ್ಟಿ ಅವರ ವಂಶಕ್ಕೆ ಸೇರಿದ ಬಸಪ್ಪ ಶೆಟ್ಟಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆಗ ದೇವಿ ಕನಸಿನಲ್ಲಿ ಬಂದು ದೇವಿ ವಿಗ್ರಹ ತಂದು ಪ್ರತಿಷ್ಠಾಪಿಸುವಂತೆ ಆದೇಶಿಸುತ್ತಾಳೆ. ಅದರಂತೆ ವಿಗ್ರಹವನ್ನು ತಂದು ಇಲ್ಲಿ ಸ್ಥಾಪಿಸಲಾಗಿದೆ. ಬಸಪ್ಪ ಶೆಟ್ಟಿ ಅವರ ಮುಂದಿನ ಪೀಳಿಗೆಯ ಸದಸ್ಯರಾದ ಸೋಮಣ್ಣ ಶೆಟ್ಟಿ ಅವರು 1915ರ ಮೇ 21 ರಂದು ಬೆಂಗಳೂರಿನಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ಶಕ್ತಿ ರೂಪಿಣಿ ಮತ್ತು ಸಿಂಹ ವಾನಿಯು ಮುಖ್ಯ ವಿಗ್ರಹವಾಗಿದೆ.
ಸಂತಾನ ಇಲ್ಲದವರು, ಜಾತಕ ದೋಷ ಇರುವವರು ಬನಶಂಕರಿ ದೇವಾಲಯಕ್ಕೆ ಬಂದು ದೇವಿಗೆ ಪೂಜೆ ಎಣ್ಣೆ ದೀಪವನ್ನು ಹಚ್ಚಿದರೆ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬುದು ಭಕ್ತರಲ್ಲಿರುವ ನಂಬಿಕೆಯಾಗಿದೆ.