ವರ್ಷದ ಮೊದಲ ಸೂರ್ಯಗ್ರಹಣದಿಂದ 4 ರಾಶಿಯವರಿಗೆ ಅಪಾಯ; ಗ್ರಹಣಕ್ಕೂ ಮುನ್ನ ನೀವು ತಿಳಿದಿರಬೇಕಾದ ವಿಚಾರಗಳಿವು
ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಣಕ್ಕೆ ವಿಶೇಷ ಪ್ರಾಮುಖ್ಯವಿದೆ. 2024ರ ಮೊದಲ ಸೂರ್ಯಗ್ರಹಣ ಪ್ರಮುಖವಾಗಿ ಈ 4 ರಾಶಿಯವರ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡಲಿದೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ. ಆ ರಾಶಿಗಳು ಯಾವುದು, ಅವರ ಮೇಲೆ ಯಾವ ರೀತಿಯ ಕೆಟ್ಟ ಪರಿಣಾಮಗಳು ಉಂಟಾಗಲಿದೆ, ಪರಿಹಾರ ಮಾರ್ಗಗಳೇನು ಎಂಬುದನ್ನು ತಿಳಿಯೋಣ.
ಗ್ರಹಣಗಳು ಜೋಡಿಯಾಗಿ ಸಂಭವಿಸುತ್ತವೆ. ಮೊದಲ ಹಾಗೂ ಎರಡನೆಯ ಗ್ರಹಣಗಳ ನಡುವಿನ ಸಮಯವನ್ನು ಗ್ರಹಣ ಕಾಲ ಇಲ್ಲವೇ ಗ್ರಹಣ ಋತು ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ, ಗ್ರಹಣ ಕಾಲದಿಂದಾಗಿ ಚಂದ್ರನ ಪ್ರಭಾವವು ಏರುಪೇರಾಗಲಿದ್ದು, ಕೆಲವು ರಾಶಿ ಹಾಗೂ ನಕ್ಷತ್ರದವರ ಮೇಲೆ ಇದು ಪರಿಣಾಮ ಬೀರಲಿದೆ. 2024ರ ಮೊದಲ ಚಂದ್ರಗ್ರಹಣವು ಮಾರ್ಚ್ 25ರ ಹೋಳಿ ಹುಣ್ಣಿಮೆ ಮತ್ತು ಫಾಲ್ಗುಣ ಪೂರ್ಣಿಮೆಯಂದು ಸಂಭವಿಸಿದ್ದು, ಮೊದಲ ಸೂರ್ಯಗ್ರಹಣ ಏಪ್ರಿಲ್ 8 ರಂದು ಸಂಭವಿಸುತ್ತಿದೆ. ತುಲಾ ರಾಶಿಯಲ್ಲಿ ಚಂದ್ರಗ್ರಹಣದಿಂದ ಪ್ರಾರಂಭವಾಗಿ ಮೇಷ ರಾಶಿಯಲ್ಲಿ ಪೂರ್ಣ ಸೂರ್ಯಗ್ರಹಣದೊಂದಿಗೆ ಕೊನೆಗೊಳ್ಳುತ್ತದೆ. ಹಾಗಾದರೆ 2024ರ ಗ್ರಹಣ ಋತು ಇಲ್ಲವೇ ಗ್ರಹಣ ಕಾಲವು ಯಾವೆಲ್ಲಾ ರಾಶಿಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ.
4 ರಾಶಿಯವರ ಮೇಲೆ ಗ್ರಹಣದ ಪರಿಣಾಮ
ಮೇಷ
ಈ ಗ್ರಹಣ ಕಾಲದಲ್ಲಿ, ಮೇಷ ರಾಶಿಯವರು ತಮ್ಮ ಆತ್ಮವಿಶ್ವಾಸದ ವಿಚಾರವಾಗಿ ದೊಡ್ಡ ಸವಾಲನ್ನು ಎದುರಿಸುತ್ತಾರೆ. ವಿಶೇಷವಾಗಿ ಅವರು ಸಂಬಂಧಗಳೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬುದು ಪ್ರಾಮುಖ್ಯವನ್ನು ಪಡೆಯುತ್ತದೆ. ಮೇಷ ರಾಶಿಯವರು ಸೂಕ್ತವಲ್ಲದ ಸಂಬಂಧಗಳನ್ನು ಕೊನೆಗೊಳಿಸುವ ಮತ್ತು ತಮ್ಮ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಸಮಯ ಇದಾಗಿರುತ್ತದೆ. ಕೆಲವರು ತಮ್ಮ ಬಗ್ಗೆ ತಾವೇ ಕಾಳಜಿ ವಹಿಸಿಕೊಳ್ಳಲು ಮತ್ತು ಮುಕ್ತ ಮನಸ್ಸಿನಿಂದ ಎಲ್ಲರನ್ನೂ ಎಲ್ಲವನ್ನೂ ಸ್ವೀಕರಿಸಲು ಏಕಾಂಗಿಯಾಗಿ ಸಮಯ ತೆಗೆದುಕೊಳ್ಳಬಹುದು. ಹೊಸ ಸಂಬಂಧಗಳನ್ನು ಪ್ರಾರಂಭಿಸುವ ಅಥವಾ ಹಳೆಯದರೊಂದಿಗೆ ಮತ್ತೆ ಒಂದುಗೂಡುವ ಮೊದಲು ಮೇಷ ರಾಶಿಯವರು ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಮುಖ್ಯ. ಮಾರ್ಚ್ 25 ರಂದು ಚಂದ್ರಗ್ರಹಣದ ಸಂದರ್ಭವು ಇವರಿಗೆ ಕಠಿಣ ಸಮಯವಾಗಿದ್ದರೂ ಏಪ್ರಿಲ್ 8 ರಂದು ಸೂರ್ಯಗ್ರಹಣವು ಈ ರಾಶಿಯವರಿಗೆ ತಿದ್ದಕೊಳ್ಳಲು, ಸರ್ವಸನ್ನದ್ಧರಾಗಲು ಮತ್ತೊಂದು ಅವಕಾಶವನ್ನು ಕಲ್ಪಿಸಿಕೊಡುತ್ತದೆ.
ಕರ್ಕಾಟಕ
ಈ ಗ್ರಹಣಗಳು ಕರ್ಕಾಟಕ ರಾಶಿಯವರ ಮನೆ ಮತ್ತು ಕುಟುಂಬ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅವರು ಕಠಿಣ ಸಂದರ್ಭಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸುತ್ತಿರಬಹುದು. ಆದರೆ ಮನೆಯಲ್ಲಿ ಸಮತೋಲನ ಮತ್ತು ಸಾಮರಸ್ಯವನ್ನು ಮರಳಿ ತರಲು ಏನಾದರೂ ಪ್ರಮುಖ ಬದಲಾವಣೆಯನ್ನು ಮಾಡಬೇಕು. ಮಾರ್ಚ್ 25ರ ಚಂದ್ರಗ್ರಹಣವು ಈ ರಾಶಿಯವರ ಮನಸ್ಸಿನಲ್ಲಿ ಹೊಸ ಭಾವನೆಗಳನ್ನು ಮೂಡಿಸಬಹುದು ಅಥವಾ ಮನೆಯಲ್ಲಿ ಮಾತುಕತೆಗಳಿಗೆ ಕಾರಣವಾಗಿರಬಹುದು. ಆದರೆ ಏಪ್ರಿಲ್ 8ರಂದು ಸೂರ್ಯಗ್ರಹಣವು ಕರ್ಕಾಟಕ ರಾಶಿಯವರಿಗೆ ತಮ್ಮ ಗುರಿಗಳ ಮೇಲೆ ಕೇಂದ್ರೀಕರಿಸಲು ಮತ್ತು ಬದಲಾವಣೆಗಳನ್ನು ಮಾಡುವ ಶಕ್ತಿಯನ್ನು ನೀಡುತ್ತದೆ.
ತುಲಾ
ನಿಮ್ಮ ಮನಸ್ಸಿನ ಮಾತನ್ನು ಕೇಳುವ ಬದಲು ನೀವು ಸಮಾಜ ಏನು ಹೇಳುತ್ತದೆ ಎಂಬುದರ ಬಗ್ಗೆ ಹೆಚ್ಚಿಗೆ ಚಿಂತಿಸುತ್ತಿರುವಿರಿ. ನಿಮ್ಮ ಭಾವನೆಗಳನ್ನು ನೀವು ಮುಕ್ತವಾಗಿ ಹಂಚಿಕೊಳ್ಳುತ್ತಿಲ್ಲವಾದ್ದರಿಂದ ನಿಮ್ಮ ಸಂಬಂಧಗಳಲ್ಲಿನ ಸಂಘರ್ಷಗಳನ್ನು ಪರಿಹರಿಸಲು ಕಷ್ಟವಾಗಬಹುದು. ಗ್ರಹಣ ಋತುವಿನ ಮುಂದಿನ ಎರಡು ವಾರಗಳಲ್ಲಿ, ನೀವು ಯಾರಿಗಾದರೂ ನಿಮ್ಮ ನೈಜತೆಯನ್ನು ತೋರಿಸಲು ಸಿದ್ಧರಾಗಿದ್ದರೆ ನಿಮ್ಮ ಜೀವನದಲ್ಲಿ ಹೆಚ್ಚು ಪ್ರೀತಿ ಗಳಿಸುವಿರಿ. ಚಂದ್ರಗ್ರಹಣವು ತುಲಾ ರಾಶಿಯವರಿಗೆ ಕಣ್ಣು ತೆರೆಯುವ ಕ್ಷಣವಾಗಿದೆ. ಏಪ್ರಿಲ್ 8 ರಂದು ಮೇಷ ರಾಶಿಯ ಸೂರ್ಯಗ್ರಹಣದ ಸಮಯದಲ್ಲಿ ನಿಮ್ಮ ಅಪೂರ್ಣತೆಗಳನ್ನು ಒಪ್ಪಿಕೊಳ್ಳಲು ಮುಕ್ತ ಅವಕಾಶ.
ಮಕರ
ವೃತ್ತಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲವು ಅನಿರೀಕ್ಷಿತ ಬದಲಾವಣೆಗಳಿಗೆ ನೀವು ಸಿದ್ಧರಾಗಿ. ಗ್ರಹಣ ಕಾಲ ಇಲ್ಲವೇ ಗ್ರಹಣ ಋತು ನಿಮ್ಮ ಬದುಕಿನ ಒಂದು ಮಹತ್ವದ ತಿರುವಾಗಿದ್ದು, ಅಲ್ಲಿ ನಿಮ್ಮ ಶ್ರಮವು ಅಂತಿಮವಾಗಿ ಗಮನಕ್ಕೆ ಬರುತ್ತದೆ. ಆದರೆ ಕೆಲವರಿಗೆ ಇದು ತಡವಾಗಿ ಅನಿಸಬಹುದು. ಮಾರ್ಚ್ 25 ರಂದು ತುಲಾ ರಾಶಿಯಲ್ಲಿ ಚಂದ್ರಗ್ರಹಣವು ನಿಮಗೆ ವೃತ್ತಿಪರವಾಗಿ ಯಶಸ್ಸು ಗಳಿಸಲು ಒಳ್ಳೆಯ ಕಾಲವಾಗಿದೆ. ಆದರೆ ಏಪ್ರಿಲ್ 8 ರಂದು ಮೇಷ ರಾಶಿಯಲ್ಲಿ ಸೂರ್ಯಗ್ರಹಣವು ನಿಮ್ಮ ಕುಟುಂಬ ಜೀವನದಲ್ಲಿ ದಿಢೀರ್ ಬದಲಾವಣೆಗಳನ್ನು ತರುತ್ತದೆ. ನಿಮ್ಮ ಕೆಲಸದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)