ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Dashavatara: ವಿಷ್ಣುವಿನ ದಶಾವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪರಮಾತ್ಮನ 10 ಅವತಾರಗಳ ಪರಿಚಯ

Dashavatara: ವಿಷ್ಣುವಿನ ದಶಾವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪರಮಾತ್ಮನ 10 ಅವತಾರಗಳ ಪರಿಚಯ

ಮಹಾವಿಷ್ಣು 10 ಅವತಾರಗಳನ್ನು ತಳೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ವಿಷ್ಣುವಿನ ದಶಾವತಾರದ ಕಥೆಗಳು ಬಹಳ ಆಕರ್ಷಕವಾಗಿರುವುದರ ಜೊತೆಗೆ ಇಂದಿಗೂ ಜನಪ್ರಿಯವಾಗಿದೆ. ವಿಷ್ಣುವಿನ ಶಕ್ತಿಯನ್ನು ಅರಿಯಲು ಪ್ರತಿಯೊಬ್ಬರೂ ಅದನ್ನು ತಿಳಿಯಲೇಬೇಕು. ವಿಷ್ಣು ದಶಾವತಾರದ ಸ್ವಾರಸ್ಯಕರ ಸಂಗತಿಗಳು ಹೀಗಿವೆ. (ಬರಹ: ಅರ್ಚನಾ ವಿ. ಭಟ್‌)

ವಿಷ್ಣುವಿನ ದಶಾವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪರಮಾತ್ಮನ 10 ಅವತಾರಗಳ ಪರಿಚಯ
ವಿಷ್ಣುವಿನ ದಶಾವತಾರಗಳ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪರಮಾತ್ಮನ 10 ಅವತಾರಗಳ ಪರಿಚಯ (Pinterest )

ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾವಿಷ್ಣುವಿಗೆ ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯವಿದೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರಲ್ಲಿ ಬ್ರಹ್ಮನು ಸೃಷ್ಟಿಕರ್ತನಾದರೆ, ಶಿವನು ಲಯಕಾರ ಎಂದು ಹೇಳಲಾಗುತ್ತದೆ. ಹಾಗೆ ವಿಷ್ಣುವನ್ನು ಸ್ಥಿತಿಕಾರಕ ಎನ್ನಲಾಗುತ್ತದೆ. ವಿಷ್ಣುವನ್ನು ಈ ಬ್ರಹ್ಮಾಂಡದ ರಕ್ಷಕನೆಂದು ಹೇಳುತ್ತಾರೆ. ಜಗತ್ತಿನಲ್ಲಿ ಅಸುರ ಶಕ್ತಿಗಳು ಹೆಚ್ಚಾದಾಗ ಅದನ್ನು ತಡೆಯಲು ಮಹಾವಿಷ್ಣುವು ಅವತಾರವನ್ನು ಎತ್ತಿ ಬಂದಿದ್ದಾನೆ. ಮಾನವ ಕುಲವನ್ನು ರಕ್ಷಿಸಿ ಧರ್ಮವನ್ನು ಪುನಃಸ್ಥಾಪಿಸಿದ್ದಾನೆ. ಇದನ್ನು ಅವನು ನಾಲ್ಕು ಯುಗಗಳಲ್ಲಿ ಬೇರೆ ಬೇರೆ ಅವತಾರಗಳ ಮೂಲಕ ಸೃಷ್ಟಿಯನ್ನು ರಕ್ಷಿಸಿದ್ದಾನೆ. ಹಿಂದೂ ಧರ್ಮಗ್ರಂಥದ ಪ್ರಕಾರ ಮಹಾವಿಷ್ಣುವು ದಶಾವತಾರ ತಾಳಿದ್ದಾನೆ ಎಂದು ಹೇಳಲಾಗುತ್ತದೆ. ಪ್ರತಿಯೊಂದು ಅವತಾರದಲ್ಲಿಯೂ ಅವನು ಧರ್ಮವನ್ನು ರಕ್ಷಿಸಿದ್ದಾನೆ. ಪ್ರತಿ ಯುಗದಲ್ಲಿಯೂ ನಿರ್ದಿಷ್ಟ ಸಮಯದಲ್ಲಿ ಧರ್ಮ ಪುನಃಸ್ಥಾಪಿಸಿದ್ದಾನೆ. ಮಹಾವಿಷ್ಣುವಿನ ದಶಾವತಾರದ ಕಥೆಗಳು ಬಹಳ ಆಕರ್ಷಕವಾಗಿರುವುದರ ಜೊತೆಗೆ ಇಂದಿಗೂ ಜನಪ್ರಿಯವಾಗಿದೆ. ವಿಷ್ಣುವಿನ ಶಕ್ತಿಯನ್ನು ಅರಿಯಲು ಪ್ರತಿಯೊಬ್ಬರೂ ಅದನ್ನು ತಿಳಿಯಲೇಬೇಕು. ವಿಷ್ಣುವಿನ ದಶಾವತಾರದ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ.

ಮತ್ಸ್ಯ ಅವತಾರ

ವಿಷ್ಣುವಿನ ದಶಾವತಾರದಲ್ಲಿ ಮೊದಲನೇ ಅವತಾರವೇ ಮತ್ಸ್ಯ ಅವತಾರ. ಮೀನಿನ ದೇಹದ ಮೂಲಕ ಭೂಮಿಗೆ ಅವತರಿಸಿದನು. ಮೊದಲ ಮಾನವನಾದ ಮನುವನ್ನು ಪ್ರಳಯದಿಂದ ಕಾಪಾಡಲು ವಿಷ್ಣುವು ಮೀನಿನ ರೂಪ ತಾಳಿ ಅವನನ್ನು ರಕ್ಷಿಸಿದನು. ವಿಷ್ಣುವು ಮನುವಿಗೆ ಎಲ್ಲಾ ಜೀವ ಜಂತುಗಳನ್ನು, ಮರ–ಗಿಡಗಳನ್ನು ರಕ್ಷಿಸಲು ಸಾಲುವಷ್ಟು ಒಂದು ದೈತ್ಯ ದೋಣಿಯನ್ನು ರಚಿಸಲು ಹೇಳಿದನು. ಮತ್ಸ್ಯಾವತಾರದಲ್ಲಿ ವಿಷ್ಣುವು ಸೃಷ್ಟಿಯ ಎಲ್ಲಾ ಜೀವಿಗಳನ್ನು ಹೀಗೆ ರಕ್ಷಿಸಿದನು ಎಂದು ಪುರಾಣ ಹೇಳುತ್ತದೆ.

ಕೂರ್ಮ ಅವತಾರ

ವಿಷ್ಣುವಿನ ಎರಡನೇ ಅವತಾರವೇ ಕೂರ್ಮ ಅವತಾರ. ದೇವತೆಗಳು ಮತ್ತು ಅಸುರರ ಯುದ್ಧದಲ್ಲಿ ದೇವತೆಗಳನ್ನು ಆಮೆಯ ಅವತಾರ ತಾಳಿ ರಕ್ಷಿಸಿದನು. ಮುಂದೆ ಸಮುದ್ರ ಮಂಥನ ಮಾಡಿದಾಗಲೂ ಸಹ ಮಂದರ ಪರ್ವತವನ್ನು ಎತ್ತಿ ಹಿಡಿದನು.

ವರಾಹ ಅವತಾರ

ವಿಷ್ಣುವು ಹಂದಿಯ ರೂಪ ತಾಳಿ ಭೂದೇವಿಯನ್ನು ಈ ಅವತಾರದಲ್ಲಿ ರಕ್ಷಿಸಿದನು. ಅಸುರ ಹಿರಣ್ಯಕಶಿಪುವಿನ ಸಹೋದರ ಹಿರಣ್ಯಾಕ್ಷನು ಭೂಮಿಯನ್ನು ಅಪಹರಿಸಿ ಸಮುದ್ರದ ಆಳದಲ್ಲಿ ಬಚ್ಚಿಟ್ಟಿದ್ದನು. ವಿಷ್ಣುವು ಭೂಮಿಯನ್ನು ಕಾಪಾಡಲು ವರಾಹ ಅವತಾರ ತಾಳಿ ಅವನ್ನು ಸಂಹರಿಸಿ ಭೂಮಿಯನ್ನು ರಕ್ಷಿಸಿದನು. ಇದು ವಿಷ್ಣುವಿನ ಮೂರನೇ ಅವತಾರವಾಗಿದೆ.

ನರಸಿಂಹ ಅವತಾರ

ಇದು ವಿಷ್ಣುವಿನ ನಾಲ್ಕನೇ ಅವತಾರ ಎಂದು ಪುರಾಣಗಳಲ್ಲಿ ವರ್ಣಿಸಲಾಗಿದೆ. ಇದರಲ್ಲಿ ವಿಷ್ಣುವಿನ ಮಹಾನ್‌ ಭಕ್ತನಾದ ಪ್ರಹ್ಲಾದನನ್ನು ರಕ್ಷಿಸಿದನು. ವಿಷ್ಣುವಿನ ಭಕ್ತರನ್ನು ದ್ವೇಷಿಸುತ್ತಿದ್ದ ಹಿರಣ್ಯಕಶಿಪು ಮನುಷ್ಯ ಮತ್ತು ಪ್ರಾಣಿಯಿಂದಾಗಲಿ, ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆಯಲ್ಲೂ ತನಗೆ ಸಾವು ಬರಬಾರದೆಂದು ವರ ಪಡೆದುಕೊಂಡಿದ್ದನು. ಆದರೆ ಅವನ ಮಗನಾದ ಪ್ರಹ್ಲಾದನು ವಿಷ್ಣುವಿನ ಪರಮ ಭಕ್ತನಾಗಿದ್ದನು. ಹಿರಣ್ಯಕಶಿಪುವನ್ನು ಅರ್ಧ ಸಿಂಹ ಮತ್ತು ಅರ್ಧ ಮನುಷ್ಯ ರೂಪ ತಾಳಿ ಸಂಹರಿಸಿದನು. ಇದು ವಿಷ್ಣುವಿನ ಉಗ್ರ ಅವತಾರವೆಂದು ಕರೆಯಲಾಗುತ್ತದೆ.

ವಾಮನ ಅವತಾರ

ಇದು ವಿಷ್ಣುವಿನ ಐದನೇ ಅವತಾರವಾಗಿದೆ. ಇದರಲ್ಲಿ ವಿಷ್ಣುವು ಬ್ರಾಹ್ಮಣ ವಟುವಾಗಿ ಭೂಮಿಯಲ್ಲಿ ಅವತರಿಸಿದನು. ಪ್ರಹ್ಲಾದನ ಮೊಮ್ಮಗನಾದ ಬಲಿ ಚರ್ಕವರ್ತಿಯ ಹತ್ತಿರ ದಾನಕ್ಕಾಗಿ ಮೂರು ಅಡಿ ಭೂಮಿಯನ್ನು ಕೇಳಿದನು. ಆದರೆ ಎರಡೇ ಹೆಜ್ಜೆಗಳಲ್ಲಿ ಭೂಮಿ ಮತ್ತು ಆಕಾಶವನ್ನು ಅಳೆದನು. ಮೂರನೆ ಹೆಜ್ಜೆಯನ್ನು ಎಲ್ಲಿ ಇಡಲಿ ಎಂದು ಪ್ರಶ್ನಿಸಿದಾಗ ಬಲಿಯು ತನ್ನ ತಲೆಯ ಮೇಲೆ ಇಡು ಎಂದು ಹೇಳಿದನು. ಆಗ ವಿಷ್ಣುವು ಅವನ ತಲೆಯ ಮೇಲೆ ತನ್ನ ಪಾದವನ್ನು ಊರಿ ಅವನನ್ನು ಪಾತಾಳಕ್ಕೆ ಕಳುಹಿಸಿದನು.

ಪರಶುರಾಮ ಅವತಾರ

ಪರಶು ಅಥವಾ ಕೊಡಲಿ ಹಿಡಿದ ಬ್ರಾಹ್ಮಣನಾಗಿ ಈ ಅವತಾರದಲ್ಲಿ ವಿಷ್ಣುವು ಕಾಣಿಸಿಕೊಂಡಿದ್ದಾನೆ. ದುರಹಂಕಾರದಿಂದ ಮೆರೆಯುತ್ತಿದ್ದ ಕ್ಷತ್ರಿಯರನ್ನು ನಾಶ ಮಾಡಿದನು. ಕಾಮಧೇನು ಎಂಬ ಹಸುವನ್ನು ಹೊಂದಿದ್ದ ಋಷಿ ಜಮದಗ್ನಿ ಮತ್ತು ಅವನ ಹೆಂಡತಿ ರೇಣುಕೆಯ ಮಗನಾಗಿ ವಿಷ್ಣುವು ಜನಿಸಿದನು. ಕ್ಷತ್ರಿಯ ರಾಜನು ದೇವಲೋಕದ ಹಸುವನ್ನು ಅಪಹರಿಸಿದನು. ಇದರಿಂದ ಕೋಪಗೊಂಡ ಪರಶುರಾಮನು ದುರಹಂಕಾರದ ಕ್ಷತ್ರಿಯ ಕುಲವನ್ನೇ ನಾಶ ಮಾಡಿದನು.

ರಾಮ ಅವತಾರ

ವಿಷ್ಣುವಿನ ದಶಾವತಾರಗಳಲ್ಲಿ ಇದು ಬಹಳ ವಿಶೇಷವಾದ ಅವತಾರವಾಗಿದೆ. ಒಬ್ಬ ಮಗನಾಗಿ, ಸಹೋದರನಾಗಿ, ಪತ್ನಿಯನ್ನು ಕಾಪಾಡುವ ಪತಿಯಾಗಿ, ಪಿತೃವಾಕ್ಯ ಪರಿಪಾಲಕನಾಗಿ ಕೊನೆಗೆ ಮರ್ಯಾದ ಪುರುಷೋತ್ತಮನಾದ ಅವತಾವರವಾಗಿದೆ. ಅಯೋಧ್ಯೆಯ ರಾಜ ದಶರಥ ಮತ್ತು ರಾಣಿ ಕೌಶಲ್ಯೆಯ ಮಗನಾಗಿ ಜನಿಸಿದನು. ತಮ್ಮ ಲಕ್ಷ್ಮಣ ಮತ್ತು ಮಡದಿ ಸೀತೆಯೊಂದಿಗೆ ವನವಾಸಕ್ಕೆ ಹೋದನು. ಸೀತಾ ಮಾತೆಯನ್ನು ಅಪಹರಿಸಿದ ದುಷ್ಟ ರಾವಣನ್ನು ವಾನರ ಸೈನ್ಯದ ಸಹಾಯದಿಂದ ಕೊಂದನು. ರಾಮ ರಾಜ್ಯ ಸ್ಥಾಪಿಸಿದನು. ರಾಮನ ಜೀವನವೇ ರಾಮಾಯಣವೆಂಬ ಮಹಾನ್‌ ಗ್ರಂಥವಾಗಿದೆ. ರಾಮನು ಜನಿಸಿದ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ಅದು ಹಿಂದೂಗಳ ಪ್ರಮುಖ ಹಬ್ಬವಾಗಿದೆ.

ಕೃಷ್ಣ ಅವತಾರ

ಮಹಾ ವಿಷ್ಣುವಿನ ಕೃಷ್ಣ ಅವತಾರವು ಅತ್ಯಂತ ಜನಪ್ರಿಯವಾಗಿದೆ. ಹಿಂದೂಗಳ ಮಹಾಕಾವ್ಯವಾದ ಮಹಾಭಾರತದಲ್ಲಿ ಕೃಷ್ಣನ ಅಂದರೆ ವಿಷ್ಣುವಿನ ಲೀಲೆಗಳನ್ನು ಕಾಣಬಹುದಾಗಿದೆ. ಭಗವದ್ಗೀತೆಯೂ ಸಹ ಈ ಅವತಾರದಲ್ಲಿಯೇ ಹೇಳಲ್ಪಟ್ಟಿದೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣನು ಅಧರ್ಮವನ್ನು ಕೊನೆಗೊಳಿಸಿ ಧರ್ಮವನ್ನು ಮರುಸ್ಥಾಪಿಸಿದನು. ಮಹಾಭಾರತ ಯುದ್ಧದಲ್ಲಿ ಅರ್ಜನನಿಗೆ ಸಾರಥಿಯಾಗಿ ರಥವನ್ನು ಮುನ್ನಡೆಸಿದನು. ಭಾರತದಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. ನೀಲ ವರ್ಣದ ಕೃಷ್ಣನು ತಲೆಯ ಮೇಲೆ ನವಿಲು ಗರಿ, ಕೈಯಲ್ಲಿ ಕೊಳಲು, ಮತ್ತು ಸುದರ್ಶನ ಚಕ್ರ ಹಿಡಿದಿದ್ದಾನೆ.

ಬುದ್ಧ ಅವತಾರ

ವಿಷ್ಣುವಿನ ಒಂಬತ್ತನೇ ಅವತಾರವೇ ಬುದ್ಧ ಅವತಾರ. ತನ್ನ ವೈಭವೋಪೇತ ಜೀವನನ್ನು ತ್ಯಜಿಸಿ, ಸನ್ಯಾಸಿ ಜೀವನವನ್ನು ನಡೆಸಿದನು. ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದ್ದರಿಂದ ಈ ಅವತಾರವನ್ನು ಬುದ್ದ ಅವತಾರ ಎಂದು ಕರೆಯಲಾಗುತ್ತದೆ. ಗೌತಮನಿಂದ ಬುದ್ಧನಾಗಿ ಹಲವೆಡೆ ಸಂಚರಿಸಿ, ವಿಮೋಚನೆಯ ಬೋಧನೆಗಳ ಮೂಲಕ ಅನುಯಾಯಿಗಳನ್ನು ಗಳಿಸಿದನು. ಬುದ್ಧನ ಭೋಧನೆಗಳಿಂದಲೇ ಬೌದ್ಧ ಧರ್ಮವು ಹುಟ್ಟಿಕೊಂಡಿತು.

ಕಲ್ಕಿ ಅವತಾರ

ಮಹಾ ವಿಷ್ಣುವಿನ ಹತ್ತನೆಯ ಅವತಾರವೇ ಕಲ್ಕಿ ಅವತಾರ. ಕಲಿಯುಗದಲ್ಲಿ ಈ ಅವತಾರ ಸಂಭವಿಸುತ್ತದೆ ಎಂದು ಹೇಳಲಾಗುತ್ತದೆ. ಹಿಂದೂ ಪುರಾಣಗಳ ಪ್ರಕಾರ ಬಿಳಿ ಕುದುರೆಯ ಮೇಲೆ ಬಂದು ಕಲಿ ಎಂಬ ರಾಕ್ಷಸನನ್ನು ಸೋಲಿಸುತ್ತಾನೆ. ಆಗ ನಾವು ಜೀವಿಸುತ್ತಿರುವ ಕಲಿಯುಗವು ಕೊನೆಗೊಂಡು ಮತ್ತೊಮ್ಮೆ ಸತ್ಯಯುಗ ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ವಿಷ್ಣುವು ಭೂಮಿಯ ಮೇಲೆ ಶಾಂತಿ ಮತ್ತು ಉತ್ತಮ ಮೌಲ್ಯಗಳನ್ನು ಸ್ಥಾಪಿಸಿ ಸದಾ ನಮ್ಮನ್ನು ರಕ್ಷಿಸುತ್ತಾನೆ ಎಂದು ಹೇಳಲಾಗುತ್ತದೆ.