ಕನ್ನಡ ಸುದ್ದಿ  /  Astrology  /  Spiritual News Hindu Religion What Are The Benefits Of Chanting Vishnu Sahasranama Chanting Timings Sanskrit Hymn Rst

ವಿಷ್ಣು ಸಹಸ್ರನಾಮ ಪಾರಾಯಣ ಕ್ರಮ, ಸಮಯ, ಇದನ್ನು ಪ್ರತಿನಿತ್ಯ ಪಠಿಸುವುದರಿಂದ ಸಿಗುವ ಅದ್ಭುತ ಪ್ರಯೋಜನಗಳ ಕುರಿತ ಮಾಹಿತಿ ಇಲ್ಲಿದೆ

Vishnu Sahasranama Chanting: ಹಿಂದೂ ಧರ್ಮದಲ್ಲಿ ವಿಷ್ಣು ಸಹಸ್ರನಾಮ ಪಠಿಸುವುದಕ್ಕೆ ವಿಶೇಷ ಮಹತ್ವವಿದೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಮಹಾವಿಷ್ಣುವಿಗೆ ಸಮರ್ಪಿತವಾದ ಸಂಸ್ಕೃತ ಮಂತ್ರ ಇದಾಗಿದೆ. ವಿಷ್ಣು ಸಹಸ್ರನಾಮದಲ್ಲಿ ಒಟ್ಟು 108 ಶ್ಲೋಕಗಳಿದ್ದು, ಇದನ್ನು ಓದುವ ಕ್ರಮ, ಸಮಯ ಹಾಗೂ ಇದರಿಂದ ಸಿಗುವ ಪ್ರಯೋಜನಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಷ್ಣು ಸಹಸ್ರನಾಮ ಓದುವ ಕ್ರಮ, ಸಮಯ, ಇದನ್ನು ಪ್ರತಿನಿತ್ಯ ಪಠಿಸುವುದರಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ
ವಿಷ್ಣು ಸಹಸ್ರನಾಮ ಓದುವ ಕ್ರಮ, ಸಮಯ, ಇದನ್ನು ಪ್ರತಿನಿತ್ಯ ಪಠಿಸುವುದರಿಂದ ಸಿಗುವ ಅದ್ಭುತ ಪ್ರಯೋಜನಗಳ ಬಗ್ಗೆ ತಿಳಿಯಿರಿ

ವಿಷ್ಣು ಸಹಸ್ರನಾಮ: ಹಿಂದೂ ಧರ್ಮದಲ್ಲಿ ದೇವರನ್ನು ಪೂಜಿಸುವಷ್ಟೇ ಮಹತ್ವವನ್ನು ದೇವರ ನಾಮ ಪಠಿಸುವುದಕ್ಕೂ ನೀಡಲಾಗಿದೆ. ಆ ಕಾರಣದಿಂದ ಹನುಮಾನ್‌ ಚಾಲೀಸಾ, ವಿಷ್ಣು ಸಹಸ್ರನಾಮದಂತಹ ಶ್ಲೋಕಗಳಿಗೆ ಸಾಕಷ್ಟು ಮಹತ್ವ ನೀಡಲಾಗಿದ್ದು, ಹಲವರು ಇವನ್ನು ಪ್ರತಿನಿತ್ಯ ಪಠಿಸುತ್ತಾರೆ. ಆ ಮೂಲಕ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ವಿಷ್ಣು ಸಹಸ್ರನಾಮವು ಸಂಸ್ಕೃತ ಶ್ಲೋಕವಾಗಿದ್ದು, ಭಗವಾನ್ ಮಹಾವಿಷ್ಣುವಿಗೆ ಇದನ್ನು ಸಮರ್ಪಿಸಲಾಗಿದೆ. ಇದರಲ್ಲಿ ಲೋಕ ಕಾಯುವ ವಿಷ್ಣುವಿನ ಸಾವಿರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಸಹಸ್ರ ಎಂದರೆ ಸಾವಿರ, ನಾಮ ಎಂದರೆ ಹೆಸರು ವಿಷ್ಣುವಿನ ಸಾವಿರ ಹೆಸರುಗಳನ್ನು ಹೇಳುವುದೇ ವಿಷ್ಣು ಸಹಸ್ರನಾಮ. ಮಂತ್ರ, ಶ್ಲೋಕ ಹಾಗೂ ಸ್ತೋತ್ರಗಳ ಮೂಲಕ ವಿಷ್ಣುವನ್ನು ಭಜಿಸಲಾಗುತ್ತದೆ.

ಭಗವಾನ್‌ ವಿಷ್ಣುವು ಲೋಕವನ್ನು ಆಳುವ ಸರ್ವೋಚ್ಛ ಶಕ್ತಿಯುಳ್ಳವನು ಹಾಗೂ ಜಗತ್ತಿನ ಸಕಲ ಜೀವಿಗಳನ್ನು ಪಾಲಿಸುವವನು ಎಂಬ ನಂಬಿಕೆ ಇದೆ. ಮಹಾಭಾರತವನ್ನು ಬರೆದ ಖ್ಯಾತ ಋಷಿ ವ್ಯಾಸರು ವಿಷ್ಣು ಸಹಸ್ರನಾಮವನ್ನೂ ಬರೆದಿದ್ದಾರೆ. ವಿಷ್ಣು ಸಹಸ್ರನಾಮವನ್ನು ಪಠಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಆಧ್ಮಾತ್ಯದೊಂದಿಗೆ ಶಾರೀರಿಕ ಪ್ರಯೋಜನಗಳನ್ನು ಹೊಂದಿದೆ ಈ ಶ್ಲೋಕ. ಇದನ್ನು ಪಠಿಸುವುದರಿಂದಾಗುವ ಪ್ರಯೋಜನಗಳನ್ನು ತಿಳಿಯಿರಿ.

ವಿಷ್ಣು ಸಹಸ್ರನಾಮ ಪಾರಾಯಣದಿಂದ ಸಿಗುವ ಪ್ರಯೋಜನಗಳು

1) ನಿದ್ರಾಹೀನತೆಯಿಂದ ಬಳಲುತ್ತಿರುವವರು ವಿಷ್ಣು ಸಹಸ್ರನಾಮ ಪಠಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು. ರಾತ್ರಿ ಮಲಗಿದ್ದಾಗ ಕೆಟ್ಟ ಕನಸು ಬೀಳುವುದು, ಮನಸ್ಸಿನಲ್ಲಿ ಭಯ ಕಾಡುವುದು ಇಂತಹ ಸಮಸ್ಯೆಗಳನ್ನು ನೀವೂ ಎದುರಿಸುತ್ತಿದ್ದರೆ, ವಿಷ್ಣು ಸಹಸ್ರನಾಮ ಪಠಿಸುವ ಅಭ್ಯಾಸ ಮಾಡಿಕೊಳ್ಳಿ. ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ವಿಷ್ಣು ಸಹಸ್ರನಾಮವೇ ಪರಿಹಾರ.

2) ಮಕ್ಕಳಿಲ್ಲದ ದಂಪತಿಗಳು ಪ್ರತಿನಿತ್ಯ ಮನೆಯಲ್ಲಿ ವಿಷ್ಣು ಸಹಸ್ರನಾಮ ಓದುವ ಅಭ್ಯಾಸ ರೂಢಿಸಿಕೊಂಡರೆ ಶೀಘ್ರದಲ್ಲೇ ಶುಭ ಸುದ್ದಿ ಪಡೆಯುತ್ತೀರಿ.

3) ಮಾನಸಿಕ ಒತ್ತಡ, ಕಿರಿಕಿರಿ, ಆತಂಕದಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದವರೂ ಕೂಡ ವಿಷ್ಣು ಸಹಸ್ರನಾಮ ಓದುವುದನ್ನು ರೂಢಿಸಿಕೊಳ್ಳಬೇಕು. ಇದರಿಂದ ನಿಮ್ಮ ಮನಸ್ಸು ಶಾಂತವಾಗಿ, ಏಕಾಗ್ರತೆ ಹೆಚ್ಚುತ್ತದೆ. ಭಗವಾನ್‌ ವಿಷ್ಣುವಿನ ಪ್ರತಿಯೊಂದು ಹೆಸರುಗಳನ್ನು ಓದುವುದರಿಂದ ನಿಮ್ಮ ಆಂತರಿಕ ಶಕ್ತಿ ಹಾಗೂ ಏಕಾಗ್ರತೆ ವೃದ್ಧಿಯಾಗುತ್ತದೆ. ಒಟ್ಟಾರೆ ಮಾನಸಿಕ ಸ್ಥಿತಿ ಸುಧಾರಿಸಲು ಇದು ಸಹಾಯ ಮಾಡುತ್ತದೆ.

4) ಜ್ಯೋತಿಷ್ಯಶಾಸ್ತ್ರದ ಪ್ರಕಾರ ಜಾತಕದ ಸಮಸ್ಯೆ ಇರುವವರು ವಿಷ್ಣು ಸಹಸ್ರನಾಮ ಓದುವುದನ್ನು ರೂಢಿ ಮಾಡಿಕೊಳ್ಳುವುದರಿಂದ ಈ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

5) ಓದಿನಲ್ಲಿ ಹಿಂದೆ ಉಳಿದಿರುವ ಮಕ್ಕಳು ವಿಷ್ಣು ಸಹಸ್ರನಾಮ ಪಠಿಸುವುದರಿಂದ ತಮ್ಮ ಕಲಿಕೆಯಲ್ಲಿ ಸುಧಾರಿಸುತ್ತಾರೆ. ಅಂತಹ ಮಕ್ಕಳು ಪ್ರತಿದಿನ ವಿಷ್ಣುಸಹಸ್ರನಾಮ ಪಠಿಸುವುದನ್ನು ಅಭ್ಯಾಸ ಮಾಡಬೇಕು.

6) ಮನೆಯಲ್ಲಿ ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ, ವಿಷ್ಣು ಸಹಸ್ರನಾಮ ಪಠಿಸುವುದರಿಂದ ನಿಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಅಲ್ಲದೇ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ.

ವಿಷ್ಣು ಸಹಸ್ರನಾಮ ಓದಲು ಸರಿಯಾದ ಸಮಯ

ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ವಿಷ್ಣು ಸಹಸ್ರನಾಮ ಪಠಿಸುವುದು ಉತ್ತಮ. ನೀವು ಸಂಜೆ ವೇಳೆ ವಿಷ್ಣು ಸಹಸ್ರನಾಮ ಓದಲು ಬಯಸುವುದಾದರೆ ಸಂಜೆ 5 ರಿಂದ 7 ಗಂಟೆ ನಡುವೆ ಓದಬೇಕು. ಮಲಗುವ ಮುನ್ನ ವಿಷ್ಣು ಸಹಸ್ರನಾಮ ಓದಿ ನಂತರ ಮಲಗುವುದು ಕೂಡ ಬಹಳ ಪ್ರಯೋಜನಕಾರಿ.

ವಿಷ್ಣು ಸಹಸ್ರನಾಮ ಪಠಿಸುವ ಸರಿಯಾದ ಮಾರ್ಗ

ನೀವು ಯಾವುದೇ ಬಣ್ಣದ ಬಟ್ಟೆಗಳನ್ನು ಧರಿಸಿ ಸ್ತೋತ್ರವನ್ನು ಪಠಿಸಬಹುದು. ಆದರೂ ಹಳದಿ ಬಣ್ಣ ಧರಿಸುವುದು ಉತ್ತಮ. ಹಳದಿ ಬಣ್ಣವು ವಿಷ್ಣುವಿಗೆ ಪ್ರಿಯವಾಗಿದೆ ಎಂದು ನಂಬಲಾಗಿದೆ. ಇದನ್ನು ಪಠಿಸುವಾಗ, ನೀವು ಉಣ್ಣೆಯ ಆಸನದ ಮೇಲೆ ಕುಳಿತುಕೊಳ್ಳುವುದು ಉತ್ತಮ.

ವಿಷ್ಣು ಸಹಸ್ರನಾಮ ಓದುವುದರಿಂದ ಕೇವಲ ಆಧಾತ್ಮಿಕ ಪ್ರಯೋಜನಗಳು ಮಾತ್ರವಲ್ಲ, ಇದರಿಂದ ಮಾನಸಿಕ ನೆಮ್ಮದಿ, ಆರೋಗ್ಯ ಸಮಸ್ಯೆಗಳ ನಿವಾರಣೆ, ಓದಿನಲ್ಲಿ ಆಸಕ್ತಿ ಮೂಡುವುದ ಇಂತಹ ಪ್ರಯೋಜನಗಳೂ ಇವೆ. ಇದನ್ನು ಪ್ರತಿನಿತ್ಯ ಪಠಿಸುವ ಅಭ್ಯಾಸ ಮಾಡಿಕೊಳ್ಳಿ, ಇದರ ಪ್ರಯೋಜನವನ್ನು ನೀವೂ ಪಡೆಯಿರಿ.

(This copy first appeared in Hindustan Times Kannada website. To read more like this please visit to kannada.hindustantimes.com)

ಗಮನಿಸಿ: ಈ ಬರಹವು ಶಾಸ್ತ್ರ ಮತ್ತು ನಂಬಿಕೆಗಳನ್ನು ಆಧರಿಸಿದೆ. ಓದುಗರಿಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಮಾತ್ರ ಇದನ್ನು ಪ್ರಕಟಿಸಲಾಗಿದೆ. ಇಲ್ಲಿರುವ ಮಾಹಿತಿಯನ್ನು ಅನುಸರಿಸುವ ಮೊದಲು ಪ್ರಾಜ್ಞರ ಅಭಿಪ್ರಾಯ ಪಡೆಯುವುದು ಒಳ್ಳೆಯದು.