ಹನುಮಂತ ದೇವರ ಹೆಸರು ಹೇಳಿದರೆ ಕ್ಷುದ್ರಶಕ್ತಿಗಳಿಗೆ ಅಷ್ಟೇಕೆ ಅಂಜಿಕೆ? ಆಂಜನೇಯನಿಗಿರುವ ಆ ಶಕ್ತಿಯ ಬಗ್ಗೆ ತಿಳಿದುಕೊಳ್ಳಿ
ಹಿಂದೂ ಪುರಾಣಗಳ ಪ್ರಕಾರ, ಮಹಾನ್ ಶಕ್ತಿ ಶಾಲಿ ಹನುಮಂತನು ಶಿವನ ಹನ್ನೊಂದನೇ ಅವತಾರ. ಅಪಾರ ಶಕ್ತಿ, ಮಹಿಮೆ ಹೊಂದಿರುವ ಭಜರಂಗಬಲಿಯ ಹೆಸರನ್ನು ಕೇಳಿದರೆ ಮತ್ತು ಅವನನ್ನು ಸ್ಮರಿಸಿದರೆ ದುಷ್ಟಶಕ್ತಿ ಮತ್ತು ಪ್ರೇತಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ನಕಾರಾತ್ಮಕ ಶಕ್ತಿಗಳನ್ನು ಆಂಜನೇಯನು ದೂರಮಾಡುವುದು ಹೇಗೆ ಎಂದು ತಿಳಿಯಲು ಮುಂದೆ ಓದಿ.
ಕಲಿಯುಗದಲ್ಲಿ ಹನುಮಂತನನ್ನು ಅತ್ಯಂತ ಶಕ್ತಿಶಾಲಿ ದೇವರು ಎಂದು ನಂಬಲಾಗಿದೆ. ಈ ಯುಗದ ಅಂತ್ಯದವರೆಗೂ ಭೂಮಿಯ ಮೇಲೆ ಅಮರನಾಗಿ ಉಳಿಯುವವರಲ್ಲಿ ಹನುಮಂತನೂ ಒಬ್ಬನು. ಆಂಜನೇಯನ ಆಶೀರ್ವಾದ ದೊರಕಿದವರಿಗೆ ಈ ಭವದ ಯಾವುದೇ ದುಃಖ ಅಥವಾ ಕಷ್ಟಗಳು ಬರುವುದಿಲ್ಲ ಎಂದು ಪುರಾಣಗಳು ಹೇಳುತ್ತವೆ. ಹನುಮಾನ್ ಚಾಲೀಸಾವನ್ನು ಆಂಜನೇಯನಿಗೆ ಸಮರ್ಪಿತವಾದ ಎಲ್ಲಾ ದೇವಾಲಯಗಳಲ್ಲಿ, ದುಷ್ಟ ಶಕ್ತಿಗಳಿಂದ ಬಳಲುತ್ತಿರುವವರ ಕಷ್ಟ ಹಾಗೂ ನೋವುಗಳನ್ನು ನಿವಾರಿಸಲು ಪಠಿಸಲಾಗುತ್ತದೆ. ನಮ್ಮಲ್ಲಿ ಹಲವರು ಕೆಲಸ ಮಾಡಲು ಮನಸ್ಸಿಲ್ಲದಿದ್ದಾಗ ಅಥವಾ ಕೆಲಸದಲ್ಲಿ ಹಿನ್ನಡೆಯುಂಟಾಗುತ್ತಿರುವಾಗ ಜೈ ಬಜರಂಗಬಲಿ ಅಥವಾ ಜೈ ಹನುಮಾನ್ ಎಂದು ತಮ್ಮ ಮನಸ್ಸಿನಲ್ಲೇ ಯೋಚಿಸಿ ಕೆಲಸಕ್ಕೆ ಹೋಗುತ್ತಾರೆ. ಈ ಮೂಲಕ ಹನುಮಂತನ ಹೆಸರು ಕೇಳಿದೊಡನೆಯೇ ಬಹುಕಾಲದಿಂದ ಪೀಡಿಸುತ್ತಿರುವ ಭೂತ, ಪ್ರೇತಾತ್ಮಗಳಂತಹ ನಕಾರಾತ್ಮಕ ಶಕ್ತಿಗಳು ಓಡಿಹೋಗುತ್ತವೆ ಎಂಬ ನಂಬಿಕೆ ಇದೆ. ಹಾಗಾದರೆ ಹನುಮಂತನ ಕೃಪೆಯಿಂದ ದುಷ್ಟಶಕ್ತಿಗಳ ಪ್ರಭಾವ ದೂರವಾಗುವುದು ಹೇಗೆ ಇಲ್ಲಿದೆ ಓದಿ.
ಹನುಮಂತನನ್ನು ಶಿವನ ಹನ್ನೊಂದನೇ ಅವತಾರವೆಂದು ಪರಿಗಣಿಸಲಾಗಿದೆ. ಮುಖ್ಯಪ್ರಾಣ ಹನುಮಂತನು ಕೇವಲ ಮಾನವರ ಮೇಲಷ್ಟೇ ಅಲ್ಲದೇ ದೇವತೆಗಳು ಮತ್ತು ರಾಕ್ಷಸರ ಮೇಲೂ ತನ್ನ ಕೃಪೆಯನ್ನು ಧಾರೆಯೆರೆದಿದ್ದಾನೆ. ಭಗವಾನ್ ಶಿವನ ಅವತಾರವಾದ ಆಂಜನೇಯನಿಗೆ ಎಲ್ಲಾ ದೇವತೆಗಳು ಮತ್ತು ರಾಕ್ಷಸರು ಭಯಪಡುತ್ತಾರೆ. ಪ್ರೇತಗಳು ಆಂಜನೇಯನ ಆಜ್ಞೆಯನ್ನು ಪಾಲಿಸುತ್ತವೆ. ಶಿವನನ್ನು ಗೌರವಿಸಿದಂತೆ ಹನುಮಂತನ ಮಾತನ್ನು ಕೇಳುತ್ತವೆ. ಶಿವನಿಗೆ ಕೋಪ ಬಂದಂತೆ, ಹನುಮಂತನಿಗೆ ಕೋಪ ಬಂದಾಗಲೂ ಸೃಷ್ಟಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಯಿತು ಎಂದು ಪುರಾಣಗಳು ಹೇಳುತ್ತವೆ. ಆದ್ದರಿಂದಲೇ ದೆವ್ವ, ಪಿಶಾಚಿಗಳು ತಡಮಾಡದೇ ತಕ್ಷಣ ಓಡಿಹೋಗುತ್ತವೆ. ವಾಯುನಂದನವನ್ನು ಆಶ್ರಯಿಸಿದ ಭಕ್ತರು, ಕಷ್ಟ ಕಾರ್ಪಣ್ಯಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆ ಇದೆ. ದೈವಿಕ ಶಕ್ತಿಯನ್ನು ಹೊಂದಿರುವ ಹನುಮಂತನನ್ನು ಕರುಣಾಮಯಿ ಎಂದು ಭಕ್ತರು ನಂಬುತ್ತಾರೆ.
ಹನುಮಂತನ ಮಹಿಮೆ ಏನು?
ದೇವತೆಗಳಿಂದ ವರ ಪಡೆದವರಿಗೆ ಯಮ, ಶನಿ, ರಾಹು ಮತ್ತು ಕೇತುಗಳು ಮುಟ್ಟುವುದಿಲ್ಲ. ಅದೇ ರೀತಿ ಹನುಮಂತನನ್ನು ಸಹ ಅವರು ಮುಟ್ಟುವುದಿಲ್ಲ. ಆದುದರಿಂದಲೇ ಆಂಜನೇಯನನ್ನು ಆಶ್ರಯಿಸಿದ ಭಕ್ತರನ್ನೂ ಆ ಶಕ್ತಿಗಳು ಏನೂ ಮಾಡಲಾರವು. ಅದಕ್ಕಾಗಿಯೇ ಕಷ್ಟದ ಸಮಯದಲ್ಲಿ, ರಾಕ್ಷಸರು ಮತ್ತು ದುಷ್ಟಶಕ್ತಿಗಳ ಪ್ರಭಾವ ಹೆಚ್ಚಾದಾಗ ಹನುಮಂತನ ಆಶ್ರಯ ಪಡೆಯುತ್ತಾರೆ. ದುಷ್ಟ ಶಕ್ತಿ ಮತ್ತು ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ಪಡೆದುಕೊಳ್ಳಲು ಹನುಮಂತನನ್ನು ಪ್ರಾರ್ಥಿಸುತ್ತಾರೆ. ಶನಿದೋಷ, ರಾಹುದೋಷ ಇರುವವರು ಹನುಮಂತನನ್ನು ಪ್ರಾರ್ಥಿಸಿದರೆ ಸ್ವಲ್ಪ ಮಟ್ಟಿಗೆ ಪರಿಹಾರ ಸಿಗುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಹನುಮಾನ್ ಚಾಲೀಸಾದಲ್ಲಿ ಉಲ್ಲೇಖಿಸಿದಂತೆ ಆಂಜನೇಯನು ಎಂಟು ವಿಜಯಗಳನ್ನು ಸಾಧಿಸಿದ್ದಾನೆ. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯ, ಈಶಿತ್ವ, ವಾಸಿತ್ವ ಇವು ಎಂಟು ಸಿದ್ಧಿಗಳು. ಇದು ಬೇರೆ ಯಾವ ದೇವರು ಮತ್ತು ಮಾನವನಿಂದ ಸಾಧ್ಯವಿಲ್ಲ. ಆದುದರಿಂದಲೇ ದೆವ್ವಗಳು ಮತ್ತು ರಾಕ್ಷಸರು ಅವನಿಗೆ ಭಯಪಡುತ್ತಾರೆ. ಆದ್ದರಿಂದಲೇ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹನುಮಂತನ ಲಾಕೆಟ್ ಇರುವ ಸರವನ್ನು ಕೊರಳಲ್ಲಿ ಧರಿಸಿ ಧೈರ್ಯಕ್ಕಾಗಿ ಪ್ರಾರ್ಥಿಸುತ್ತಾರೆ. ಇನ್ನು ಕೆಲವರು ತಮ್ಮ ವಾಹನಗಳಲ್ಲಿ ಹನುಮಂತನ ಮೂರ್ತಿಯನ್ನ ಇಟ್ಟುಕೊಂಡು ಆಂಜನೇಯನನ್ನು ಪ್ರಾರ್ಥಿಸುತ್ತಾರೆ. ತಮಗೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಹನುಮಂತ ದೇವರು ನೋಡಿಕೊಳ್ಳುತ್ತಾರೆ ಎಂದು ನಂಬುತ್ತಾರೆ. ಮಂಗಳವಾರದಂದು ಹನುಮಂತನ ಹೆಸರಿನಲ್ಲಿ ಉಪವಾಸ, ಪ್ರಾರ್ಥನೆ ಮತ್ತು ವಿಶೇಷ ಪೂಜೆಗಳನ್ನು ಕೈಗೊಳ್ಳುತ್ತಾರೆ.
(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)
ವಿಭಾಗ