ಪಿತೃ ಶ್ರಾದ್ಧಕ್ಕೆ ಅಡ್ಡಿ ಆದರೆ ಏನು ಮಾಡಬೇಕು, ಬ್ರಹ್ಮಾರ್ಪಣ ಎಂದರೇನು? ಇಲ್ಲಿದೆ ವಿವರ
ಹಿರಿಯರು ಮೃತಪಟ್ಟ ದಿನದಂದು (ತಿಥಿಯಂದು) ಪಿತೃಪಕ್ಷದ ಪಿತೃಶ್ರಾದ್ಧ ನಡೆಸಬೇಕು ಎನ್ನುವುದು ಸಂಪ್ರದಾಯ. ಅಕಸ್ಮಾತ್ ಅಂದು ಪಿತೃಶ್ರಾದ್ಧಕ್ಕೆ ಅಡ್ಡಿಯಾದರೆ ಅದನ್ನು ಪೂರೈಸುವುದು ಹೇಗೆ? ಈ ಲೇಖನದಲ್ಲಿ ಹಲವು ಉಪಯುಕ್ತ ಮಾಹಿತಿ ಇದೆ. (ಬರಹ: ಎಚ್.ಸತೀಶ್, ಜ್ಯೋತಿಷಿ)

ಶ್ರಾದ್ಧ ಕಾಲಕ್ಕೆ ಯಾವುದಾದರೂ ವಿಘ್ನ ಬಂದರೆ ಶ್ರಾದ್ಧವನ್ನು ಮುಂದೂಡಬೇಕು. ಅದು ಕಳೆದು ಶುದ್ಧಿಯಾದ ನಂತರ ಆ ದಿನವೇ ಜನಿವಾರವನ್ನು ಬದಲಾಯಿಸಿ ಮನೆಗೆ ಪುಣ್ಯಾಹನ್ನು ಮಾಡಿ ನಂತರ ಅಡುಗೆ ಹಾಗೂ ಇತರ ಸಿದ್ಧತೆಗಳನ್ನು ಮಾಡಿಕೊಂಡು ಶ್ರಾದ್ಧ ಮಾಡಬೇಕು. ಕಾರಣಾಂತರಗಳಿಂದ ಬೇರೆ ರೀತಿಯ ಅಡ್ಡಿಆತಂಕಗಳು ಎದುರಾಗಿ ಶ್ರಾದ್ಧ ಮಾಡುವುದಕ್ಕೆ ಸಾಧ್ಯವಾಗದೇ ಹೋದರೆ ಹಿರಣ್ಯ ಶ್ರಾದ್ಧವನ್ನಾದರೂ ಮಾಡಬೇಕು. ಅದೂ ಸಾಧ್ಯವಾಗದಿದ್ದರೆ ಕಾಲು ತೊಳೆದು ಆಪೋಶನೆ ಹಾಕಬೇಕು. ಒಂದು ವೇಳೆ ಕರ್ತೃ ಅನಾರೋಗ್ಯ ಪೀಡಿತನಾಗಿದ್ದರೆ, ಅಥವಾ ಅಶಕ್ತನಾದರೆ ಆಮ ಶ್ರಾದ್ಧವನ್ನಾದರೂ ಮಾಡಬೇಕು. ಅಂದರೆ ಬ್ರಾಹ್ಮಣನಿಗೆ, ಸಂಕಲ್ಪ ಮಾಡಿ ಸ್ವಯಂಪಾಕ ದಾನ ಮಾಡಿ, ಶ್ರಾದ್ಧಾಂಗ ತರ್ಪಣವನ್ನು ಕೊಡಬೇಕು.
ಬ್ರಾಹ್ಮಣರೂ ದೊರೆಯದಿದ್ದರೆ ಗೋಗ್ರಾಸವನ್ನಾದರೂ ಅಂದರೆ ಒಂದು ಹೊರೆಯಷ್ಟು ಹುಲ್ಲು, ಹಣ್ಣು, ಅಕ್ಕಿಬೆಲ್ಲವನ್ನು ನೀಡಿ, ದೊನ್ನೆಯಲ್ಲಿ ಸ್ವಲ್ಪ ಅನ್ನ ಮತ್ತು ನೀರನ್ನು ಕಾಗೆಗಳಿಗೆ ಇಡಬೇಕು. ನಂತರ ಪಿತೃತರ್ಪಣ ನೀಡಬೇಕು. ಕಡು ಬಡವನಾಗಿದ್ದು ಊಟಕ್ಕೂ ಸಮಸ್ಯೆ ಇರುವವರಾದರೆ ಅರಣ್ಯದಲ್ಲಿ ನಿಂತು ಎರಡೂ ಕೈಗಳನ್ನು ಮೇಲೆತ್ತಿ ಪಿತೃಗಳನ್ನು ನೆನೆದು ಜೋರಾಗಿ ಅಳುತ್ತಾ ಪ್ರಾರ್ಥಿಸಿಕೊಳ್ಳಬೇಕು. ಶ್ರಾದ್ಧ ತಿಥಿಗೆ ಅಡ್ಡಿಯಾದಲ್ಲಿ ಆಶ್ವಯುಜ ಶುದ್ಧ ಪಂಚಮಿಯವರೆಗೂ ಅವಕಾಶವಿರುತ್ತದೆ. ಆಗ ಮಹಾಲಯದಲ್ಲಿ ಆಚರಿಸಬಹುದು. ಆಗಲೂ ಅಡ್ಡಿಯಾದಲ್ಲಿ ವೃಶ್ಚಿಕಾರಂಭದವರೆಗೆ, ವ್ಯತೀಪಾತ. ಅಥವಾ ದ್ವಾದಶಿಯಂದು ಆಚರಿಸಬಹುದು.
ಶ್ರಾದ್ಧಕ್ಕೆ ಯಾವ ಸಮಯ ಸೂಕ್ತ?
ಮೃತಾಹಾನ್ನ ಶ್ರಾದ್ಧ ಮಾಡುವವರು ಕುತುಪ ಕಾಲದಲ್ಲಿಯೆ ಮಾಡಬೇಕು. ಹಗಲಿನ 15 ಮುಹೂರ್ತಗಳಲ್ಲಿ 8ನೇ ಮುಹೂರ್ತವು ಕುತುಪಕಾಲ ಎನ್ನಿಸುತ್ತದೆ. ಈ ಕುತುಪ ಕಾಲದಲ್ಲಿ ಮಾಡಿದ ಶ್ರಾದ್ಧಕ್ಕೆ ಅನಂತ ಫಲ ಲಭಿಸುವುದೆಂದು ಪುರಾಣಗಳಲ್ಲಿ ಉಕ್ತವಾಗಿದೆ. ಪಾಪವೆಲ್ಲಾ ಸುಟ್ಟು ನಾಶವಾಗುವುದರಿಂದ ಇದಕ್ಕೆ ಕುತುಪ ಕಾಲವೆಂದು ಹೆಸರು ಬಂದಿದೆ. ಮತ್ಸ್ಯ ಪುರಾಣದಲ್ಲಿ ತಿಳಿಸಿರುವಂತೆ ಶ್ರಾದ್ಧ ಕಾರ್ಯದಲ್ಲಿ ಮಧ್ಯಾಹ್ನ, ಖಡ್ಗಮೃಗದ ಕೊಂಬಿನಿಂದ ಮಾಡಿದ ಪಾತ್ರೆ, ನೇಪಾಳ ದೇಶದ ಕಂಬಳಿ, ಬೆಳ್ಳಿ, ದರ್ಬೆ, ಎಳ್ಳು, ಹಸು, ದೌಹಿತ್ರ [ಮಗಳ ಮಗ] ಇವು ಶ್ರಾದ್ಧಕ್ಕೆ ಅತಿ ಮುಖ್ಯವಾದವು.
ಪವಿತ್ರದ ಬಳಕೆ
‘ಪಂಚಭಿ: ಪೌಷ್ಟಿಕೇಚೈವ ಚತುರ್ಭಿರ್ಯಜ್ಞ ಕರ್ಮಣಿ | ಪಿತೃಯಜ್ಞೇ ತ್ರಿದರ್ಭೈ: ದ್ವೌದರ್ಭೌ ನಿತ್ಯ ಕರ್ಮಣಿ |
ಒಂದು ಧರ್ಬೆಯ ಪವಿತ್ರವನ್ನು ಅಪರ ಕರ್ಮದಲ್ಲಿಯೂ, ಎರಡು ದರ್ಬೆಯ ಪವಿತ್ರವನ್ನು ಶುಭ ಕಾರ್ಯದಲ್ಲೂ, ಮೂರು ದರ್ಬೆಯ ಪವಿತ್ರವನ್ನು ಪಿತೃ ಶ್ರಾದ್ಧದಲ್ಲೂ. ನಾಲ್ಕು ದರ್ಬೆಯ ಪವಿತ್ರವನ್ನು ಯಜ್ಞಗಳಲ್ಲಿಯೂ, ಐದು ದರ್ಬೆಯ ಪವಿತ್ರವನ್ನು ಶಾಂತಿಕ, ಪೌಷ್ಟಿಕ ಕರ್ಮಗಳಲ್ಲಿಯೂ ಉಪಯೋಗಿಸಬೇಕೆಂದು ಉಕ್ತಿಯಿದೆ. ‘ಸರ್ವತ್ರ ದರ್ಭಪಾಣೀಸ್ಯಾತ್ ದೈವೇ ಪಿತ್ರೇಚ ಕರ್ಮಣಿ | ಪಾದಶೌಚಂ ಗಂಧದಾನಾಂ ನ ಕುರ್ಯಾತ್ ದರ್ಭ ಪಾಣಿನಾ’ ||
ದೇವ ಪಿತೃಕಾರ್ಯಗಳನ್ನು ಪವಿತ್ರ ಧರಿಸಿಯೇ ಮಾಡಬೇಕು. ಆದರೆ ಪಾದ ಪ್ರಕ್ಷಾಳನೆ ಮಾಡುವಾಗ, ಗಂಧ ಕೊಡುವಾಗ ಮತ್ತು ಕಾಲು ಮುಟ್ಟಿ ನಮಸ್ಕರಿಸುವಾಗ ಪವಿತ್ರವನ್ನು ತೆಗೆದು ಕಿವಿಯ ಮೇಲಿಟ್ಟುಕೊಂಡು ಮಾಡಬೇಕು.
ಕೂರ್ಚಿ ಕಟ್ಟುವುದು
ಕೂರ್ಚಿ ಎಂದರೆ ದರ್ಭೆ ಕಟ್ಟುವ ಒಂದು ವಿಧಾನ. ‘ಪ್ರಥಮಾಬ್ದೇ ಪಂಚದರ್ಭೈ: ಪ್ರತ್ಯಭ್ದೇ ಸಪ್ತಭಿಸ್ತಥಾ| ತೀರ್ಥೆ ಮಹಾಲಯೇಚೈವ ನವ ದರ್ಭೈಸ್ತು ಕೂರ್ಚಕ:‘ ಅಂದರೆ ಪ್ರಥಮಾಬ್ಧಿಕದಲ್ಲಿ 5 ದರ್ಬೆ, ಪ್ರತಿ ಅಬ್ಧಿಕಗಳಲ್ಲೂ 7 ದರ್ಬೆ, ತೀರ್ಥ ಶ್ರಾದ್ಧ ಮತ್ತು ಮಹಾಲಯಗಳಲ್ಲಿ 9 ದರ್ಬೆಯ ಕೂರ್ಚಿಯನ್ನು ಬಳಸಬೇಕು.
ಶ್ರಾದ್ಧಾಚರಣೆಯಲ್ಲಿ ಕರ್ತೃವು ಹೇಗೆ ಕುಳಿತುಕೊಳ್ಳಬೇಕು
ವಿಶ್ವೇದೇವತಾರ್ಚನೆಯಲ್ಲಿ ಬಲ ಮೊಣಕಾಲನ್ನೂ, ಪಿತೃಗಳನ್ನು ಪೂಜಿಸುವಾಗ ಎಡ ಮೊಣಕಾಲನ್ನು ಮಡಚಿಕೊಳ್ಳಬೇಕೆಂದು ಗ್ರಂಥಗಳಲ್ಲಿ ಉಲ್ಲೇಖವಿದೆ. ಆದರೆ ವಾಡಿಕೆಯಲ್ಲಿ ಬಂದಿರುವುದು ಪಿತೃಗಳನ್ನು ಅರ್ಚಿಸುವಾಗ ಮಾತ್ರ ಎಡ ಮೊಣ ಕಾಲನ್ನು ಮಡಚುತ್ತೇವೆ. ಉಳಿದಂತೆ ಸುಖಾಸನದಲ್ಲಿಯೇ ಕುಳಿತುಕೊಳ್ಳಬೇಕು.
ಬ್ರಹ್ಮಾರ್ಪಣದ ಮಹತ್ವ
ವೇದದ ಆಶಯಗಳಿಗೆ ಅನುಸಾರವಾಗಿ ನಡೆಸುವ ಕ್ರಿಯೆಗಳಲ್ಲಿ ಬ್ರಹ್ಮಾರ್ಪಣ ಎಂಬ ಪದ ಹಲವು ಸಲ ಬಳಕೆಯಾಗುತ್ತದೆ. ಬ್ರಹ್ಮಾರ್ಪಣ, ಹವಿಸ್ಸು ಬ್ರಹ್ಮ, ಅಗ್ನಿಯೂ ಬ್ರಹ್ಮ, ಹೋಮ ಕರ್ತೃವೂ ಬ್ರಹ್ಮ, ಈ ಕ್ರಿಯೆಯೂ ಬ್ರಹ್ಮ, ಸರ್ವವೂ ಬ್ರಹ್ಮಮಯವೆಂದು ತ್ಯಾಗ ಮಾಡುವುದೇ ಬ್ರಹ್ಮಾರ್ಪಣ. ಹೀಗಾಗಿಯೇ ಈ ಕ್ರಿಯೆಗೆ ಅಷ್ಟು ಪ್ರಾಮುಖ್ಯತೆ.
ಬರಹ: ಎಚ್.ಸತೀಶ್, ಜ್ಯೋತಿಷಿ, ಬೆಂಗಳೂರು
(ಗಮನಿಸಿ: ಇದು ಶಾಸ್ತ್ರ ಮತ್ತು ನಂಬಿಕೆಗಳನ್ನು ಆಧರಿಸಿದ ಬರಹ. ಇದು ಲೇಖಕರ ವೈಯಕ್ತಿಕ ಅಭಿಪ್ರಾಯಗಳನ್ನು ಒಳಗೊಂಡಿದೆ. ಇದನ್ನು ‘ಎಚ್‌ಟಿ ಕನ್ನಡ’ ಅನುಮೋದಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಓದುಗರು ತಮ್ಮ ಸಂಪ್ರದಾಯವನ್ನು ಬಲ್ಲವರಿಂದ ತಿಳಿದು ಅನುಸರಿಸಬೇಕು)
