ಅವಿವಾಹಿತರಿಗೆ ಕಂಕಣ ಭಾಗ್ಯ ಕರುಣಿಸುವ ನಂದಿಕೂರು ದುರ್ಗಾಪರಮೇಶ್ವರಿ; 1200 ವರ್ಷಗಳ ಐತಿಹ್ಯದ ಉಡುಪಿಯ ದೇಗುಲವಿದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಅವಿವಾಹಿತರಿಗೆ ಕಂಕಣ ಭಾಗ್ಯ ಕರುಣಿಸುವ ನಂದಿಕೂರು ದುರ್ಗಾಪರಮೇಶ್ವರಿ; 1200 ವರ್ಷಗಳ ಐತಿಹ್ಯದ ಉಡುಪಿಯ ದೇಗುಲವಿದು

ಅವಿವಾಹಿತರಿಗೆ ಕಂಕಣ ಭಾಗ್ಯ ಕರುಣಿಸುವ ನಂದಿಕೂರು ದುರ್ಗಾಪರಮೇಶ್ವರಿ; 1200 ವರ್ಷಗಳ ಐತಿಹ್ಯದ ಉಡುಪಿಯ ದೇಗುಲವಿದು

ಉಡುಪಿಯ ನಂದಿಕೂರಿನಲ್ಲಿರುವ ನಂದ್ಯೂರಮ್ಮ ಸಖತ್ ಪವರ್ ಫುಲ್‌ ದೇವಿ. ಹಲವರ ಅನುಭವದ ಪ್ರಕಾರ, ದೇವಿಗೆ ಪೂಜೆ ಮಾಡಿಸಿದರೆ ಅವಿವಾಹಿತ ವಧುವರರಿಗೆ ವಿವಾಹವಾಗುತ್ತದೆ. ಪುರಾತನ ದೇವಾಲಯ ಕುರಿತು ಜ್ಯೋತಿಷಿ ಎಚ್ ಸತೀಶ್‌ ಅವರ ಬರಹ.

ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿರುವ ನಂದ್ಯೂರಮ್ಮ ದೇವಾಲಯ
ಉಡುಪಿ ಜಿಲ್ಲೆಯ ನಂದಿಕೂರಿನಲ್ಲಿರುವ ನಂದ್ಯೂರಮ್ಮ ದೇವಾಲಯ

ಉಡುಪಿ: ಅದ್ಭುತ ಶಕ್ತಿಗಳನ್ನು ಹೊಂದಿದ ಹಲವಾರು ದೇವಸ್ಥಾನಗಳು ಬಹುಪಾಲು ಸಾಮಾನ್ಯ ಜನರಿಗೆ ತಿಳಿಯದೆ ಹೋಗಿದೆ. ಅದರಲ್ಲಿ ಒಂದು ನಂದಿಕೂರಿನಲ್ಲಿ ಇರುವ ನಂದ್ಯೂರಮ್ಮ ದೇವಿ ದೇವಾಲಯ (Nadyuramma Temple). ಸುಮಾರು 1200 ವರ್ಷಗಳ ಹಿಂದಿನ ದೇವಾಲಯ ಇದಾಗಿದೆ. ಈ ದೇವಾಲಯಕ್ಕೆ ಅತಿ ದೊಡ್ಡ ಚಾರಿತ್ರಿಕ, ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆ ಇದೆ, ಈ ದೇವಾಲಯವು ಉಡುಪಿ ಜಿಲ್ಲೆಯ (Udupi) ಪಡುಬಿದ್ರಿ ಮತ್ತು ಕಾರ್ಕಳ ನಡುವೆ ಇದೆ. ಉಡುಪಿಯಿಂದ ಅಥವಾ ಕಾರ್ಕಳದಿಂದ ನಂದಿಕೂರಿನ ಮುಖ್ಯ ರಸ್ತೆಯಲ್ಲಿ ಇಳಿಯಬೇಕು. ಅನಂತರ ಅಲ್ಲಿಂದ ಆಟೊ ಮೂಲಕ ದೇವಾಲಯ ತಲುಪಬಹುದು. ಇಲ್ಲಿರುವುದೇ ಅತಿ ಪುರಾತನ ಶ್ರೀದುರ್ಗಾ ಪರಮೇಶ್ವರಿಯ ದೇವಸ್ಥಾನ. ಈ ದೇವಸ್ಥಾನದ ಒಳ ಬಂದರೆ ನಮ್ಮಲ್ಲಿ ಧನಾತ್ಮಕ ಚಿಂತನೆ ಮತ್ತು ಧನಾತ್ಮಕ ಶಕ್ತಿಯು ಆವರಿಸುತ್ತದೆ. ಅದರ ಅನುಭವವೂ ನಮಗಾಗುತ್ತದೆ.

ಕುಂದ ಹೆಗ್ಗಡೆ ಅರಸರು ಮೊದಲು ಶ್ರೀವಿಶ್ವನಾಥ ದೇವಸ್ಥಾನವನ್ನು ಸ್ಥಾಪಿಸುತ್ತಾರೆ. ಆ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ನಂದಿಕೂರಿನಲ್ಲಿ ಅವರ ಅರಮನೆ ಇತ್ತೊಂದು ತಿಳಿದು ಬರುತ್ತದೆ. ಆದ್ದರಿಂದ ಈ ಸ್ಥಳದಲ್ಲಿ ಶ್ರೀದುರ್ಗಾ ಪರಮೇಶ್ವರಿಯ ದೇವಸ್ಥಾನವನ್ನು ಸ್ಥಾಪಿಸುತ್ತಾರೆ. ಅವರ ಆರಾಧ್ಯ ದೈವವಾಗುತ್ತದೆ. ನಂದರೆಂಬ ವರ್ಗದ ಜನರು ಇಲ್ಲಿ ವಾಸ ಮಾಡುತ್ತಿದ್ದ ಕಾರಣ ಈ ಊರಿಗೆ ನಂದಿಕೂರು ಎಂಬ ಹೆಸರು ಬಂದಿದೆ. ದೇವಾಲಯದ ಸ್ವಲ್ಪ ಅಂತರದಲ್ಲಿ ಶಾಂಭವಿ ನದಿಯು ಹರಿಯುತ್ತದೆ. ಈ ದೇವಾಲಯದ ಗರ್ಭ ಗುಡಿಯು ದೀರ್ಘ ಚತುರಷ್ಟ್ರ ಆಕೃತಿಯನ್ನು ಹೊಂದಿದೆ. ಸಂಪೂರ್ಣ ದೇವಾಲಯ ಮತ್ತು ಆವರಣದಲ್ಲಿರುವ ದೇವಾಲಯಕ್ಕೆ ಸಂಬಂಧಿಸಿದ ಕಟ್ಟಡದ ರಚನೆಗಳು ಸಂಪೂರ್ಣ ವಾಸ್ತು ಬಲವನ್ನು ಹೊಂದಿದೆ. ಈ ಕಾರಣದಿಂದ ಇಲ್ಲಿರುವ ದೇವರು ಮತ್ತು ಈ ಸ್ಥಳಕ್ಕೆ ವಿಶೇಷವಾದಂತಹ ಶಕ್ತಿ ಇದೆ.

ಇಲ್ಲಿರುವ ಮೂಲ ದೇವತೆಯು ಮಹಿಷಾಸುರ ಮರ್ಧಿನಿಯನ್ನು ಹೋಲುತ್ತದೆ. ನಾಲ್ಕು ಕೈಗಳುಳ್ಳ ಕಪ್ಪು ಬಣ್ಣದ ಶಿಲೆಯಿಂದ ಮಾಡಿದ ಈ ದೇವತೆಯ ಕೈಗಳಲ್ಲಿ ತ್ರಿಶೂಲ, ಶಂಖು, ಚಕ್ರ ಮತ್ತು ಮಹಿಷಾಸುರನ ತಲೆ ಇದೆ. ಸಿಂಹವಾಹಿನಿ ಎಂದು ಕಂಡು ಬರುತ್ತದೆ; ಇದಲ್ಲದೆ ಈ ದೇವಾಲಯದ ಅಣತಿ ದೂರದಲ್ಲಿ ನಾಗಸಂಕಲ್ಪ ಮತ್ತು ರಕ್ತೇಶ್ವರಿಯ ದೇವಸ್ಥಾನಗಳಿವೆ. ರಕ್ತೇಶ್ವರಿ ದೇವಸ್ಥಾನದ ಬಳಿ ನಂದಿಗೂಣ ಮತ್ತು ಚಾಮುಂಡಿಯ ವಿಗ್ರಹಗಳಿವೆ. ಈ ದೇವರ ಬಗ್ಗೆ ದಂತ ಕಥೆಯೊಂದಿದೆ. ಶೌಣಕಾದಿ ಮುನಿಗಳಿಗೆ ಸೂತಾಚಾರ್ಯರು ಈ ದೇವಾಲಯದ ಬಗ್ಗೆ ತಿಳಿಸುತ್ತಾರೆ. ಸ್ಕಂದಪುರಾಣದಲ್ಲಿ ಬರುವ ಪಾರ್ವತಿ ಪರಮೇಶ್ವರರ ಸಂವಾದದಲ್ಲಿ ಸ್ವಯಂ ಶಿವನೇ ಪಾರ್ವತಿಗೆ ನಂದಕೂರಿನ ದುರ್ಗಾ ಕ್ಷೇತ್ರದ ಬಗ್ಗೆ ತಿಳಿಸುತ್ತಾ ನೆ.

ಮತ್ತೊಂದು ಕಥೆಯ ಪ್ರಕಾರ ಶ್ರೀಶಂಕರಾಚಾರ್ಯರು ಕೇರಳದಲ್ಲಿ ದುರ್ಗಾ ಪರಮೇಶ್ವರಿ ಕುರಿತು ತಪಸ್ಸನ್ನು ಆಚರಿಸುತ್ತಾರೆ. ಇವರ ತಪಸ್ಸಿಗೆ ಮೆಚ್ಚಿದ ದುರ್ಗಾ ಪರಮೇಶ್ವರಿಯು ಪ್ರತ್ಯಕ್ಷವಾಗುತ್ತಾಳೆ. ಆನಂತರ ಶ್ರೀ ಶಂಕರಚಾರ್ಯರ ಬೇಡಿಕೆಯಂತೆ ದುರ್ಗಾ ಪರಮೇಶ್ವರಿ ಅವರ ಜೊತೆಗೆ ನಡೆಯುತ್ತಾಳೆ. ಅಚಾರ್ಯರು ಮಾರ್ಗ ಮಧ್ಯೆ ವಿಶ್ರಾಂತಿಗೆಂದು ನಂದಿಕೂರು ಸ್ಥಳವನ್ನು ಆಯ್ಕೆ ಮಾಡುತ್ತಾರೆ. ವಿಶ್ರಾಂತಿಯ ಬಳಿಕ ಶ್ರೀಶಂಕರಾಚಾರ್ಯರು ಹೊರಟು ನಿಂತಾಗ ಸ್ವಯಂ ದುರ್ಗಾ ಪರಮೇಶ್ವರಿಯ ಶಂಕರರನ್ನು ಕುರಿತು ನನಗೆ ಈ ತಳವು ತುಂಬಾ ಇಷ್ಟವಾಗಿದೆ. ಆದ್ದರಿಂದ ನಾನು ಇಲ್ಲಿಯೇ ನೆಲೆಸುತ್ತೇನೆ ಎಂದು ತಿಳಿಸುತ್ತಾಳೆ. ಇದರಿಂದ ನಿರಾಸೆಗೊಂಡರು ಶಂಕರರು ಇದನ್ನು ಒಪ್ಪಲೇ ಬೇಕಾಗುತ್ತದೆ.

ಹಲವರ ಅನುಭವದ ಪ್ರಕಾರ ಈ ದೇವರಿಗೆ ಪೂಜೆಯನ್ನು ಮಾಡಿಸಿದರೆ ಅವಿವಾಹಿತ ವಧುವರರಿಗೆ ವಿವಾಹವಾಗುತ್ತದೆ. ಜಾತಕದಲ್ಲಿನ ವಿವಾಹ ಸಂಬಂಧಿತ ದೋಷ ನಿವೃತ್ತಿಗಾಗಿ ಇಲ್ಲಿ ವಿಶೇಷವಾಗಿ ಸ್ವಯಂ ಪಾರ್ವತಿ ಪೂಜೆಯನ್ನು ಮಾಡಲಾಗುತ್ತದೆ. ಗುಣವಾಗದ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಇಲ್ಲಿನ ಸೇವೆಯಿಂದ ನಿವಾರಣೆಗೊಳ್ಳುತ್ತದೆ. ಅನ್ನ ಸಂತರ್ಪಣೆ ಮತ್ತು ತುಲಾ ಭಾರದಿಂದ ಸಕಲ ಪಾಪಗಳು ಮತ್ತು ಕಷ್ಟಗಳು ನಾಶಗೊಳ್ಳುತ್ತವೆ. ಯುಗಾದಿಯದಿನದಂದು ಇಲ್ಲಿ ನಡೆಯುವ ಪೂಜೆ ಪುನಸ್ಕಾರಗಳು ಮತ್ತು ಪಂಚಾಂಗ ಶ್ರವಣದಿಂದ ವಿಶೇಷ ಫಲಗಳು ದೊರೆಯುತ್ತವೆ.

ಹೂವಿನಪೂಜೆ, ದುರ್ಗಾ ನಮಸ್ಕಾರ, ದುರ್ಗಾ ಹೋಮ ಮುಂತಾದ ದೇವಿಗೆ ಸಂಬಂಧಪಟ್ಟಂತಹ ಪೂಜೆ ಪುನಸ್ಕಾರಗಳು ಇಲ್ಲಿ ನಡೆಯುತ್ತವೆ. ಇಲ್ಲಿಗೆ ಆಗಮಿಸುವ ಭಕ್ತಾದಿಗಳ ಪ್ರಕಾರ ಈ ದೇವಾಲಯದ ಶಕ್ತಿಯು ಎಲ್ಲರನ್ನೂ ಕಾಪಾಡುತ್ತದೆ ಎಂದು ತಿಳಿದು ಬರುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.