ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಿವನು ಅಮೃತವನ್ನು ಧಾರೆಯೆರೆದ ಪುಣ್ಯಕ್ಷೇತ್ರ; ಮಧುರೈ ಮೀನಾಕ್ಷಿ ದೇವಸ್ಥಾನದ ವೈಶಿಷ್ಟ್ಯ ಹೀಗಿದೆ

ಶಿವನು ಅಮೃತವನ್ನು ಧಾರೆಯೆರೆದ ಪುಣ್ಯಕ್ಷೇತ್ರ; ಮಧುರೈ ಮೀನಾಕ್ಷಿ ದೇವಸ್ಥಾನದ ವೈಶಿಷ್ಟ್ಯ ಹೀಗಿದೆ

Madurai Meenakshi Temple: ದಕ್ಷಿಣ ಭಾರತದ ದೇವಾಲಯಗಳು ಅದ್ಭುತ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ನಮ್ಮ ಪೂರ್ವಜರು ಕಟ್ಟಿರುವ ದೇವಸ್ಥಾನಗಳು ಇಂದಿಗೂ ಕೌತುಕದ ಕಣಜಗಳೇ ಆಗಿವೆ. ಅಂತಹ ಒಂದು ಸುಂದರ ದೇಗುಲ ಮಧುರೈನ ಮೀನಾಕ್ಷಿ ದೇವಾಲಯ. ಅದರ ವೈಭವ ಮತ್ತು ಐತಿಹ್ಯಗಳ ಕುರಿತು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು ಹೀಗೆ ಹೇಳುತ್ತಾರೆ.

ಶಿವನು ಅಮೃತವನ್ನು ಧಾರೆಯೆರೆದ ಪುಣ್ಯಕ್ಷೇತ್ರ; ಮಧುರೈ ಮೀನಾಕ್ಷಿ ದೇವಸ್ಥಾನದ ವೈಶಿಷ್ಟ್ಯ
ಶಿವನು ಅಮೃತವನ್ನು ಧಾರೆಯೆರೆದ ಪುಣ್ಯಕ್ಷೇತ್ರ; ಮಧುರೈ ಮೀನಾಕ್ಷಿ ದೇವಸ್ಥಾನದ ವೈಶಿಷ್ಟ್ಯ (maduraicorporation.co.in / X)

Madurai Meenakshi Temple: ಭಾರತದ ಪ್ರತಿಯೊಂದು ರಾಜ್ಯವು ಯಾವುದಾದರೂ ಒಂದು ದೇವಸ್ಥಾನದಿಂದ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ನಮ್ಮ ದೇಶವನ್ನು ಆಳಿದ ರಾಜ–ಮಹಾರಾಜರು ದೇವಸ್ಥಾನಗಳನ್ನು ಕಟ್ಟಿಸಿ, ಶಿಲ್ಪಕಲೆಯನ್ನು ಉಳಿಸಿ, ಸಂಸ್ಕೃತಿಯನ್ನು ಬೆಳೆಸಿದ್ದಾರೆ. ಪ್ರತಿಯೊಂದು ದೇವಸ್ಥಾನದಲ್ಲಿ ನೆಲೆಸಿರುವ ದೇವರ ಬಗ್ಗೆ ಅದರ ಶಕ್ತಿಯನ್ನು ಸಾರುವ ಇತಿಹಾಸವಿದೆ. ತಮಿಳುನಾಡು ರಾಜ್ಯದಲ್ಲಿ ಅನೇಕ ದೇವಸ್ಥಾನಗಳನ್ನು ಕಾಣಬಹುದು.

ಮಧುರೈ ಮೀನಾಕ್ಷಿ, ಕನ್ಯಾಕುಮಾರಿ, ರಾಮೇಶ್ವರಂ, ತಂಜಾವೂರು ಬೃಹದೇಶ್ವರ ಮೊದಲಾದವುಗಳಿವೆ. ಅವುಗಳಲ್ಲಿ ಮಧುರೈ ಮೀನಾಕ್ಷಿ ದೇವಸ್ಥಾನವು ವಿಶೇಷವಾಗಿದೆ. ಸಾಂಸ್ಕೃತಿಕ ವೈಭವದ ಜೊತೆಗೆ ಪುರಾಣ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅದ್ಭುತ ಶಿಲ್ಪಕಲೆಗಳಿಂದ ಕಂಗೊಳಿಸುವ ಮಧುರೈ ಮೀನಾಕ್ಷಿ ದೇವಾಲಯದಲ್ಲಿ ಮೀನಾಕ್ಷಿ ಅಮ್ಮನವರು ನೆಲೆಸಿದ್ದಾದರೂ ಹೇಗೆ? ಅದರ ಇತಿಹಾಸವೇನು? ಈ ಪುಣ್ಯಕ್ಷೇತ್ರದ ಬಗ್ಗೆ ವಿವಿರವಾಗಿ ತಿಳಿಸಿದ್ದಾರೆ ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಅವರು.

ಮದುರೈ ಮೀನಾಕ್ಷಿ ದೇಗುಲದ ಇತಿಹಾಸ

ಮಧುರೈ ಮೀನಾಕ್ಷಿ ದೇವಸ್ಥಾನದ ಇತಿಹಾಸ ಬಹಳ ಕುತೂಹಲಕಾರಿಯಾಗಿದೆ. ಮಧುರೈನ ದೊರೆ ಮಲಯಧ್ವಜ ಪಾಂಡ್ಯನು ತಪಸ್ಸನ್ನು ಮಾಡುತ್ತಾನೆ. ಅವನ ತಪಸ್ಸಿಗೆ ಮೆಚ್ಚಿ ತಾಯಿ ಪಾರ್ವತಿಯು ಮಗುವಾಗಿ ಅವನ ಕುಟುಂಬದಲ್ಲಿ ಜನಿಸುತ್ತಾಳೆ. ಮಗು ಹುಟ್ಟಿದಾಗ ಮೂರು ಸ್ತನಗಳನ್ನು ಹೊಂದಿರುತ್ತಾಳೆ. ಅದು ಪಾಂಡ್ಯ ರಾಜನ ಚಿಂತೆಗೆ ಕಾರಣವಾಗುತ್ತದೆ. ರಾಜನು ಹೀಗೆ ಚಿಂತಿಸುತ್ತಿರಲು ಅವನಿಗೆ ಒಂದು ಆಕಾಶವಾಣಿ ಕೇಳಿಸುತ್ತದೆ.

ನಿನ್ನ ಮಗಳಿಗೆ ತಕ್ಕ ಜೀವನ ಸಂಗಾತಿ ಕಾಣಿಸಿಕೊಂಡ ತಕ್ಷಣ ಅವಳ ದೇಹದಲ್ಲಿ ಬದಲಾವಣೆಯಾಗುತ್ತದೆ ಎಂಬ ವಾಣಿ ಕೇಳಿಸುತ್ತದೆ. ಆಗ ರಾಜನಿಗೆ ಅತೀವ ಆನಂದವಾಗುತ್ತದೆ. ರಾಜನು ಆ ಮಗುವಿಗೆ ಎಲ್ಲ ರೀತಿಯ ವಿದ್ಯೆ ಕಲಿಸುತ್ತಾನೆ. ಸಮರ ಕಲೆಯಲ್ಲಿ ಪ್ರಬುದ್ಧಳಾಗುತ್ತಾಳೆ. ಆಕೆ ಒಮ್ಮೆಲೇ ಕೈಲಾಸವನ್ನು ವಶಪಡಿಸಿಕೊಳ್ಳಲು ಮುಂದಾಗುತ್ತಾಳೆ. ಅಲ್ಲಿ ಯೋಗನಿದ್ರೆಯಲ್ಲಿರುವ ಶಿವನನ್ನು ನೋಡಿ ಪ್ರಭಾವಿತಳಾಗುತ್ತಾಳೆ. ಆಕಾಶವಾಣಿಯಂತೆ ಆಕೆಯ ದೇಹದಲ್ಲಿ ಬದಲಾವಣೆಗಳು ಆಗುತ್ತವೆ. ಶಿವನು ಯೋಗನಿದ್ರೆಯಿಂದ ಎಚ್ಚರಗೊಂಡು ತನಗಾಗಿ ಹುಟ್ಟಿದ ಕನ್ಯೆ ಎಂದು ಭಾವಿಸಿ ಅವಳನ್ನು ಮದುವೆಯಾಗುತ್ತಾನೆ. ಅವಳೇ ಮೀನಾಕ್ಷಿ. ಆಕೆಯನ್ನು ವರಿಸಿದ ಶಿವನು ಈ ಕ್ಷೇತ್ರದಲ್ಲಿ ಸುಂದರೇಶ್ವರನಾಗಿ ನೆಲೆಸುತ್ತಾನೆ.

ಮಧುರೈ ದೇವಸ್ಥಾನದ ವಿಶೇಷ್ಟ್ಯ

ಮಧು ಎಂದರೆ ಅಮೃತ. ಮೂರು ಕಣ್ಣಿನ ಶಿವನು ಮಧುವನ್ನು ಧಾರೆಯೆರೆದ ಸ್ಥಳವಾದ್ದರಿಂದ ಈ ಪ್ರದೇಶಕ್ಕೆ ಮಧುರೈ ಎಂಬ ಹೆಸರು ಬಂದಿದೆ ಎಂದು ಸ್ಥಳಪುರಾಣ ಹೇಳುತ್ತದೆ. ಮಧುರೈ ಮೀನಾಕ್ಷಿ ದೇವಾಲಯವು ಎತ್ತರದ ರಾಜಗೋಪುರ ಹೊಂದಿರುವುದರಿಂದ ವಿಶ್ವವಿಖ್ಯಾತಿಯನ್ನು ಪಡೆದಿದೆ.

ವೈಗೈ ನದಿಯ ದಡದಲ್ಲಿರುವ ಮಧುರೈ ಕ್ಷೇತ್ರವು ನಟರಾಜ ಶಿವನ ನೃತ್ಯಸ್ಥಾನವಾಗಿದೆ ಎಂದು ದಂತಕಥೆಗಳು ಹೇಳುತ್ತವೆ. ಯಾವುದೇ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿ ಮೊದಲು ಸ್ವಾಮಿಯ ದರ್ಶನ ಮಾಡಿ ನಂತರ ಅಮ್ಮನವರ ದರ್ಶನ ಮಾಡುವುದು ವಾಡಿಕೆ. ಆದರೆ ಮಧುರೈನಲ್ಲಿ ಹಾಗಲ್ಲ, ಅಲ್ಲಿ ಮೊದಲು ಶ್ರೀ ಮೀನಾಕ್ಷಿ ಅಮ್ಮನವರ ದರ್ಶನ ಮಾಡಿದ ನಂತರವೇ ಸುಂದರೇಶ್ವರ ಸ್ವಾಮಿಯ ದರ್ಶನ ಮಾಡುವುದು ವಾಡಿಕೆ.

ಈ ದೇವಾಲಯದಲ್ಲಿರುವ ಕೊಳ (ಕೆರೆ) ಯನ್ನು 'ಸ್ವರ್ಣಮಾಲಾ ತಟಾಕಂ' ಎಂದು ಕರೆಯಲಾಗುತ್ತದೆ. ಹಿಂದೆ ದೇವೇಂದ್ರನು ಇಲ್ಲಿ ಶಿವನನ್ನು ಚಿನ್ನದ ಕಮಲಗಳಿಂದ ಪೂಜಿಸಿ ತನ್ನ ಪಾಪಗಳನ್ನು ಕಳೆದುಕೊಂಡನು. ಆದುದರಿಂದಲೇ ಇದಕ್ಕೆ ಸ್ವರ್ಣ ಕಮಲಾ ತಟಕಂ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಭಾರತದ ಸಂಸ್ಕೃತಿ ಮತ್ತು ಸುಂದರ ಶಿಲ್ಪಕಲೆಯ ತವರಾದ ಈ ಸ್ಥಳಕ್ಕೆ ಭೇಟಿ ನೀಡಿದ ತಕ್ಷಣ ಅನೇಕ ಶುಭಕಾರ್ಯಗಳು ನಡೆಯುತ್ತವೆ ಎಂಬ ನಂಬಿಕೆ ಹಲವರಲ್ಲಿದೆ ಎಂದು ಜ್ಯೋತಿಷಿ ಬ್ರಹ್ಮಶ್ರೀ ಚಿಲಕಮೃತಿ ಪ್ರಭಾಕರ ಚಕ್ರವರ್ತಿ ಶರ್ಮಾ ಹೇಳುತ್ತಾರೆ.

ಮೂಲ ಲೇಖನ - ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ

(ಅನುವಾದ - ಅರ್ಚನಾ ಹೆಗಡೆ, ಕಲಬುರಗಿ)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.