Magha Purnima 2024: ಮಾಘ ಹುಣ್ಣಿಮೆಯಂದು ಯಾವ ರಾಶಿಯವರು ಯಾವ ವಸ್ತು ದಾನ ಮಾಡಿದ್ರೆ ಶುಭಫಲ; ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Magha Purnima 2024: ಮಾಘ ಹುಣ್ಣಿಮೆಯಂದು ಯಾವ ರಾಶಿಯವರು ಯಾವ ವಸ್ತು ದಾನ ಮಾಡಿದ್ರೆ ಶುಭಫಲ; ಇಲ್ಲಿದೆ ವಿವರ

Magha Purnima 2024: ಮಾಘ ಹುಣ್ಣಿಮೆಯಂದು ಯಾವ ರಾಶಿಯವರು ಯಾವ ವಸ್ತು ದಾನ ಮಾಡಿದ್ರೆ ಶುಭಫಲ; ಇಲ್ಲಿದೆ ವಿವರ

ಹಿಂದೂ ಧರ್ಮದಲ್ಲಿ ಮಾಘ ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಮಾಸದಲ್ಲಿ ಬರುವ ಮಾಘ ಹುಣ್ಣಿಮೆಯಂದು ದಾನ ಮಾಡುವುದು ಹಾಗೂ ಪುಣ್ಯಸ್ನಾನ ಬಹಳ ವಿಶೇಷ. ಮಾಘ ಹುಣ್ಣಿಮೆಯಂದು ಯಾವ ರಾಶಿಯವರು, ಯಾವ ವಸ್ತುವನ್ನು ದಾನ ಮಾಡಿದ್ರೆ ಶನಿದೇವನ ಆಶೀರ್ವಾದ ಪಡೆಯುತ್ತಾರೆ ನೋಡಿ.

ಮಾಘ ಹುಣ್ಣಿಮೆಯಂದು ಯಾವ ರಾಶಿಯವರು ಯಾವ ವಸ್ತು ದಾನ ಮಾಡಿದ್ರೆ ಶುಭಫಲ; ಇಲ್ಲಿದೆ ವಿವರ
ಮಾಘ ಹುಣ್ಣಿಮೆಯಂದು ಯಾವ ರಾಶಿಯವರು ಯಾವ ವಸ್ತು ದಾನ ಮಾಡಿದ್ರೆ ಶುಭಫಲ; ಇಲ್ಲಿದೆ ವಿವರ

ಹಿಂದೂಗಳ ಪವಿತ್ರ ಮಾಸಗಳಲ್ಲಿ ಕಾರ್ತಿಕ ಮಾಸದ ನಂತರ ಮಾಘ ಮಾಸ ಪ್ರಮುಖವಾದುದು. ಮಾಘ ಮಾಸದಲ್ಲಿ ಬರುವ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಈ ವರ್ಷ ಫೆಬ್ರುವರಿ 24ಕ್ಕೆ ಮಾಘ ಹುಣ್ಣಿಮೆ ಇದೆ. ಹುಣ್ಣಿಮೆಯ ದಿನ ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ವಿಶೇಷ ಪುಣ್ಯ ದೊರಕುತ್ತದೆ ಎಂಬ ನಂಬಿಕೆ ಇದೆ. ಈ ದಿನ ಸಮುದ್ರ ಅಥವಾ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಜನ್ಮಜನ್ಮಾಂತರಗಳ ಪಾಪದಿಂದ ಮುಕ್ತಿ ಪಡೆಯಬಹುದು ಎಂದು ಹಿರಿಯರು ಹೇಳುತ್ತಾರೆ.

ಮಾಘ ಹುಣ್ಣಿಮೆಯ ದಿನ ಮಾಘ ಸ್ನಾನದ ನಂತರ ದಾನ ಮಾಡುವುದರಿಂದ ಶನಿದೇವನ ಕೃಪೆಗೆ ಪಾತ್ರರಾಗುತ್ತಾರೆ ಎಂಬುದು ನಂಬಿಕೆ. ಎಳ್ಳು, ಹೊದಿಕೆ, ಚಪ್ಪಲಿ, ಛತ್ರಿ, ತುಪ್ಪ, ಬೆಲ್ಲ, ಬಟ್ಟೆ, ಬೇಳೆಕಾಳು, ಅನ್ನ ಮುಂತಾದವುಗಳನ್ನು ದಾನ ಮಾಡಿದರೆ ಶುಭಫಲ ದೊರೆಯುತ್ತದೆ. ಗೋಧಿಯನ್ನು ದಾನ ಮಾಡುವುದು ತುಂಬಾ ಮಂಗಳಕರ ಎಂದು ಶಾಸ್ತ್ರಗಳಲ್ಲಿಯೂ ಉಲ್ಲೇಖಿಸಲಾಗಿದೆ.

ಮಾಘ ಹುಣ್ಣಿಮೆಯಂದು ಪವಿತ್ರ ನದಿ ಅಥವಾ ಸರೋವರದಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳು ನಾಶವಾಗುತ್ತವೆ ಮತ್ತು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಆ ದಿನ ಉಪವಾಸದ ಜೊತೆಗೆ ಸತ್ಯನಾರಾಯಣ, ಶ್ರೀಹರಿ ವಿಷ್ಣು, ಶಿವ, ಹನುಮಂತ ಮತ್ತು ಚಂದ್ರನ ಆರಾಧನೆಯೂ ಪುರಾಣಗಳಲ್ಲಿ ಕಂಡುಬರುತ್ತದೆ.

ʼಓಂ ನಮೋ ಭಗವತೇ ವಾಸುದೇವಾಯ ನಮಃʼ ಎಂಬ ಮಂತ್ರವನ್ನು ಪಠಿಸಿ. ಪುರಾಣಗಳ ಪ್ರಕಾರ, ಮಾಘ ಹುಣ್ಣಿಮೆಯ ದಿನದಂದು ಭಗವಾನ್ ವಿಷ್ಣುವು ಗಂಗೆಯಲ್ಲಿ ಸ್ನಾನ ಮಾಡುತ್ತಾನೆ. ಆದುದರಿಂದಲೇ ಮಾಘ ಹುಣ್ಣಿಮೆಯಂದು ಪುಣ್ಯಸ್ನಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಈ ದಿನ ಬಡವರಿಗೆ ಮತ್ತು ಅಸಹಾಯಕರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡುವುದರಿಂದ ಶನಿಯಿಂದ ಉಂಟಾಗುವ ಎಲ್ಲಾ ಅನಿಷ್ಟಗಳು ದೂರವಾಗುತ್ತವೆ. ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ, ವ್ಯಕ್ತಿಯು ದುಃಖದಿಂದ ಮುಕ್ತಿ ಹೊಂದುತ್ತಾನೆ ಮತ್ತು ಶಾಂತಿಯನ್ನು ಪಡೆಯುತ್ತಾನೆ ಎಂದು ನಂಬಲಾಗುತ್ತದೆ.

ಹಾಗಾದರೆ ಈ ದಿನ ಯಾವ ರಾಶಿಯವರು ವಸ್ತುವನ್ನು ದಾನ ಮಾಡಿದರೆ ಶುಭಫಲ ದೊರೆಯುತ್ತದೆ ನೋಡಿ.

ಮೇಷ ರಾಶಿ: ಮೇಷ ರಾಶಿಯವರಿಗೆ ಹಸಿರು ತರಕಾರಿ, ಉಣ್ಣೆಯ ಬಟ್ಟೆ, ಆಹಾರ ಧಾನ್ಯಗಳನ್ನು ದಾನ ಮಾಡುವುದರಿಂದ ಒಳಿತಾಗುತ್ತದೆ.

ವೃಷಭ ರಾಶಿ: ಮಾಘ ಹುಣ್ಣಿಮೆಯಂದು ವೃಷಭ ರಾಶಿಯವರು ಹಳದಿ ವಸ್ತ್ರ, ಬೇಳೆ ಕಾಳುಗಳನ್ನು ದಾನ ಮಾಡುವುದು ಉತ್ತಮ.

ಮಿಥುನ ರಾಶಿ: ಈ ರಾಶಿಯವರು ಶನಿದೇವನ ಅನುಗ್ರಹ ಪಡೆಯಲು ಕೆಂಪು ಹಣ್ಣುಗಳು, ಹಳದಿ ಹಣ್ಣುಗಳು ಮತ್ತು ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಕು. ಇವುಗಳೊಂದಿಗೆ ನೀಲಿ ಹೂವುಗಳನ್ನು ದಾನ ಮಾಡುವುದರಿಂದ ಹೆಚ್ಚಿನ ಪುಣ್ಯ ಬರುತ್ತದೆ.

ಕಟಕ: ಪವಿತ್ರ ನದಿಯಲ್ಲಿ ಸ್ನಾನ ಮಾಡಿದ ನಂತರ, ಕರ್ಕ ರಾಶಿಯವರು ಪಾದರಕ್ಷೆಗಳು, ಹೊದಿಕೆಗಳು, ಛತ್ರಿಗಳು, ನೀಲಿ ಮತ್ತು ಕಪ್ಪು ಬಟ್ಟೆಗಳನ್ನು ದಾನ ಮಾಡಬೇಕು. ಶನಿಯ ನೆಚ್ಚಿನ ಬಣ್ಣ ಕಪ್ಪು. ಈ ಬಣ್ಣದ ಬಟ್ಟೆಗಳನ್ನು ದಾನ ಮಾಡಿದರೆ ಶನಿಯ ಆಶೀರ್ವಾದ ಸಿಗುತ್ತದೆ.

ಸಿಂಹ: ನೀಲಿ ಬಟ್ಟೆ, ನೀಲಿ ಹೂವುಗಳು, ಹಸಿರು ತರಕಾರಿಗಳನ್ನು ದಾನ ಮಾಡುವುದು ಉತ್ತಮ.

ಕನ್ಯಾರಾಶಿ: ಗೋಧಿಯನ್ನು ದಾನ ಮಾಡಲು ಮಾಘ ಹುಣ್ಣಿಮೆಯ ದಿನ ಬಹಳ ಮುಖ್ಯ. ಕನ್ಯಾ ರಾಶಿಯವರು ಗೋಧಿ, ಕೆಂಪು ಬೇಳೆ, ತಾಮ್ರ ಮತ್ತು ಬೆಲ್ಲವನ್ನು ದಾನ ಮಾಡಬೇಕು.

ತುಲಾ ರಾಶಿ: ಹಳದಿ ಹಣ್ಣುಗಳು, ಶ್ರೀಗಂಧ, ಹಿತ್ತಾಳೆ ವಸ್ತುಗಳು, ಹಳದಿ ಸಾಸಿವೆ, ಬಟ್ಟೆಗಳನ್ನು ದಾನ ಮಾಡುವುದು ಒಳ್ಳೆಯದು.

ವೃಶ್ಚಿಕ ರಾಶಿ: ಮಾಘ ಹುಣ್ಣಿಮೆಯಂದು ವೃಶ್ಚಿಕ ರಾಶಿಯವರು ಸುಗಂಧ, ಕೆನೆ ಬಣ್ಣದ ಬಟ್ಟೆ, ಗೋದಾನ ಮಾಡಬೇಕು.

ಧನು ರಾಶಿ: ಬಿಳಿ ಬಟ್ಟೆ, ಮುತ್ತು, ಹಾಲು, ಅಕ್ಕಿ, ಸಕ್ಕರೆ, ಬಿಳಿ ಹೂವುಗಳನ್ನು ದಾನ ಮಾಡಿದರೆ ಮನಃಶಾಂತಿ ಸಿಗುತ್ತದೆ.

ಮಕರ: ಹಳದಿ ಸಾಸಿವೆ, ಹಳದಿ ಹಣ್ಣುಗಳು, ಬಾಳೆಹಣ್ಣು, ಹಿತ್ತಾಳೆ ವಸ್ತುಗಳು, ಹಳದಿ ಸಿಹಿತಿಂಡಿಗಳು, ಬಟ್ಟೆಗಳನ್ನು ದಾನ ಮಾಡಿ.

ಕುಂಭ: ಅಕ್ಕಿ, ಸಕ್ಕರೆ, ಹಾಲು, ಬಿಳಿ ಚಂದನ, ಬಿಳಿ ಬಟ್ಟೆ, ಮುತ್ತುಗಳು ಮತ್ತು ಬೆಳ್ಳಿ ವಸ್ತುಗಳನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮೀನ: ಗೋಧಿ, ಹಿತ್ತಾಳೆ, ಧಾನ್ಯಗಳು, ಬಟ್ಟೆ, ಬೆಲ್ಲ, ಎಣ್ಣೆ, ನೀಲಿ ಬಟ್ಟೆಯನ್ನು ದಾನ ಮಾಡಬೇಕು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.