Maha Shivratri 2024: ಪರಮೇಶ್ವರನಿಗೆ ವಿಶೇಷವಾದ ಮಹಾ ಶಿವರಾತ್ರಿಯ ಹಿನ್ನೆಲೆ, ಮಹತ್ವ, ಪೂಜಾ ವಿಧಿವಿಧಾನಗಳ ವಿವರ ಇಲ್ಲಿದೆ
ಮಹಾಶಿವರಾತ್ರಿ ಹಿಂದೂಗಳ ಪವಿತ್ರ ಆಚರಣೆಗಳಲ್ಲಿ ಒಂದು. ಕೃಷ್ಣ ಪಕ್ಷದ ಚರ್ತುದರ್ಶಿ ತಿಥಿಯಂದು ಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 8 ರಂದು ಮಹಾಶಿವರಾತ್ರಿ ಇದೆ. ಪರಮೇಶ್ವರನಿಗೆ ವಿಶೇಷ ದಿನವಾದ ಶಿವರಾತ್ರಿ ಆಚರಣೆಯ ಮಹತ್ವ, ಹಿನ್ನೆಲೆ ಹಾಗೂ ಪೂಜಾ ವಿಧಿ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ.
ಹಿಂದೂಗಳು ಆಚರಿಸುವ ಪವಿತ್ರ ಹಬ್ಬಗಳಲ್ಲಿ ಮಹಾಶಿವರಾತ್ರಿಯೂ ಒಂದು. ಅಪಾರವಾದ ಧಾರ್ಮಿಕ ಹಾಗೂ ಆಧಾತ್ಮಿಕ ಮಹತ್ವವನ್ನು ಹೊಂದಿರುವ ದಿನ ಇದಾಗಿದೆ. ಪಾರ್ವತಿ ಪರಮೇಶ್ವರರು ಮಹಾ ಶಿವರಾತ್ರಿಯ ದಿನ ಮದುವೆಯಾದರು ಎಂಬ ನಂಬಿಕೆಯೂ ಇದೆ. ಭಾರತ ದೇಶದಾದ್ಯಂತ ಶಿವಭಕ್ತರು ಭಕ್ತಿ-ಭಾವದಿಂದ ಮಹಾಶಿವರಾತ್ರಿಯನ್ನು ಆಚರಿಸುತ್ತಾರೆ. ಈ ದಿನ ರುದ್ರಾಭಿಷೇಕ ಮಾಡಿಸುವುದರಿಂದ ವಿಶೇಷ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಪರಶಿವನನ್ನು ಲಯಕಾರಕ ಎಂದು ಪರಿಗಣಿಸಲಾದರೂ ಈ ಲೋಕದಲ್ಲಿ ಶಿವನ ಮಹಿಮೆ ಅಪಾರ.
ಫಾಲ್ಗುಣ ಮಾಸ ಕೃಷ್ಣ ಪಕ್ಷದ ಚತುರ್ದಶಿ ತಿಥಿಯಂದು ಮಹಾ ಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್ 8 ರಂದು ಮಹಾಶಿವರಾತ್ರಿ ಇದೆ.
ಶಿವರಾತ್ರಿ ದಿನಾಂಕ ಸಮಯ
ಚತುದರ್ಶಿ ತಿಥಿಯು ಮಾರ್ಚ್ 8 ರಂದು ಬೆಳಿಗ್ಗೆ ಆರಂಭವಾಗಿ, ಮಾರ್ಚ್ 9ರ ಸಂಜೆ 6.17ಕ್ಕೆ ಮುಕ್ತಾಯವಾಗುತ್ತದೆ.
ಮಹಾಶಿವರಾತ್ರಿ ಆಚರಣೆಯ ಮಹತ್ವ
ದೇಶದಾದ್ಯಂತ ಮಹಾಶಿವರಾತ್ರಿಯನ್ನು ಬಹಳ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಈ ದಿನವು ತ್ರಿಮೂರ್ತಿಗಳಲ್ಲಿ ಒಬ್ಬರಾದ ಮಹಾಶಿವನಿಗೆ ಅರ್ಪಿತವಾಗಿದೆ. ಇದು ಶಿವ-ಪಾರ್ವತಿ ಮದುವೆಯಾದ ಶುಭದಿನವಾಗಿದೆ.
ಶಿವನ ಪ್ರೀತಿಯನ್ನ ಪಡೆಯಲು ಪಾರ್ವತಿ ದೇವಿಯು ಮಹಾ ತಪಸ್ಸು ಮಾಡುತ್ತಾಳೆ. ಅವಳನ್ನು ಉಮಾ ಎಂದೂ ಕರೆಯುತ್ತಾರೆ. ಆರಂಭದಲ್ಲಿ ಪಾರ್ವತಿಯನ್ನು ಒಪ್ಪದ ಶಿವ ಅವಳ ತಪಸ್ಸು ಹಟಕ್ಕೆ ಸೋಲುತ್ತಾನೆ. ನಂತರ ಅವಳನ್ನು ಮದುವೆಯಾಗಲು ಒಪ್ಪಿಗೆ ನೀಡುತ್ತಾನೆ. ಶಿವ-ಪಾರ್ವತಿಯ ವಿವಾಹವು ಫಾಲ್ಗುಣ ಮಾಸದ ಅಮಾವಾಸ್ಯೆಗೂ ಒಂದು ದಿನ ಮೊದಲು ನಡೆಯುತ್ತದೆ. ಪಾರ್ವತಿಯನ್ನು ಮದುವೆಯಾದ ಶಿವನು 'ನಿರ್ಗುಣ ಬ್ರಾಹ್ಮಣ'ನಿಂದ 'ಸಗುಣ ಬ್ರಹ್ಮನ್' ಆಗಿ ರೂಪಾಂತರಗೊಳ್ಳುತ್ತಾನೆ. ಹೀಗೆ ಶಿವರಾತ್ರಿ ಆಚರಣೆ ವಿಶೇಷ ಮಹತ್ವ ಪಡೆಯುತ್ತದೆ.
ವಿಷ್ಣು ಪುರಾಣದ ಪ್ರಕಾರ ಸಮುದ್ರ ಮಂಥನದ ಸಮಯದಲ್ಲಿ ಭೀಕರ ಹಾಲಾಹಲವು ಹೊರ ಹೊಮ್ಮುತ್ತದೆ. ಇದು ಸೃಷ್ಟಿಯ ನಾಶವನ್ನು ಸೂಚಿಸುತ್ತದೆ. ಆಗ ಭಗವಾನ್ ವಿಷ್ಣುವು ರಾಕ್ಷಸರರು ಹಾಗೂ ದೇವತೆಗಳ ಬಳಿ ಶಿವನ ಸಹಾಯ ಕೇಳಲು ಸೂಚಿಸುತ್ತಾನೆ. ಏಕೆಂದರೆ ಹಾಲಾಹಲವನ್ನು ತಡೆಯುವ ಶಕ್ತಿ ಶಿವನಿಗೆ ಮಾತ್ರ ಇರುತ್ತದೆ. ಶಿವನು ಹಾಲಾಹಲವನ್ನು ಸೇವಿಸುತ್ತಾನೆ. ಇದರಿಂದ ಅವನ ಪ್ರಾಣಕ್ಕೆ ಅಪಾಯವಾಗಬಹುದು ಎಂದು ಪಾರ್ವತಿಯು ಶಿವನು ಕತ್ತನ್ನು ಒತ್ತಿ ಹಿಡಿಯುತ್ತಾಳೆ. ಆಗ ಶಿವನ ಕುತ್ತಿಗೆ ಭಾಗ ಕಪ್ಪಾಗುತ್ತದೆ. ಅದಿನಿಂದ ಅವನಿಗೆ ನೀಲಕಂಠ ಎಂಬ ಹೆಸರೂ ಬರುತ್ತದೆ. ಆ ದಿನವನ್ನು ಶಿವರಾತ್ರಿ ಎಂದು ಆಚರಿಸಲಾಗುತ್ತದೆ ಎಂಬುದು ಇನ್ನೊಂದು ನಂಬಿಕೆ.
ಇನ್ನೊಂದು ದಂತಕಥೆಯ ಪ್ರಕಾರ, ಈ ದಿನ ಗಂಗಾ ದೇವಿಯು ರಭಸವಾಗಿ ಸ್ವರ್ಗದಿಂದ ಧರೆಗೆ ಇಳಿಯುತ್ತಾಳೆ. ಇವಳ ಕೋಪದಿಂದ ಭೂಮಿಯನ್ನು ರಕ್ಷಿಸಲು ಶಿವನು ಅವಳನ್ನು ತನ್ನ ಜಡೆಯಲ್ಲಿ ತಡೆಹಿಡಿಯುತ್ತಾನೆ. ನಂತರ ನದಿ ರೂಪದಲ್ಲಿ ಅವಳನ್ನು ಭೂಮಿಗೆ ಬಿಡುತ್ತಾನೆ ಎಂದೂ ಹೇಳಲಾಗುತ್ತದೆ. ಹೀಗೆ ಶಿವರಾತ್ರಿ ಆಚರಣೆಯ ಹಿಂದೆ ಹಲವು ದಂತಕಥೆಗಳಿದ್ದರೂ ಆಚರಣೆಯ ಕ್ರಮ ಮಾತ್ರ ಒಂದೇ ರೀತಿ ಇರುತ್ತದೆ.
ಈ ದಿನ ಪರಮೇಶ್ವರನ ಆಶೀರ್ವಾದ ಪಡೆಯುವ ಸಲುವಾಗಿ ಶಿವಭಕ್ತರು ಶಿವನ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ವಿವಿಧ ಶಿವಮಂತ್ರಗಳನ್ನು ಪಠಿಸುತ್ತಾರೆ. ಶಿವರಾತ್ರಿಗೂ ಹಿಂದಿನ ದಿನ ಜಾಗರಣೆ ಮಾಡುವುದು ವಿಶೇಷ. ರಾತ್ರಿ ಇಡೀ ಎಚ್ಚರವಿದ್ದು ಶಿವ ಮಂತ್ರವನ್ನು ಜಪಿಸುತ್ತಾರೆ. ಇದು ಮುಕ್ತಿ ಪಡೆಯುವ ದಿನ ಎಂದೂ ಹಿಂದೂಗಳು ನಂಬುತ್ತಾರೆ.
ಮಹಾಶಿವರಾತ್ರಿ ಪೂಜಾ ಕ್ರಮಗಳು
ಮಹಾಶಿವರಾತ್ರಿಯ ಪವಿತ್ರ ದಿನದಂದು ಭಕ್ತರು ಬೆಳಿಗ್ಗೆ ಬೇಗ ಎದ್ದು ಪವಿತ್ರ ಸ್ನಾನ ಮಾಡಲಾಗುತ್ತದೆ. ದೇಹ, ಮನಸ್ಸು ಹಾಗೂ ಆತ್ಮವನ್ನು ಶುದ್ಧೀಕರಿಸುವುದು ಬಹಳ ಮುಖ್ಯ. ನಂತರ ಮನೆ ಹಾಗೂ ಪೂಜೆ ಕೋಣೆಯನ್ನು ಸ್ವಚ್ಛ ಮಾಡಿ ದೇವರ ಮುಂದೆ ದೀಪ ಬೆಳಗಲಾಗುತ್ತದೆ. ಈ ದಿನ ಶಿವನ ದೇವಾಲಯಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಭಕ್ತರು ಶಿವನ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜಾ ಕೈಕಂರ್ಯಗಳನ್ನು ಮಾಡಿಸುತ್ತಾರೆ. ಶಿವನ ದೇಗುಲದಲ್ಲಿ ಶಿವ ಮೂರ್ತಿಗೆ ಜಲಾಭಿಷೇಕ ಮಾಡುವುದು, ಶಿವಲಿಂಗಕ್ಕೆ ಪಂಚಾಮೃತ ಅರ್ಪಿಸುವುದು ವಿಶೇಷ. ಹಾಲು ಮೊಸರು, ಜೇನುತುಪ್ಪ, ಸುರಗರ್‌ಪುಡಿ ಹಾಗೂ ತುಪ್ಪದಿಂದ ಮಾಡಿದ ಪಂಚಾಮೃತ ಶಿವನಿಗೆ ವಿಶೇಷ. ಈ ದಿನ ರುದ್ರಾಭಿಷೇಕ ಮಾಡಿಸುವುದರಿಂದ ಶಿವ ಸಂತೃಪ್ತಿ ಹೊಂದುತ್ತಾನೆ ಎಂಬ ನಂಬಿಕೆ ಇದೆ.
ಮಂತ್ರ
ಓಂ ನಮಃ ಶಿವಾಯ
* ಓಂ ತಯಂಬಕೇ ಯಜಾಮಹೀ ಸುಗಂಧಿಂ ಪುಷ್ಟಿ ವರ್ಧನಂ ಉರ್ಮ ರುಕುವಿವ್ ಬಂಧಾನನ್ ಮೃತ್ಯೋರ್ ಮುಕ್ಷೀಯ ಮಾಮೃತಾತ್..!!
(This copy first appeared in Hindustan Times Kannada website. To read more like this please logon to kannada.hindustantimes.com)