ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ; ಇಲ್ಲಿದೆ ವಿವರ

ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ; ಇಲ್ಲಿದೆ ವಿವರ

ಸೂರ್ಯನು ರಾಶಿ ಬದಲಿಸುವ ದಿನವನ್ನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ತಿಂಗಳ 14 ರಂದು ಸೂರ್ಯನು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ಈ ಅವಧಿಯಲ್ಲಿ ದ್ವಾದಶ ರಾಶಿಗಳ ಫಲಾಫಲ ಹೇಗಿರುತ್ತದೆ, ಯಾವ ರಾಶಿಗೆ ಲಾಭ, ಯಾವ ರಾಶಿಯವರಿಗೆ ಸಂಕಷ್ಟ ಎಂಬ ವಿವರ ಇಲ್ಲಿದೆ. (ಬರಹ: ಎಚ್‌. ಸತೀಶ್‌, ಜ್ಯೋತಿಷಿ)

ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಯಾವ ರಾಶಿಗೆ ಶುಭ, ಯಾರಿಗೆ ಅಶುಭ?
ಮಿಥುನ ರಾಶಿಯಲ್ಲಿ ಸೂರ್ಯನ ಸಂಚಾರದಿಂದ ಯಾವ ರಾಶಿಗೆ ಶುಭ, ಯಾರಿಗೆ ಅಶುಭ? (PC: Canva)

ಜೂನ್‌ 14ರಂದು ಸೂರ್ಯನು ವೃಷಭದಿಂದ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಜುಲೈ 16ರವರೆಗೆ ಮಿಥುನ ರಾಶಿಯಲ್ಲೇ ಸಂಚರಿಸುತ್ತಾನೆ. ರವಿಗೆ ಮಿಥುನ ರಾಶಿಯು ಸಮಕ್ಷೇತ್ರವಾಗುತ್ತದೆ. ರವಿಗೆ ಬುಧನು ಸಮನಾದರೆ ಬುಧನು ರವಿಗೆ ಮಿತ್ರನಾಗುತ್ತಾನೆ. ಆದ ಕಾರಣ ಈ ಅವಧಿಯಲ್ಲಿ ಕೆಲವು ರಾಶಿಯವರಿಗೆ ಕಷ್ಟ ಕಾರ್ಪಣ್ಯಗಳು ಕಡಿಮೆ ಆಗುತ್ತವೆ. ಉಳಿದ ರಾಶಿಗಳಿಗೆ ಮಧ್ಯಮಗತಿಯ ಫಲಗಳು ದೊರೆಯುತ್ತವೆ. ಸಿಂಹ. ಕನ್ಯಾ, ತುಲಾ, ಧನಸ್ಸು, ಕುಂಭ ಮತ್ತು ಮೀನ ರಾಶಿಯವರಿಗೆ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಉಳಿದ ರಾಶಿಗಳಿಗೆ ನಿಧಾನಗತಿಯಲ್ಲಿ ಶುಭಫಲಗಳು ದೊರೆಯುತ್ತವೆ. ಈ ಅವಧಿಯಲ್ಲಿ ಸೂರ್ಯನ ಪೂಜೆ ಮಾಡುವುದರಿಂದ ವಿಶೇಷ ಫಲಗಳನ್ನು ಪಡೆಯಬಹುದು. ಮಿಥುನದಲ್ಲಿ ಸೂರ್ಯನ ಸಂಚಾರದಿಂದ ಯಾವೆಲ್ಲಾ ರಾಶಿಯವರಿಗೆ ಶುಭ, ಯಾರಿಗೆ ಶುಭ ಎಂಬ ವಿವರ ಇಲ್ಲಿದೆ.

ಮೇಷ

ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸುವಿರಿ. ನಿಮ್ಮಲ್ಲಿನ ನಿಸ್ವಾರ್ಥ ಮನೋಭಾವನೆ ಎಲ್ಲರಿಗೂ ಮಾದರಿಯಾಗುತ್ತದೆ. ಶಾಂತಿ ಸಂಯಮದ ಜೀವನ ಇರುತ್ತದೆ. ಯಾವುದೇ ಸ್ವಾರ್ಥವಿಲ್ಲದೆ ದುಡಿಯುವ ಕಾರಣ ನಿಮ್ಮ ಯಶಸ್ಸಿಗೆ ಬೇರೆಯವರ ಸಹಾಯ ದೊರೆಯುತ್ತದೆ. ನಿಮ್ಮ ಮಾತಿಗೆ ಕೇವಲ ಕುಟುಂಬದಲ್ಲಿ ಅಲ್ಲದೆ ಸಮಾಜದಲ್ಲಿಯೂ ಗೌರವ ದೊರೆಯುತ್ತದೆ. ಹಣದ ತೊಂದರೆ ಉಂಟಾಗುವುದಿಲ್ಲ. ಕುಟುಂಬಕ್ಕೆ ಸಂಬಂಧಪಟ್ಟ ಹಣಕಾಸಿನ ವ್ಯವಹಾರವು ಸುಗಮವಾಗಿ ಸಾಗುತ್ತದೆ. ಸೋಲನ್ನೊಪ್ಪದೇ ಧೈರ್ಯದಿಂದ ಕೆಲಸ ಸಾಧಿಸುವಿರಿ. ಸೋದರರ ಜೊತೆ ಇದ್ದ ಅನಾವಶ್ಯಕ ಮನಸ್ತಾಪ ಕೊನೆಗೊಳ್ಳುತ್ತದೆ. ಸಂಬಂಧಿಕರೊಬ್ಬರ ಮಂಗಳ ಕಾರ್ಯಕ್ಕೆ ಹಣದ ಸಹಾಯ ಮಾಡಬೇಕಾಗುತ್ತದೆ. ಹಣದ ಕೊರತೆ ಉಂಟಾಗುವುದಿಲ್ಲ.

ವೃಷಭ

ಎಲ್ಲರನ್ನೂ ಸಮಾನ ಭಾವನೆಯಿಂದ ಕಾಣುವಿರಿ. ಮಾಡುವ ಕೆಲಸ ಕಾರ್ಯಗಳಲ್ಲಿ ಸಂತೃಪ್ತಿ ಇರುತ್ತದೆ. ನಿಮ್ಮ ವಿಚಾರಗಳನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಮೊದಲ ಆದ್ಯತೆಯನ್ನು ಕುಟುಂಬದ ಕೆಲಸ ಕಾರ್ಯಗಳಿಗೆ ನೀಡುವಿರಿ. ನಿರ್ವಂಚನೆಯಿಂದ ಸಹಾಯ ಕೋರಿ ಬಂದವರಿಗೆ ನೆರವಾಗುವಿರಿ. ಉತ್ತಮ ಆದಾಯವಿರುತ್ತದೆ. ಆದರೆ ಅನಿರೀಕ್ಷಿತ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಉತ್ತಮ ಆರೋಗ್ಯ ಗಳಿಸುವಿರಿ. ಸ್ವಂತ ಮನೆಯನ್ನು ಕೊಳ್ಳುವ ವಿಚಾರಕ್ಕೆ ಎಲ್ಲರ ಸಹಮತ ದೊರೆಯುತ್ತದೆ. ಕುಟುಂಬದಲ್ಲಿ ಮಂಗಳ ಕಾರ್ಯವೊಂದು ನಡೆಯಲಿದೆ. ಮರೆವಿನ ಗುಣ ನಿಮ್ಮನ್ನು ಕಾಡಲಿದೆ. ನಿಮ್ಮ ಕೆಲಸ ಕಾರ್ಯಗಳಿಂದ ಕಾರ್ಯಗಳಿಗೆ ಬೇರೆಯವನ್ನು ಆಶ್ರಯಿಸುವುದಿಲ್ಲ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ದೂರದ ಸ್ಥಳಕ್ಕೆ ಅಥವಾ ವಿದೇಶಕ್ಕೆ ವಿದ್ಯಾರ್ಥಿಗಳು ತೆರಳುತ್ತಾರೆ.

ಮಿಥುನ

ಮನಸ್ಸಿಗೆ ಒಪ್ಪುವಂತಹ ಕೆಲಸದಲ್ಲಿ ತೊಡಗುವಿರಿ. ನಿಮ್ಮಲ್ಲಿರುವ ಆತ್ಮವಿಶ್ವಾಸ ತೊಂದರೆ ತಾಪತ್ರಯಗಳನ್ನು ದೂರಮಾಡುತ್ತದೆ. ಉದ್ಯೋಗದಲ್ಲಿ ಇದ್ದ ಸಮಸ್ಯೆಗಳು ಹಿರಿಯ ಅಧಿಕಾರಿಗಳ ಸಹಾಯದಿಂದ ಬಗೆಹರಿಯುತ್ತದೆ. ಜ್ವರದಿಂದ ಬಳಲುವಿರಿ. ಬೇರೆ ಯಾವುದೇ ರೀತಿಯ ಆರೋಗ್ಯದ ಸಮಸ್ಯೆ ಕಾಣುವುದಿಲ್ಲ. ಸೋದರ ಮತ್ತು ಸೋದರಿಯ ಜೊತೆ ಉತ್ತಮ ಬಾಂಧವ್ಯ ರೂಪಗೊಳ್ಳುತ್ತದೆ. ಉತ್ತಮ ಬಾಂಧವ್ಯವಿರುತ್ತದೆ. ಭೂವಿವಾದದಲ್ಲಿ ಜಯಗಳಿಸುವಿರಿ. ಒಳ್ಳೆಯ ಕೆಲಸ ಕಾರ್ಯಗಳಿಗಾಗಿ ಸಂಪಾದಿಸಿದ ಹಣವನ್ನು ಖರ್ಚು ಮಾಡುವಿರಿ. ವಾಸ ಸ್ಥಳವನ್ನು ಬದಲಿಸಬೇಕಾಗುತ್ತದೆ. ದುಬಾರಿ ಬೆಲೆಯ ಒಡವೆ ವಸ್ತುಗಳನ್ನು ಕೊಳ್ಳುವಿರಿ. ಕುಟುಂಬದಲ್ಲಿ ಹಣಕಾಸಿನ ಸಲುವಾಗಿ ಭಿನ್ನಾಭಿಪ್ರಾಯಗಳು ಇರುತ್ತವೆ. ಕೇವಲ ಮಾತುಕತೆಯಿಂದ ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಮೂರನೇ ವ್ಯಕ್ತಿಗಳ ಮಾತುಗಳನ್ನು ಆಲಿಸದಿರಿ.

ಕಟಕ

ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ. ಮಾತುಕತೆಯಿಂದ ಎದುರಾಗುವ ಸಮಸ್ಯೆಗಳನ್ನು ಬಗೆಹರಿಸುವಿರಿ. ಹಣಕಾಸಿನ ವಿಚಾರದಲ್ಲಿ ದೃಢ ನಿಲುವು ತಾಳುವುದರಿಂದ ಸಂಬಂಧಿಕರು ದೂರವಾಗಬಹುದು. ಅಧಿಕಾರಿಗಳಿಗೆ ಉದ್ಯೋಗದಲ್ಲಿ ಉನ್ನತ ಗೌರವ ಲಭಿಸುತ್ತದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಮಹತ್ತರ ತಿರುವು ಕಂಡುಬರುತ್ತದೆ. ಕೂಡಿಟ್ಟ ಹಣ ಒಳ್ಳೆಯ ಕೆಲಸಗಳಿಗೆ ಖರ್ಚಾಗಬಹುದು. ಭವಿಷ್ಯದ ಜೀವನವನ್ನು ನಿರ್ಧರಿಸುವ ಕೆಲಸಕ್ಕೆ ಕೈ ಹಾಕುವಿರಿ. ಚುರುಕುತನ ಒಳ್ಳೆಯದು. ಆದರೆ ಆತುರದಿಂದ ತೊಂದರೆಗೆ ಸಿಲುಕುವಿರಿ. ಶಾಂತಿ ಸಹನೆಯಿಂದ ವರ್ತಿಸಿದರೆ ಯಾವುದೇ ತೊಂದರೆ ಇರುವುದಿಲ್ಲ. ಪ್ರಯೋಜನವಿಲ್ಲದ ಕೆಲಸ ಕಾರ್ಯಗಳನ್ನು ಮಾಡುವುದಿಲ್ಲ. ಸುಲಭವಾಗಿ ಬೇರೆಯವರ ಬುದ್ಧಿವಾದಕ್ಕೆ ಮಣಿಯುವುದಿಲ್ಲ. ಕುಟುಂಬದ ಹಿರಿಯರ ಜವಾಬ್ದಾರಿಯು ನಿಮ್ಮದಾಗಲಿದೆ. ಯಾರೊಬ್ಬರ ಹಂಗು ಇಲ್ಲದೆ ಸ್ವತಂತ್ರವಾಗಿ ಜೀವನ ನಡೆಸುವಿರಿ. ಅವಶ್ಯಕತೆ ಇದ್ದಲ್ಲಿ ಉದ್ಯೋಗವನ್ನು ಬದಲಿಸಬಹುದು.

ಸಿಂಹ

ಬಹುದಿನದಿಂದ ಉಳಿದಿದ್ದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಉದ್ಯೋಗದಲ್ಲಿ ಉನ್ನತ ಪದವಿ ಗಳಿಸುವಿರಿ. ಹಿರಿಯ ಅಧಿಕಾರಿಗಳ ಮೆಚ್ಚುಗೆ ಮತ್ತು ಪ್ರಶಂಸೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ರಾಜಕೀಯ ವ್ಯಕ್ತಿಗಳಿಗೆ ವಿಶೇಷ ಅನುಕೂಲಗಳು ದೊರೆಯಲಿವೆ. ಕೆಲಸ ಕಾರ್ಯಗಳನ್ನು ಮಾತ್ರ ಮಾಡಲು ಇಚ್ಛಿಸುವಿರಿ. ನಿಮ್ಮಲ್ಲಿರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಬೇರೆಯವರಿಗೆ ಸಹಾಯ ಮಾಡುವ ಮನಸ್ಸಿದ್ದರೂ ಕಾರ್ಯಗತಗೊಳ್ಳುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ವರಮಾನ ದೊರೆಯಲಿದೆ. ಪಾಲುಗಾರಿಕೆ ವ್ಯಾಪಾರವಿದ್ದಲ್ಲಿ ಅದರಿಂದ ಹೊರಬರುವಿರಿ. ಸ್ವತಂತ್ರ ಜೀವನವನ್ನು ನಿರ್ವಹಿಸಲು ನಿರ್ಧರಿಸುವಿರಿ. ಕೊಂಚ ಪ್ರಯುಕ್ತ ಪಟ್ಟರೆ ವಿದೇಶಕ್ಕೆ ತೆರಳುವ ಆಸೆ ಕೈಗೂಡುತ್ತದೆ. ಕುಟುಂಬದ ಹಿರಿಯರ ಜೊತೆ ಸಂತೋಷದಿಂದ ಬಾಳುವಿರಿ.

ಕನ್ಯಾ

ಉದ್ದಿಮೆಯನ್ನು ಆರಂಭಿಸುವ ಆಸೆ ಇದ್ದಲ್ಲಿ ಸಾಕಾರಗೊಳ್ಳಲಿದೆ. ಆರಂಭಿಸಿದ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ಅನಿರೀಕ್ಷಿತ ಖರ್ಚು ವೆಚ್ಚಗಳು ಬೇಸರಕ್ಕೆ ಕಾರಣವಾಗುತ್ತದೆ. ಕುಟುಂಬದ ಆಸ್ತಿಯೊಂದು ವಿವಾದಕ್ಕೆ ಸಿಲುಕುತ್ತದೆ. ಹಣಕಾಸಿನ ತೊಂದರೆ ಎದುರಾಗುವುದಿಲ್ಲ. ಕಲಾವಿದರಿಗೆ ವಿನೂತನ ಅವಕಾಶಗಳು ದೊರೆಯಲಿವೆ. ಕುಟುಂಬದಲ್ಲಿ ನಡೆಯಬೇಕಿದ್ದ ಧಾರ್ಮಿಕ ಕಾರ್ಯಕ್ರಮವು ಮುಂದೂಡಲ್ಪಡುತ್ತದೆ. ದೂರದ ಸಂಬಂಧಿಕರ ಜೊತೆಯಲ್ಲಿ ಹಣಕಾಸಿನ ವಿಚಾರದಲ್ಲಿ ಮನಸ್ತಾಪ ಉಂಟಾಗುತ್ತದೆ. ಅನಾವಶ್ಯಕವಾಗಿ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸದಿರಿ. ಒಂದು ಕೆಲಸ ಪೂರ್ಣಗೊಳ್ಳುವವರೆಗೂ ಮತ್ತೊಂದು ಕೆಲಸವನ್ನು ಆರಂಭಿಸುವುದಿಲ್ಲ. ಬಿಡುವಿಲ್ಲದ ಕೆಲಸದ ಕಾರಣ ಕೈಕಾಲುಗಳಲ್ಲಿ ಶಕ್ತಿಯು ಕುಂದುತ್ತದೆ. ವಿಶ್ರಾಂತಿಗಾಗಿ ದೂರದ ಸ್ಥಳಕ್ಕೆ ಪ್ರಯಾಣ ಬೆಳೆಸುವಿರಿ. ಮಕ್ಕಳ ಉತ್ತಮ ಜೀವನಕ್ಕಾಗಿ ಹಣ ಉಳಿಸುವ ಯೋಜನೆ ರೂಪಿಸುವಿರಿ.

ತುಲಾ

ನಿಮ್ಮಷ್ಟು ಚುರುಕಾಗಿ ಕೆಲಸ ಮಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಆತುರದಲ್ಲಿ ತಪ್ಪು ಮಾಡದೆ ಸಮಯ ಸಂದರ್ಭವನ್ನು ಅರ್ಥ ಮಾಡಿಕೊಂಡು ಮುಂದುವರೆಯುವಿರಿ. ಆರಂಭಿಸಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಉಸಿರಾಟದ ತೊಂದರೆ ಇರುವವರು ಎಚ್ಚರಿಕೆ ವಹಿಸಿ. ಸೋದರ ಅಥವಾ ಸೋದರಿಯ ಜೀವನದಲ್ಲಿನ ಅನಿರೀಕ್ಷಿತ ಘಟನೆ ಬೇಸರ ಮೂಡಿಸುತ್ತದೆ. ಅನಿರೀಕ್ಷಿತವಾಗಿ ಹಣದ ಸಹಾಯ ದೊರೆಯುತ್ತದೆ. ಕೈಯಲ್ಲಿರುವ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಎಷ್ಟೇ ಅನುಕೂಲತೆ ಇದ್ದರೂ ಬೇರೆಯವರಲ್ಲಿ ಹೇಳುವುದಿಲ್ಲ. ತಾನಾಗಿ ಬರುವ ಅವಕಾಶವನ್ನು ಬಳಸಿಕೊಂಡು ಯಶಸ್ಸನ್ನು ಗಳಿಸುವಿರಿ. ಕುಟುಂಬದ ಸದಸ್ಯರ ಜೊತೆ ಸಂತೋಷ ಸಂಭ್ರಮದಿಂದ ಬಾಳುವಿರಿ.

ವೃಶ್ಚಿಕ

ಈ ವಾರ ನಿಮ್ಮ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯಲಿವೆ. ನಿರೀಕ್ಷೆಗೂ ಮೀರಿದ ಖರ್ಚು ವೆಚ್ಚಗಳು ಎದುರಾಗುತ್ತವೆ. ಉದ್ಯೋಗವನ್ನು ಬದಲಿಸಲು ಪ್ರಯತ್ನಿಸಿದರು ಸಾಧ್ಯವಾಗುವುದಿಲ್ಲ. ಅನಿವಾರ್ಯವಾಗಿ ಸಹೋದ್ಯೋಗಿಗಳ ಜೊತೆ ಹೊಂದಿಕೊಂಡು ಬಾಳಬೇಕಾಗುತ್ತದೆ. ಕೋಪ ತಾಪಗಳಿಗೆ ಒಳಗಾಗದೆ ಸ್ನೇಹದಿಂದ ಎಲ್ಲರೊಂದಿಗೆ ಬಾಳುವಿರಿ. ಅನಿರೀಕ್ಷಿತ ಧನ ಲಾಭವು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ. ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಬದಲಿಸುವುದಿಲ್ಲ. ಹಠದಿಂದ ನಿಮಗೆ ಇಷ್ಟವೆನಿಸುವ ಕೆಲಸ ಕಾರ್ಯಗಳನ್ನು ಮಾಡುವಿರಿ. ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಮಾಡುವ ತಪ್ಪಿಗೆ ಸಮಜಾಯಿಸಿ ನೀಡುವಿರಿ. ವಾದ ವಿವಾದ ಉಂಟಾಗುವ ವೇಳೆ ಸ್ಥಳ ಬದಲಾವಣೆ ಮಾಡುವಿರಿ. ಸಂಗಾತಿಯೊಂದಿಗೆ ಉತ್ತಮ ಅನುಬಂಧ ಇರುತ್ತದೆ.

ಧನಸ್ಸು

ಮನಸ್ಸಿನ ಮೇಲೆ ಹತೋಟಿ ಇರುವುದಿಲ್ಲ. ಒಮ್ಮೆ ತೆಗೆದುಕೊಂಡ ನಿರ್ಧಾರಗಳನ್ನು ಕೊನೆ ಘಳಿಗೆಯಲ್ಲಿ ಬದಲಿಸುವಿರಿ. ಇದರಿಂದ ಕೆಲಸ ಕಾರ್ಯಗಳಲ್ಲಿ ಅಡ್ಡಿ ಆತಂಕ ಉಂಟಾಗುತ್ತದೆ. ಕುಟುಂಬದ ಹಿರಿಯರ ಸಲಹೆಯನ್ನು ಪಾಲಿಸುವುದು ಒಳ್ಳೆಯದು. ಉದ್ಯೋಗದಲ್ಲಿ ನಿಮ್ಮ ಅಧಿಕಾರಿಗಳ ಸಹಕಾರ ದೊರೆಯುತ್ತದೆ. ಸಹೋದ್ಯೋಗಿಗಳ ತ್ಯಾಗದ ಮನೋಭಾವನೆಯಿಂದ ಉನ್ನತ ಅಧಿಕಾರ ದೊರೆಯುತ್ತದೆ. ತಪ್ಪು ಗ್ರಹಿಕೆಯಿಂದ ಹೆಚ್ಚಿನ ಹಣ ಖರ್ಚಾಗುತ್ತದೆ. ಸಾಧ್ಯವಾದಷ್ಟುಆತ್ಮವಿಶ್ವಾಸದಿಂದ ಮುಂದುವರೆಯುವುದು ಒಳ್ಳೆಯದು. ಮಕ್ಕಳಿಂದ ನಿಮಗೆ ಉತ್ತಮ ಸಹಾಯ ದೊರೆಯುತ್ತದೆ. ನಿಮ್ಮದೇ ಆದ ತಪ್ಪಿನಿಂದ ಸ್ವಂತ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ಪಾಲುಗಾರಿಕೆಯ ವ್ಯಾಪಾರವಿದ್ದಲಿ ಉತ್ತಮ ಲಾಭಾಂಶ ದೊರೆಯಲಿದೆ. ಅನಿರೀಕ್ಷಿತ ಧನ ಲಾಭವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ಮಕರ

ನಿಮ್ಮ ನಿಸ್ವಾರ್ಥ ಸೇವೆಗೆ ಎಲ್ಲರ ಬೆಂಬಲ ದೊರೆಯುತ್ತದೆ. ಹಿರಿಯ ಅಧಿಕಾರಿಗಳಿಂದ ಉದ್ಯೋಗದಲ್ಲಿ ಕೇವಲ ಮಾತಿನಲ್ಲಿ ಪ್ರಶಂಸೆ ದೊರೆಯುತ್ತದೆ. ಕಷ್ಟಪಟ್ಟು ಕೆಲಸ ಮಾಡುವಲ್ಲಿ ನೀವೇ ಮೊದಲಿಗರು. ನಿಮಗೆ ಮನಸ್ಸಿಲ್ಲದಿದ್ದರೂ ನಿಮ್ಮದಲ್ಲದ ಜವಾಬ್ದಾರಿಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕೆಲಸ ಕಾರ್ಯದ ನಡುವೆ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ತೋರುವುದು ಒಳ್ಳೆಯದು. ನಿಮ್ಮ ಬುದ್ಧಿವಂತಿಕೆಯ ತೀರ್ಮಾನಗಳು ಕುಟುಂಬವನ್ನು ಆಪತ್ತಿನಿಂದ ಪಾರು ಮಾಡುತ್ತದೆ. ಹಣಕಾಸಿನ ವಿಚಾರದಲ್ಲಿ ಆತ್ಮೀಯರ ಸಹಾಯ ದೊರೆಯುತ್ತದೆ. ಇದರಿಂದ ಶಾಂತಿ ನೆಮ್ಮದಿಯ ಜೀವನ ಇರುತ್ತದೆ. ಮಕ್ಕಳ ಕೆಲಸ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ನೂತನ ದಂಪತಿಗಳಿಗೆ ಸಂತಾನಯೋಗವಿದೆ. ವಾಹನ ಚಾಲನೆ ಮಾಡುವ ವೇಳೆ ಎಚ್ಚರಿಕೆ ಇರಲಿ.

ಕುಂಭ

ಅತಿಯಾಗಿ ಮಾತನಾಡದೆ ಕೆಲಸ ಕಾರ್ಯಗಳಲ್ಲಿ ಮುಂದುವರೆಯುವಿರಿ. ನಿಮ್ಮಲ್ಲಿನ ಬುದ್ಧಿವಂತಿಕೆಯ ನಿರ್ಧಾರಗಳು ಉದ್ಯೋಗದ ಸಮಸ್ಯೆಗಳನ್ನು ದೂರ ಮಾಡುತ್ತವೆ. ಕೊಂಚ ತಡವಾದರೂ ಉತ್ತಮ ವರಮಾನ ದೊರೆಯುತ್ತದೆ. ಗಂಟಲಿನ ತೊಂದರೆ ಉಂಟಾಗಬಹುದು. ನಿಮ್ಮ ಪ್ರಯತ್ನಕ್ಕೆ ತಕ್ಕಂತೆ ಆರಂಭಿಸಿದ ಕೆಲಸಗಳಲ್ಲಿ ಯಶಸ್ಸು ದೊರೆಯುತ್ತದೆ. ಕುಟುಂಬದ ಸ್ತ್ರೀಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ತಾಯಿಯವರ ಸಹಕಾರದಿಂದ ಸಣ್ಣ ಪ್ರಮಾಣದ ವ್ಯಾಪಾರವನ್ನು ಆರಂಭಿಸುರಿ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆಗೆ ಪಾತ್ರರಾಗುತ್ತಾರೆ. ನಿಮಗೆ ಕುಟುಂಬದ ಹಿರಿಯ ಸದಸ್ಯರ ಜೊತೆ ಆತ್ಮೀಯತೆ ಬೆಳೆಯುತ್ತದೆ. ಯಾವುದೇ ವಿವಾದಗಳಿಲ್ಲದೆ ಸಂತೋಷದಿಂದ ಜೀವನ ಸಾಧಿಸುವಿರಿ. ಯಾವುದೇ ಸಮಸ್ಯೆಗಳಿದ್ದರೂ ಆತ್ಮೀಯರಿಂದ ಬಗೆಹರಿಯುತ್ತದೆ.

ಮೀನ

ಸಂತೋಷದ ಜೀವನ ನಿಮ್ಮದಾಗುತ್ತದೆ. ತಾಯಿಯ ಪ್ರೀತಿ ನಿಮಗೆ ವಿಶೇಷವಾಗಿ ದೊರೆಯುತ್ತದೆ. ಸೋದರಿಯ ಜೊತೆಯಲ್ಲಿ ಉತ್ತಮ ಅನುಬಂಧ ಇರಲಿದೆ. ಹಣಕಾಸಿನ ತೊಂದರೆ ಇರುವುದಿಲ್ಲ. ಅನಾವಶ್ಯಕವಾಗಿ ಯಾವುದಾದರೂ ಒಂದು ವಿಚಾರಕ್ಕೆ ಮಾನಸಿಕ ಒತ್ತಡಕ್ಕೆ ಒಳಗಾಗುವಿರಿ. ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಂಡಲ್ಲಿ ಜೀವನದಲ್ಲಿ ಸುಖ ಸಂತೋಷ ಹೆಚ್ಚುತ್ತದೆ. ಗೃಹಿಣಿಯರಿಗೆ ತವರಿನಿಂದ ದುಬಾರಿ ಮಟ್ಟದ ಉಡುಗೊರೆಯೊಂದು ದೊರೆಯಲಿದೆ. ಮನೆಯನ್ನು ಆಧುನೀಕರಣಗೊಳಿಸಲು ತೀರ್ಮಾನಿಸುವಿರಿ. ಉತ್ತಮ ಆದಾಯವಿದ್ದರೂ ಮಿತಿ ಇಲ್ಲದ ಖರ್ಚು ವೆಚ್ಚಗಳಿರುತ್ತವೆ. ಆದರೂ ಯಾವುದೇ ತೊಂದರೆ ಉಂಟಾಗದು. ಕುಟುಂಬದಲ್ಲಿನ ಒಗ್ಗಟ್ಟು ಜಯದ ಸರಮಾಲೆಯನ್ನೇ ನೀಡಲಿದೆ. ಸಣ್ಣ ಪುಟ್ಟ ವಿಚಾರಗಳನ್ನು ವಿವೇಚನೆಯಿಂದ ಆರಂಭಿಸುವಿರಿ. ಹೊಸತನದ ಜೀವನ ನಿಮ್ಮದಾಗುತ್ತದೆ. ಬಹುತೇಕ ನಿಮ್ಮ ನಿರೀಕ್ಷೆಗಳೆಲ್ಲ ಕೈಗೂಡಲಿವೆ.

 

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).