ನರಕ ಚತುರ್ದಶಿ ಯಾವಾಗ ಆರಂಭವಾಗುತ್ತೆ? ಕಥೆ, ಪೂಜೆ ವಿಧಾನ, ಶುಭ ಮುಹೂರ್ತದ ಸಂಪೂರ್ಣ ವಿವರ ಇಲ್ಲಿದೆ-spiritual news naraka chaturdashi 2024 date time story puja method and shubh muhurat sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ನರಕ ಚತುರ್ದಶಿ ಯಾವಾಗ ಆರಂಭವಾಗುತ್ತೆ? ಕಥೆ, ಪೂಜೆ ವಿಧಾನ, ಶುಭ ಮುಹೂರ್ತದ ಸಂಪೂರ್ಣ ವಿವರ ಇಲ್ಲಿದೆ

ನರಕ ಚತುರ್ದಶಿ ಯಾವಾಗ ಆರಂಭವಾಗುತ್ತೆ? ಕಥೆ, ಪೂಜೆ ವಿಧಾನ, ಶುಭ ಮುಹೂರ್ತದ ಸಂಪೂರ್ಣ ವಿವರ ಇಲ್ಲಿದೆ

ನರಕಾಸುರನು ಜ್ಯೋತಿಯ ರೂಪಕ್ಕೆ ಬದಲಾಗಿ ಕೃಷ್ಣನಲ್ಲಿ ಲೀನವಾಗುತ್ತಾನೆ. ಈ ಕಾರಣದಿಂದಾಗಿ ನರಕ ಚತುರ್ದಶಿಯ ದಿನದಂದು ಬೆಳಗಿನ ವೇಳೆ ಅಭ್ಯಂಜನ ಸ್ನಾನ ಮಾಡಿ ನರಕ ಚತುರ್ದಶಿಯನ್ನು ಹಬ್ಬವನ್ನಾಗಿ ಆಚರಿಸುತ್ತೇವೆ. ಈ ಕಥೆಯ ಸಂಪೂರ್ಣ ವಿವರ ಮತ್ತು 2024ರ ನರಕ ಚತುದರ್ಶಿ ಬಗ್ಗೆ ತಿಳಿಯಿರಿ. (ವರದಿ: ಎಚ್ ಸತೀಶ್, ಜ್ಯೋತಿಷಿ)

2024ರ ನರಕ ಚತುರ್ದಶಿ ಯಾವಾಗ ಆರಂಭವಾಗುತ್ತೆ, ಶುಭ ಮುಹೂರ್ತ ಮತ್ತು ಕಥೆಯನ್ನು ಓದಿ.
2024ರ ನರಕ ಚತುರ್ದಶಿ ಯಾವಾಗ ಆರಂಭವಾಗುತ್ತೆ, ಶುಭ ಮುಹೂರ್ತ ಮತ್ತು ಕಥೆಯನ್ನು ಓದಿ.

ಹಿಂದೂ ಕ್ಯಾಲೆಂಡರ್‌ಗಳ ಪ್ರಕಾರ, ದೀಪಾವಳಿಯ ಹಿಂದಿನ ದಿನ ಆಚರಿಸುವ ಪ್ರಮುಖ ಹಬ್ಬವೇ ನರಕ ಚತುರ್ಥಿ. 2024ರಲ್ಲಿ ನರಕ ಚತುರ್ದಶಿ ಯಾವಾಗ ಆರಂಭವಾಗುತ್ತದೆ, ದಿನಾಂಕ, ಸಮಯ ಹಾಗೂ ಆಚರಣೆಯ ಹಿಂದಿನ ಕಥೆಯನ್ನು ನೋಡುವುದಾದರೆ, 2024 ರಲ್ಲಿ ಅಕ್ಟೋಬರ್ 30ರ ಬುಧವಾರದಂದು ನರಕ ಚತುರ್ದಶಿ ಆರಂಭವಾಗುತ್ತದೆ. ಅಂದು ನೀರು ತುಂಬುವ ಹಬ್ಬ, ಆದರೆ ಅಕ್ಟೋಬರ್ 31 ರ ಗುರುವಾರ ನರಕ ಚತುರ್ದಶಿ ಆಚರಣೆ ಇರುತ್ತದೆ. ಅದ್ದರಿಂದ ಆ ದಿನ ಬೆಳಗಿನ ವೇಳೆ ಸೂರ್ಯೋದಯಕ್ಕೆ ಮುನ್ನ ಅಂದರೆ ಬೆಳಗಿನ ಜಾವ 4.30 ರಿಂದ 5.45 ರ ನಡುವೆ ಅಭ್ಯಂಜನ ಸ್ನಾನವನ್ನು ಮಾಡಬೇಕು. ಆ ದಿನದಂದೆ ಧನಲಕ್ಷ್ಮಿ ಪೂಜೆಯನ್ನು ಮಾಡಬೇಕಾಗುತ್ತದೆ. ನವಂಬರ್ 1ರಂದು ಬಲೀಂದ್ರ ಪೂಜೆಯನ್ನು ಮಾಡಬೇಕು. ಬಲಿಪಾಡ್ಯಮಿಯನ್ನು ನವಂಬರ್ ತಿಂಗಳ 2ರಂದು ಆಚರಿಸಬೇಕಾಗುತ್ತದೆ. ಈ ಮೂರು ದಿನ ಮನೆಯ ಮುಂಬಾಗಿಲ ಬಳಿ ದೀಪವನ್ನು ಹಚ್ಚುವುದು ಹೆಚ್ಚಿನ ಲಾಭಕರ. ಅಕ್ಟೋಬರ್ 3ರಂದು ಯಮದ್ವಿತೀಯ ಇರುತ್ತದೆ. ಇದನ್ನು ಸಹ ದೀಪಾವಳಿ ಹಬ್ಬದ ಒಂದು ಭಾಗವೆಂದು ಪರಿಗಣಿಸಬಹುದು.

ನಕರ ಚತುರ್ದಶಿಯ ಹಿಂದಿನ ಕಥೆ

ನರಕಾಸುರ ಎಂಬ ಒಬ್ಬ ರಾಕ್ಷಸನಿರುತ್ತಾನೆ. ಇವನು ಮನುಷ್ಯನ ವೇಷದಲ್ಲಿ ಸಂಚಾರ ಮಾಡುತ್ತಾ ದೇವಾನುದೇವತೆಗಳ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಿರುತ್ತಾನೆ. ಋಷಿಮುನಿಗಳ ಯಜ್ಞ ಹೋಮಗಳಿಗೆ ತೊಂದರೆ ನೀಡುತ್ತಿರುತ್ತಾನೆ. ಇವನ ಉಪಟಳವು ಮೂರು ಲೋಕಗಳಿಗೆ ಮಾರಕ ಪ್ರಾಯವಾಗಿರುತ್ತದೆ. ಇವನು ಪ್ರಾಗ್ಜೋತಿಷ ಎಂಬ ಪಟ್ಟಣದ ಒಡೆಯನಾಗಿದ್ದನು. ಇವನನ್ನು ಸಂಹರಿಸಲು ದೇವತೆಗಳಿಗೂ ಸಾಧ್ಯವಾಗುವುದಿಲ್ಲ. ಆಗ ಇಂದ್ರನು ಭಗವಾನ್ ವಿಷ್ಣುವನ್ನು ಭೇಟಿ ಮಾಡಲು ನಿರ್ಧರಿಸುತ್ತಾನೆ. ಭಗವಾನ್ ವಿಷ್ಣುವು ವೈಕುಂಠಕ್ಕೆ ಆಗಮಿಸಿದ ದೇವೇಂದ್ರನನ್ನು ಕುರಿತು ಬಂದ ಕಾರಣವನ್ನು ತಿಳಿಸಲು ಹೇಳುತ್ತಾನೆ.

ನೀವೆಲ್ಲರೂ ಸೌಖ್ಯವಾಗಿ ಇರುವಿರಿ ಎಂಬ ನಂಬಿಕೆ ನನಗಿದೆ ಎಂದು ಹೇಳುತ್ತಾನೆ. ಆಗ ದೇವೇಂದ್ರನು ಅವನಿಗೆ ಆಗುತ್ತಿದ್ದ ತೊಂದರೆಯ ಬಗ್ಗೆ ವಿವರಿಸುತ್ತಾನೆ. ಇದನ್ನು ಕೇಳಿದ ನಂತರವೂ ವಿಷ್ಣುವಿಗೆ ನರಕಾಸುರನನ್ನು ಸಂಹಾರ ಮಾಡುವ ತೀರ್ಮಾನಕ್ಕೆ ಬರುವುದಿಲ್ಲ. ಆಗ ಇಂದ್ರನು ನರಕಾಸುರನು ನನ್ನ ಐರಾವತವನ್ನೇ ಬಯಸುತ್ತಿದ್ದಾನೆ. ಇಷ್ಟಲ್ಲದೆ ನನ್ನಲ್ಲಿರುವ ವಜ್ರಾಯುಧವನ್ನು ಅವನಿಗೆ ನೀಡಬೇಕಾದ ಕಾಲ ಬಂದಿದೆ. ನನ್ನ ತಾಯಿಯ ಆಭರಣವನ್ನೂ ಸಹ ಅಪಹರಿಸಿದ್ದಾನೆ. ಇಷ್ಟೇ ಅಲ್ಲದೆ ಲೆಕ್ಕವಿಲ್ಲದಷ್ಟು ದೇವಕನ್ಯೆಕೆಯರನ್ನು ಅಪಹರಿಸಿ ಅವನ ಅರಮನೆಯಲ್ಲಿ ಮುಚ್ಚಿಟ್ಟಿದ್ದಾನೆ. ಅವರನ್ನು ಬಿಡುಗಡೆಗೊಳಿಸಲು ನಾವು ನರಕಾಸುರನ ಜೊತೆಯಲ್ಲಿ ಯುದ್ಧ ಮಾಡಲೇಬೇಕು. ಆದರೆ ಅವನನ್ನು ಯುದ್ಧದಲ್ಲಿ ಸೋಲಿಸುವ ಮಾತಿರಲಿ ಧೈರ್ಯದಿಂದ ಎದುರಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ದಯಮಾಡಿ ಮತ್ತೊಮ್ಮೆ ನೀನು ಮಹಾರಕ್ಕಸನಾದ ನರಕಾಸುರದಿಂದ ನಮ್ಮನ್ನು ಕಾಪಾಡು ಎಂದು ಪ್ರಾರ್ಥಿಸುತ್ತಾನೆ. ಈ ಮಾತುಗಳಿಂದ ಇಂದ್ರನ ಮೇಲೆ ಕನಿಕರವೂ ನರಕಾಸನ ಮೇಲೆ ಕೋಪವು ಒಮ್ಮೆಲೇ ಉಂಟಾಗುತ್ತದೆ.

ಒಮ್ಮೆಲೆ ಶ್ರೀ ಕೃಷ್ಣನು ತನ್ನ ಸಿಂಹಾಸನದಿಂದ ಮೇಲೆದ್ದು ನರಕಾಸುರನ ಸಂಹಾರಕ್ಕೆ ಹೊರಡಲು ಅನುವಾಗುತ್ತಾನೆ. ತನ್ನ ಪತ್ನಿಯಾದ ಸತ್ಯಭಾಮೆಯೊಂದಿಗೆ ತನ್ನ ವಾಹನವಾದ ಗರುಡನನ್ನು ಏರಿ ನರಕಾಸುರನಿದ್ದ ನಗರದ ಕಡೆಗೆ ಪ್ರಯಾಣ ಬೆಳೆಸುತ್ತಾನೆ. ನರಕಾಸುರನು ತನ್ನಪಟ್ಟಣವನ್ನು ಕಾಪಾಡಿಕೊಳ್ಳಲು ವಿಷದಿಂದ ಕೂಡಿದ ಚೂರಿಗಳಿಂದ ರಕ್ಷಾ ಕವಚವನ್ನೇ ನಿರ್ಮಿಸಿರುತ್ತಾನೆ. ಇದನ್ನು ಕಂಡ ವಿಷ್ಣುವು ತನ್ನಲ್ಲಿದ್ದ ಸುದರ್ಶನ ಚಕ್ರದ ಸಹಾಯದಿಂದ ಆ ವಿಷವ್ಯೂಹವನ್ನು ಭೇದಿಸುತ್ತಾನೆ. ಆನಂತರ ಎದುರಾದ ರಾಕ್ಷಸರನ್ನು ಸಂಹಾರ ಮಾಡುತ್ತಾ ನರಕಾಸುರನವನ್ನು ಪಟ್ಟಣವನ್ನು ಹಾಳುಗೆಡವುತ್ತಾನೆ. ಕೊನೆಗೆ ಎದುರಾದ ನರಕಾಸುರನನ್ನು ಸಂಹಾರ ಮಾಡಲು ಸಾಕ್ಷಾತ್ ವಿಷ್ಣುವಿಗೆ ಸಾಧ್ಯವಾಗುವುದಿಲ್ಲ. ಆಗ ನರಕಾಸುರನು ಅತಿ ದಿವ್ಯವಾದ ಭೈರವಾಸ್ತ್ರವನ್ನು ವಿಷ್ಣುವಿನ ಮೇಲೆ ಪ್ರಯೋಗಿಸುತ್ತಾನೆ. ಆಗ ವಿಷ್ಣು ಮೂರ್ಛೆ ಹೋಗುತ್ತಾನೆ.

ಇದನ್ನು ಕಂಡ ಸತ್ಯಭಾಮೆಗೆ ಕೋಪವು ಉಂಟಾಗುತ್ತದೆ. ತಕ್ಷಣವೇ ಬಿಲ್ಲು ಬಾಣಗಳನ್ನು ತೆಗೆದುಕೊಂಡು ನರಕಾಸುರನ ಮೇಲೆ ಬಾಣಗಳ ಸುರಿಮಳೆಯನ್ನೇ ಸುರಿಸುತ್ತಾಳೆ. ಆದರೆ ನರಕಾಸುರನು ಸತ್ಯಭಾಮೆಯಲ್ಲಿ ತನ್ನ ತಾಯಿಯನ್ನು ಭೂದೇವಿಯನ್ನು ಕಾಣುತ್ತಾನೆ. ಇದನ್ನು ಅರಿಯದ ಸತ್ಯಭಾಮೆಯು ಇಂದ್ರನಿಂದ ಪಡೆದ ದಿವ್ಯಾಸ್ತ್ರದಿಂದ ನರಕಾಸುರನ ಸಂಹಾರ ಮಾಡುತ್ತಾಳೆ. ಆಗ ನರಕಾಸುರನು ನನಗೆ ತಾಯಿಯಿಂದ ಮಾತ್ರ ಮರಣ ಸಂಭವಿಸುತ್ತದೆ ಎಂಬ ವರವಿದೆ. ನಿನ್ನಿಂದ ನನಗೆ ಮರಣ ಸಂಭವಿಸಿದೆ ಎಂದಾದರೆ ನೀನೇ ನನ್ನ ತಾಯಿ. ತಂದೆ ತಾಯಿಯರನ್ನು ಗುರುತಿಸದೆ ನಿಮ್ಮ ಮೇಲೆಯೇ ಬಾಣಪ್ರಯೋಗ ಮಾಡಿದೆ ಎಂದು ಹೇಳುತ್ತಾ ಕೃಷ್ಣ ಮತ್ತು ಸತ್ಯಭಾಮೆಯ ಪಾದಕ್ಕೆ ನಮಸ್ಕರಿಸುತ್ತಾನೆ.

ಶ್ರೀಕೃಷ್ಣ ಮತ್ತು ಸತ್ಯಭಾಮೆಗೆ ನರಕಾಸುರನ ಜನನದ ರಹಸ್ಯ ತಿಳಿಯುತ್ತದೆ. ಸಾಯುವ ವೇಳೆ ನರಕಾಸುರನು ಕೃಷ್ಣನಿಂದ ವರವೊಂದನ್ನು ಬೇಡುತ್ತಾನೆ. ಈ ದಿನದಿಂದಲೇ ಭೂಲೋಕದ ಜನರು ವರ್ಷಕ್ಕೊಮ್ಮೆ ನನ್ನನ್ನು ನೆನಪಿಸಿಕೊಂಡು ಹಬ್ಬವನ್ನು ಆಚರಿಸಬೇಕು ಎಂದು ಕೇಳುತ್ತಾನೆ. ಇದಲ್ಲದೆ ನನ್ನ ರಾಜ್ಯವನ್ನು ನೀನೇ ಬಂದು ಕಾವಲು ಕಾಯಬೇಕು ಎಂದು ಬೇಡುತ್ತಾನೆ. ಸಂತೋಷದಿಂದ ಸಾಕ್ಷಾತ್ ವಿಷ್ಣು ಈ ವರಗಳನ್ನು ದಯಪಾಲಿಸುತ್ತಾನೆ. ಆಗ ನರಕಾಸುರನು ಜ್ಯೋತಿಯ ರೂಪಕ್ಕೆ ಬದಲಾಗಿ ಕೃಷ್ಣನಲ್ಲಿ ಲೀನವಾಗುತ್ತಾನೆ. ಈ ಕಾರಣದಿಂದಾಗಿ ನರಕ ಚತುರ್ದಶಿಯ ದಿನದಂದು ಬೆಳಗಿನ ವೇಳೆ ಅಭ್ಯಂಜನ ಸ್ನಾನವನ್ನು ಮಾಡಿ ಮನೆಯ ಬಾಗಿಲಿಗೆ ತಳಿರು ತೋರಣವನ್ನು ಕಟ್ಟಿಯನ್ನು ನರಕ ಚತುರ್ದಶಿಯನ್ನು ಹಬ್ಬವನ್ನಾಗಿ ಆಚರಿಸುತ್ತೇವೆ. (ವರದಿ: ಎಚ್ ಸತೀಶ್, ಜ್ಯೋತಿಷಿ)

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.