Narasimha Jayanti 2024: ಇಂದು ನರಸಿಂಹ ಜಯಂತಿ; ಈ ದಿನದ ಮಹತ್ವ, ಆಚರಣೆಯ ವಿಧಿ ವಿಧಾನಗಳ ಕುರಿತ ಮಾಹಿತಿ ಇಲ್ಲಿದೆ
ಭಗವಾನ್ ವಿಷ್ಣುವಿನ 9 ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ಇದು ವಿಷ್ಣುವಿನ ನಾಲ್ಕನೇ ಅವತಾರ. ಅರ್ಧ ಮನುಷ್ಯ, ಅರ್ಧ ಸಿಂಹ ಆಕಾರದಲ್ಲಿ ಜನ್ಮ ತಾಳಿದ ನರಸಿಂಹನ ಜನ್ಮವಾರ್ಷಿಕೋತ್ಸವವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತದೆ. ಇಂದು ಎಲ್ಲೆಡೆ ನರಸಿಂಹ ಜಯಂತಿ ಆಚರಿಸಾಗುತ್ತಿದೆ. ನರಸಿಂಹ ಅವತಾರದ ಹಿನ್ನೆಲೆ, ಮಹತ್ವ ತಿಳಿಯಿರಿ.

ಹಿಂದೂಗಳು ಪೂಜಿಸುವ ಪ್ರಮುಖ ದೇವರುಗಳಲ್ಲಿ ಭಗವಾನ್ ವಿಷ್ಣುವಿಗೆ ಮಹತ್ವದ ಸ್ಥಾನವಿದೆ. ವಿಷ್ಣುವು ಒಟ್ಟು 9 ಅವತಾರಗಳನ್ನು ತಾಳುವ ಮೂಲಕ ಸೃಷ್ಟಿಯನ್ನು ರಕ್ಷಿಸಿದ್ದಾನೆ ಎನ್ನಲಾಗುತ್ತದೆ. ವಿಷ್ಣುವಿನ ನಾಲ್ಕನೇ ಅವತಾರ ನರಸಿಂಹ ಅವತಾರ. ಅರ್ಧ ಸಿಂಹ, ಅರ್ಧ ಮನುಷ್ಯ ಆಕಾರದಲ್ಲಿ ನರಸಿಂಹ ಉದ್ಭವವಾಗಿ ದುಷ್ಟರಿಂದ ಶಿಷ್ಟರನ್ನು ರಕ್ಷಿಸುತ್ತಾನೆ ಎಂದು ಹೇಳಲಾಗುತ್ತದೆ. ನರಸಿಂಹ ಸ್ವಾಮಿಗೆಂದೇ ಹಿಂದೂಗಳಲ್ಲಿ ಒಂದು ವಿಶೇಷ ದಿನವಿದೆ. ಅದು ನರಸಿಂಹ ಜಯಂತಿ. ಹಿಂದೂ ಸಂಸ್ಕೃತಿಯಲ್ಲಿ ನರಸಿಂಹ ಜಯಂತಿಗೆ ವಿಶೇಷ ಪ್ರಾಮುಖ್ಯವಿದೆ. ಇಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನರಸಿಂಹ ಜಯಂತಿ ಆಚರಣೆಯ ಮಹತ್ವ ತಿಳಿಯಿರಿ.
ಏನಿದು ನರಸಿಂಹ ಜಯಂತಿ
ನರಸಿಂಹ ಜಯಂತಿಯು ಭಗವಾನ್ ವಿಷ್ಣುವಿನ ಅರ್ಧ ಪುರುಷ, ಅರ್ಧ ಸಿಂಹ ಅವತಾರವಾದ ಭಗವಾನ್ ನರಸಿಂಹನ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ. ಇದನ್ನು ವಿಷ್ಣು ವಿಷ್ಣು ನರಸಿಂಹ ಅವತಾರ ಎಂದೂ ಕರೆಯಲಾಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ವೈಶಾಖ ಮಾಸದ ಶುಕ್ಲಪಕ್ಷದ ಚತುರ್ದಶಿಯ ದಿನದಂದು ನರಸಿಂಹ ಜಯಂತಿಯನ್ನು ಆಚರಿಸಲಾಗುತ್ತದೆ. ನರಸಿಂಹ ದೇವರ ಆಶೀರ್ವಾದವನ್ನು ಪಡೆಯಲು ಭಕ್ತರು ಈ ದಿನವನ್ನು ಉಪವಾಸ, ಪ್ರಾರ್ಥನೆ ಮತ್ತು ಭಕ್ತಿ ಚಟುವಟಿಕೆಗಳೊಂದಿಗೆ ಆಚರಿಸುತ್ತಾರೆ.
ನರಸಿಂಹ ಜಯಂತಿಯ ಮಹತ್ವ
ಹಿಂದೂ ಪುರಾಣ ಮತ್ತು ಆಧ್ಯಾತ್ಮದಲ್ಲಿ ನರಸಿಂಹ ಜಯಂತಿಗೆ ವಿಶೇಷ ಮಹತ್ವವಿದೆ. ಇದು ಅನ್ಯಾಯದ ವಿರುದ್ಧ ನ್ಯಾಯದ ಗೆಲುವನ್ನು ಸೂಚಿಸುವ ದಿನವಾಗಿದೆ. ಸದಾಚಾರದ ರಕ್ಷಣೆಯನ್ನು ಸಂಕೇತಿಸುವ ದಿನ ಇದಾಗಿದೆ. ಪುರಾಣ ಗ್ರಂಥಗಳ ಪ್ರಕಾರ ದಬ್ಬಾಳಿಕೆಯ ಪ್ರತೀಕವಾಗಿದ್ದ ರಾಕ್ಷಸ ರಾಜ ಹಿರಣ್ಯಕಶಿಪುವನ್ನು ಕೊಲ್ಲಲ್ಲು ವಿಷ್ಣು ನರಸಿಂಹ ಅವತಾರ ತಾಳುತ್ತಾನೆ.
2024ರಲ್ಲಿ ನರಸಿಂಹ ಜಯಂತಿ ಯಾವಾಗ?
ಈ ವರ್ಷ ಮೇ 22ರ ಮಂಗಳವಾರ ನರಸಿಂಹ ಜಯಂತಿ ಆಚರಣೆ ಇದೆ.
ಚತುರ್ದಶಿ ತಿಥಿ ಆರಂಭ: 21 ಮೇ 2024 ಸಂಜೆ 05:39 ಕ್ಕೆ
ಚತುರ್ದಶಿ ತಿಥಿ ಮುಕ್ತಾಯ : 22 ಮೇ 2024 ಸಂಜೆ 06:47 ಕ್ಕೆ
ಸಾಯನ ಕಾಲ ಪೂಜೆ ಸಮಯ : 04:24 ರಿಂದ 07:09 ರವರೆಗೆ
ನರಸಿಂಹ ಅವತಾರದ ಹಿನ್ನೆಲೆ
ನರಸಿಂಹ ಜಯಂತಿಯ ಹಿನ್ನೆಲೆಯು ಭಗವಾನ್ ನರಸಿಂಹ ಹಾಗೂ ರಾಕ್ಷಸ ರಾಜ ಹಿರಣ್ಯಕಶಿಪು ನಡುವಿನ ಭೀಕರ ಯುದ್ಧದ ಸುತ್ತ ಸುತ್ತುತ್ತದೆ. ಹಿರಣ್ಯಕಶಿಪು ಅಧಿಕಾರದ ಮದದಿಂದ ಅಹಂಕಾರದಲ್ಲಿ ಮೆರೆಯುತ್ತಿದ್ದ. ದೇವರ ಅಸ್ತಿತ್ವವನ್ನೇ ಸುಳ್ಳು ಎನ್ನುತ್ತಿದ್ದ ಅವನು ಸರ್ವಾಧಿಕಾರಿಯಾಗಿ ಮೆರೆಯುತ್ತಿದ್ದ. ಆದರೆ ಅವನ ಮಗ ಪ್ರಹ್ಲಾದ ಭಗವಾನ್ ವಿಷ್ಣುವಿನ ಅಪ್ಪಟ ಭಕ್ತನಾಗಿದ್ದ. ಆದರೆ ಮಗನ ದೇವರ ಭಕ್ತಿಯನ್ನು ಹಿರಣ್ಯಕಶಿಪು ಸಹಿಸುತ್ತಿರಲಿಲ್ಲ. ಅವನು ಅದನ್ನು ವಿರೋಧಿಸುತ್ತಿದ್ದ. ಆದರೆ ಅವರ ಎಲ್ಲಾ ಪ್ರಯತ್ನಗಳನ್ನೂ ಮೀರಿ ಪ್ರಹ್ಲಾದ ದೇವರನ್ನು ನೆನೆಯುವುದನ್ನು ಬಿಡಲಿಲ್ಲ.
ಆಗ ಅವನು ಮಗನನ್ನು ಕ್ರೂರವಾಗಿ ಹಿಂಸಿಸುತ್ತಾನೆ, ಆಗಲೂ ಪ್ರಹ್ಲಾದ ವಿಷ್ಣುವಿನ ಜಪ ಮಾಡುತ್ತಾನೆ. ಅಂತಿಮವಾಗಿ, ಹಿರಣ್ಯಕಶಿಪು ಪ್ರಹ್ಲಾದನಿಗೆ ವಿಷ್ಣು ಇದ್ದಾನೆ ಎಂದು ಸಾಬೀತುಪಡಿಸಲು ಸವಾಲು ಹಾಕಿದನು, ಅದಕ್ಕೆ ಪ್ರಹ್ಲಾದನು ವಿಷ್ಣುವು ಸೃಷ್ಟಿಯ ಪ್ರತಿಯೊಂದು ಪರಮಾಣುವಿನಲ್ಲಿ ನೆಲೆಸಿದ್ದಾನೆ ಎಂದು ಉತ್ತರಿಸಿತ್ತಾನೆ. ಪ್ರಹ್ಲಾದನ ಅಚಲವಾದ ನಂಬಿಕೆಯಿಂದ ಕೋಪಗೊಂಡ ಹಿರಣ್ಯಕಶಿಪು ಅವನನ್ನು ಕೊಲ್ಲಲು ಪ್ರಯತ್ನಿಸುತ್ತಾನೆ. ಆದರೆ ಆ ಕ್ಷಣದಲ್ಲಿ, ನರಸಿಂಹನು ಅರಮನೆಯ ಕಂಬದಿಂದ ಹೊರ ಬರುತ್ತಾನೆ. ಹಿರಣ್ಯಕಶಿಪು ಮನುಷ್ಯ, ಪ್ರಾಣಿ ಅಥವಾ ಯಾವುದೇ ಆಯುಧದಿಂದ ತನ್ನನ್ನು ಕೊಲ್ಲಲು ಸಾಧ್ಯವಿಲ್ಲ ಎಂಬ ವರ ಪಡೆದಿದ್ದ. ಹಾಗಾಗಿ ಅರ್ಧ ಮನುಷ್ಯ, ಅರ್ಧ ಸಿಂಹದ ಅವತಾರ ತಾಳಿದ ನರಸಿಂಹ ತನ್ನ ಉಗುರುಗಳಿಂದ ಹಿರಣ್ಯಕಶಿಪುವಿನ ದೇಹವನ್ನು ಸೀಳಿ ಕೊಲ್ಲುತ್ತಾನೆ. ಆ ಮೂಲಕ ಪ್ರಪಂಚದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಾನೆ.
ನರಸಿಂಹ ಜಯಂತಿ ಆಚರಣೆಯ ಕ್ರಮ, ವಿಧಿವಿಧಾನಗಳು
ನರಸಿಂಹ ಜಯಂತಿಯಂದು ಭಕ್ತರು ಬೇಗ ಎದ್ದು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸುತ್ತಾರೆ. ನರಸಿಂಹ ದೇವರಿಗೆ ಸಮರ್ಪಿತವಾದ ದೇವಾಲಯಗಳಿಗೆ ಭೇಟಿ ನೀಡಿ, ಅಲ್ಲಿ ವಿಶೇಷ ಪ್ರಾರ್ಥನೆಗಳು ಮತ್ತು ಆಚರಣೆಗಳನ್ನು ನಡೆಸಲಾಗುತ್ತದೆ. ಕೆಲವರು ಈ ದಿನದಂದು ದಿನವಿಡೀ ಉಪವಾಸ ಇರುತ್ತಾರೆ. ಸೂರ್ಯಾಸ್ತದವರೆಗೆ ಆಹಾರ ಮತ್ತು ನೀರನ್ನು ತ್ಯಜಿಸುತ್ತಾರೆ. ಕೆಲವು ಭಕ್ತರು ಸಂಜೆ ಭಜನೆ ಮಾಡಲು ಒಂದೆಡೆ ಸೇರುತ್ತಾರೆ ಮತ್ತು ಭಗವಾನ್ ನರಸಿಂಹನನ್ನು ಸ್ತುತಿಸುವ ಸ್ತೋತ್ರಗಳನ್ನು ಪಠಿಸುತ್ತಾರೆ.
ನರಸಿಂಹ ಜಯಂತಿಯಂದು ಅಭಿಷೇಕ, ಹೋಮ ಮತ್ತು ನರಸಿಂಹ ಕವಚಮ್ (ರಕ್ಷಣಾತ್ಮಕ ಸ್ತೋತ್ರ) ದಂತಹ ವಿಶೇಷ ಆಚರಣೆಗಳನ್ನು ಸಹ ನೆರವೇರಿಸಲಾಗುತ್ತದೆ. ಈ ದಿನ ಬಟ್ಟೆ, ಧಾನ್ಯಗಳು, ಅಮೂಲ್ಯ ಲೋಹಗಳು ಮತ್ತು ಎಳ್ನ್ನು ದಾನ ಮಾಡುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ.
ನರಸಿಂಹ ಜಯಂತಿಯ ಆಚರಣೆಯ ಉದ್ದೇಶ
ನರಸಿಂಹ ಜಯಂತಿಯು ಭಕ್ತರಿಗೆ ಪರಮಾತ್ಮನ ಸರ್ವವ್ಯಾಪಿತ್ವ ಮತ್ತು ಕೆಟ್ಟದ್ದರ ವಿರುದ್ಧ ಒಳಿತಿನ ವಿಜಯವನ್ನು ನೆನಪಿಸುತ್ತದೆ. ಭಗವಾನ್ ನರಸಿಂಹನ ಉಗ್ರ ರೂಪವು ಬ್ರಹ್ಮಾಂಡದ ಸಾಮರಸ್ಯಕ್ಕೆ ಧಕ್ಕೆ ತರುವ ನಕಾರಾತ್ಮಕ ಶಕ್ತಿಗಳ ನಾಶವನ್ನು ಸೂಚಿಸುತ್ತದೆ. ಸೃಷ್ಟಿಯ ಒಳಿತಿಗಾಗಿ ವಿಷ್ಣುವು ತಾಳಿದ ವಿವಿಧ ರೂಪಗಳು ವಿಷ್ಣುವಿನ ಶಕ್ತಿಯನ್ನು ನೆನೆಯಲು ಇದು ಉತ್ತಮ ದಿನ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
