ನವರಾತ್ರಿಯಲ್ಲಿ ಆಯುಧ ಪೂಜೆ, ಕನ್ಯಾ ಪೂಜೆಯ ಮಹತ್ವವೇನು, ಮಹಾನವಮಿಯಂದು ಪೂಜಾಕ್ರಮ, ಆಚರಣೆ ಹೇಗಿರಬೇಕು; ಇಲ್ಲಿದೆ ವಿವರ
ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. 9 ದಿನಗಳ ಕಾಲ ಆಚರಿಸುವ ಈ ಹಬ್ಬದ ಕೊನೆಯ ದಿನದಂದು ಆಯುಧಪೂಜೆ ಮಾಡಲಾಗುತ್ತದೆ. ಈ ದಿನವನ್ನು ಮಹಾನವಮಿ ಎಂದೂ ಕೂಡ ಆಚರಿಸಲಾಗುತ್ತದೆ. ಹಾಗಾದರೆ 9ನೇ ದಿನ ಆಯುಧ ಪೂಜೆ ಮಾಡುವ ಉದ್ದೇಶವೇನು, ಮಹಾನಮಿಯಂದು ಪಾಲಿಸಬೇಕಾದ ಕ್ರಮಗಳೇನು, ದೇವರ ಪೂಜೆ ಹೇಗಿರಬೇಕು ಎಂಬ ವಿವರ ಇಲ್ಲಿದೆ (ಬರಹ: ಜ್ಯೋತಿಷಿ ಸತೀಶ್)
ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ ಬಹಳ ವಿಶೇಷವಾದದ್ದು. 9 ದಿನಗಳ ಕಾಲ ನವರಾತ್ರಿ ಹಾಗೂ 10ನೇ ದಿನ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ನವರಾತ್ರಿ ಹಬ್ಬದಲ್ಲಿ ಆಯುಧಪೂಜೆಗೂ ಕೂಡ ವಿಶೇಷ ಮಹತ್ವ ನೀಡಲಾಗುತ್ತದೆ. ಹಾಗಾದರೆ ನವರಾತ್ರಿ 9ನೇ ದಿನದಂದೇ ಆಯುಧ ಪೂಜೆ ಮಾಡಲು ಕಾರಣವೇನು, ಈ ದಿನವನ್ನು ಮಹಾನವಮಿ ಎಂದು ಕೂಡ ಆಚರಿಸುವ ಉದ್ದೇಶವೇನು, ಮಹಾನಮವಿಯಂದು ಪೂಜಾ ಕ್ರಮಗಳು ಹಾಗೂ ಆಚರಣೆ ಹೇಗಿರಬೇಕು ಎಂಬಿತ್ಯಾದಿ ವಿವರ ಇಲ್ಲಿದೆ.
ಆಯುಧಪೂಜೆ ಯಾವಾಗ?
2024ರಲ್ಲಿ ಅಕ್ಟೋಬರ್ 11, ಶುಕ್ರವಾರದ ಬೆಳಿಗ್ಗೆ 6.31ರವರೆಗೂ ಅಷ್ಟಮಿ ಇರುತ್ತದೆ. ನವಮಿ ತಿಥಿಯು ಅಕ್ಟೋಬರ್ 11ರ ಮಧ್ಯಾಹ್ನ 12.06ಕ್ಕೆ ಆರಂಭವಾಗಿ, ಅಕ್ಟೋಬರ್ 12ರ ರಾತ್ರಿ 10.58ಕ್ಕೆ ಕೊನೆಗೊಳ್ಳುತ್ತದೆ. ಆ ಕಾರಣಕ್ಕೆ ಅಕ್ಟೋಬರ್ 11ರಂದೇ ಮಹಾನವಮಿ ಅಥವಾ ಆಯುದಪೂಜೆಯನ್ನು ಆಚರಿಸಬೇಕಾಗುತ್ತದೆ. ನವರಾತ್ರಿಯಲ್ಲಿ ನಾವು ಪೂಜಿಸುವ ಸರಸ್ವತಿ, ಚಾಮುಂಡೇಶ್ವರಿ ಮತ್ತು ಮಹಾಲಕ್ಷ್ಮಿ ಈ ಎಲ್ಲವೂ ಅಂಬಿಕೆಯ ವಿವಿಧ ರೂಪಗಳಾಗಿವೆ. ಸರಸ್ವತಿಯ ಪೂಜೆ ಮಾಡುವ ವೇಳೆ ದಿನ ನಿತ್ಯ ಬಳಸುವ ಪುಸ್ತಕ, ಲೇಖನಿ ಮತ್ತು ಇನ್ನಿತರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಸ್ತುಗಳನ್ನು ಸಹ ಪೂಜೆ ಮಾಡುತ್ತೇವೆ. ಇದರೊಂದಿಗೆ ಲಕ್ಷ್ಮಿ ಸ್ವರೂಪವಾದ ಹಣವನ್ನು ಸಹ ಪೂಜಿಸುತ್ತೇವೆ.
ನವರಾತ್ರಿ ಹಬ್ಬದ ಮೂಲವು ದುರ್ಗಾದೇವಿ ಮತ್ತು ರಾಕ್ಷಸ ಮಹಿಷಾಸುರನ ನಡುವಿನ ಯುದ್ಧವನ್ನು ಸೂಚಿಸುತ್ತದೆ. ಇಂದಿನ ಕಾಲದಲ್ಲಿ ನವರಾತ್ರಿಯು ನಮ್ಮಲ್ಲಿರುವ ನಕಾರಾತ್ಮಕ ಧೋರಣೆಯ ವಿರುದ್ಧ ಮಾಡುವ ಯುದ್ಧವೆನ್ನಬಹುದು. ನಮ್ಮ ಸುತ್ತಮುತ್ತಲಿನ ಜನರ ನಡುವಿನ ವೈರತ್ವದ ವಿರುದ್ಧದ ಸಮರ ಎನ್ನಬಹುದು. ಈ ಕಾರಣದಿಂದಾಗಿಯೇ ಇಂದಿಗೂ ಬೊಂಬೆ ನೋಡಲು ನೆರೆಹೊರೆಯ ಮನೆಗೆ ತೆರಳುವ ಸಂಪ್ರದಾಯವಿದೆ.
ನವರಾತ್ರಿಯಲ್ಲಿ ಆಯುಧ ಪೂಜೆಯ ಮಹತ್ವ
ಮಹಾನವಮಿಯ ದಿನದಂದು ದುರ್ಗಾಮಾತೆಯು ರಾಕ್ಷಸನಾದ ಮಹಿಷಾಸುರನನ್ನು ಯುದ್ಧದಲ್ಲಿ ಮಾರಣಾಂತಿಕವಾಗಿ ಗಾಯಗೊಳಿಸುತ್ತಾಳೆ. ಮಹಿಷಾಸುರನ ವಧೆಗೆ ದುರ್ಗಾದೇವಿಯ ವಿವಿಧ ರೀತಿಯ ಆಯುಧಗಳನ್ನು ಬಳಸಿರುವ ಹಿನ್ನೆಲೆಯಲ್ಲಿ ನವರಾತ್ರಿಯ ಒಂಬತ್ತನೇ ದಿನದಂದು ಆಯುಧಪೂಜೆ ಮಾಡಲಾಗುತ್ತದೆ. ಮಹಾನವಮಿಯ ದಿನ ದುರ್ಗಾದೇವಿಯು ಮಹಿಷಮರ್ಧಿನಿಯ ಅವತಾರ ತೋರುತ್ತಾಳೆ. ಹಾಗಾಗಿ ಮಹಾನವಮಿಗೂ ವಿಶೇಷ ಪ್ರಾಧಾನ್ಯವಿದೆ.
ಮಹಾನವಮಿ ಆಚರಣೆ
ಭಾರತದಾದ್ಯಂತ ಮಹಾನವಮಿಯನ್ನೂ ಬಹಳ ವಿಶೇಷವಾಗಿ ಆಚರಿಸಲಾಗುತ್ತದೆ. ದುರ್ಗಾಪೂಜೆಯ ಭಾಗವಾಗಿ ಈ ಆಚರಣೆಗೆ ಮಹತ್ವ ನೀಡಲಾಗಿದೆ. ಈ ದಿನವನ್ನು ಮುಖ್ಯವಾಗಿ ಪಶ್ಚಿಮ ಬಂಗಾಳ, ಅಸ್ಸಾಂ, ಒಡಿಶಾ, ತ್ರಿಪುರ, ಜಾರ್ಖಂಡ್ ಮತ್ತು ಬಿಹಾರ ರಾಜ್ಯಗಳಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ದಿನಗಳಲ್ಲಿ ದೇವಿಯನ್ನು ಭಕ್ತಿಭಾವದಿಂದ ಮತ್ತು ಉತ್ಸಾಹದಿಂದ ಪೂಜಿಸಲಾಗುತ್ತದೆ. ಮಹಾನವಮಿಯ ದಿನ ಗಣೇಶ ಮತ್ತು ಸುಬ್ರಹ್ಮಣ್ಯಸ್ವಾಮಿಗಳನ್ನೂ ಪೂಜಿಸುವ ಪದ್ಧತಿ ಇದೆ. ಈ ದಿನಗಳಲ್ಲಿ ದುರ್ಗಾದೇವಿಯ ಕಥೆಗಳನ್ನು ತಿಳಿಸುವ ‘ದೇವಿ ಮಹಾತ್ಮೆ‘ಯನ್ನು ಓದುವುದರಿಂದ ವಿಶೇಷವಾದ ಫಲಗಳನ್ನು ಪಡೆಯಬಹುದು.
ಭಾರತದ ದಕ್ಷಿಣ ಭಾಗದಲ್ಲಿ ಆಯುಧ ಪೂಜೆಯ ದಿನದಂದು ದುರ್ಗಾದೇವಿಯನ್ನು ಮಾತ್ರವಲ್ಲದೇ ದಿನ ನಿತ್ಯ ಬಳಸುವ ಲೋಹದ ಉಪಕರಣಗಳು, ಯಂತ್ರೋಪಕರಣಗಳು, ಸಂಗೀತ ವಾದ್ಯಗಳು, ವಿದ್ಯಾರ್ಥಿಗಳ ಪುಸ್ತಕಗಳು, ಕಲಿಕೆಗೆ ಬಳಸುವ ಉಪಕರಣಗಳು ಮತ್ತು ವಾಹನಗಳನ್ನು ಪೂಜಿಸುವುದು ಮುಖ್ಯ ಪ್ರಮುಖ ಸಂಪ್ರದಾಯವಾಗಿದೆ. ನವಮಿಯಾದರೂ ಪುಣ್ಯಸ್ಥಳಗಳಲ್ಲಿ ಮಕ್ಕಳ ಅಕ್ಷರಾಭ್ಯಾಸ ಪ್ರಾರಂಭಿಸಬಹುದು. ಆದರೆ ಈ ದಿನದಂದು ಹೆಣ್ಣುಮಕ್ಕಳು ಅದರಲ್ಲೂ ಮದುವೆಯಾದ ಹೆಣ್ಣುಮಕ್ಕಳು ತಾವಿರುವ ಸ್ಥಳದಿಂದ ಪರಸ್ಥಳಕ್ಕೆ ಪ್ರಯಾಣ ಮಾಡಬಾರದು. ಕಾರಣ ನವರಾತ್ರಿಯ ಪೂಜೆಗಳು ಅವರ ಪ್ರಾತಿನಿಧ್ಯದಲ್ಲಿ ಮಾತ್ರ ನಡೆಯಬೇಕು.
ಮಹಾನವಮಿಯಂದು ಕನ್ಯಾಪೂಜೆ
ನವರಾತ್ರಿ 9ನೇ ದಿನ ಅಂದರೆ ಮಹಾನವಮಿಯಂದು ಕನ್ಯಾಪೂಜೆ ಮಾಡುವ ಕ್ರಮವೂ ಉತ್ತರ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ. ಈ ದಿನ ಒಂಬತ್ತು ಜನ 12 ವರ್ಷದ ಒಳಗಿನ ಹೆಣ್ಣುಮಕ್ಕಳನ್ನು ಪೂಜಿಸುತ್ತಾರೆ. ಇವರನ್ನು ಕನ್ಯಾಕುಮಾರಿ ಅಥವ ಕನ್ಯಾಮುತ್ತೈದೆಯರು ಎಂದು ಕರೆಯಲಾಗುತ್ತದೆ. ಇವರಿಗೆ ಹಸಿರು ಬಟ್ಟೆಗಳು, ಹಸಿರು ಬಳೆ ಮತ್ತು ಮಲ್ಲಿಗೆ ಹೂವನ್ನು ನೀಡಿ ಗೌರವಿಸಬೇಕು. ಇವರು ನವ ದುರ್ಗೆಯರನ್ನು ಪ್ರತಿನಿಧಿಸುತ್ತಾರೆ. ಪೂರ್ವ ದಿಕ್ಕಿಗೆ ಮುಖ ಮಾಡಿ ಮನೆಯ ಮುಂಭಾಗಿಲಿನಲ್ಲಿ ನಿಲ್ಲಿಸಿ ಅವರ ಪಾದಪೂಜೆಯನ್ನು ಮಾಡಬೇಕು. ಇವರಿಗೆ ವಿಶೇಷವಾದ ಭೋಜನಗಳು ಮತ್ತು ಉಡುಗೊರೆಗಳನ್ನು ನೀಡುವುದು ಶ್ರೇಯಸ್ಕರ.
ಆಂಧ್ರಪ್ರದೇಶದಲ್ಲಿ ಮಹಾನವಮಿಯಂದು ಬತ್ತುಕಮ್ಮ ಹಬ್ಬವನ್ನು ಆಚರಿಸುತ್ತದೆ. ಮಹಿಳೆಯರು ಶಂಕುವಿನಾಕಾರದ ಪಾತ್ರೆಯಲ್ಲಿ ಹೂವುಗಳನ್ನು ಜೋಡಿಸಿ ದುರ್ಗಾದೇವಿಗೆ ಅರ್ಪಿಸುತ್ತಾರೆ. ಈ ದಿನದಂದು ಮೈಸೂರಿನಲ್ಲಿ ರಾಜಮನೆತನದ ಖಡ್ಗವನ್ನು ಪೂಜಿಸಲಾಗುತ್ತದೆ ಮತ್ತು ಮೆರವಣಿಗೆಗಳಲ್ಲಿ ಅಲಂಕರಿಸಿದ ಆನೆಗಳು, ಒಂಟೆಗಳ ಮೇಲೆ ಮೆರವಣಿಗೆ ಮಾಡಲಾಗುತ್ತದೆ.
ಸಾಮಾನ್ಯವಾಗಿ ನವರಾತ್ರಿಯಲ್ಲಿ ಉಪವಾಸವನ್ನು ಮಾಡುವುದಿಲ್ಲ. ಪ್ರತಿದಿನ ಸಿಹಿಖಾದ್ಯವನ್ನು ಮಾಡುವುದು ಸಂಪ್ರದಾಯ. ದೀಪ ನಮಸ್ಕಾರ ಪೂಜೆಗೆ ಈ ದಿನಗಳು ಪ್ರಸಕ್ತವಾಗಿದೆ. ಈ ದಿನಗಳಲ್ಲಿ ದುರ್ಗಾಸಪ್ತಶತಿ ಪಾರಾಯಣ ಮಾಡುವುದು ಹೆಚ್ಚು ಪ್ರಯೋಜನಕಾರಿ.