Rama Navami 2024: ಶ್ರೀರಾಮ ನವಮಿ ಯಾವಾಗ, ಈ ದಿನದ ಶುಭ ಮುಹೂರ್ತ, ಆಚರಣೆಯ ಮಹತ್ವ ಇತ್ಯಾದಿ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rama Navami 2024: ಶ್ರೀರಾಮ ನವಮಿ ಯಾವಾಗ, ಈ ದಿನದ ಶುಭ ಮುಹೂರ್ತ, ಆಚರಣೆಯ ಮಹತ್ವ ಇತ್ಯಾದಿ ವಿವರ ಇಲ್ಲಿದೆ

Rama Navami 2024: ಶ್ರೀರಾಮ ನವಮಿ ಯಾವಾಗ, ಈ ದಿನದ ಶುಭ ಮುಹೂರ್ತ, ಆಚರಣೆಯ ಮಹತ್ವ ಇತ್ಯಾದಿ ವಿವರ ಇಲ್ಲಿದೆ

ಯುಗಾದಿ ಹಬ್ಬ ಎಂದರೆ ಹಿಂದೂಗಳ ಹೊಸ ವರ್ಷ. ಈ ಹೊಸ ಸಂವತ್ಸರದಲ್ಲಿ ಬರುವ ಮೊದಲ ಹಬ್ಬವೇ ಶ್ರೀರಾಮ ನವಮಿ. ರಾಮ ಹುಟ್ಟಿದ ದಿನವನ್ನು ರಾಮ ನವಮಿ ಎಂದು ಆಚರಿಸಲಾಗುತ್ತದೆ. ಈ ವರ್ಷ ರಾಮ ನವಮಿ ಯಾವಾಗ, ಈ ದಿನದ ಶುಭ ಮುಹೂರ್ತ, ಆಚರಣೆಯ ಕ್ರಮಗಳ ಕುರಿತ ವಿವರ ಇಲ್ಲಿದೆ.

ಶ್ರೀರಾಮ ನವಮಿ 2024
ಶ್ರೀರಾಮ ನವಮಿ 2024

ಹಿಂದೂಗಳಲ್ಲಿ ಪ್ರತಿ ಹಬ್ಬಗಳ ಆಚರಣೆಯೂ ಬಹಳ ವಿಶೇಷ. ಯುಗಾದಿ ಹಬ್ಬದ ಹೊಸ ಸಂವತ್ಸರದಲ್ಲಿ ಬರುವ ಮೊದಲ ಹಬ್ಬ ಶ್ರೀರಾಮ ನವಮಿ. ಭಗವಾನ್‌ ವಿಷ್ಣುವಿನ ಏಳನೇ ಅವತಾರ  ಶ್ರೀರಾಮಚಂದ್ರ ಎಂದು ಹೇಳಲಾಗುತ್ತದೆ. ಚೈತ್ರ ಮಾಸದ ಒಂಭತ್ತನೇ ದಿನ ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮ ತಾಳುತ್ತಾನೆ. ಸದ್ಗುಣ ಸಂಪನ್ನ, ಆದರ್ಶ ಪುರುಷ, ಮರ್ಯಾದ ಪುರುಷೋತ್ತಮ ಎಂದೆಲ್ಲಾ ಕರೆಸಿಕೊಳ್ಳುವ ಶ್ರೀರಾಮನು ಜನಿಸಿದ ದಿನವನ್ನು ನಾಡಿನಾದ್ಯಂತ ಶ್ರೀರಾಮ ನವಮಿ ಎಂದು ಭಕ್ತಿ ಭಾವದಿಂದ ಆಚರಿಸಲಾಗುತ್ತದೆ.

ಪ್ರತಿವರ್ಷವೂ ಶ್ರೀರಾಮ ನವಮಿಯಂದು ಸಂಭ್ರಮ, ಸಡಗರದೊಂದಿಗೆ ಭಕ್ತಿ ಭಾವವೂ ಜೊತೆಯಾಗುತ್ತದೆ. ರಾಮ ಭಕ್ತರು ರಾಮನ ದೇಗುಲಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳನ್ನು ಆಯೋಜಿಸುತ್ತಾರೆ. ಆ ದಿನ ಮನೆ, ಮನಗಳಲ್ಲೂ ಶ್ರೀರಾಮನ ಜಪವೇ ಇರುತ್ತದೆ. ಹಾಗಾದರೆ ಈ ವರ್ಷ ಶ್ರೀರಾಮ ನವಮಿ ಯಾವಾಗ, ರಾಮ ನವಮಿಯ ಶುಭ ಮೂಹೂರ್ತ ಯಾವುದು, ಈ ದಿನದ ಆಚರಣೆಯ ಮಹತ್ವವೇನು ಎಂಬಿತ್ಯಾದಿ ವಿವರ ಇಲ್ಲಿದೆ.

2024ರಲ್ಲಿ ರಾಮ ನವಮಿ ಯಾವಾಗ?

ಈ ವರ್ಷ ಏಪ್ರಿಲ್‌ 17ರಂದು ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ಇದೇ ದಿನ ಜನಿಸಿದನು ಎಂಬ ಕಾರಣಕ್ಕೆ ಭಕ್ತರು ಶ್ರೀರಾಮ ನವಮಿ ಆಚರಿಸುತ್ತಾರೆ. ಈ ದಿನ ಶ್ರೀರಾಮನೊಂದಿಗೆ ದುರ್ಗಾಮಾತೆಯನ್ನು ಕೂಡ ಪೂಜಿಸುವ ವಾಡಿಕೆ ಇದೆ.

2024ರ ರಾಮನವಮಿಯ ಶುಭ ಮುಹೂರ್ತ

ದೃಕ್‌ ಪಂಚಾಂಗದ ಪ್ರಕಾರ ಈ ವರ್ಷ ರಾಮ ನವಮಿ ತಿಥಿಯು ಏಪ್ರಿಲ್ 16ರ ಮಧ್ಯಾಹ್ನ 1:23 ಕ್ಕೆ ಆರಂಭವಾಗಿ, ಏಪ್ರಿಲ್ 17ರ ಮಧ್ಯಾಹ್ನ 3:14 ಕ್ಕೆ ಕೊನೆಗೊಳ್ಳುತ್ತದೆ. ರಾಮ ನವಮಿ ಮಧ್ಯಾಹ್ನ ಮುಹೂರ್ತವು 11:03 ಕ್ಕೆ ಆರಂಭವಾಗಿ ಮಧ್ಯಾಹ್ನ 1:38 ಕ್ಕೆ ಕೊನೆಗೊಳ್ಳುತ್ತದೆ. 2 ಗಂಟೆ 35 ನಿಮಿಷಗಳ ಅವಧಿ ಶುಭ ಮುಹೂರ್ತವಿರುತ್ತದೆ. ಆದಾಗ್ಯೂ, ರಾಮ ನವಮಿ ಮಧ್ಯಾಹ್ನದ ಕ್ಷಣ 12:21 ಎಂದು ಪಂಚಾಂಗ ಹೇಳುತ್ತದೆ.

ರಾಮ ನವಮಿ ಆಚರಣೆಯ ಮಹತ್ವ

ಈ ಮೊದಲೇ ಹೇಳಿದಂತೆ ರಾಮ ನವಮಿ ರಾಮನ ಜನ್ಮ ದಿನವನ್ನು ಸಂಕೇತಿಸುತ್ತದೆ. ಚೈತ್ರ ಮಾಸ ಶುಕ್ಲ ಪಕ್ಷದ 9ನೇ ದಿನ ವಿಷ್ಣುವಿನ 7ನೇ ಅವತಾರವಾದ ಶ್ರೀರಾಮನು ಅಯೋಧ್ಯೆಯಲ್ಲಿ ದಶರಥ ಹಾಗೂ ಕೌಸಲ್ಯೆಯ ಮಗನಾಗಿ ಜನಿಸುತ್ತಾನೆ. ಈ ದಿನವು ಚೈತ್ರ ನವರಾತ್ರಿ ಕೊನೆಯ ದಿನವೂ ಆಗಿದೆ. ಶ್ರೀರಾಮನ ಹುಟ್ಟಿದ ದಿನ ಎಂಬ ಕಾರಣಕ್ಕೆ ಈ ದಿನ ರಾಮ ನವಮಿ ಆಚರಿಸುವ ಜನರು ಪೂಜೆ, ಹೋಮ, ಹವನಗಳನ್ನು ಮಾಡುತ್ತಾರೆ. ಹಿಂದೂಗಳಿಗೆ ಈ ದಿನ ಬಹಳ ಮಹತ್ವ ಎಂದರೂ ತಪ್ಪಾಗಲಿಕ್ಕಿಲ್ಲ.

ರಾಮ ನವಮಿಯಂದು ಕೆಲವರು ಉಪವಾಸ ವತ್ರ ಆಚರಿಸುತ್ತಾರೆ. ರಾಮ ದೇಗುಲಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಕೆಲವೆಡೆ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವ ಮೂಲಕ ಸೀತಾ-ರಾಮ ಕಲ್ಯಾಣವನ್ನೂ ನೆರವೇರಿಸುತ್ತಾರೆ. ರಾಮಭಕ್ತರು ಈ ದಿನ ಪಾನಕ, ಕೋಸಂಬರಿ ಹಂಚುವ ಮೂಲಕ ರಾಮನ ಕೃಪೆಗೆ ಪಾತ್ರರಾಗುತ್ತಾರೆ. ಕೆಲವರು ರಾಮ ಜಪ ಮಾಡುತ್ತಾರೆ. ಕೆಲವರು ರಾಮಾಯಣ ಕಾಂಡಗಳನ್ನು ಪ್ರಸ್ತುತ ಪಡಿಸುತ್ತಾರೆ, ಹೀಗೆ ರಾಮ ನವಮಿಯನ್ನು ಭಕ್ತಿ ಭಾವದೊಂದಿಗೆ ಸಂಭ್ರಮ ಸಡಗರದಿಂದಲೂ ಆಚರಿಸಲಾಗುತ್ತದೆ.

ಅಯೋಧ್ಯೆಯಲ್ಲಿ ವಿಶೇಷ ಪೂಜೆ

ಈ ವರ್ಷ ಭಾರತೀಯರಿಗೆ ಬಹಳ ವಿಶೇಷ. ಯಾಕೆಂದರೆ 2024 ಜನವರಿ 22ರಂದು ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿದೆ. ಈ ವರ್ಷ ರಾಮ ನವಮಿಯಂದು ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲೂ ಇರುವ ರಾಮ ದೇಗುಲಗಳಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.